ಬಳ್ಳಾರಿ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ನಗರದಲ್ಲಿ ಅಭ್ಯರ್ಥಿಗಳ ಆಯ್ಕೆ ಹಾಗೂ ಸ್ಥಳೀಯ ನಾಯಕರ ಕುರಿತು ಚರ್ಚೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ಕ್ಷೇತ್ರದಲ್ಲಿ ವಿಜಯ ಸಂಕಲ್ಪ ಯಾತ್ರೆಯಲ್ಲಿ ಭಾಗವಹಿಸಲು ಶುಕ್ರವಾರ ಆಗಮಿಸಿದ್ದ ಅವರು, ಬಳ್ಳಾರಿಯ ಖಾಸಗಿ ಹೊಟೇಲ್‌ನಲ್ಲಿ ವಾಸ್ತವ್ಯ ಹೂಡಿದ್ದರು.
ಈ ವೇಳೆ ಬಳ್ಳಾರಿ ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಸ್ಥಳೀಯ ನಾಯಕರ ಕುರಿತು ಚರ್ಚೆ ನಡೆಸಿದ್ದಾರಂತೆ. ನಡ್ಡಾ ಅವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಚಿವ ಆರ್.ಅಶೋಕ್, ನಗರ ಶಾಸಕ ಜಿ.ಸೋಮಶೇಖರ ರೆಡ್ಡಿ ಅವರು ಸಾಥ್ ನೀಡಿದ್ದು, ಬಳ್ಳಾರಿ ಜಿಲ್ಲೆ ಬಿಜೆಪಿಯ ಕೆಲ ನಾಯಕರೊಂದಿಗೆ ಗಂಭೀರವಾಗಿ ಮಾತುಕತೆ ನಡೆಸಿದರು ಎನ್ನಲಾಗಿದೆ.
ಶನಿವಾರ ನಗರದ ಕೊಳಗಲ್ಲು ರಸ್ತೆಯ ವಿಮಾನ ನಿಲ್ದಾಣದ ಮೂಲಕ ವಾಪಸ್ ತೆರಳಿದ್ದು, ಪಕ್ಷದ ಅಧ್ಯಕ್ಷರು-ಮುಖಂಡರು ಅವರನ್ನು ಬೀಳ್ಕೊಟ್ಟರು ಎಂದು ತಿಳಿದು ಬಂದಿದೆ.