Advertisement

ಅಧಿಕೃತ ಘೋಷಣೆಗೆ ಅನಾಸಕ್ತಿ

12:08 PM Nov 28, 2018 | Team Udayavani |

ಬೆಂಗಳೂರು: ಶೌಚಾಲಯ ನಿರ್ಮಾಣಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ದೊರೆಯುವ ಅನುದಾನ ಪ್ರಮಾಣ ಇಳಿಕೆಯಾಗಲಿದೆ ಎಂಬ ಕಾರಣಕ್ಕೆ ಜನಪ್ರತಿನಿಧಿಗಳೇ ತಮ್ಮ ವಾರ್ಡ್‌ಗಳನ್ನು “ಬಯಲು ಬಹಿರ್ದೆಸೆ ಮುಕ್ತ’ ಎಂದು ಅಧಿಕೃತವಾಗಿ ಘೋಷಿಸಿಕೊಳ್ಳಲು ಮುಂದಾಗುತ್ತಿಲ್ಲ! ಇದರ ಪರಿಣಾಮ ಕೇಂದ್ರ ಸರ್ಕಾರದ “ಸ್ವತ್ಛ ಸರ್ವೇಕ್ಷಣ್‌’ ಅಭಿಯಾನದಲ್ಲಿ ಪ್ರತಿಬಾರಿ ಬಿಬಿಎಂಪಿಗೆ ಕಳಪೆ ರ್‍ಯಾಂಕ್‌ ದೊರೆಯುವಂತಾಗಿದೆ. 

Advertisement

ನಗರ ಪ್ರದೇಶದಲ್ಲಿ ಸ್ವತ್ಛತೆ ಹಾಗೂ ನೈರ್ಮಲ್ಯ ಹೆಚ್ಚಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ 2016ರಿಂದ ಸ್ವಷ ಸರ್ವೇಕ್ಷಣ್‌ ಅಭಿಯಾನ ನಡೆಸುತ್ತಿದೆ. ಅದರಂತೆ ನಗರದಲ್ಲಿನ ಸ್ವತ್ಛತೆ, ಘನತ್ಯಾಜ್ಯ ನಿರ್ವಹಣೆಗೆ ಕೈಗೊಂಡ ಕ್ರಮಗಳು, ಶೌಚಾಲಯ ವ್ಯವಸ್ಥೆ, ನಾಗರಿಕರ ಸಮಸ್ಯೆಗಳಿಗೆ ನಗರ ಸ್ಥಳೀಯ ಸಂಸ್ಥೆಗಳು ಸ್ಪಂದಿಸುವ ಆಧಾರದ ಮೇಲೆ ಪಡೆಯುವ ಅಂಕಗಳನ್ನು ಆಧಾರಿಸಿ ರ್‍ಯಾಂಕಿಂಗ್‌ ನೀಡಲಾಗುತ್ತದೆ. 

ಸರ್ವೇಕ್ಷಣ್‌ ಅಭಿಯಾನದಲ್ಲಿ ಒಟ್ಟು ನಾಲ್ಕು ವಿಭಾಗಗಳಲ್ಲಿ 5000 ಅಂಕಗಳನ್ನು ನಿಗದಿಪಡಿಸಲಾಗಿದೆ. ವಿಶೇಷವಾಗಿ ಅಗತ್ಯ ಕಡೆಗಳಲ್ಲಿ ಶೌಚಾಲಯ ವ್ಯವಸ್ಥೆ, ಸ್ವತ್ಛತೆ, ಜನಸ್ನೇಹಿ, ನೈರ್ಮಲ್ಯ ಹೀಗೆ ಶೌಚಾಲಯಗಳಿಗೆ ಸಂಬಂಧಿಸಿದಂತೆ 1182 ಅಂಕಗಳನ್ನು ನೀಡಲಾಗುತ್ತದೆ. ಜತೆಗೆ ನಗರ ಬಯಲು ಬಹಿರ್ದೆಸೆ ಮುಕ್ತ (ಒಡಿಎಫ್) ಎಂದು ಘೋಷಿಸಿಕೊಂಡರೆ ಸುಮಾರು 500 ಅಂಕಗಳು ದೊರೆಯುತ್ತವೆ.

