ಸಿಂಧನೂರು: ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಜೋಳ ಖರೀದಿಗೆ ಹಾಕಿರುವ ನಿರ್ಬಂಧ ತೆಗೆಯುವ ಬೇಡಿಕೆ ಬುಧವಾರ ಸರ್ಕಾರದ ಹಂತದಲ್ಲಿ ಗಂಭೀರ ಚರ್ಚೆಗೆ ಒಳಪಟ್ಟಿದೆ.
ಜ.19ಕ್ಕೆ ನಿಗದಿಯಾಗಿದ್ದ ಕೃಷಿ ಉತ್ಪನ್ನಗಳ ಬೆಲೆ ಸ್ಥಿರೀಕರಣ ಸಂಪುಟ ಉಪ ಸಮಿತಿಯಲ್ಲಿ ಇದನ್ನು ಮಹತ್ವದ ಸಂಗತಿಯಾಗಿ ಪ್ರಸ್ತಾಪಿಸಲಾಗಿದೆ. ಏಳು ಸಚಿವರು ಸದಸ್ಯರಾಗಿರುವ ಸಮಿತಿ ಸಭೆಯಲ್ಲಿ ಪ್ರತಿ ರೈತನಿಂದ 20 ಕ್ವಿಂಟಲ್ ಮಾತ್ರ ಖರೀದಿ ಮಾಡಬೇಕೆಂಬ ನಿರ್ಧಾರ ತೆಗೆಯಲು ಒತ್ತಾಯಿಸಲಾಗಿದೆ.
ಜೋಳ ಬೆಳೆಗಾರರ ಪರವಾಗಿ ಕೇಳಿಬಂದಿರುವ ಪ್ರಸ್ತಾವನೆಗೆ ಒಪ್ಪಿಗೆ ಸೂಚಿಸುವ ಕುರಿತಂತೆ ಸಚಿವ ಉಮೇಶ ಕತ್ತಿ ಸಿಎಂ ಬಸವರಾಜ ಬೊಮ್ಮಾಯಿ ಅವರ ಅನುಮತಿ ಕೇಳಿದ್ದಾರೆ. ಸಮಿತಿ ಸಭೆ ಬಳಿಕ ಅಂತಿಮವಾಗಿ ಸಿಎಂ ಭೇಟಿ ಮಾಡಿದ್ದಾರೆ. ಆದರೆ, ಈ ವೇಳೆ ರಾಗಿ ಬೆಳೆಗಾರರು ಕೂಡ ನಿರ್ಬಂಧ ತೆಗೆಯುವಂತೆ ಒತ್ತಡ ಹಾಕಿದ್ದಾರೆಂಬುದನ್ನು ಉಲ್ಲೇಖೀಸಲಾಗಿದೆ. ಜೋಳದ ಮಿತಿ ತೆಗೆಯಲು ಪೂರಕವಾಗಿ ಸ್ಪಂದಿಸಿದ ಬಳಿಕ ರಾಗಿಯ ಪ್ರಶ್ನೆ ಎದುರಾಗಿದ್ದರಿಂದ ಅಂತಿಮ ನಿರ್ಧಾರ ವಿಳಂಬವಾಗಿದೆ ಎಂದು ಮೂಲಗಳು ಖಚಿತಪಡಿಸಿವೆ.
