Advertisement

ರಾಗಿ ಬೆಳೆಗೆ ಮಾರಕವಾದ ಬೆಂಕಿರೋಗ

03:35 PM Sep 07, 2019 | Suhan S |

ತುಮಕೂರು: ಬಹುತೇಕ ಬಯಲು ಸೀಮೆ ಪ್ರದೇಶ ವಾಗಿರುವ ಕಲ್ಪತರು ನಾಡಿನಲ್ಲಿ ಮುಂಗಾರು ಮಳೆ ಕಣ್ಣಾಮುಚ್ಚಾಲೆಯಾಡುತ್ತಿದೆ. ಈ ವರ್ಷವೂ ಬಿತ್ತನೆ ಸಮಯದಲ್ಲಿ ಮಳೆ ಕೊರತೆ ಕಂಡು ಬಂದಿದ್ದು, ಬಿತ್ತನೆ ಮಾಡುವ ಸಮಯದಲ್ಲಿ ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ ಶೇಂಗಾ ಬೆಳೆ ಕೇವಲ ಶೇ. 44.45 ರಷ್ಟು ಬಿತ್ತನೆ ಯಾಗಿದ್ದರೆ. ರಾಗಿ ಶೇ.86 ರಷ್ಟು ಬಿತ್ತನೆಯಾಗಿದೆ. ಜಿಲ್ಲೆಯಲ್ಲಿ ಮೋಡ ಮುಸುಕಿದ ವಾತಾವರಣದ ನಡುವೆ ತುಂತುರು ಮಳೆ ಬೀಳುತ್ತಿದ್ದು, ರಾಗಿ ಬೆಳೆ ಗರಿ ಕಟ್ಟುವ ವೇಳೆಯಲ್ಲಿ ತಂಪು ವಾತಾವರಣದಿಂದ ಬೆಳೆಗೆ ಬೆಂಕಿ ರೋಗ ಕಾಣಲಾರಂಭಿಸಿದ್ದು, ಒಳ್ಳೆಯ ಬೆಳೆ ಬರುತ್ತದೆ ಎಂದು ನಿರೀಕ್ಷಿಸಿರುವ ರೈತರು ಈಗ ಕಂಗಾಲಾಗುತ್ತಿದ್ದಾರೆ.

Advertisement

ಕೇವಲ 2,53,901 ಹೆಕ್ಟೇರ್‌ ಬಿತ್ತನೆ: ಈ ಬಾರಿಯ ಮುಂಗಾರು ಹಂಗಾಮಿಗೆ ಒಟ್ಟು 4,17,780 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಗುರಿ ಇದ್ದು, ಈ ಪೈಕಿ ಆಗಸ್ಟ್‌ ಅಂತ್ಯಕ್ಕೆ ಕೇವಲ 2,53,901 ಹೆಕ್ಟೇರ್‌ ಮಾತ್ರ ಅಂದರೆ ಶೇ.60.7 ರಷ್ಟು ಮಾತ್ರ ಬಿತ್ತನೆಯಾಗಿದೆ. ವಾಡಿಕೆ ಯಂತೆ ಆಗಸ್ಟ್‌ ಅಂತ್ಯಕ್ಕೆ ಶೇ.95ರಷ್ಟು ಬಿತ್ತನೆಯಾಗ ಬೇಕಿದ್ದು, ಈ ಬಾರಿ ಮಳೆ ಕೊರತೆಯಿಂದ ಶೇಂಗಾ ಬಿತ್ತನೆ ಕುಂಠಿತಗೊಂಡಿರುವ ಹಿನ್ನೆಲೆಯಲ್ಲಿ ಕೇವಲ ಶೇ.40 ರಷ್ಟು ಮಾತ್ರ ಕಡಿಮೆ ಬಿತ್ತನೆಯಾಗಿದೆ.

ಶೇಂಗಾ ಬಿತ್ತನೆ ಸಂಪೂರ್ಣ ಇಳಿಮುಖ: ಜಿಲ್ಲೆಯ ಪಾವಗಡ, ಮಧುಗಿರಿ, ಶಿರಾ, ಕೊರಟಗೆರೆ ಭಾಗಗಳಲ್ಲಿ ಪ್ರಧಾನ ಬೆಳೆಯಾಗಿರುವ ಶೇಂಗಾ ಬಿತ್ತನೆ ಈ ಬಾರಿ ಸಂಪೂರ್ಣ ಇಳಿಮುಖವಾಗಿದೆ. ಈ ಭಾಗದಲ್ಲಿ 1,21,952 ಹೆಕ್ಟೆರ್‌ ಪ್ರದೇಶದಲ್ಲಿ ಶೇಂಗಾ ಬಿತ್ತನೆಯಾಗ ಬೇಕಾಗಿತ್ತು. ಈಗ ಬಿತ್ತನೆ ಆಗಿರುವುದು ಕೇವಲ 54,211 ಹೆಕ್ಟೇರ್‌ ಪ್ರದೇಶದಲ್ಲಿ ಮಾತ್ರ ಬಿತ್ತನೆ ಯಾಗಿದ್ದು, ಶೇ.44.45 ರಷ್ಟು ಮಾತ್ರ ಬಿತ್ತನೆಯಾಗಿದೆ.

