Advertisement

ಜಾಲತಾಣದಲ್ಲಿ ಚರ್ಚೆ; 3 ದಿನದ ಸಾಹಿತ್ಯ ಸಮೇಳನಕ್ಕೆ 25 ಕೋಟಿ ಬೇಕಾ?

11:07 AM Jul 21, 2023 | Team Udayavani |

ಬೆಂಗಳೂರು: ಮಂಡ್ಯದಲ್ಲಿ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸರ್ಕಾರ ಈ ಬಾರಿ ಬಜೆಟ್‌
ನಲ್ಲಿ ಅನುದಾನ ಮೀಸಲಿಟ್ಟಿಲ್ಲ. ಈ ಹಿಂದೆ ಸಾಹಿತ್ಯ ಸಮ್ಮೇಳನಕ್ಕಾಗಿ 25 ಕೋಟಿ ರೂ.ಮೀಸಲಿಡುವಂತೆ ಪರಿಷತ್ತಿನ ಅಧ್ಯಕ್ಷ
ಮಹೇಶ ಜೋಶಿ ಸರ್ಕಾರಕ್ಕೆ ಪತ್ರ ಮುಖೇನ ಮನವಿ ಮಾಡಿದ್ದರು. ಆದರೆ ಸರ್ಕಾರದಿಂದ ಆ ಮನವಿಗೆ ಪುರಸ್ಕಾರ ಸಿಕ್ಕಲಿಲ್ಲ. ಹಾಗಾಗಿ ಬಜೆಟ್‌ನಲ್ಲಿ ಸಾಹಿತ್ಯ ಸಮ್ಮೇಳನಕ್ಕೆ ಅನುದಾನ ಘೋಷಣೆ ಮಾಡಿಲ್ಲ.

Advertisement

ಎಲ್ಲ ಬೆಳವಣಿಗೆ ನಡುವೆ ಫೇಸ್‌ಬುಕ್‌ ಜಾಲತಾಣದಲ್ಲಿ ಕೆಲವು ಸಾಹಿತಿಗಳು, ಪ್ರಗತಿಪರ ಚಿಂತಕರು ಮತ್ತು ಯುವ ಬರಹಗಾರರು
3 ದಿನದ ಕಾರ್ಯಕ್ರಮಕ್ಕೆ 25 ಕೋಟಿ ರೂ. ಏಕೆ ಎಂಬ ಪ್ರಶ್ನೆ ಮಾಡಿದ್ದು, ಚರ್ಚೆಗೆ ಮುನ್ನುಡಿ ಬರೆದಿ ದ್ದಾರೆ. ಅನಗತ್ಯ ವೈಭವ, ದುಂದುವೆಚ್ಚ ಮಾಡದಂತೆ ಸರಳ ಸಮಾರಂಭ ಮಾಡಬೇಕು. ಸರ್ಕಾರ ಸಾಹಿತ್ಯ ಸಮ್ಮೇಳನಕ್ಕೆ ಕೋಟ್ಯಂತರ ರೂ. ಖರ್ಚು ಮಾಡುವುದಕ್ಕಿಂತಲೂ ಸಾಹಿತ್ಯ ಸಮ್ಮೇಳನ ಘೋಷಣೆ ಆಗಿರುವ ಜಿಲ್ಲೆಗಳ ನೂರು ಕನ್ನಡ ಶಾಲೆಗಳ ಅಭಿವೃದ್ಧಿ ಕಾಯಕದಲ್ಲಿ
ತೊಡಗಲಿ ಎಂಬ ಸಲಹೆಗಳನ್ನು ನೀಡಿದ್ದಾರೆ.

