ಕೊಪ್ಪಳ: ಜಿಲ್ಲೆಯಲ್ಲಿನ ಸರ್ಕಾರಿ ಶಾಲೆಗಳ ಸಬಲೀಕರಣಕ್ಕಾಗಿ ಜಿಪಂ ಸದಸ್ಯರು ರೂಪಿಸಿದ್ದ “ದತ್ತು ಶಾಲೆ’ಯೋಜನೆ ಬಹುತೇಕ ಮುಗಿದಂತೆ ಆಗಿದೆ. ಕೆಲವೇ ಸದಸ್ಯರು ಶಾಲೆ ದತ್ತು ಪಡೆದು ಅಭಿವೃದ್ಧಿ ಪಡಿಸಿದ್ದು ಬಿಟ್ಟರೆ ಉಳಿದವರು ಈ ಬಗ್ಗೆ ಕಾಳಜಿ ತೋರಲಿಲ್ಲ.
ಈ ಹಿಂದೆ ಜಿಪಂ ಅಧ್ಯಕ್ಷರಾಗಿದ್ದ ರಾಜಶೇಖರ ಹಿಟ್ನಾಳ ಅವರು, ಜಿಲ್ಲೆಯಲ್ಲಿನ ಸರ್ಕಾರಿ ಶಾಲೆ ಬಗ್ಗೆ ಕಾಳಜಿ ತೋರಿ ಪ್ರತಿ ವರ್ಷ ಒಂದೊಂದು ಶಾಲೆಯನ್ನು ಜಿಪಂ ಸದಸ್ಯರು ಕ್ಷೇತ್ರವಾರು ಆಯ್ಕೆ ಮಾಡಿಕೊಂಡು ಅಲ್ಲಿನ ಸಮಸ್ಯೆಗಳಿಗೆ ಸ್ಪಂದಿಸಿ ಮಾದರಿ ಶಾಲೆಯನ್ನಾಗಿ ಮಾಡಿ ಉತ್ತಮ ಫಲಿತಾಂಶ ತರುವ ಕುರಿತು ಯೋಜನೆ ರೂಪಿಸಿದ್ದರು. ತಮ್ಮ ಅಧಿಕಾರವಧಿಯಲ್ಲೇ ಉದ್ಯೋಗ ಖಾತ್ರಿ ಯೋಜನೆ ಸೇರಿದಂತೆ ಇತರೆ ಅನುದಾನ ಬಳಸಿಕೊಂಡು ಶಾಲಾ ಕಾಂಪೌಂಡ್ ನಿರ್ಮಾಣ, ಕುಡಿಯುವ ನೀರಿನ ಸಮಸ್ಯೆ, ಶಾಲೆಗೆ ಅಗತ್ಯವಿರುವ ಪೀಠೊಪಕರಣ, ಪಠ್ಯ ಪುಸ್ತಕ ಸೇರಿದಂತೆ ಕಂಪ್ಯೂಟರ್ ಹಾಗೂ ಇತರೆ ಸಾಮಗ್ರಿಗಳನ್ನೂ ಪೂರೈಕೆ ಮಾಡಲು ಈ ಯೋಜನೆಯಲ್ಲಿ ಅವಕಾಶವಿತ್ತು.
ಇದಕ್ಕೆ ಆರಂಭದಲ್ಲಿ 29 ಜಿಪಂ ಸದಸ್ಯರು ಕೂಡ ಸಮ್ಮತಿ ಸೂಚಿಸಿದ್ದಲ್ಲದೇ, ತಮ್ಮ ತಮ್ಮ ಕ್ಷೇತ್ರದಲ್ಲೇ ಒಂದೊಂದು ಶಾಲೆ ಆಯ್ಕೆಗೆ ಸೂಚಿಸಿದ್ದರು. ಈ ಯೋಜನೆಯಲ್ಲಿ ಜಿಪಂ ಅಧ್ಯಕ್ಷರಿಗೆ ವಾರ್ಷಿಕವಾಗಿ ಬರುವ ಅನುದಾನದಲ್ಲಿಯೇ ಸದಸ್ಯರಿಗೆ ಅನುದಾನ ಹಂಚಿಕೆ ಮಾಡಲಾಗಿತ್ತು. ಆದರೆ ಬದಲಾದ ರಾಜಕೀಯ ವಿದ್ಯಮಾನಗಳಲ್ಲಿ ರಾಜಶೇಖರ ಹಿಟ್ನಾಳ ಅವರು ಜಿಪಂ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದರು. ಹಾಗಾಗಿ ಅವರ ಕನಸಿನ ಯೋಜನೆಗೂ ಮಂಕು ಬಡಿದಿದೆ. ಇದರಲ್ಲಿ ಅಧಿಕಾರಿಗಳ ನಿರಾಸಕ್ತಿ ಭಾವನೆಯೂ ಪ್ರಮುಖವಾಗಿದೆ.
