Advertisement

BJP ಲಿಂಗಾಯತರ ಕಡೆಗಣನೆ ಬಗ್ಗೆ ರಾಹುಲ್‌ ಜತೆ ಚರ್ಚೆ : ಶೆಟ್ಟರ್‌

08:43 PM Apr 23, 2023 | Team Udayavani |

ಹುಬ್ಬಳ್ಳಿ: ಬಿಜೆಪಿಯವರು ಲಿಂಗಾಯತ ಸಮುದಾಯದ ನಾಯಕರನ್ನು ಕಡೆಗಣಿಸುತ್ತಿರುವ ಬಗ್ಗೆ ಕಾಂಗ್ರೆಸ್‌ ವರಿಷ್ಠ ರಾಹುಲ್‌ ಗಾಂಧಿ ಜತೆ ಚರ್ಚಿಸಿದ್ದು, ರಾಜ್ಯ ರಾಜಕೀಯ ಕುರಿತು ಇನ್ನಷ್ಟು ಮಾಹಿತಿ ಪಡೆದಿದ್ದಾರೆ ಎಂದು ಮಾಜಿ ಸಿಎಂ ಜಗದೀಶ ಶೆಟ್ಟರ ತಿಳಿಸಿದರು.

Advertisement

ಇಲ್ಲಿನ ವಿಮಾನ ನಿಲ್ದಾಣದಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರನ್ನು ಭಾನುವಾರ ಭೇಟಿಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ರಾಜಕಾರಣದ ಬಗ್ಗೆ ರಾಹುಲ್‌ಗೆ ಸಾಕಷ್ಟು ವಿಚಾರಗಳು ಗೊತ್ತಿದ್ದು, ಇನ್ನಷ್ಟು ಮಾಹಿತಿ ಕುರಿತು ಮುಕ್ತವಾಗಿ ಚರ್ಚಿಸಿ ಎಲ್ಲವನ್ನೂ ತಿಳಿದುಕೊಂಡರು. ಪ್ರಮುಖವಾಗಿ ರಾಜಕೀಯ ಹಿರಿಯ ಮುಖಂಡ ಹಾಗೂ ಲಿಂಗಾಯತ ಸಮುದಾಯ ಕುರಿತು ನಡೆಯುತ್ತಿರುವ ವಿಷಯವಾಗಿ ಚರ್ಚಿಸಲಾಯಿತು. ರಾಹುಲ್‌ ಗಾಂಧಿ ಚುನಾವಣಾ ಬಹಿರಂಗ ಪ್ರಚಾರ ಸಭೆಗೆ ಸೋಮವಾರ ಹಾನಗಲ್ಲಕ್ಕೆ ಆಗಮಿಸುತ್ತಿದ್ದಾರೆ. ನನಗೂ ಸಹ ಆಹ್ವಾನವಿದ್ದು, ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದೇನೆ. ರಾಹುಲ್‌ ಹುಬ್ಬಳ್ಳಿಗೆ ಪ್ರಚಾರಕ್ಕೆ ಬರುವ ಬಗ್ಗೆ ಪಕ್ಷದ ಯೋಜನೆ ಏನೆಂಬುದು ಗೊತ್ತಿಲ್ಲ. ಇಲ್ಲಿಯೂ ಬರುವ ಸಾಧ್ಯತೆ ಇದೆ ಎಂದರು.

ಉತ್ತರ ಕರ್ನಾಟಕದ ವಿವಿಧ ತಾಲೂಕುಗಳಲ್ಲಿ ಕಾಂಗ್ರೆಸ್‌ ಪರ ಪ್ರಚಾರ ಮಾಡಲು ನನಗೆ ಹಲವರು ಆಹ್ವಾನಿಸಿದ್ದಾರೆ. ಈ ಬಗ್ಗೆ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ ನನ್ನೊಂದಿಗೆ ಚರ್ಚಿಸಿದ್ದು, ಶಾಸಕ ಪ್ರಸಾದ ಅಬ್ಬಯ್ಯ ಕೂಡ ಈ ವೇಳೆ ಇದ್ದರು. ಪ್ರಚಾರದ ಯೋಜನೆ ರೂಪಿಸುವ ವೇಳೆ ಬೇಡಿಕೆಯಿರುವ ಸ್ಥಳಗಳಿಗೆ ತೆರಳುವ ಪ್ರವಾಸದಲ್ಲಿ ನಿಮ್ಮನ್ನು ಜೋಡಿಸಲಾಗುವುದು. ನೀವು ಬರಬೇಕೆಂದು ಅವರು ತಿಳಿಸಿದ್ದಾರೆ. ಕಾಂಗ್ರೆಸ್‌ ಲಿಂಗಾಯತರಿಗೆ ಎಲ್ಲ ಸ್ಥಾನಮಾನ ನೀಡಿದೆ. ಈ ಬಾರಿ ಚುನಾವಣೆಯಲ್ಲಿ ಸಮಾಜದ 50ಕ್ಕೂ ಹೆಚ್ಚು ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ ಎಂದರು.