ರೈತರಲ್ಲಿ ಆತಂಕ: ಅದೇ ರೀತಿಯಲ್ಲಿ ರಾಗಿ ಬೆಳೆಯುವ ತಾಲೂಕುಗಳಾದ ತುಮಕೂರು, ಕುಣಿಗಲ್, ತುರುವೇಕೆರೆ, ಗುಬ್ಬಿ, ಚಿ.ನಾ.ಹಳ್ಳಿ, ತಿಪಟೂರು ತಾಲೂಕುಗಳಲ್ಲಿ ಈ ವೇಳೆಗೆ ಶೇ.95ರಷ್ಟು ರಾಗಿ ಬಿತ್ತನೆಯಾಗಬೇಕಾಗಿತ್ತು. ಆದರೆ ಮಳೆಯ ಅಭಾವದಿಂದ ಬಿತ್ತನೆ ಕುಂಠಿತಗೊಂಡಿದೆ. 1,71,800 ಹೆಕ್ಟೇರ್‌ ಪ್ರದೇಶದಲ್ಲಿ ರಾಗಿ ಬಿತ್ತನೆ ಮಾಡಬೇಕಾಗಿದ್ದು, ಕೇವಲ 1,47,998 ಹೆಕ್ಟೇರ್‌ ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿದೆ. ಆಗಸ್ಟ್‌ ಅಂತ್ಯಕ್ಕೆ ಶೇ.80 ರಷ್ಟು ಬಿತ್ತನೆ ಯಾಗಿದೆ. ಆದರೆ ಬಿತ್ತನೆಯಾದ ಕೆಲವು ಪ್ರದೇಶಗಳಲ್ಲಿ ತಂಪು ವಾತಾವರಣ ಮತ್ತು ನಿರಂತರ ತುಂತುರು ಮಳೆಯಿಂದ ರಾಗಿ ಗರಿ ಬಿಡುವ ಸಮಯದಲ್ಲಿ ಬೆಂಕಿ ರೋಗ ಕಾಣಿಸಿಕೊಳ್ಳುತ್ತಿದ್ದು, ಗರಿಗಳು ಒಣಗಿದಂತೆ ಕಾಣುತ್ತಿ ರುವುದು ರೈತರನ್ನು ಚಿಂತೆಗೀಡು ಮಾಡಿದೆ.

ಜಿಲ್ಲೆಯ ತಿಪಟೂರು, ಚಿಕ್ಕನಾಯಕನಹಳ್ಳಿ ತಾಲೂಕಿನ ಕೆಲವು ಗ್ರಾಮಗಳಲ್ಲಿ ಮುಂಗಾರು ಹಂಗಾ ಮಿನಲ್ಲಿ ಬಿತ್ತನೆಯಾಗಿರುವ ರಾಗಿ ಬೆಳೆಯಲ್ಲಿ ಬೆಂಕಿ ರೋಗದ ಲಕ್ಷಣ ಕಂಡುಬಂದಿದ್ದು, ಶಿಲೀಂಧ್ರ ನಾಶಕ ಸಿಂಪಡಿಸುವಂತೆ ರೈತರಿಗೆ ಕೃಷಿ ಇಲಾಖೆ ತಿಳಿಸಿದೆ.

Advertisement

ಹೆಚ್ಚು ಬಿತ್ತನೆ ಬೀಜ ಬಳಕೆ: ಬೆಂಕಿ ರೋಗಕ್ಕೆ ಪ್ರಸ್ತುತ ಇರುವ ಗಾಳಿಯಿಂದ ಕೂಡಿದ ಮೋಡ ಕವಿದ ವಾತಾವರಣ ಹಾಗೂ ರೈತರು ಬಳಸುತ್ತಿರುವ ಅಧಿಕ ಪ್ರಮಾಣದ ಯೂರಿಯಾ ರಸಗೊಬ್ಬರ ಹಾಗೂ ಬಿತ್ತನೆ ಸಮಯದಲ್ಲಿ ಶಿಫಾರಸು ಮಾಡಿರುವ ಪ್ರಮಾಣಕ್ಕಿಂತ ಹೆಚ್ಚಿನ ಪ್ರಮಾಣದ ಬಿತ್ತನೆ ಬೀಜ ಬಳಕೆ ಹಾಗೂ ದೀರ್ಘಾವಧಿ ತಳಿಯ ತಡವಾದ ಬಿತ್ತನೆ ಕಾರಣವಾಗಿರುತ್ತದೆ.

ಬೆಂಕಿರೋಗವು ಬೆಳೆಯ ಬೆಳವಣಿಗೆ ಮೇಲೆ ತೀವ್ರವಾದ ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ ಈ ರೋಗದ ಹತೋಟಿಗೆ 1 ಗ್ರಾಂ ಕಾರ್ಬನ್‌ಡೈಜಿಂ ಶಿಲೀಂಧ್ರ ನಾಶಕವನ್ನು ಪ್ರತಿ ಲೀಟರ್‌ ನೀರಿಗೆ ಬೆರೆಸಿ ಸಿಂಪಡಿಸಬೇಕು.

ರೈತ ಸಂಪರ್ಕ ಕೇಂದ್ರಗಳಲ್ಲಿ ಶೇ.50 ರಿಯಾಯಿತಿ ದರದಲ್ಲಿ ಸಸ್ಯ ಸಂರಕ್ಷಣಾ ಔಷಧಿಯನ್ನು ವಿತರಿಸ ಲಾಗುತ್ತಿದ್ದು, ಆಯಾ ವ್ಯಾಪ್ತಿಯ ರೈತರು ಸಂಬಂಧಪಟ್ಟ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸ ಬಹುದಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕ ಜಯಸ್ವಾಮಿ ತಿಳಿಸಿದ್ದಾರೆ.

 

● ಚಿ.ನಿ. ಪುರುಷೋತ್ತಮ್‌

Advertisement

Udayavani is now on Telegram. Click here to join our channel and stay updated with the latest news.

Next