Advertisement

ವಿವಿಧ ಬೆಳೆಗಳಲ್ಲಿ ರೋಗ ನಿರ್ವಹಣೆ ವಿಧಾನ

10:46 PM Nov 02, 2019 | mahesh |

ಬಿತ್ತಿದಂತೆ ಬೆಳೆ ಎಂಬ ಗಾದೆಯಂತೆ ಇಳುವರಿಯನ್ನು ಲಕ್ಷ್ಯದಲ್ಲಿ ಇರಿಸಿಕೊಂಡಾಗ ಬಿತ್ತನೆ ಬೀಜ, ಸಮಯ, ಹವಾಮಾನ, ಮಣ್ಣಿನ ಗುಣಧರ್ಮಗಳ ಜತೆಗೆ ಬೆಳೆಗಳನ್ನು ಕಾಡುವ ವಿವಿಧ ರೋಗಗಳನ್ನು ಗಮನಕ್ಕೆ ತೆಗೆದುಕೊಳ್ಳಬೇಕು. ವಿವಿಧ ಬೆಳೆಗಳಿಗೆ ತಗಲುವ ನಾನಾ ರೋಗಗಳನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸಬೇಕು. ಆಧುನಿಕ ಬೇಸಾಯದಿಂದ ರೋಗಗಳನ್ನು ಸಂಪೂರ್ಣ ತಡೆಯಲಾಗದಿದ್ದರೂ ನಷ್ಟದ ಪ್ರಮಾಣ ತಗ್ಗಿಸಬಹುದು. ಅಂತಹ ನಿರ್ವಹಣಾ ಕ್ರಮಗಳ ಮಾಹಿತಿ ಇಲ್ಲಿದೆ.

Advertisement

ರೈತರು ಬೆಳೆದ ಪ್ರತಿಯೊಂದು ಬೆಳೆಯು ಯಾವುದಾದರೊಂದು ರೋಗಕ್ಕೆ ತುತ್ತಾಗುವುದು ಸಾಮಾನ್ಯ. ಅವುಗಳು ಹರಡುವ ಕಾರಣ, ಜೀವನ ಚರಿತ್ರೆ, ಹರಡುವ ವಿಧಾನ ತಿಳಿದುಕೊಂಡಲ್ಲಿ ಅವುಗಳನ್ನು ಪರಿಣಾಮಕಾರಿಯಾಗಿ ನಾಶಪಡಿಸಲು, ಅಧಿಕ ಇಳುವರಿ ಪಡೆಯಲು ಸಾಧ್ಯ.

ಸಾಗುವಳಿ ರೋಗ ನಿರ್ವಹಣೆ
ಸಸ್ಯಗಳಿಗೆ ಬರುವ ಅನೇಕ ರೋಗಗಳು ಬೆಳೆ ಕಟಾವಾದ ಅನಂತರವೂ ನೆಲದಲ್ಲಿ ಜೀವಂತವಾಗಿರುತ್ತವೆ. ಇವು ಮೊಳಕೆಯೊಡೆದು ಸಸಿಯ ಬೇರು, ಬುಡಭಾಗದಲ್ಲಿ ಸೋಂಕು ತಗಲುವುದರಿಂದ ಸಸಿಗಳ ಬೆಳವಣಿಗೆ ಕುಂಠಿತವಾಗಿ ಕ್ರಮೇಣ ಸಾಯುತ್ತವೆ. ಪ್ರಮುಖವಾಗಿ ಶಿಲೀಂಧ್ರದಿಂದ ಬರುವ ರೋಗಾಣುಗಳು 10ರಿಂದ 14 ವರ್ಷಗಳ ವರೆಗೆ ಮಣ್ಣಿನಲ್ಲಿ ಜೀವಂತವಾಗಿರುತ್ತವೆ ಎಂದು ಸಂಶೋಧನೆಯಿಂದ ತಿಳಿದುಬಂದಿದೆ. ಅದಕ್ಕಾಗಿ ಬೆಳೆ ಕಟಾವಾದ ಅನಂತರ ಅಥವಾ ಬೇಸಗೆ ಹಂಗಾಮಿನಲ್ಲಿ ಭೂಮಿಯನ್ನು 8ರಿಂದ 10 ಅಂಗುಲದವರೆಗೆ ಉಳುಮೆ ಮಾಡುವುದರಿಂದ ರೋಗಾಣುಗಳು ಮೇಲ್ಭಾಗದಲ್ಲಿ ಬಂದು ಸೂರ್ಯನ ಪ್ರಖರತೆಗೆ ಸಾಯುತ್ತವೆ.

