Advertisement

ಕಲಂ 371 ಅನುಷ್ಠಾನಕ್ಕೆ ನಿರಾಸಕ್ತಿ

03:37 PM Dec 27, 2019 | Suhan S |

ಗಂಗಾವತಿ: ಕಲ್ಯಾಣ ಕರ್ನಾಟಕ (ಹೈ.ಕ.)ಸಮಗ್ರ ಅಭಿವೃದ್ಧಿಗಾಗಿ 2013ರಲ್ಲಿ ಸಂವಿಧಾನದ ಕಲಂ 371(ಜೆ)ಗೆ ತಿದ್ದುಪಡಿ ಮಾಡಿ ವಿಶೇಷ ಸ್ಥಾನಮಾನ ದೊರಕಿದರೂ ಸಮರ್ಪಕ ಅನುಷ್ಠಾನದ ಕೊರತೆಯಿಂದ ಕಲಂ 371(ಜೆ) ಅಡಿಯಲ್ಲಿ ದೊರಕುವ ಶೈಕ್ಷಣಿಕ ಸೌಲಭ್ಯಗಳು ಸೇರಿ ನೇಮಕಾತಿಯಾಗುತ್ತಿಲ್ಲ ಎಂಬ ಆರೋಪ ವ್ಯಾಪಕವಾಗಿದೆ.

Advertisement

ಕಲ್ಯಾಣ ಕರ್ನಾಟಕದ 6 ಜಿಲ್ಲೆಗಳ ವ್ಯಾಪ್ತಿಯ ಹಂಪಿ ಕನ್ನಡ ವಿಶ್ವವಿದ್ಯಾಲಯವೂ ಸೇರಿ ಯಾವ ವಿಶ್ವವಿದ್ಯಾಲಯಗಳಲ್ಲೂ ಸ್ಥಳೀಯ ಮತ್ತು ಸ್ಥಳೀಯೇತರ ಜೇಷ್ಠತಾ ಪಟ್ಟಿ ಇದುವರೆಗೂ ಸರಕಾರಕ್ಕೆ ಸಲ್ಲಿಕೆಯಾಗಿಲ್ಲ. ಇದರ ಪರಿಣಾಮ ಬಹುತೇಕ ವಿವಿಗಳಲ್ಲಿ ಖಾಲಿ ಹುದ್ದೆಗಳ ಭರ್ತಿ ಕಾರ್ಯ ವಿಳಂಬವಾಗುತ್ತಿದೆ. 6 ಜಿಲ್ಲೆಗಳ ಪೊಲೀಸ್‌ ಇಲಾಖೆ ಹೊರತುಪಡಿಸಿ ಬಹುತೇಕ ಇಲಾಖೆಗಳಲ್ಲಿ ಜೇಷ್ಠತಾ ಪಟ್ಟಿ ಸಮರ್ಪಕವಾಗಿ ತಯಾರಿಸಿಲ್ಲ. 6 ಜಿಲ್ಲೆಗಳ ವ್ಯಾಪ್ತಿಯ ವಿಶ್ವವಿದ್ಯಾಲಯಗಳಲ್ಲಿ ಪಿಎಚ್‌ಡಿ ಪ್ರವೇಶ ಸಂದರ್ಭದಲ್ಲೂ ಕಲಂ 371(ಜೆ) ಅನುಷ್ಠಾನವಾಗುತ್ತಿಲ್ಲ.

ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಶಿಕ್ಷಣ ಮತ್ತು ಉನ್ನತ ಶಿಕ್ಷಣದ ಕೊರತೆ ಇದ್ದು ಕಲಂ 371(ಜೆ) ಅನ್ವಯ ಸರಕಾರ ಪ್ರತಿ ಬಜೆಟ್‌ ಸಂದರ್ಭದಲ್ಲೂ 6 ಜಿಲ್ಲೆಗೆ ಪ್ರತೇಕ ಅನುದಾನ ಮೀಸಲಿಟ್ಟು ಸರಕಾರಿ, ಅನುದಾನಿತ ಮತ್ತು ಅನುದಾನ ರಹಿತ ಶಿಕ್ಷಣ ಸಂಸ್ಥೆಗಳಲ್ಲಿ ಮೂಲಸೌಕರ್ಯ ಕಲ್ಪಿಸುವುದು ಮತ್ತು ಹುದ್ದೆಗಳನ್ನು ವೇತನಾನುದಾನಕ್ಕೆ ಒಳಪಡಿಸಲು ಸ್ಪಷ್ಟ ಸೂಚನೆ ಇದ್ದರೂ 6 ವರ್ಷಗಳಿಂದ ಶಿಕ್ಷಣಕ್ಕಾಗಿ ಮೀಸಲಿಟ್ಟ ಅನುದಾನ ಸರಕಾರಕ್ಕೆ ಮರಳಿ ಹೋಗುತ್ತಿದ್ದರೂ ಕಲಂ 371(ಜೆ) ಅನುಷ್ಠಾನ ಸಮಿತಿ ಈ ಹಣವನ್ನು ಸಮರ್ಪಕವಾಗಿ ಬಳಸುತ್ತಿಲ್ಲ. 6 ಜಿಲ್ಲೆಗಳಲ್ಲಿ 108 ಪ್ರಾಥಮಿಕ, 69 ಪ್ರೌಢಶಾಲೆಗಳು, 32 ಪಿಯುಸಿ, 81 ಪದವಿ ಕಾಲೇಜುಗಳಿದ್ದು ಇವುಗಳಿಗೆ ವೇತನಾನುದಾನ ಸೇರಿ ವಿದ್ಯಾರ್ಥಿಗಳ ಮೂಲಸೌಕರ್ಯಕ್ಕೆ ಹಣ ನೀಡಲು ಸರಕಾರ ಮುಂದಾಗುತ್ತಿಲ್ಲ. ಐಟಿಐ, ಡಿಪ್ಲೋಮಾ, ಇಂಜಿನಿಯರಿಂಗ್‌, ವೈದ್ಯಕೀಯ, ಕೃಷಿ, ತೋಟಗಾರಿಕೆ ಮಹಾವಿದ್ಯಾಲಯಗಳ ಸ್ಥಾಪನೆ ಅಗತ್ಯವಿದ್ದು, ಈ ನಿಟ್ಟಿನಲ್ಲಿ ಸರಕಾರ ಪ್ರಯತ್ನ ನಡೆಸುತ್ತಿಲ್ಲ. 6 ಜಿಲ್ಲೆಗಳಲ್ಲಿ ಅಗತ್ಯಕ್ಕೆ ತಕ್ಕಂತೆ ಪದವಿ ಕಾಲೇಜುಗಳ ಜತೆ ಹಾಸ್ಟೆಲ್‌ ಆರಂಭಿಸಲು ಆದೇಶವಿದ್ದರೂ ಇದುವರೆಗೆ ಅನುಷ್ಠಾನ ಮಾಡಿಲ್ಲ.

ಯುಪಿಎಸ್ಸಿ, ಕೆಪಿಎಸ್ಸಿ, ಟಿಇಟಿ, ನೀಟ್‌, ಜೆಇಇ ಸೇರಿ ಹಲವು ವೃತ್ತಿ ಪರ ಸ್ಪರ್ಧಾತ್ಮಕ ಪರೀಕ್ಷೆ ಬರೆಯುವವರಿಗೆ ಸಂಪನ್ಮೂಲ ವ್ಯಕ್ತಿಗಳ ಮೂಲಕ ತರಬೇತಿ ಕೊಡಿಸಲು ಕಲಂ 371(ಜೆ) ಅಡಿಯಲ್ಲಿ ಅವಕಾಶವಿದ್ದರೂ ಇದುವರೆಗೆ ಸರಕಾರ ಮಾಡಿಲ್ಲ. ಸ್ಥಳೀಯ, ಸ್ಥಳೀಯೇತರ ವೃಂದ ರಚನೆ ಮಾಡಿ ಪ್ರತಿ ಇಲಾಖೆಯಲ್ಲಿ ಸ್ಥಳೀಯರಿಗೆ ಭಡ್ತಿ ನೀಡಲು ನಿಯಮಗಳಿದ್ದರೂ ಸರಕಾರ ಕೆಲವು ಇಲಾಖೆ ಹೊರತುಪಡಿಸಿ ಮಿಕ್ಕುಳಿದ ಇಲಾಖೆಗಳಲ್ಲಿ ಅನ್ಯ ಜಿಲ್ಲೆಯವರೇ ಹಿರಿಯ ಅಧಿಕಾರಿಗಳಾಗಿದ್ದಾರೆ.