ಸಾರ್ಥಕ ಸಮ್ಮೇಳನಗಳನ್ನು ಆಯೋಜಿಸಲಿ: ಇತ್ತೀಚೆಗೆ ಕನ್ನಡ ಶಾಲೆಗಳಲ್ಲಿ ಶೌಚಾಲಯ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಇಲ್ಲದ ಕಾರಣದಿಂದಾಗಿ ಹೈಕೋರ್ಟ್‌ ಸರ್ಕಾರಕ್ಕೆ ಛೀಮಾರಿ ಹಾಕಿದೆ. ಸಾಹಿತ್ಯ ಸಮ್ಮೇಳನಕ್ಕೆ ಕೋಟ್ಯಂತರ ರೂ. ಖರ್ಚು ಮಾಡುವ ಬದಲು ಇದೇ ಹಣದಿಂದ ವರ್ಷಕ್ಕೆ ಕನಿಷ್ಠ ಸಾವಿರ ಕನ್ನಡ ಶಾಲೆಗಳಿಗೆ ಮೂಲಭೂತ ಅಭಿವೃದ್ಧಿ ಸೌಕರ್ಯಗಳನ್ನು ಒದಗಿಸಬಹುದು. ಇದು ನಿಜವಾದ ಕನ್ನಡದ ಅಭಿವೃದ್ಧಿಯ ಕೆಲಸ ಎಂದು ಸಾಹಿತಿ ಜಗದೀಶ ಕೊಪ್ಪ ತಮ್ಮ ಫೇಸ್‌ ಬುಕ್‌ ಕಮೆಂಟ್‌ ಬಾಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ. ಮಂಡ್ಯ ಸಾಹಿತ್ಯ ಸಮ್ಮೇಳನಕ್ಕೆ 5 ಕೋಟಿ ರೂ.ಗಿಂತ ಹೆಚ್ಚು ಖರ್ಚು ಮಾಡುವುದಾದರೆ, ಸಮ್ಮೇಳನ ಬೇಡ ಎಂದಿದ್ದಾರೆ.

ಇದಕ್ಕೆ ಸಹಮತ ವ್ಯಕ್ತಪಡಿಸಿರುವ ಹಿರಿಯ ಸಾಹಿತಿ ರಾಘವೇಂದ್ರ ಪಾಟೀಲ್‌, ಕನ್ನಡ ಸಾಹಿತ್ಯ ಪರಿಷತ್ತು ಈ ಸಂದರ್ಭವನ್ನು ಬಳಸಿಕೊಂಡು ಹೊಸ ಸ್ವರೂಪದ ಸಾರ್ಥಕ ಸಾಹಿತ್ಯ ಸಮ್ಮೇಳನಗಳನ್ನು ಆಯೋಜಿಸಲಿ. ಮಹಾರಾಷ್ಟ್ರದಲ್ಲಿ ನಡೆಯುವ ಸ್ವಾಭಿಮಾನಿ ಸಾಹಿತ್ಯ ಸಮ್ಮೇಳನಗಳ ಸ್ವರೂಪದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳಗಳ ಆಯೋಜನೆಯ ಬಗೆಗೆ ಚಿಂತಿಸುವಂತಾಗಲಿ. ಸರ್ಕಾರವು ಈ ಬಗೆಗಿನ ತನ್ನ ನಿಲುವಿನಿಂದ ಹಿಂದೆ ಸರಿಯಬಾರದು ಎಂದು ಒತ್ತಾಯಿಸಿದ್ದಾರೆ.

ಅಧ್ಯಕ್ಷರ ಸಚಿವ ಪದವಿ ರದ್ದಾಗಬೇಕು: ಈ ಹಿಂದೆ ಕಸಾಪ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ಯಾರೂ ಸಚಿವ ದರ್ಜೆ ಸ್ಥಾನಮಾನ ಕೇಳಿರಲಿಲ್ಲ. ಆ ಹಿನ್ನೆಲೆಯಲ್ಲಿ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಿಗೆ ಸರ್ಕಾರ ನೀಡಿರುವ ಸಚಿವ ಪದವಿಯ ಸಮಾನತೆ ರದ್ದಾಗಬೇಕು ಮತ್ತು ಘಟಕಗಳ ಸ್ವಾಯತ್ತತೆ ಉಳಿಯುವಂತಾಗಬೇಕು.