ಬಿತ್ತನೆ ಸಮಯದಲ್ಲಿ ಬದಲಾವಣೆ
ಬಿತ್ತನೆ ಸಮಯದಲ್ಲಿ ಬದಲಾವಣೆ ಮಾಡುವುದರಿಂದ ಬೆಳೆಗಳಲ್ಲಿ ಬರುವ ಅನೇಕ ರೋಗಗಳ ತೀವ್ರತೆ ಕಡಿಮೆ ಮಾಡಬಹುದು. ಈ ಹತೋಟಿ ಕ್ರಮಗಳು ಆಯಾ ಪ್ರದೇಶದ ಹವಾಗುಣಕ್ಕೆ ಅನುಗುಣವಾಗಿ ಬಿತ್ತನೆಯನ್ನು ನಿಗದಿತ ಸಮಯಕ್ಕೆ ಮುಂಚಿತ ಅಥವಾ ತಡವಾಗಿ ಬಿತತುವುದರಿಂದ ರೋಗದ ತೀವ್ರತೆ ಕಡಿಮೆ ಮಾಡಬಹುದು. ಗಾಳಿಯಿಂದ ರೋಗಾಣು ಪ್ರಸಾರವಾಗಿ ಬರುವ ಅನೇಕ ರೋಗಗಳಲ್ಲಿ ಈ ಹತೋಟಿ ಕ್ರಮ ಅನುಸರಿಸಬಹುದು.

ಬೆಳೆ ಪರಿವರ್ತನೆ, ಮಿಶ್ರ ಬೆಳೆ ಪದ್ಧತಿ
ಈ ಪದ್ಧತಿಯಿಂದ ಅನೇಕ ಸಸ್ಯರೋಗಗಳನ್ನು ಹತೋಟಿ ಮಾಡಬಹುದು. ಅನೇಕ ಕೃಷಿ ರೋಗಗಳಿಗೆ ಮೂಲ ಸೋಂಕು ಭೂಮಿಯಲ್ಲಿರುವ ಶಿಲೀಂಧ್ರದಿಂದಲೇ ಬರುತ್ತವೆ. ಪ್ರತೀ ವರ್ಷ ಒಂದೇ ಬೆಳೆಯನ್ನು ಪದೇ ಪದೇ ಬೆಳೆಯುವುದರಿಂದ ಶಿಲೀಂಧ್ರಗಳ ಪ್ರಮಾಣ ಹೆಚ್ಚಾಗಿ ರೋಗದ ತೀವ್ರತೆ ಕೂಡ ಜಾಸ್ತಿಯಾಗುತ್ತದೆ. ಇದನ್ನು ತಪ್ಪಿಸಲು “ಬೆಳೆ ಪರಿವರ್ತನೆ’ ಮಾಡಿದಲ್ಲಿ ಭೂಮಿಯಲ್ಲಿರುವ ಶಿಲೀಂದ್ರ ಬೀಜಕಣಗಳ ಪ್ರಮಾಣ ಕಡಿಮೆಯಾಗಿ ರೋಗದ ತೀವ್ರತೆ ಕಡಿಮೆಯಾಗುತ್ತದೆ. ಇದನ್ನು ಸುಮಾರು 2ರಿಂದ 3 ವರ್ಷಗಳವರೆಗೆ ಮಾಡಬೇಕು.

