ಬೆಂಗಳೂರು: ಬಡ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಶಾಲೆ ನಿರ್ಮಿಸಲು ಬಿಲ್ಲವ ಅಸೋಸಿಯೇಶನ್‌ಗೆ ಎರಡು ಎಕರೆ ಭೂಮಿ ನೀಡುವ ಸಂಬಂಧ ಮುಖ್ಯಮಂತ್ರಿಗಳ ಜತೆ ಚರ್ಚಿಸಲಾಗುವುದು ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಭರವಸೆ ನೀಡಿದರು. ಬಿಲ್ಲವ ಅಸೋಸಿಯೇಶನ್ ಭಾನುವಾರ ಬನ್ನೇರುಘಟ್ಟ ರಸ್ತೆಯಲ್ಲಿರುವ ದೇವಕಿ ಆನಂದ ಸುವರ್ಣ ಸಭಾಂಗಣದಲ್ಲಿ ಏರ್ಪಡಿಸಿದ್ದ ಬ್ರಹ್ಮಶ್ರೀ ನಾರಾಯಣ ಗುರುಗಳ 165ನೇ ಜಯಂತ್ಯುತ್ಸವದಲ್ಲಿ ಮಾತನಾಡಿದರು.
ಮಕ್ಕಳ ಶಿಕ್ಷಣಕ್ಕಾಗಿ ಶಾಲೆ, ಹಾಸ್ಟೆಲ್ ನಿರ್ಮಾಣಕ್ಕೆ ಭೂಮಿ ಹಾಗೂ ನಾರಾಯಣ ಗುರುಗಳ ಹೆಸರಿನಲ್ಲಿ ಈಡಿಗ, ಬಿಲ್ಲವ ಸಮಾಜದ 26 ಉಪಜಾತಿಗಳನ್ನು ಒಳಗೊಂಡಂತೆ ಸಮುದಾಯದ ಅಭಿವೃದ್ಧಿಗಾಗಿ ಪ್ರತ್ಯೇಕ ನಿಗಮ ಸ್ಥಾಪಿಸುವ ಬಗ್ಗೆ ನಿಯೋಗದೊಂದಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಬೇಡಿಕೆ ಇಡಲಾಗುವುದು ಎಂದು ತಿಳಿಸಿದರು. ಬಿಲ್ಲವ ಸಮುದಾಯವನ್ನು 2ಎ ಪ್ರವರ್ಗದಿಂದ ಪ್ರವರ್ಗ 1ಕ್ಕೆ ಸೇರಿಸಲು ಗಮನ ಸೆಳೆಯಲಾಗುವುದು. ಇದರಿಂದ ಆರ್ಥಿಕ ಮಿತಿ ಇರುವುದಿಲ್ಲ. ಸಮುದಾಯದ ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಹೆಚ್ಚಿನ ಸೌಲಭ್ಯ ಸಿಗಲಿದೆ ಎಂದು ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ಯು.ಬಿ.ವೆಂಕಟೇಶ್, ಬಿಲ್ಲವ ಅಸೋಸಿಯೇಶನ್ ಅಧ್ಯಕ್ಷ ಎಂ.ವೇದಕುಮಾರ್ ಮಾತನಾಡಿದರು. ಇದೇ ವೇಳೆ ಬಿಲ್ಲವ ಭವನ ಕಟ್ಟಡ ನಿರ್ಮಾಣಕ್ಕೆ ಸಹಕರಿಸಿದ ಬಿ.ಕೇಶವ ಪೂಜಾರಿ, ರಾಜೇಶ್ ಕುಮಾರ್, ಬಿ.ಎಂ. ಉದಯ ಕುಮಾರ್, ಹೋಟೆಲ್ ಉದ್ಯಮದಲ್ಲಿ ಸೇವೆ ಸಲ್ಲಿಸುತ್ತಿರುವ ಟಿ.ಸದಾಶಿವ ಕರ್ಕೇರ, ಎಂ.ರಾಜು, ಗಣೇಶ್ ಪೂಜಾರಿ, ಗೋವಿಂದ ಪೂಜಾರಿ ಅವರನ್ನು ಸನ್ಮಾನಿಸಲಾಯಿತು. ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ 30 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, 70 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು.