ವಾರ್ಡ್‌ಗಳನ್ನು ಬಯಲು ಬಹಿರ್ದೆಸೆ ಮುಕ್ತ ಎಂದು ಘೋಷಣೆ ಮಾಡಿಕೊಳ್ಳುವುದರಿಂದ ಮುಂದೆ ಶೌಚಾಲಯಗಳ ನಿರ್ಮಾಣಕ್ಕೆ ಅನುದಾನ ಲಭ್ಯವಾಗುವುದಿಲ್ಲ ಎಂದು ಪಾಲಿಕೆ ಸದಸ್ಯರು ಹಿಂದೇಟು ಹಾಕುತ್ತಿದ್ದಾರೆ. ಇದರಿಂದಾಗಿ ಬೆಂಗಳೂರಿಗೆ ಪ್ರತಿವರ್ಷ ಕಡಿಮೆ ಅಂಕಗಳು ದೊರೆಯುತ್ತಿದ್ದು, ಬೆಂಗಳೂರಿಗೆ ಕಳಪೆ ರ್‍ಯಾಂಕ್‌ ದೊರೆಯುತ್ತಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕಳೆದ ಮೂರು ವರ್ಷಗಳಿಂದ ದೇಶದ 10 ಸ್ವತ್ಛ ನಗರಗಳ ಪಟ್ಟಿಯಲ್ಲಿ ಸ್ಥಾನ ಪಡೆಯಲು ಬೆಂಗಳೂರು ವಿಫ‌ಲವಾಗಿದ್ದು, 2017- 2018ನೇ ಸಾಲಿನ‌ಲ್ಲಿ ಬೆಂಗಳೂರಿಗೆ ಯಾವುದೇ ವಿಭಾಗದಲ್ಲಿ ಪ್ರಶಸ್ತಿ ದೊರಕಿರಲಿಲ್ಲ. ಈ ವರ್ಷ ಅಭಿಯಾನದಲ್ಲಿ 5000 ನಗರಗಳು ಭಾಗವಹಿಸುತ್ತಿರುವುದರಿಂದ ಪೈಪೋಟಿ ಹೆಚ್ಚಾಗಿದ್ದು, ಡಿಸೆಂಬರ್‌ ಅಂತ್ಯದ ವೇಳೆ ನಗರದ ಎಲ್ಲ ವಾರ್ಡ್‌ಗಳನ್ನು ಬಯಲು ಬಹಿರ್ದೆಸೆ ಮುಕ್ತ ಎಂದು ಘೋಷಿಸಿದರೆ ಹೆಚ್ಚಿನ ಅಂಕಗಳು ದೊರೆಯಲಿವೆ.