Advertisement

ಮಿಶ್ರ ಬೆಳೆ ಪದ್ಧತಿಯಿಂದಲೂ ಅನೇಕ ರೋಗಗಳ ತೀವ್ರತೆ ಕಡಿಮೆ ಮಾಡಬಹುದು. ಈ ಪದ್ಧತಿಯಲ್ಲಿ ಮಿಶ್ರ ಬೆಳೆ ಗಾಳಿ ಮೂಲಕ ಪ್ರಸಾರವಾಗುವ ತಡೆಗೋಡೆಯಾಗಿ ರೋಗದ ಸೋಂಕು ಹರಡುವುದನ್ನು ಕಡಿಮೆಗೊಳಿಸಬಹುದು.

ರೋಗರಹಿತ ಬೀಜ, ಆರೋಗ್ಯಕರ ಕಸಿಗಿಡ
ಕೃಷಿ, ತೋಟಗಾರಿಕೆ ಬೆಳೆಗಳಲ್ಲಿ ಅನೇಕ ರೋಗಗಳಿಗೆ ಕಾರಣ ಸೋಂಕಿನಿಂದ ಕೂಡಿದ ಬಿತ್ತನೆ ಬೀಜ, ಸಸಿಗಳಿಂದ ಬರುತ್ತದೆ. ಇದಕ್ಕೆ ಪ್ರಮಾಣೀಕರಿಸಿದ ಅಥವಾ ಅಧಿಕೃತ ಬಿತ್ತನೆ ಬೀಜಗಳನ್ನೇ ಉಪಯೋಗಿಸಬೇಕು. ಸ್ವಂತ ಬೆಳೆಯಾದರೆ ರೋಗವಿಲ್ಲದ ಆರೋಗ್ಯಕರ ಬೆಳೆಯಿಂದ ಸಂಗ್ರಹಿಸಬೇಕು. ತೋಟಗಾರಿಕೆ ಬೆಳೆಗಳಲ್ಲಿ ರೋಗರಹಿತ ಸಸಿಗಳು ಆರೋಗ್ಯಕರ ಕಸಿ ಗಿಡಗಳನ್ನು ಉಪಯೋಗಿಸಬೇಕು.

ಬೇಗನೆ ಮಾಗುವ ತಳಿ
ಬೇಗನೆ ಮಾಗುವ ತಳಿಗಳನ್ನು ಬಿತ್ತನೆಗೆ ಉಪಯೋಗಿಸುವುದರಿಂದ ಕ್ಷೇತ್ರ ಬೆಳೆಗಳಲ್ಲಿ ಎಲೆ, ಕಾಂಡ, ಕಾಯಿಗಳ ಮೇಲೆ ಬರುವ ಅನೇಕ ರೋಗದ ತೀವ್ರತೆ ಕಡಿಮೆಗೊಳಿಸಬಹುದು.

ರೋಗ ನಿರೋಧಕ ತಳಿ
ಪ್ರತಿಯೊಂದು ಬೆಳೆಯಲ್ಲೂ ಹಲವು ತಳಿಗಳಿದ್ದು, ಕೆಲವು ಮಾತ್ರ ರೋಗ ನಿರೋಧಕ ಗುಣ ಹೊಂದಿದೆ. ಕೆಲವು ತಳಿಗಳು ಒಂದೇ ರೋಗಕ್ಕೆ ನಿರೋಧಕ ಶಕ್ತಿ ಹೊಂದಿದೆ. ಇನ್ನು ಕೆಲವು ಎರಡರಿಂದ ಮೂರು ರೋಗ ನಿರೋಧಕ ಶಕ್ತಿ ಹೊಂದಿದೆ. ರೈತರು ಬೆಳೆ ಬೆಳೆಯುವ ಮುಂಚೆ ತಜ್ಞರ ಸಲಹೆ ಪಡೆದು ತಳಿ ಆಯ್ಕೆ ಮಾಡಿಕೊಳ್ಳಬೇಕು.

