ಮುಂಡಗೋಡ: ತಾಲೂಕಿನ ಬೇಸಿಗೆಯ ಭತ್ತದ ನಾಟಿ ಬೆಳೆಗೆ ಬೆಂಕಿರೋಗ ಹಾಗೂ ಬೇರುಕೊಳೆ ರೋಗ ಕಾಣಿಸಿಕೊಂಡಿರುವುದು ರೈತ ಸಮೂಹಕ್ಕೆ ಆತಂಕವುಂಟು ಮಾಡಿದೆ.
ಈ ಬಾರಿ ಉತ್ತಮ ಮಳೆಯಾದ ಕಾರಣ ತಾಲೂಕಿನಲ್ಲಿರುವ ಎಲ್ಲ ಕೆರೆ, ಜಲಾಶಯಗಳು ನೀರು ತುಂಬಿದ್ದು, ಅಂತರ್ಜಲವು ಹೆಚ್ಚಾಗಿದೆ. ಆದರಿಂದಾಗಿ ಈ ಬಾರಿ ತಾಲೂಕಿನಲ್ಲಿ ರೈತರು ಬೇಸಿಗೆ ಬೆಳೆ ಬೆಳೆಯುತ್ತಿದ್ದಾರೆ. ಹೆಚ್ಚಿನ ಪ್ರದೇಶದಲ್ಲಿ ಗೋವಿನಜೋಳದ ಬೆಳೆ ಬೆಳೆಯಲಾಗಿದೆ. ಕೆಲವಡೆ ನಾಟಿ ಭತ್ತದ ಬೆಳೆ ಬೆಳೆಯಲಾಗಿದೆ, ಮತ್ತೆ ಕೆಲವು ರೈತರು ತರಕಾರಿ ಬೆಳೆಗಳನ್ನು ಬೆಳೆದಿದ್ದಾರೆ. ನೀರಿನ ಸೌಲಭ್ಯ ಸಮರ್ಪಕವಾಗಿರುವುದರಿಂದ ಬೇಸಿಗೆ ಬೆಳೆಯು ಉತ್ತಮ ಇಳುವರಿ ಹಾಗೂ ಸರಿಯಾದ ಬೆಲೆಯೂ ಸಿಗಬಹುದು ಎಂಬ ಆಶಾಭಾವನೆಯಲ್ಲಿ ತಾಲೂಕಿನ ರೈತ ಸಮೂಹವಿತ್ತು.
ಆದರೆ ಇದೀಗ ನಾಟಿ ಭತ್ತದ ಬೆಳೆಗೆ ಬೆಂಕಿರೋಗ ಹಾಗೂ ಬೇರುಕೋಳೆ ರೋಗ ಕಾಣಿಸಿಕೊಂಡಿರುವುದು ರೈತರಿಗೆ ತೀವ್ರ ಬೇಸರವುಂಟು ಮಾಡಿದೆ. ತಾಲೂಕಿನ ಪಾಳಾ, ಇಂಗಳಕಿ, ಕಲ್ಲಕೋಪ್ಪ ಭಾಗದಲ್ಲಿ ರೋಗ ಕಾಣಿಸಿಕೊಂಡಿದೆ. ಬೆಂಕಿರೋಗವೂ ಒಂದು ಗದ್ದೆಯಿಂದ ಮತ್ತೂಂದು ಗದ್ದೆಗೆ ಹರಡುವಂತಹ ರೋಗವಾಗಿದೆ ಹಾಗೂ ಬೇರುಕೋಳೆ ರೋಗವು ಭತ್ತದ ಬೆಳೆಯ ಬೇರುಗಳು ಕೊಳೆತು ಹೋಗುವಂತೆ ಮಾಡುತ್ತದೆ. ಇದರಿಂದ ಭತ್ತದ ಸಸಿಯೂ ಒಣಗಿ ನಿಲ್ಲುತ್ತದೆ.
ಕೃಷಿ ಇಲಾಖೆ ಸಲಹೆ: ಬೆಂಕಿರೋಗ ಹಾಗೂ ಬೇರುಕೋಳೆ ರೋಗದ ಹತೋಟಿಗೆ ತರಲು ಟ್ರೆಸೈಕ್ಲೋಜೋಲ್ (ಬೀಮ್ ಪೌಡರ್) 1.0ಗ್ರಾಂ. ಲೀ. ನೀರಿಗೆ ಬೆರೆಸಿ ಸಿಂಪಡಿಸಬೇಕು. ಬೇರು ಕೊಳೆ ರೋಗದ ನಿಯಂತ್ರಣಕ್ಕಾಗಿ ಫ್ರೊಪಿಕೊನಾಜೋಲ್ 1ಮಿ.ಲೀ. ನೀರಿಗೆ ಬೆರಸಿ ಸಿಂಪರಣೆ ಮಾಡಬೇಕು. 4 ದಿನಗಳ ನಂತರ ಮಂಗಳ ಬಯೋ-20 ಸಸ್ಯ ವರ್ದಕವನ್ನು 2 ಗ್ರಾಂ.ಲೀ.ನೀರಿಗೆ ಬೆರಸಿ ಸಿಂಪರಣೆ ಮಾಡಿದರೆ ಈ ರೋಗಗಳ ಹತೋಟಿಗೆ ಬರುತ್ತವೆ. ಇಲಾಖೆ ಸಲಹೆಯಂತೆ ರೈತರು ಔಷಧಿ ಸಿಂಪರಿಸಬೇಕು.
ತಾಲೂಕಿನ ಪಾಳಾ ಹೋಬಳಿಯಲ್ಲಿ ನಾಟಿ ಭತ್ತದ ಬೆಳೆಯನ್ನು ಪರಿಶೀಲಿಸಿದಾಗ ಬೆಂಕಿರೋಗ ಹಾಗೂ ಬೇರುಕೊಳೆ ರೋಗವಿರುವುದು ಕಂಡು ಬಂದಿದೆ. ಕೃಷಿ ಇಲಾಖೆಯ ಸೂಚನೆಯಂತೆ ರೈತರು ಸೂಕ್ತ ಔಷಧಿ ಸಿಂಪರಣೆ ಮಾಡಬೇಕು
.-ಡಾ| ಶಿವಶಂಕರ ಮೂರ್ತಿ, ಕೃಷಿ ವಿಜ್ಞಾನಿ