ಪಣಜಿ: ಅರಣ್ಯ ಇಲಾಖೆಯ ಅಧೀನದಲ್ಲಿರುವ ಕೆಲವು ಜಲಪಾತಗಳು ಪ್ರವಾಸೋದ್ಯಮಕ್ಕೆ ಸದ್ಯ ಮಳೆಗಾಲದ ಸಂದರ್ಭದಲ್ಲಿ ಅಪಾಯಕಾರಿಯಾಗಿವೆ. ಈ ಬಗ್ಗೆ ವರದಿ ಸಿದ್ಧಪಡಿಸುವಂತೆ ಇಲಾಖೆಗೆ ಸೂಚಿಸಲಾಗಿದೆ. ಯಾವ ಜಲಪಾತಗಳು ಮಳೆಗಾಲದ ಸಂದರ್ಭದಲ್ಲಿ ಪ್ರವಾಸೋದ್ಯಮಕ್ಕೆ ಅಪಾಯಕಾರಿ ಮತ್ತು ಪ್ರವಾಸೋದ್ಯಮಕ್ಕೆ ಸೂಕ್ತವಾದ ಜಲಪಾತಗಳ ಕುರಿತು ವರದಿ ಸಿದ್ಧಪಡಿಸುವಂತೆ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ರಾಜೀವ್ ಗುಪ್ತಾ ಮತ್ತು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸೌರಭ್ ಕುಮಾರ್ ಅವರನ್ನು ಕೇಳಲಾಗಿದೆ ಎಂದು ಅರಣ್ಯ ಸಚಿವ ವಿಶ್ವಜಿತ್ ರಾಣೆ ಹೇಳಿದ್ದಾರೆ.
ಪಣಜಿಯಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು ಕೆಲ ಜಲಪಾತಗಳನ್ನು ಪ್ರವಾಸೋದ್ಯಮಕ್ಕಾಗಿ ತೆರೆಯಲಾಗುವುದು ಮತ್ತು ತೀರಾ ಅಪಾಯಕಾರಿಯಾಗಿರುವ ಕೆಲ ಜಲಪಾತಗಳನ್ನು ಶಾಶ್ವತವಾಗಿ ಮುಚ್ಚಲಾಗುವುದು ಎಂದರು.
ಕೆಲವು ಜಲಪಾತಗಳು, ಅಭಯಾರಣ್ಯಗಳು, ರಾಷ್ಟ್ರೀಯ ಉದ್ಯಾನವನಗಳು ಮತ್ತು ರಾಜ್ಯದ ಸತ್ತರಿ, ಕಾಣಕೋಣ ಮತ್ತು ಸಾಂಗೆ ತಾಲೂಕುಗಳಲ್ಲಿ ಅರಣ್ಯ ಇಲಾಖೆ ಜಮೀನುಗಳಲ್ಲಿವೆ. ಈ ಜಲಪಾತಗಳಲ್ಲಿ ಕೆಲವು ಜಲಪಾತಗಳ ಪ್ರವೇಶಕ್ಕೆ ಶುಲ್ಕಗಳನ್ನು ವಿಧಿಸಲಾಗುತ್ತದೆ. ಆದರೆ, ಇದಕ್ಕೆ ಬೇಕಾದ ತರಬೇತಿ ಪಡೆದ ಸಿಬ್ಬಂದಿ ಇಲಾಖೆಯಲ್ಲಿಲ್ಲ. ಅದಕ್ಕಾಗಿಯೇ ಲೈಫ್ ಗಾರ್ಡ್ ಸಂಘಟನೆಯಾದ ದೃಷ್ಟಿ ಜತೆ ಮಾತುಕತೆ ಆರಂಭಿಸಿದ್ದು, ಶೀಘ್ರದಲ್ಲೇ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದರು.
ತೀರಾ ಅಪಾಯಕಾರಿಯಾಗಿರುವ ಎಲ್ಲಾ ಜಲಪಾತಗಳನ್ನು ಪ್ರವಾಸೋದ್ಯಮಕ್ಕಾಗಿ ಮುಚ್ಚಲಾಗಿದೆ. ಆದರೂ ಜಲಪಾತಕ್ಕೆ ಹೋಗುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಇನ್ನು ಮುಂದೆ ಈ ಎಲ್ಲಾ ಜಲಪಾತಗಳಲ್ಲಿ ಮದ್ಯವನ್ನು ನಿಷೇಧಿಸಲಾಗುವುದು ಎಂದು ರಾಣೆ ತಿಳಿಸಿದ್ದಾರೆ.
ಈ ಕುರಿತು ಮುಖ್ಯಮಂತ್ರಿ ಪ್ರಮೋದ ಸಾವಂತ್ ಪ್ರತಿಕ್ರಿಯಿಸಿ, ಜಲಪಾತದ ಚಾರಣಕ್ಕೆ ತೆರಳುವ ಪ್ರವಾಸಿಗರಿಗೆ ನೀರಿನ ಆಳ ಗೊತ್ತಿಲ್ಲ. ಹೀಗಾಗಿ ಮದ್ಯ ಸೇವಿಸಿ ನೀರಿಗೆ ಇಳಿಯಬೇಡಿ ಎಂದು ಮುಖ್ಯಮಂತ್ರಿ ಡಾ.ಪ್ರಮೋದ್ ಸಾವಂತ್ ಒತ್ತಾಯಿಸಿದರು.
ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಮಳೆಗಾಲದಿಂದಾಗಿ ಜಲಪಾತಗಳು ಕುಸಿಯುತ್ತಿವೆ. ಹರಿವು ಕೂಡ ಆ ವೇಗವನ್ನು ಹೊಂದಿದೆ. ಸಹಜವಾಗಿಯೇ ಜಲಪಾತಕ್ಕೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚಿದೆ. ಮತ್ತೊಂದೆಡೆ ನೀರಿನಲ್ಲಿ ಮುಳುಗಿ ಸಾವನ್ನಪ್ಪುವವರ ಸಂಖ್ಯೆಯೂ ಹೆಚ್ಚುತ್ತಿದೆ. ಇಂತಹ ಹಲವು ಸಂದರ್ಭಗಳಲ್ಲಿ ಯುವಕರು ಮದ್ಯ ಸೇವಿಸಿ ನೀರಿಗೆ ಇಳಿಯುತ್ತಾರೆ. ಮದ್ಯ ಸೇವಿಸಿದ ನಂತರ ಅವರು ಪ್ರಜ್ಞೆ ಕಳೆದುಕೊಳ್ಳುತ್ತಾರೆ. ಇದರಿಂದಾಗಿ ಅಪಘಾತ ಪ್ರಕರಣಗಳು ಹೆಚ್ಚುತ್ತಿದೆ ಎಂದು ಮಾಹಿತಿ ನೀಡಿದರು.