ಮುಂದಿನ ಸಭೆಗೆ ಪ್ರಸ್ತಾವನೆ
ಭತ್ತ ಮಾರಾಟಕ್ಕೆ 62 ಸಾವಿರ ರೈತರು, ರಾಗಿ ಮಾರಾಟಕ್ಕೆ 1.11 ಲಕ್ಷ ರೈತರು ಹೆಸರು ನೋಂದಾಯಿಸಿದ್ದರೆ, ಜೋಳಕ್ಕೆ ಮಾತ್ರ ನೋಂದಣಿ ಮಂಕಾಗಿದೆ. 20 ಕ್ವಿಂಟಲ್ ನಿರ್ಬಂಧವೇ ಇದಕ್ಕೆ ಕಾರಣವಾಗಿದ್ದು, ಸಭೆಯಲ್ಲಿ ಇದನ್ನು ಚರ್ಚಿಸಲಾಗಿದೆ. ಬೆಂಬಲ ಬೆಲೆ ಯೋಜನೆಯಡಿ ಕೃಷಿ ಉತ್ಪನ್ನ ಖರೀದಿಗೆ ಅಂದಾಜು 2 ಸಾವಿರ ಕೋಟಿ ರೂ. ಅಗತ್ಯವಿದ್ದು, ಖರೀದಿ ಮಿತಿ ತೆಗೆದು ಹಾಕಿದಾಗ ಸರ್ಕಾರಕ್ಕೆ ಹೆಚ್ಚುವರಿಯಾಗಿ 600-700 ಕೋಟಿ ರೂ. ಹೊರೆ ಬೀಳುತ್ತದೆಂದು ಅಂದಾಜಿಸಲಾಗಿದೆ. ಇದಕ್ಕೆ ಕೇಂದ್ರ ಸರ್ಕಾರವೇ ಹಣ ನೀಡುತ್ತದೆ. ಬಿಡುಗಡೆ ವಿಳಂಬವಾಗುವುದರಿಂದ ಮೊದಲು ರಾಜ್ಯ ಸರ್ಕಾರ ಭರಿಸಬೇಕಾಗುತ್ತದೆ. ಈ ಕುರಿತಂತೆ ಮುಖ್ಯಮಂತ್ರಿಗಳ ಹಂತದಲ್ಲಿ ಮಾತುಕತೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.
ನಿಯೋಗ ಭೇಟಿ
ದೆಹಲಿಯಿಂದ ಆಗಮಿಸಿದ ಆಹಾರ ನಾಗರಿಕ ಸರಬರಾಜು ಇಲಾಖೆ ಸಚಿವ ಉಮೇಶ ಕತ್ತಿ ಅವರನ್ನು ಬೆಳಗ್ಗೆ ಸಂಸದ ಸಂಗಣ್ಣ ಕರಡಿ ಹಾಗೂ ಶಾಸಕ ವೆಂಕಟರಾವ್ ನಾಡಗೌಡ ಭೇಟಿ ಮಾಡಿದ್ದಾರೆ. ರೈತರ ನಿಯೋಗ ಕೊಂಡೊಯ್ದಿರುವ ಮಾಜಿ ಶಾಸಕ ಹಂಪನಗೌಡ ಬಾದರ್ಲಿ ಸಚಿವರನ್ನು ಭೇಟಿ ಮಾಡಿದ್ದಾರೆ. ಶಾಸಕ ನಾಡಗೌಡ, ಸಂಸದ ಸಂಗಣ್ಣ ಕರಡಿ ಪ್ರತ್ಯೇಕವಾಗಿ ಮುಖ್ಯಮಂತ್ರಿಗಳನ್ನು ಕೂಡ ಭೇಟಿಯಾಗಿ ಚರ್ಚಿಸಿದ್ದಾರೆ. ಜೆಡಿಎಸ್, ಕಾಂಗ್ರೆಸ್, ಬಿಜೆಪಿಯವರಿಂದಲೂ ಒತ್ತಡ ಹಾಕಲಾಗುತ್ತಿದ್ದು, ಅಂತಿಮವಾಗಿ ಸಿಹಿ ಸುದ್ದಿ ಹೊರಬೀಳುಬಹುದೆಂಬ ನಿರೀಕ್ಷೆಯಲ್ಲಿ ರೈತರಿದ್ದಾರೆ.
ಆಹಾರ ಇಲಾಖೆ ಸಚಿವ ಉಮೇಶ ಕತ್ತಿ, ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಲಾಗಿದೆ. ಸಚಿವ ಸಂಪುಟ ಉಪ ಸಮಿತಿ ಸಭೆಯಲ್ಲೂ ಪ್ರಸ್ತಾಪವಾಗಿದೆ. ಸಚಿವರು ಹಾಗೂ ಸಿಎಂ ಈ ಬಗ್ಗೆ ಮುಂದಿನ ನಿರ್ಧಾರ ಕೈಗೊಳ್ಳಲಿದ್ದಾರೆ.
-ಸಂಗಣ್ಣ ಕರಡಿ, ಕೊಪ್ಪಳ ಸಂಸದ
-ಯಮನಪ್ಪ ಪವಾರ