ಕಲಾದಗಿ: ಬೇಸಿಗೆಯಲ್ಲಿ ಈರುಳ್ಳಿಗೆ ಬೇಡಿಕೆ ಇಲ್ಲದೇ ಬಿಡಿಗಾಸು ಸಿಗದೇ ಸಂಕಷ್ಟ ರೈತನಿಗೆ ಮಳೆಗಾಲದಲ್ಲೂ ಈರುಳ್ಳಿಯಿಂದ ರೈತ ಕಷ್ಟ-ನಷ್ಟ ಅನುಭವಿಸುವಂತಾಗಿದೆ. ಮಳೆಗಾಲದ ಈರುಳ್ಳಿ ರೋಗ ಬಾಧೆಗೆ ಸಿಲುಕಿ ಬಾಡಿ ಭೂಮಿಯಲ್ಲಿ ಕೊಳೆಯುತ್ತಿದೆ. ದಿಕ್ಕು ತೋಚದ ಈರುಳ್ಳಿ ಬೆಳೆದ ರೈತ, ಈರುಳ್ಳಿ ಬೆಳೆ ಟ್ರ್ಯಾಕ್ಟರ್ ಮೂಲಕ ನೇಗಿಲು ಹೊಡೆದು ಭೂಮಿಯಲ್ಲಿ ಮುಚ್ಚುತ್ತಿದ್ದಾರೆ.
ಜೂನ್ ಮೊದಲ ವಾರದಲ್ಲಿ ಈರುಳ್ಳಿ ಬಿತ್ತನೆ ಮಾಡಲಾಗಿತ್ತು. ಕಳೆದ ಎರಡೂವರೆ ತಿಂಗಳಿಂದ ಶ್ರಮ ವಹಿಸಿ ಲಕ್ಷಾಂತರ ರೂ. ಖರ್ಚು ಮಾಡಿದ್ದರು. ಈರುಳ್ಳಿ ಇನ್ನೇನು ಗಡ್ಡಿ ಕಟ್ಟುವಿಕೆ ಹಂತದಲ್ಲಿ ಕೊಳೆ ರೋಗ ತಗುಲಿದೆ. ಈ ಹಂತದಲ್ಲಿ ಸಾಕಷ್ಟು ಗೊಬ್ಬರ ಔಷಧ ಸಿಂಪರಣೆ ಮಾಡಿ ರೋಗ ಹತೋಟಿಗೂ ಯತ್ನಿಸಿದ್ದರೂ ನಿಯಂತ್ರಣಕ್ಕೆ ಬಂದಿಲ್ಲ. ಎಕರೆಗೆ 40 ಸಾವುರ ಖರ್ಚು ಖರ್ಚು: ಈ ಭಾಗದಲ್ಲಿ ಬಹುತೇಕ ರೈತರು ಮಳೆಗಾಲದ ಮುಂಗಾರು ಬೆಳೆ ಈರುಳ್ಳಿಯನ್ನು ಬೆಳೆಯುತ್ತಾರೆ. ಈರುಳ್ಳ ಗಡ್ಡಿ ಗಟ್ಟುವಿಕೆಯವರೆಗೂ ಸುಮಾರು 40,000ವರೆಗೂ ಖರ್ಚು ಮಾಡಿದ್ದಾನೆ. ರೋಗಕ್ಕೆ ತುತ್ತಾದ ಈರುಳ್ಳಿ ಬೆಳೆಯನ್ನು ನೇಗಿಲು ಹೊಡೆದು ಮುಚ್ಚುವಂತ ಪರಿಸ್ಥಿತಿ ರೈತರಿಗೆ ಬಂದೊದಗಿದೆ. ತೋಟಗಾರಿಕೆ ಇಲಾಖೆ ಅಧಿಕಾರಿಗಳು ಈರುಳ್ಳಿ ಬೆಳೆ ಹಾನಿ ವರದಿಯನ್ನು ಸರಕಾರಕ್ಕೆ ಸಲ್ಲಿಸಿ ಸರಕಾರದಿಂದ ಪರಿಹಾರ ಸಿಗುವಂತೆ ಮಾಡಬೇಕು ಎಂದು ರೈತರು ಇಲಾಖೆಯ ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ. ರೈತರು ಈರುಳ್ಳಿ ಬೆಳೆ ವಿಮೆ ಪಾವತಿಸಿದ್ದು, ರೈತರಿಗೆ ಜಮೆಯಾದರೆ ರೈತರಿಗೆ ಮರುಜೀವ ನೀಡಿದಂತಾಗುತ್ತದೆ.
