ಚಿಕ್ಕಬಳ್ಳಾಪುರ: ಬಿತ್ತನೆಗೂ ಮೊದಲು ಜೈವಿಕ ಗೊಬ್ಬರಗಳೊಂದಿಗೆ ಸೂಕ್ತ ರೀತಿಯಲ್ಲಿ ಬೀಜೋಪಚಾರ ಮಾಡುವುದರಿಂದ ಸಾರಜನಕದ ಬಳಕೆ ಶೇ.10-15 ರಷ್ಟು ಕಡಿಮೆ ಮಾಡಬಹುದು. ಜೊತೆಗೆ ಬಿತ್ತನೆ ಬೀಜದ ಮೂಲಕ ಹರಡುವ ರೋಗಗಳನ್ನು ನಿಯಂತ್ರಿಸಿ ರೈತರು ಹೆಚ್ಚು ಇಳುವರಿ ಪಡೆಯಬಹುದು ಎಂದು ಜಿಲ್ಲೆಯ ಕೃಷಿ ವಿಜ್ಞಾನ ಕೇಂದ್ರದ ಮಣ್ಣು ವಿಜ್ಞಾನಿ ಡಾ.ಬಿ.ಗಾಯತ್ರಿ ತಿಳಿಸಿದರು.
ಕೃಷಿ ವಿಶ್ವದ್ಯಾನಿಲಯ ಬೆಂಗಳೂರು ವ್ಯಾಪಿಆರ್ ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ದತ್ತು ಗ್ರಾಮ ಯೋಜನೆ ಅಡಿಯಲ್ಲಿ ಜಿಲ್ಲೆಯ ಬ್ರಾಹ್ಮಣದಿನ್ನೆ ಗ್ರಾಮದಲ್ಲಿ ಆಯೋಜಿಸಲಾಗಿದ್ದ ತೊಗರಿ ಬೆಳೆಯಲ್ಲಿ ಸಮಗ್ರ ಬೆಳೆ ಪದ್ಧತಿಯ ಮುಂಚೂಣಿ ಪ್ರಾತ್ಯಕ್ಷಿಕೆ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಮಣ್ಣಿನ ಫಲವತ್ತತೆ ಕ್ಷೀಣ: ಬೀಜೋಪಚಾರದ ಬಗ್ಗೆ ರೈತರಲ್ಲಿ ಅರಿವು ಇಲ್ಲದ ಪರಿಣಾಮ ಭೂಮಿಗೆ ಹೆಚ್ಚಿನ ರಸಗೊಬ್ಬರಗಳನ್ನು ಸುರಿಯುತ್ತಿರುವುದರಿಂದ ಮಣ್ಣಿನ ಫಲವತ್ತತೆ ಕ್ಷೀಣಿಸುತ್ತಿದೆ. ಬೀಜೋಪಚಾರದ ಪದ್ಧತಿ ಪ್ರಾತ್ಯಕ್ಷಿಕೆ ಮೂಲಕ ಬಿತ್ತನೆಗೆ ಮುಂಚೆ ಪ್ರತಿ ಎಕರೆಗೆ 200 ಗ್ರಾಂ ರೈಜೋಬೀಯಂ ಹಾಗೂ 200 ಗ್ರಾಂ ರಂಜಕ ಕರಗಿಸುವ ಬ್ಯಾಕ್ಟೀರಿಯಾಗಳನ್ನು ಒಳಗೊಂಡ ಜೈವಿಕ ಗೊಬ್ಬರಗಳೊಂದಿಗೆ ಸೂಕ್ತ ರೀತಿಯಲ್ಲಿ ಬೀಜೋಪಚಾರ ಮಾಡುವುದರಿಂದ ರೈತರಿಗೆ ಉತ್ತಮ ಇಳುವರಿ ಜೊತೆಗೆ ಬೆಳೆಗೆ ಬರುವ ರೋಗಗಳನ್ನು ನಿಯಂತ್ರಿಸಬಹುದು ಎಂದರು.
ಈ ಸಂದರ್ಭದಲ್ಲಿ ಕೃಷಿ ವಿಜ್ಞಾನ ಕೇಂದ್ರದ ತೋಟಗಾರಿಕಾ ವಿಜ್ಞಾನಿಯಾದ ಸಿಂಧು ಕೆ.ವಿ.ದತ್ತು, ಕಾರ್ಯಕ್ರಮದ ಸಹಾಯಕಿ ಜಿ.ಆರ್.ಅರುಣಾ, ಕ್ಷೇತ್ರ ಸಹಾಯಕರಾದ ಹರೀಶ್ ಮತ್ತು ಗ್ರಾಮದ ಬ್ರಾಹ್ಮಣದಿನ್ನೆ ರೈತರು ಉಪಸ್ಥಿತರಿದ್ದರು.
ಬೀಜೋಪಚಾರದಿಂದ ರೋಗ ನಿರೋಧಕ: ಕೃಷಿ ವಿಜ್ಞಾನ ಕೇಂದ್ರದ ಸಸ್ಯ ಸಂರಕ್ಷಣಾ ವಿಜ್ಞಾನಿಯಾದ ಡಾ.ದೇವರಾಜ ಮಾತನಾಡಿ, ದತ್ತುಗ್ರಾಮ ಯೋಜನೆಯಲ್ಲಿ ವಿತರಿಸುತ್ತಿರುವ ತೊಗರಿ ತಳಿ (ಬಿ.ಆರ್.ಜಿ-5) ಮಧ್ಯಮಾವಧಿ ತಳಿಯಾಗಿದ್ದು 170 ರಿಂದ 180 ದಿನಗಳ ಕಾಲಾವಧಿಯನ್ನು ಹೊಂದಿದೆ ಮತ್ತು ಇದು ಸೊರಗು ನಿರೋಧಕತೆಯನ್ನು ಹೊಂದಿರುತ್ತ ಎಂದರು.
ರೈತರು ಹೆಚ್ಚಾಗಿ ಜೈವಿಕ ಗೊಬ್ಬರಗಳ ಬಳಕೆಗೆ ಆದ್ಯತೆ ನೀಡಬೇಕು. ಬೀಜೋಪಚಾರದಿಂದ ರೈತರಿಗೆ ಸಾಕಷ್ಟು ಅನುಕೂಲವಾಗಲಿದ್ದು, ಬಿತ್ತನೆ ಸಂದರ್ಭದಲ್ಲಿ ಕೃಷಿ ತಜ್ಞರ ಮಾರ್ಗದರ್ಶನ ಪಡೆದು ಬಿತ್ತನೆ ಕಾರ್ಯ ಕೈಗೆತ್ತಿಕೊಳ್ಳಬೇಕೆಂದರು.