ಅರಕೆರೆ ವಾರ್ಡ್ ಸದಸ್ಯೆ ಭಾಗ್ಯಲಕ್ಷ್ಮೀ ಮುರಳಿ, ನಂದಿನಿ ಲೇಔಟ್ ವಾರ್ಡ್ ಸದಸ್ಯ ರಾಜೇಂದ್ರ ಕುಮಾರ್, ಬಿಲ್ಲವ ಅಸೋಸಿಯೇಶನ್ ಉಪಾಧ್ಯಕ್ಷ ಕೇಶವ ಪೂಜಾರಿ, ಪ್ರಧಾನ ಕಾರ್ಯದರ್ಶಿ ಭಾಸ್ಕರ ಪೂಜಾರಿ, ಕೋಶಾಧಿಕಾರಿ ಮಾಚ ಬಿಲ್ಲವ, ಜತೆ ಕಾರ್ಯದರ್ಶಿ ರಾಜೇಶ್ ಕುಮಾರ್, ಸಂಘಟನಾ ಕಾರ್ಯದರ್ಶಿ ಬಿ.ಎಂ.ಉದಯ ಕುಮಾರ್, ಸಂಘಟನೆಯ ವಿದ್ಯಾರ್ಥಿ ವೇತನ ಸಮಿತಿ ಅಧ್ಯಕ್ಷ ಪಿ.ಕೆ. ರತ್ನಾಕರ, ಪೂಜಾ ಸಮಿತಿ ಅಧ್ಯಕ್ಷ ಯು.ಸಂತೋಷ್ ಬಂಗೇರ ಸೇರಿದಂತೆ ಕಾರ್ಯಕಾರಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು.
ಒಂದೇ ಜಾತಿ, ಒಂದೇ ಕುಲ: ಪುರಭವನದಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಧರ್ಮ ಪರಿಪಾಲನಾ ಸಂಘ ಆಯೋಜಿಸಿದ್ದ ನಾರಾಯಣ ಗುರು ಜಯಂತಿಯಲ್ಲಿ ಮಾತನಾಡಿದ ರಾಜ್ಯಸಭಾ ಸದಸ್ಯ ಬಿ.ಕೆ.ಹರಿಪ್ರಸಾದ್, ಶೂದ್ರರಿಗೆ ದೇವಸ್ಥಾನ ಒಳಪ್ರವೇಶಕ್ಕೆ ನಿರ್ಬಂಧ ಇತ್ತು. ಇದರ ವಿರುದ್ಧ ನಾರಾಯಣಗುರುಗಳು ಅಂದು ಸಿಡಿದೆದ್ದರು. ಪ್ರಸ್ತುತ ದೇಶದಲ್ಲಿ ಸದ್ದು ಮಾಡುತ್ತಿರುವ “ಒಂದೇ ದೇಶ, ಒಂದೇ ಚುನಾವಣೆ, ಒಂದೇ ಶಿಕ್ಷಣ’ ಎಂಬ ಆಶಯವನ್ನು ಆಗಿನ ಕಾಲದಲ್ಲೇ ನಾರಾಯಣ ಗುರುಗಳು ಒಂದೇ ಜಾತಿ, ಒಂದೇ ಕುಲ ಎಂದು ಕರೆ ನೀಡಿದ್ದರು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಗುರುಕೃಪಾ ಆಶ್ರಮದ ವಿಖ್ಯಾತನಂದ ಸ್ವಾಮೀಜಿ, ರಾಜಮಂಡ್ರಿ ಸಂಸದ ಮಾರಗಾನಿ ಭರತ್, ಬಹುಭಾಷಾ ನಟ ಸುಮನ್, ಸಂಘದ ರಾಜ್ಯ ಘಟಕದ ಅಧ್ಯಕ್ಷ ಸೈದಪ್ಪ ಕೆ.ಗುತ್ತೇದಾರ ಭಾಗವಹಿಸಿದ್ದರು.