ಶಾಲೆ ದತ್ತು ಯೋಜನೆಯಲ್ಲಿ ಜಿಪಂ ಸದಸ್ಯರಾದ ಎಸ್.ಬಿ. ನಾಗರಳ್ಳಿ, ಲಕ್ಷ್ಮವ್ವ ನೀರಲೂಟಿ ಸೇರಿ ಪ್ರಸ್ತುತ ಜಿಪಂ ಅಧ್ಯಕ್ಷರಾದ ವಿಶ್ವನಾಥರಡ್ಡಿ ಅವರು ಒಂದೊಂದು ಶಾಲೆಯನ್ನು ಆಯ್ಕೆ ಮಾಡಿಕೊಂಡು ಅಭಿವೃದ್ಧಿಗೆ ಅನುದಾನ ಕೊಟ್ಟಿದ್ದಾರೆ. ಕೆಲವೊಂದು ಸಣ್ಣಪುಟ್ಟ ದುರಸ್ತಿ ಕಾರ್ಯ ಮಾಡಿಸುವ ಜೊತೆಗೆ ಫಲಿತಾಂಶದ ಮೇಲೂ ಗಮನ ಹರಿಸಿದ್ದರು. ಕುಡಿಯುವ ನೀರು ಸೇರಿದಂತೆ ಶಾಲೆಗೆ ಬೇಕಾದ ಕಂಪ್ಯೂಟರ್, ಉಪಕರಣ ಹಾಗೂ ಇತರೆ ಸಾಮಗ್ರಿಗಳ ಪೂರೈಕೆ ಮಾಡಿದ್ದಾರೆ. ವಿದ್ಯಾರ್ಥಿಗಳ ಕಲಿಕೆಗೆ ಪ್ರೋತ್ಸಾಹ ನೀಡಿದ್ದು, ಬಿಟ್ಟರೆ ಉಳಿದಂತೆ ಹಲವು ಸದಸ್ಯರು ಶಾಲೆ ದತ್ತು ಯೋಜನೆಗೆ ಕಾಳಜಿ ಕೊಡದೇ ಇರುವುದು ತಿಳಿದು ಬಂದಿದೆ.
ಒಟ್ಟಿನಲ್ಲಿ ಜಿಪಂನಿಂದ ಶೈಕ್ಷಣಿಕವಾಗಿ ಒಂದು ಮಹತ್ವದ ಸಂಚಲನ ನಡೆಯುತ್ತಿದೆ ಎಂದು ಕನಸು ಕಾಣುತ್ತಿದ್ದ ಜಿಲ್ಲೆಯ ಜನತೆ ವರ್ಷದಲ್ಲೇ ನಿರಾಶೆ ಭಾವನೆ ವ್ಯಕ್ತಪಡಿಸುತ್ತಿದ್ದಾರೆ. ಜಿಪಂ ಸದಸ್ಯರಿಗೆ ಒಂದು ಶಾಲೆ ದತ್ತು ಪಡೆದು ಉತ್ತಮ ರೀತಿಯಲ್ಲಿ ಅಭಿವೃದ್ಧಿ ಮಾಡುವುದು ಕಷ್ಟದ ಕೆಲಸವೇನಲ್ಲ. ಆದರೆ ಒಬ್ಬೊಬ್ಬರು ಇತ್ತೀಚೆಗೆ ಒಂದೊಂದು ಮಾತನ್ನಾಡುತ್ತಿದ್ದಾರೆ. ಹಾಗಾಗಿ ಶಾಲೆ ದತ್ತು ಯೋಜನೆ ಬಹುಪಾಲು ಸ್ಥಗಿತವಾಗಿದೆ.
ಇಲ್ಲಿ ಸ್ವಯಂ ಆಸಕ್ತಿಯೂ ಮೂಡಬೇಕಿದೆ. ಗ್ರಾಪಂ ಸದಸ್ಯರಿಂದ ಹಿಡಿದು ಜಿಪಂ ಸದಸ್ಯರು ಹಾಗೂ ಅ ಧಿಕಾರಿ ವರ್ಗವೂ ಸಹಿತ ಆಸಕ್ತಿಯಿಂದ ಒಂದೊಂದು ಶಾಲೆ ದತ್ತು ಪಡೆದು ಅಭಿವೃದ್ಧಿ ಮಾಡಿಸಿದರೆ ಈ ಭಾಗದಲ್ಲಿ ಶೈಕ್ಷಣಿಕ ಕ್ರಾಂತಿಯೇ ಮೊಳಗಲಿದೆ ಎನ್ನುತ್ತಿದ್ದಾರೆ ಶಿಕ್ಷಣ ಪ್ರೇಮಿಗಳು.
-ದತ್ತು ಕಮ್ಮಾರ