ಏರುಮಡಿ, ಪಾರದರ್ಶಕ ಪಾಲಿಥೀನ್‌ ಹೊದಿಕೆ
ಏರುಮಡಿ ಮಾಡುವುದರಿಂದ ಸಸಿ ಸಾಯುವ ರೋಗಗಳನ್ನು ಸಾಕಷ್ಟು ಪ್ರಮಾಣದಲ್ಲಿ ಕಡಿಮೆ ಮಾಡಬಹುದು. ಟೊಮೇಟೊ, ಬದನೆ, ಮೆಣಸಿನ ಕಾಯಿಯಲ್ಲಿ ಸಸಿ ಸಾಯುವುದು ಸಾಮಾನ್ಯ. ತಗ್ಗು ಮಡಿ ಮಾಡಿದಲ್ಲಿ ನೀರು ನಿಂತು ಶಿಲೀಂಧ್ರ ಸೋಂಕಿನಿಂದ ಸಸಿಗಳು ಸಾಯುತ್ತವೆ. ಅದಕ್ಕೆ ಕನಿಷ್ಠ 10 ಸೆಂ.ಮೀ. ಎತ್ತರವಿರುವ ಮಡಿಗಳನ್ನು ತಯಾರಿಸಿ ಅದನ್ನು 400-500 ಗೇಜಿನ ಪಾರದರ್ಶಕ ಪಾಲಿಥಿನ್‌ ಪೇಪರ್‌ನಿಂದ ಎಪ್ರಿಲ್‌-ಮೇ ತಿಂಗಳಿನಲ್ಲಿ ಆರು ವಾರಗಳ ಕಾಲ ಮುಚ್ಚಿಡಬೇಕು. ಆಗ ಶಿಲೀಂಧ್ರ ರೋಗ ಕಣಗಳು ನಾಶವಾಗುತ್ತವೆ.

ಬೀಜೋಪಚಾರ
ರೋಗಗಳ ಮೂಲ ಸೋಂಕಿನಿಂದ ಕೂಡಿದ ಬೀಜ, ಮಣ್ಣಿನಲ್ಲಿರುವ ರೋಗಕಾರಕಗಳ ಮೂಲಕ ಬರುತ್ತಿದ್ದಲ್ಲಿ ಬೀಜೋಪಚಾರ ಮಾಡಿ ಬಿತ್ತುವುದು ಅತ್ಯವಶ್ಯ. ಇದಕ್ಕೆ ರಾಸಾಯನಿಕ ಅಥವಾ ಶಿಲೀಂಧ್ರ ನಾಶಕಗಳನ್ನು ಉಪಯೋಗಿಸಬಹುದು.

ನೀರಿನ ನಿರ್ವಹಣೆ
ಬೆಳೆಗಳಿಗೆ ಅನುಸಾರವಾಗಿ ಹದವರಿತು ನೀರು ಕೊಡುವುದರಿಂದ ರೋಗದ ತೀವ್ರತೆ ಕಡಿಮೆಗೊಳಿಸಬಹುದು. ಅನೇಕ ಕೃಷಿ ಬೆಳೆಗಳಲ್ಲಿ ಎಲೆ, ಕಾಂಡ, ಕಾಯಿಗಳ ಮೇಲೆ ಬರುವ ರೋಗಗಳು ಮಣ್ಣಿನಲ್ಲಿ ಬಹಳ ದಿನಗಳ ಕಾಲ ಹೆಚ್ಚಿನ ತೇವಾಂಶ ಇದ್ದಲ್ಲಿ ರೋಗದ ತೀವ್ರತೆ ಹೆಚ್ಚಿರುತ್ತದೆ.

ಸಸ್ಯರೋಗಗಳ ಹತೋಟಿ ಕ್ರಮದ 4 ವಿಧಾನ
1 ಸಾಗುವಳಿ ರೋಗ ನಿರ್ವಹಣ ಕ್ರಮಗಳು.
2 ಜೈವಿಕ ರೋಗ ನಿವಾರಕ ಶಿಲೀಂದ್ರ, ದುಂಡಾಣುಗಳನ್ನು ಉಪಯೋಗಿಸುವುದು.
3 ರೋಗ ನಿರೋಧಕ ತಳಿಗಳ ಬಳಕೆ.
4 ರಾಸಾಯನಿಕ ಪದ್ಧತಿಗಳು.

-  ಜಯಾನಂದ ಅಮೀನ್‌ ಬನ್ನಂಜೆ

Advertisement

Udayavani is now on Telegram. Click here to join our channel and stay updated with the latest news.

Next