ನೆಗೆಟಿವ್‌-ಪಾಸಿಟಿವ್‌ ಸಾಮಾನ್ಯ: ಚುನಾವಣೆ ಎಂದ ಮೇಲೆ ನೆಗೆಟಿವ್‌-ಪಾಸಿಟಿವ್‌ ಅಭಿಪ್ರಾಯಗಳು ಸಾಮಾನ್ಯ. ನನ್ನ ರಾಜಕಾರಣದ ಜೀವನದಲ್ಲಿ ಇಂತಹ ಎಷ್ಟೋ ನಕಾರಾತ್ಮಕ ಪ್ರಚಾರಗಳನ್ನು ನೋಡಿದ್ದೇನೆ. ಜನರ ಮಧ್ಯದಲ್ಲಿ ಹೋಗಿ ಕೆಲಸ ಮಾಡುವವರಿಗಿಂತ ಮನೆಯಲ್ಲಿ ಕುಳಿತು ಸಾಮಾಜಿಕ ಜಾಲತಾಣದಲ್ಲಿ ಇನ್ನಿಲ್ಲದ ಕಮೆಂಟ್‌ ಮಾಡುತ್ತಾರೆ. ಅದು ಜನರ ಮೇಲೆ ಪರಿಣಾಮ ಬೀರಲ್ಲ. ಇಂತಹ ಹಲವು ನಕಾರಾತ್ಮಕ ಅಭಿಪ್ರಾಯಗಳನ್ನು ಎದುರಿಸಿದ್ದೇನೆ ಎಂದರು.

ನಾಗಪುರ ಅಲ್ಲ ಯಾವುದೇ ಟೀಮ್‌ ಬಂದರೂ ಹೆದರಲ್ಲ
ನನ್ನ ಚಲನವಲನ ಬಗ್ಗೆ ಗಮನಿಸಲು ನಾಗಪುರದಿಂದ ನೂರಾರು ಜನರ ತಂಡ ಬಂದಿದೆಯೋ ಇಲ್ಲವೋ ನನಗೆ ಗೊತ್ತಿಲ್ಲ. ಒಂದು ವೇಳೆ ಬಂದಿದ್ದರೂ ನಾನು ಪರಿಶೀಲನೆ ಮಾಡಲು ಹೋಗಲ್ಲ. ನನ್ನದು ಕಾನೂನು ಬಾಹಿರ ಚಲನವಲನ ಇಲ್ಲವೇ ಇಲ್ಲ. ಆ ತಂಡದವರು ನನ್ನ ಮೇಲೆ ನಿಗಾ ವಹಿಸಿದರೆ ಏನೂ ಪರಿಣಾಮ ಆಗಲ್ಲ. ಹೊರಗಿನಿಂದ ಯಾರೇ ಬಂದರೂ ಅವರಿಗೆ ಸ್ಥಳೀಯವಾಗಿ ಜ್ಞಾನವಿರಲ್ಲ. ಅದನ್ನು ಅಧ್ಯಯನ ಮಾಡುವುದರೊಳಗೆ ಚುನಾವಣೆ ಮುಗಿದಿರುತ್ತದೆ. ಹೀಗಾಗಿ ಅವರು ಯಶಸ್ವಿಯಾಗಿ ಚುನಾವಣೆ ಮಾಡಲು ಸಾಧ್ಯವಿಲ್ಲ. ಸ್ಥಳೀಯ ಕಾರ್ಯಕರ್ತರಿಗೆ ಅಲ್ಲಿನ ಬಗ್ಗೆ ಗುರುತು ಇರುತ್ತದೆ. ಇದೆಲ್ಲ ಅನುಭವ ನನಗಿದೆ. ಆಕಸ್ಮಾತ್‌ ನಾಗಪುರದಲ್ಲಿ ಇಷ್ಟೆಲ್ಲ ತಜ್ಞರ ತಂಡವಿದ್ದರೂ ಇತ್ತೀಚೆಗೆ ಅಲ್ಲಿ ನಡೆದ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಏಕೆ ಸೋತರು? ಮಾಜಿ ಸಿಎಂ ಸಿದ್ದರಾಮಯ್ಯನವರು ಲಿಂಗಾಯತರು ಭ್ರಷ್ಟರು ಎಂದು ಹೇಳಿದ್ದರ ಬಗ್ಗೆ ನನಗೆ ಗೊತ್ತಿಲ್ಲ. ಆ ಬಗ್ಗೆ ಪ್ರತಿಕ್ರಿಯಿಸಲ್ಲ ಎಂದು ಶೆಟ್ಟರ್‌ ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next