ನರೇಗಲ್ಲ: ಜಿನುಗು ಮಳೆಯಿಂದ ಈರುಳ್ಳಿ-ಮೆಣಸಿನ ಕಾಯಿ ಬೆಳೆಗೆ ಬೂದಿ, ಮಜ್ಜಿಗೆ, ಮುಟ್ಟಿಗೆ ರೋಗ ಹಾಗೂ ಕೀಟಬಾಧೆ ಸೇರಿದಂತೆ ಇತರೆ ರೋಗಗಳು ತಗುಲಿದ್ದು, ರೈತರು ಸಮುದಾಯದಲ್ಲಿ ಆತಂಕ ಸೃಷ್ಟಿಸಿದೆ.
ಈಗಾಗಲೇ ಮಳೆ ಕೊರತೆ, ಅಂತರ್ಜಲ ಕುಸಿತ, ವಿದ್ಯುತ್ ಸಮಸ್ಯೆ, ಕೂಲಿಕಾರರ ಸಮಸ್ಯೆ ಹಾಗೂ ಇತರೆ ಹತ್ತಾರು ಸಮಸ್ಯೆಗಳ ನಡುವೆ ಕಂಗೆಟ್ಟಿರುವ ಇಲ್ಲಿನ ರೈತರು ಒಣ ಬೇಸಾಯ ಹಾಗೂ ನೀರಾವರಿಯ ಕೊಳವೆ ಬಾವಿಗಳಲ್ಲಿರುವ ನೀರನ್ನು ಉಪಯೋಗಿಸಿಕೊಂಡು ಮುಂಗಾರು ಹಂಗಾಮಿಗೆ ಈರುಳ್ಳಿ ಹಾಕಿದರೆ ಕೊಳವೆ ರೋಗ, ಮಜ್ಜಿಗೆ ರೋಗ, ಬೂದಿ ರೋಗ, ಮುಟ್ಟಿಗೆ ರೋಗ ತಗುಲಿದೆ.
ಪಟ್ಟಣ ಸೇರಿದಂತೆ ಹೋಬಳಿ ವ್ಯಾಪ್ತಿಯಲ್ಲಿ 4500 ಹೆಕ್ಟೇರ್‌ನಲ್ಲಿ ಈರುಳ್ಳಿ, ಮೆಣಸಿನ ಕಾಯಿ ಬೆಳೆ ನಾಟಿ ಮಾಡಿದ್ದಾರೆ. ರೈತರ ಜಮೀನಿನಲ್ಲಿ ಬೆಳೆದಿರುವ ಬೆಳೆಗಳಿಗೆ ಈಗ ನಾನಾ ರೋಗಗಳು ತಗುಲಿ ಎದೆಗುಂದುವಂತೆ ಮಾಡಿವೆ. ಈರುಳ್ಳಿ, ಮೆಣಸಿನ ಬೆಳೆಗಳಿಗೆ ಸಂಪೂರ್ಣ ರೋಗಕ್ಕೆ ತುತ್ತಾಗಿದೆ. ಈ ರೋಗದಿಂದಾಗಿ ಗಡ್ಡೆಗಳು ದೊಡ್ಡವಾಗದೆ ಪೀಚುಗಡ್ಡೆಗಳಾಗಿವೆ. ಅಲ್ಲದೇ, ಮೇಲಿನ ಎಲೆಗಳು ಬೂದಿ ಹಾಗೂ ಮಜ್ಜಿಗೆ ರೋಗದಿಂದ ಒಣಗುತ್ತಿದ್ದು, ಗಡ್ಡೆಗಳನ್ನು ಕಿತ್ತು ಹಾಕಲು ರೈತರು ನಿರ್ಧರಿಸಿದ್ದಾರೆ.
ಬಂಡವಾಳಕ್ಕೆ ತೊಂದರೆ: ಒಂದು ಎಕರೆಯಲ್ಲಿ ಈರುಳ್ಳಿ ಬೆಳೆಯಲು ಹೊಲ ಹದ ಮಾಡುವುದರಿಂದ ಹಿಡಿದು ಬೀಜ, ಗೊಬ್ಬರ, ಔಷಧ ಹಾಗೂ ಕೂಲಿ ಮತ್ತು ಇತರೆ ಖರ್ಚುಗಳು ಸೇರಿ 40 ರಿಂದ 50 ಸಾವಿರ ರೂ. ಖರ್ಚಾಗುತ್ತಿದೆ. ಅಲ್ಲದೆ, ನೀರಾವರಿ ಜಮೀನುಗಳಿಗೆ ವಿದ್ಯುತ್ ಸಮಸ್ಯೆಯಿಂದ ಸಮಯಕ್ಕೆ ಸರಿಯಾಗಿ ನೀರು ಬಿಡದಿದ್ದರೆ ಬೆಳೆ ಒಣಗುತ್ತದೆ. ಇಳುವರಿ ಕುಂಟಿತಗೊಳ್ಳುತ್ತದೆ.
ಇಳುವರಿ ಕುಂಟಿತ: ಮುಂಗಾರು ವಿಫಲ ಹಿನ್ನೆಲೆಯಲ್ಲಿ ಬೆಳೆಗಳು ಕುಂಟಿತಗೊಂಡ ಕಾರಣ ಈರುಳ್ಳಿ ಬೆಲೆ ದಿನದಿಂದ ದಿನಕ್ಕೆ ಏರುತ್ತಿದ್ದು, ಮಾರುಕಟ್ಟೆಯಲ್ಲಿ ಈಗ ಒಂದು ಕ್ವಿಂಟಲ್ ಈರುಳ್ಳಿಗೆ 2500 ರೂ.ಗಳಿಂದ 3000 ರೂ.ಗಳವರೆಗೆ ಬೆಲೆ ಇದೆ. ಇಂಥ ಸಂದರ್ಭದಲ್ಲಿ ಹೋಬಳಿ ವ್ಯಾಪ್ತಿಯ ರೈತರು ನಾಲ್ಕು ಕಾಸು ಕಾಣಲು ಅನುಕೂಲವಾಗಿತ್ತು. ವಿಪರ್ಯಾಸ ಎಂದರೆ ಬೆಲೆ ಏರಿಕೆಯಿದ್ದರೂ, ಇಳುವರಿ ಇಲ್ಲದ್ದರಿಂದ ರೈತರಿಗೆ ಉಪಯೋಗವಾಗುತ್ತಿಲ್ಲ.
ರೈತರ ದೂರು: ಹೋಬಳಿ ವ್ಯಾಪ್ತಿಯಲ್ಲಿನ ಈರುಳ್ಳಿ, ಮೆಣಸಿನ ಬೆಳೆಗೆ ರೋಗಗಳು ಕಾಡುತ್ತಿರುವ ಬಗ್ಗೆ ಈಗಾಗಲೇ ತೋಟಗಾರಿಕೆ ಇಲಾಖೆ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಆದರೆ, ಅವರಿಂದ ಸಮರ್ಪಕ ಉತ್ತರವಾಗಲಿ, ಸಲಹೆಗಳಾಗಲಿ ಸಿಕ್ಕಿಲ್ಲ ಎಂದು ರೈತರು ದೂರುತ್ತಿದ್ದಾರೆ.
•ಸಿಕಂದರ ಎಂ. ಆರಿ