ಆಕ್ಷೇಪಗಳ ಸುರಿಮಳೆ: 2013ರಲ್ಲಿ 6 ಜಿಲ್ಲೆಗಳಿಗೆ ಕಲಂ 371(ಜೆ) ಅನುಷ್ಠಾನವಾದಾಗಿನಿಂದ ಇಲ್ಲಿಯವರೆಗೆ ನೇಮಕಾತಿ ಸೇರಿ ಭಡ್ತಿ ವಿಷಯದಲ್ಲಿ ವಿವಿಧ ನ್ಯಾಯಾಲಯಗಳಲ್ಲಿ ಸುಮಾರು 700ಕ್ಕೂಅಧಿಕ ಆಕ್ಷೇಪಗಳನ್ನು ಸಲ್ಲಿಸಲಾಗಿದೆ. ಆಕ್ಷೇಪಗಳನ್ನು ನಿವಾರಿಸುವಲ್ಲಿ ಸರಕಾರ ಇಚ್ಛಾಶಕ್ತಿ ತೋರುತ್ತಿಲ್ಲ. ಅನುಷ್ಠಾನದ ಕ್ಯಾಬಿನೆಟ್‌ ಉಪಸಮಿತಿ ಸಭೆ ಸೇರಿ ಅನುಷ್ಠಾನದಲ್ಲಿರುವ ತೊಂದರೆ ನಿವಾರಣೆಗೆ ಮುಂದಾಗುತ್ತಿಲ್ಲ. ಪ್ರತಿ ಸರಕಾರದಲ್ಲೂ ಅನುಷ್ಠಾನ ಸಮಿತಿಗೆ ಅನ್ಯ ಜಿಲ್ಲೆಯವರೇ ಅಧ್ಯಕ್ಷರಾಗುತ್ತಿರುವುದರಿಂದ ಕಲಂ 371(ಜೆ) ಸಮರ್ಪಕ ಜಾರಿಗೆ ಆಸಕ್ತಿ ತೋರುತ್ತಿಲ್ಲ ಎನ್ನಲಾಗುತ್ತಿದೆ.

Advertisement

ಕಲಂ 371(ಜೆ) ಅನ್ವಯ 6 ಜಿಲ್ಲೆಗಳಲ್ಲಿರುವ ಅನುದಾನ ಮತ್ತು ಅನುದಾನ ರಹಿತ ಶಾಲಾ-ಕಾಲೇಜುಗಳಿಗೆ ಅನುದಾನ ನೀಡಲು ಅವಕಾಶವಿದೆ. ಹುದ್ದೆಗಳ ವೇತನಾನುದಾನ ಮಾಡಲು ಅವಕಾಶವಿದೆ. ಯುಪಿಎಸ್ಸಿ, ಕೆಪಿಎಸ್ಸಿ ಸೇರಿ ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ಅಭ್ಯರ್ಥಿಗಳಿಗೆ ಉಚಿತ ತರಬೇತಿ ನೀಡಬೇಕು. ಸ್ಥಳೀಯ ಇಲಾಖೆಗಳು ಸೇರಿ ವಿಶ್ವವಿದ್ಯಾಲಯಗಳಲ್ಲಿ ಜೇಷ್ಠತಾ ಪಟ್ಟಿ ಸಿದ್ದಪಡಿಸಿ ಖಾಲಿ ಹುದ್ದೆಗಳ ಭರ್ತಿಗೆ ಕ್ರಮ ಅಗತ್ಯ. ಕ್ಯಾಬಿನೆಟ್‌ ಉಪಸಮಿತಿಗೆ ಸ್ಥಳೀಯ ಸಚಿವರನ್ನೇ ಅಧ್ಯಕ್ಷರನ್ನಾಗಿಸಬೇಕು. ವೃತ್ತಿಪರ ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಬೇಕು ಮತ್ತು ಖಾಸಗಿಯವರಿಗೂ ಅವಕಾಶ ನೀಡಬೇಕು. ಡಾ| ಶರಣಬಸಪ್ಪ ಕೋಲ್ಕಾರ್‌ , ಸಂಶೋಧಕರು.

 

-ಕೆ. ನಿಂಗಜ್ಜ

Advertisement

Udayavani is now on Telegram. Click here to join our channel and stay updated with the latest news.

Next