ಬೆಂಗಳೂರು: ಕಲ್ಲಿದ್ದಲು ಕೊರತೆ ವಿಚಾರವನ್ನು ಕೇಂದ್ರದ ಜೊತೆ ಈಗಾಗಾಲೇ ಮಾತನಾಡಿದ್ದೇನೆ. ರಾಜ್ಯಕ್ಕೆ ಕಲ್ಲಿದ್ದಲು ಪೂರೈಕೆಯನ್ನು ಹೆಚ್ಚಿಗೆ ಮಾಡುವಂತೆ ಮನವಿ ಮಾಡಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮಗಂತಲೇ ಗಣಿ ನಿಗದಿಯಾಗಿದೆ. ಓರಿಸ್ಸಾದ ಮಾನಂದಿ, ಚಂದ್ರಾಪುರ ಫಾರೆಸ್ಟ್ ಎರಡು ಕಡೆ ಅಲಾಟ್ ಆಗಿದೆ. ಚಂದ್ರಾಪುರದಲ್ಲಿ ಪತ್ರ ದೊರಕಿದ ಬಳಿಕ ಮಾಡುತ್ತೇವೆಂದು ಹೇಳಿದ್ದಾರೆ. ಅದು ಇನ್ನೊಂದು ವಾರದಲ್ಲಿ ಆಗಲಿದೆ. ಮಹಾನಂದಿ ಗಣಿ ಬೇರೆಯವರಿಗಿದ್ದದ್ದು, ನಮಗೆ ಕೊಟ್ಟಿದ್ದಾರೆ. ಅದರ ಬಗ್ಗೆ ಈಗಾಗಲೇ ಪರಿಶೀಲಿಸಲಾಗಿದೆ. ಇವೆರಡು ಮೈನ್ಸ್ ನಮಗಾದರೆ ಸ್ವಲ್ಪ ಖರ್ಚು ಕಡಿಮೆಯಾಗಲಿದೆ. ಬೇರೆಯವರ ಮೇಲೆ ಅವಲಂಬನೆ ಆಗೋದು ಕಡಿಮೆಯಾಗಲಿದೆ ಎಂದರು.
ಕಾಂಗ್ರೆಸ್ ನಿಂದ ಯಡಿಯೂರಪ್ಪ ಕೆಳಗಿಳಿಸಿದ ಆರೋಪ ವಿಚಾರಕ್ಕೆ ಮಾತನಾಡಿದ ಅವರು, ಎಲ್ಲದರಲ್ಲೂ ರಾಜಕೀಯ ಮಾಡೋದು ಅವರ ಗುಣ. ಅವರ ಹೇಳಿಕೆ ನಮಗೆ ಮುಖ್ಯವಲ್ಲ ಎಂದರು.
ಬೆಂಗಳೂರು ಉಸ್ತುವಾರಿ ವಿಚಾರವಾಗಿ ಸಚಿವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸಿಎಂ, ಈಗಾಗಲೇ ಮಾತನಾಡಿದ್ದೇನೆ. ಬೆಂಗಳೂರು ಉಸ್ತುವಾರಿ ಸಂಬಂಧ ಶಾಸಕರ ಸಭೆ ಕರೆದಿಲ್ಲ ಎಂದು ಹೇಳಿದರು.
1-5ನೇ ತರಗತಿ ಶಾಲೆ ಆರಂಭ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ದಸರಾ ಬಳಿಕ ತಜ್ಞರ ಸಮಿತಿ ಜೊತೆ ಸಭೆ ಮಾಡುತ್ತೇನೆ. ಚರ್ಚೆ ಆದ ಬಳಿಕ ಏನು ಮಾಡಬೇಕೆಂದು ನಿರ್ಧಾರ ಮಾಡುತ್ತೇವೆ ಎಂದರು.