ನವದೆಹಲಿ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಹಾಗೂ ಸಿಂಗ್ ಮಾಜಿ ಮ್ಯಾನೇಜರ್ ಉಡುಪಿ ಮೂಲದ ದಿಶಾ ಸಾಲಿಯಾನ್ ಸಾವಿನ ಪ್ರಕರಣ ಸಾಕಷ್ಟು ಸಂದೇಹಗಳಿಗೆ ಎಡೆಮಾಡಿಕೊಟ್ಟಿದ್ದು, ಏತನ್ಮಧ್ಯೆ ನಿಷ್ಪಕ್ಷಪಾತ ತನಿಖೆ ನಡೆಸುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಆಗ್ರಹಿಸುತ್ತಿದ್ದಾರೆ ಎಂದು ವರದಿ ತಿಳಿಸಿದೆ.
ಮುಂಬೈ ಪೊಲೀಸ್ ಮೂಲಗಳ ಪ್ರಕಾರ, ಜೂನ್ 8ರಂದು ದಿಶಾ ಸಾಲಿಯಾನ್ ಎತ್ತರದ ಕಟ್ಟಡದಿಂದ ಕೆಳಬಿದ್ದು ಸಾವನ್ನಪ್ಪಿರುವುದಾಗಿ ಆರೋಪಿಸಲಾಗಿದೆ. ಈ ಸಂದರ್ಭದಲ್ಲಿ ಮಾರಕ ಕೋವಿಡ್ 19 ವೈರಸ್ ಹಾವಳಿ ತೀವ್ರವಾಗಿತ್ತು. ಜೂನ್ 9ರಂದು ದಿಶಾ ಶವವನ್ನು ಶತಾಬ್ದಿ ಆಸ್ಪತ್ರೆಗೆ ತೆಗೆದುಕೊಂಡು ಹೋಗಿ ಕೋವಿಡ್ 19 ಪರೀಕ್ಷೆ ನಡೆಸಲಾಗಿತ್ತು. ಜೂನ್ 11ರಂದು ವರದಿ ಬಂದಿದ್ದು, ನೆಗೆಟಿವ್ ಎಂದಾಗಿತ್ತು. ನಂತರ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿತ್ತು ಎಂದು ತಿಳಿಸಿದೆ.
ದಿಶಾ ನಿಗೂಢ ಸಾವಿಗೂ ಮುನ್ನ ಗೆಳೆಯನ ಜತೆ ಸುಮಾರು 45 ನಿಮಿಷಗಳ ಕಾಲ ದೀರ್ಘವಾಗಿ ಮಾತನಾಡಿದ್ದಳು. ಅದು ಆಕೆಯ ವೈಯಕ್ತಿಕ ಜೀವನದ ಬಗ್ಗೆ. ಕೆಲವೊಂದು ವಿಚಾರವನ್ನು ಖಚಿತಪಡಿಸಲು ಸಾಧ್ಯವಾಗುತ್ತಿಲ್ಲ ಎಂದು ಅಲವತ್ತುಕೊಂಡಿರುವುದಾಗಿ ಮುಂಬೈ ಪೊಲೀಸ್ ಮೂಲಗಳು ಹೇಳಿವೆ.
ಮುಂಬೈ ಪೊಲೀಸರ ಬಳಿ ಜೂನ್ 8ನೇ ತಾರೀಕಿನ ಪೂರ್ಣ ಸಿಸಿಟಿವಿ ಫೂಟೇಜ್ , ಅಂದು ಕಟ್ಟಡದೊಳಕ್ಕೆ ಕೇವಲ ತುರ್ತು ಸೇವೆ ವಸ್ತು ಹಾಗೂ ಸಿಬ್ಬಂದಿಗಳು ಒಳಹೋಗಿರುವುದು ದಾಖಲಾಗಿದೆ. ಅಂದು ಅಪಾರ್ಟ್ ಮೆಂಟ್ ಗೆ ತೆರಳಿದ್ದ ಎಲ್ಲರ ಹೇಳಿಕೆಯನ್ನು ಮುಂಬೈ ಪೊಲೀಸರು ದಾಖಲಿಸಿಕೊಂಡಿರುವುದಾಗಿ ತಿಳಿಸಿದ್ದಾರೆ.
ದಿಶಾ ಕಾರ್ನರ್ ಸ್ಟೋನ್ ಹೆಸರಿನ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಳು. ಈ ಮೂಲಕ ದಿ.ನಟ ಸುಶಾಂತ್ ಸಿಂಗ್ ಜತೆಗೆ ಸಂಪರ್ಕ ಬೆಳೆದಿತ್ತು. ಆದರೆ ಇಬ್ಬರ ಸ್ನೇಹ ಸಂಪೂರ್ಣವಾಗಿ ವೃತ್ತಿಪರವಾಗಿತ್ತು ಎಂದು ವರದಿ ಹೇಳಿದೆ.
ಇದೀಗ ದಿಶಾ ಸಾಲ್ಯಾನ್ ಸಾವು ಸಂಭವಿಸಿ ಎರಡು ತಿಂಗಳು ಸಮೀಪಿಸುತ್ತಿದೆ. ದಿಶಾ ಸಾವಿಗೆ ಸಂಬಂಧಿಸಿದಂತೆ ಯಾವುದಾದರು ಮಾಹಿತಿ, ಸಾಕ್ಷಿ ಇದ್ದರೆ ಹಂಚಿಕೊಳ್ಳುವಂತೆ ಮುಂಬೈ ಪೊಲೀಸರು ಮನವಿ ಮಾಡಿಕೊಂಡಿದ್ದಾರೆ.