Advertisement

ಒಡಿಎಫ್ಗೆ ಜನಪ್ರತಿನಿಧಿಗಳ ವಿರೊಧವೇಕೆ?: ಕೇಂದ್ರ, ರಾಜ್ಯ ಸರ್ಕಾರ ಹಾಗೂ ಬಿಬಿಎಂಪಿ ವತಿಯಿಂದ ವಾರ್ಡ್‌ಗಳಿಗೆ ಪ್ರತಿವರ್ಷ ಸಮುದಾಯ ಹಾಗೂ ವೈಯಕ್ತಿಕ ಶೌಚಾಲಯಗಳ ನಿರ್ಮಾಣಕ್ಕಾಗಿ ಲಕ್ಷಾಂತರ ರೂ. ಅನುದಾನ ನೀಡಲಾಗುತ್ತಿದೆ. ಆದರೆ, ವಾರ್ಡ್‌ಅನ್ನು ಒಡಿಎಫ್ ಮುಕ್ತ ಎಂದು ಘೋಷಿಸಿದರೆ, ಮುಂದೆ ಅನುದಾನ ಬರುವುದಿಲ್ಲವೆಂಬುದು ಹಲವು ಪಾಲಿಕೆ ಸದಸ್ಯರ ಭಾವನೆ. ಇದರಿಂದಾಗಿ ವಾರ್ಡ್‌ಗಳನ್ನು ಒಡಿಎಫ್ ಮುಕ್ತವೆಂದು ಶಿಫಾರಸು ಮಾಡಲು ಹಿಂದೇಟು ಹಾಕುತ್ತಿದ್ದಾರೆ ಎಂದು ಪಾಲಿಕೆಯ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ವೈಯಕ್ತಿಕ ಶೌಚಾಲಯ ಶೇ.50 ದಾಟಿಲ್ಲ: ನಗರದ ಎಂಟು ವಲಯಗಳಲ್ಲಿ ವೈಯಕ್ತಿಕ ಶೌಚಾಲಯಗಳ ನಿರ್ಮಾಣಕ್ಕಾಗಿ ಅನುದಾನ ಕೋರಿ 4462 ಮಂದಿ ಪಾಲಿಕೆಗೆ ಅರ್ಜಿ ನೀಡಿದ್ದು, ಅರ್ಜಿ ನೀಡಿ ವರ್ಷ ಕಳೆಯುತ್ತಿದ್ದರೂ ಶೇ.50ರಷ್ಟು ಶೌಚಾಲಯಗಳಿಗೆ ಅನುದಾನ ಬಿಡುಗಡೆ ಸಾಧ್ಯವಾಗಿಲ್ಲ. ಈವರೆಗೆ 2995 ಅರ್ಜಿಗಳನ್ನು ಅನುಮೋದಿಸಿದ್ದು, 276 ಶೌಚಾಲಯಗಳ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. 

ಇನ್ನು 1,354 ಶೌಚಾಲಯಗಳು ನಿರ್ಮಾಣ ಹಂತದಲ್ಲಿದ್ದು, 1,630 ಕಡೆಗಳಲ್ಲಿ ಕಾಮಗಾರಿ ಶುರುವಾಗುತ್ತಿದೆ. ಉಳಿದಂತೆ 1365 ಕಡೆಗಳಲ್ಲಿ ಈವರೆಗೆ ಯಾವುದೇ ರೀತಿಯ ಕೆಲಸವಾಗಿಲ್ಲ. ಒಟ್ಟಾರೆ ಶೇ.45ರಷ್ಟು ಮಾತ್ರ ಪ್ರಗತಿಯಾಗಿದ್ದು, ಡಿಸೆಂಬರ್‌ ಅಂತ್ಯಕ್ಕೆ ಶೇ.80ರಷ್ಟು ಗುರಿ ಸಾಧಿಸಲು ಕ್ರಮಕೈಗೊಳ್ಳಲಾಗುವುದು. ಜತೆಗೆ 444 ಸಾರ್ವಜನಿಕ ಹಾಗೂ 79 ಸಮುದಾಯ ಶೌಚಗೃಹಗಳನ್ನು ನಿರ್ಮಿಸಬೇಕಿದೆ ಎಂದು ಹಿರಿಯ ಅಧಿಕಾರಿ ಹೇಳಿದರು.

ಸ್ವತ್ಛ ಸವೇಕ್ಷಣ್‌ ಸ್ಪರ್ಧೆ ನಡೆಯುವುದೇಗೆ?: ಸ್ವತ್ಛ ಸವೇಕ್ಷಣ್‌ ಅಭಿಯಾನದಲ್ಲಿ 1 ಲಕ್ಷಕ್ಕಿಂತ ಕಡಿಮೆ ಹಾಗೂ 1 ಲಕ್ಷಕ್ಕಿಂತ ಹೆಚ್ಚಿನ ಜನರಿರುವ ನಗರಗಳ ನಡುವೆ ಸ್ಪರ್ಧೆ ನಡೆಯುತ್ತದೆ. ಸ್ವತ್ಛತೆಗೆ ಕೈಗೊಂಡಿರುವ ಕ್ರಮಗಳ ಆಧಾರದ ಮೇಲೆ ಪ್ರತಿಯೊಂದಕ್ಕೂ ಅಂಕ ನೀಡಲಾಗುತ್ತದೆ. ಜತೆಗೆ ಕೇಂದ್ರ ಸರ್ಕಾರದ ಮೂರನೇ ವ್ಯಕ್ತಿಯ ತಂಡ ನಗರಕ್ಕೆ ಭೇಟಿ ನೀಡಿ ಪಾಲಿಕೆಯಿಂದ ನೀಡಿದ ಮಾಹಿತಿ ಹಾಗೂ ದಾಖಲೆಗಳು ಸರಿಯಾಗಿವೆ ಎಂಬುದನ್ನು ಪರಿಶೀಲಿಸಿ ಅಂಕಗಳನ್ನು ನೀಡಲಿವೆ.