Advertisement

ಹಿಂದಿನಂತೆ ಸಾಧಾರಣ ಚಪ್ಪರದಡಿ ಆ ಸಾಧಾರಣ ವ್ಯಕ್ತಿಗಳ ಮೌಲ್ಯಯುತ ಭಾಷಣ, ಚರ್ಚೆಸಾಕು ಎಂದು ಹಿರಿಯ ಸಾಹಿತಿ
ಜಿ.ರಾಮಕೃಷ್ಣ ಹೇಳುತ್ತಾರೆ. ಕೊಪ್ಪಳ ಕಸಾಪದ ಜಿಲ್ಲಾಧ್ಯಕ್ಷರು ಯಾರನ್ನಾದರೂ ಆಹ್ವಾನಿಸಿ ಭಾಷಣ ಮಾಡಿಸಬೇಕು ಎಂದಾದರೆ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರ ಅನುಮತಿ ಕೇಳಬೇಕಾದ ಪರಿಸ್ಥಿತಿ ಇದೆಯಂತೆ. ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಚಾಮರಾಜಪೇಟೆಯ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಆವರಣದ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ನೀವು ಬೇರೆ ಕಡೆ ಹೋಗಿ ಎಂದು ಹೇಳಲಾಗುತ್ತಿದೆ. ಅವರು ಎಲ್ಲಿಗೆ ಹೋಗ  ಬೇಕು ಯಾಕೆ ಹೋಗಬೇಕು ಎಂದು ಪ್ರಶ್ನೆ ಮಾಡುತ್ತಾರೆ.

ಯಾವ ಸಮ್ಮೇಳನಕ್ಕೆ ಎಷ್ಟು ಅನುದಾನ?
ಈ ಹಿಂದೆ ಹಾವೇರಿಯಲ್ಲಿ ನಡೆದ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸರ್ಕಾರ 20 ಕೋಟಿ ರೂ.ಅನುದಾನ ಘೋಷಣೆ ಮಾಡಿತ್ತು. ಹಾಗೆಯೇ ಮೈಸೂರಿನಲ್ಲಿ ನಡೆದ 83ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ 10 ಕೋಟಿ ರೂ. ಅನುದಾನದ ಮನವಿಗೆ ಸರ್ಕಾರ 8 ಕೋಟಿ ರೂ.ನೀಡಿತ್ತು. ಧಾರವಾಡದಲ್ಲಿ ನಡೆದ 84ನೇ ಸಾಹಿತ್ಯ ಸಮ್ಮೇಳನಕ್ಕೆ 12 ಕೋಟಿ ರೂ.ನೀಡುವಂತೆ ಕೇಳಲಾಗಿತ್ತು. ಆಗ ಸರ್ಕಾರ 10 ಕೋಟಿ ರೂ. ಅನುದಾನ ನೀಡಿತ್ತು. ಕಲಬುರಗಿಯಲ್ಲಿ ನಡೆದ 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ 14 ಕೋಟಿ ರೂ.ಕೇಳಲಾಗಿತ್ತು. ಆಗಲೂ ಸರ್ಕಾರ 10 ಕೋಟಿ ರೂ. ಬಿಡುಗಡೆ ಮಾಡಿತ್ತು.

ಸರ್ವಾಧಿಕಾರಿಗಳನ್ನು ಪ್ರಶ್ನೆ ಮಾಡಬೇಕಾದ ಸಂಸ್ಥೆ ಇದೀಗ ಸರ್ವಾಧಿಕಾರ ಧೋರಣೆ ತೋರಿದರೆ ಹೇಗೆ? ಸ್ವಯಂ ಸೇವಾ ಮಾದರಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಕಾರ್ಯ ನಿರ್ವಹಿಸಬೇಕು. ಈ ಹಿಂದೆ ಜಿ.ನಾರಾಯಣ ಅಂಥವರು ಉತ್ತಮ ಕೆಲಸ ಮಾಡಿದ್ದಾರೆ. ಅವರುಗಳನ್ನು ಮಾದರಿಯಾಗಿ ತೆಗೆದುಕೊಂಡು ಕೆಲಸ ಮಾಡಬೇಕಾಗಿದೆ.
ಜಿ.ರಾಮಕೃಷ್ಣ, ಹಿರಿಯ ಸಾಹಿತಿ

ದೇವೇಶ ಸೂರಗುಪ್ಪ

Advertisement

Udayavani is now on Telegram. Click here to join our channel and stay updated with the latest news.

Next