ನಾಲ್ಕು ಲಕ್ಷ ರೂ ಖರ್ಚು ಮಾಡಿ 10 ಎಕರೆ ಪ್ರದೇಶದಲ್ಲಿ ಈರುಳ್ಳಿ ಬೆಳೆ ಬೆಳೆದಿದ್ದೆ, ಗಡ್ಡಿ ಕಟ್ಟುವಿಕೆಯ ಹಂತದಲ್ಲಿ ಹಳದಿ ರೋಗಕ್ಕೆ ತುತ್ತಾಗಿ ಬೆಳೆ ಬಾಡಿ ಕೊಳೆಯುತ್ತಿದೆ. ಇದನ್ನು ನೋಡಲಾಗದೆ ನೇಗಿಲು ಹೊಡೆದು ಮುಚ್ಚಿದ್ದೇವೆ. ಸರಕಾರ ಖರ್ಚು ಮಾಡಿದ ಅರ್ಧದಷ್ಟಾದರೂ ಪರಿಹಾರ ನೀಡಬೇಕು.
– ಈರಪ್ಪ ಅರಕೇರಿ, ಶಾರದಾಳ ರೈತ
ಜಿಲ್ಲೆಯಲ್ಲಿ 28,000 ಹೆಕ್ಟೇರ್ ಪ್ರದೇಶದಲ್ಲಿ ಈರುಳ್ಳಿ ಬಿತ್ತನೆಯಾಗಿದೆ, ಇದರಲ್ಲಿ ಬಾದಾಮಿ, ಬೀಳಗಿ, ಹುನಗುಂದ, ಮುಧೋಳ, ಜಮಖಂಡಿ, ಬಾಗಲಕೋಟೆ ಸೇರಿ 7,000 ಹೆಕ್ಟೇರ್ ಪ್ರದೇಶ ಈರುಳ್ಳಿ ರೋಗಕ್ಕೆ ಹಾನಿಯಾಗಿದೆ, ಬೆಳೆ ಹಾನಿ ಪ್ರಾಥಮಿಕ ವರದಿಯನ್ನು ಜಿಲ್ಲಾ ಧಿಕಾರಿಗಳಿಗೆ ಸಲ್ಲಿಸಲಾಗಿದೆ.
– ರಾಹುಲಕುಮಾರ ಬಾವಿದಡ್ಡಿ, ತೋ.ಇ ಉಪನಿರ್ದೇಶಕ ಬಾಗಲಕೋಟೆ
ಕಲಾದಗಿ ಹೋಬಳಿ ವ್ಯಾಪ್ತಿಯಲ್ಲಿ 3800 ಹೆಕ್ಟೇರ್ ಪ್ರದೇಶ ಈರುಳ್ಳಿ ಬಿತ್ತನೆಯಾಗಿದೆ. ಆಗಸ್ಟ್‌ನಲ್ಲಿ ಎರಡನೇ ವಾರದಲ್ಲಿ ವಿವಿಧ ಗ್ರಾಮಗಳ ಈರುಳ್ಳಿ ತೋಟಕ್ಕೆ ಭೇಟಿ ನೀಡಿ ಬೆಳೆ ಹಾನಿ ವೀಕ್ಷಣೆ ಮಾಡಲಾಗಿದೆ. 1100 ಹೆಕ್ಟೇರ್ ಪ್ರದೇಶ ಈರುಳ್ಳಿ ಬೆಳೆ ಹಾನಿಯಾದ ವರದಿಯನ್ನು ತೋಟಗಾರಿಕೆ ಇಲಾಖೆ ಉಪನಿರ್ದೇಶಕರಿಗೆ ಸಲ್ಲಿಸಲಾಗಿದೆ.
-ಸುಭಾಸ್ ಸುಲ್ಪಿ , ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ
– ಚಂದ್ರಶೇಖರ ಆರ್.ಎಚ್