157 ವಾರ್ಡ್‌ಗಳು ಬಯಲು ಬಹಿರ್ದೆಸೆ ಮುಕ್ತ: ಬಿಬಿಎಂಪಿ ವ್ಯಾಪ್ತಿಯ 198 ವಾರ್ಡ್‌ಗಳ ಪೈಕಿ 157 ವಾರ್ಡ್‌ಗಳು ಒಡಿಎಫ್ ಮುಕ್ತವೆಂದು ಕೌನ್ಸಿಲ್‌ ಸಭೆಯಲ್ಲಿ  ಅನುಮೋದನೆ ನೀಡಲಾಗಿದೆ. ಆದರೆ 26 ವಾರ್ಡ್‌ಗಳು ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸಲ್ಲಿಸಬೇಕಿದೆ. ಇನ್ನು 41 ವಾರ್ಡ್‌ಗಳು ಈವರೆಗೆ ಒಡಿಎಫ್ ಮುಕ್ತವೆಂದು ಪಾಲಿಕೆ ಸಭೆ ಅನುಮೋದಿಸಿಲ್ಲ. ಹೀಗಾಗಿ ಉತ್ತಮ ರ್‍ಯಾಂಕ್‌ ಪಡೆಯಲು ಡಿಸೆಂಬರ್‌ 31ರೊಳಗೆ ಉಳಿದ ವಾರ್ಡ್‌ಗಳನ್ನು ಒಡಿಎಫ್ ಮುಕ್ತವೆಂದು ಘೋಷಿಸಿ, ಅಗತ್ಯ ದಾಖಲೆಗಳನ್ನು ಸಂಗ್ರಹಿಸಬೇಕಿದೆ.

ಶೌಚಾಲಯ ವಿಷಯಗಳಿಗೆ ಸಂಬಂಧಿಸಿದಂತೆ ಹೆಚ್ಚಿನ ಅಂಕಗಳು ದೊರೆಯುತ್ತವೆ. ಆ ಹಿನ್ನೆಲೆಯಲ್ಲಿ ಈಗಾಗಲೇ 157 ವಾರ್ಡ್‌ಗಳನ್ನು ಒಡಿಎಫ್ ಮುಕ್ತವೆಂದು ಘೋಷಣೆ ಮಾಡಲಾಗಿದೆ. ಜತೆಗೆ ವೈಯಕ್ತಿಕ ಶೌಚಾಲಯಗಳ ನಿರ್ಮಾಣಕ್ಕೂ ಆದ್ಯತೆ ನೀಡಲಾಗಿದ್ದು, ಡಿಸೆಂಬರ್‌ ಅಂತ್ಯದ ವೇಳೆ ಶೇ.80ರಷ್ಟು ಪ್ರಗತಿ ಸಾಧಿಸಲು ಕ್ರಮಕೈಗೊಳ್ಳಲಾಗುವುದು. 
-ರಂದೀಪ್‌, ವಿಶೇಷ ಆಯುಕ್ತರು (ಘನತ್ಯಾಜ್ಯ ನಿರ್ವಹಣೆ ವಿಭಾಗ)

* ವೆಂ. ಸುನೀಲ್‌ಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next