ವಿಜಯಪುರ: ವಿಜಯಪುರ ಜಿಲ್ಲೆಯಲ್ಲಿ ನೀರಾವರಿಗೆ ಆದ್ಯತೆ ನೀಡಿದ್ದು ಯಾರು, ಯಾರು ವಿಜಯಪುರ ಭಗೀರಥ ಎಂಬ ಕುರಿತು ಬಹಿರಂಗ ಚರ್ಚೆಯಾಗಲಿ ಎಂದು ಮುದ್ದೇಬಿಹಾಳ ಶಾಸಕ- ಆಹಾರ ನಿಗಮದ ಅಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ ಪರೋಕ್ಷವಾಗಿ ಜಲಸಂಪನ್ಮೂಲ ಮಾಜಿ ಸಚಿವ ಎಂ.ಬಿ.ಪಾಟೀಲ ವಿರುದ್ಧ ವಾಗ್ದಾಳಿ ನಡೆಸಿದರು.
ಶುಕ್ರವಾರ ನಗರದಲ್ಲಿ ಪತ್ರಕರ್ತರೊಂದಿಗೆ ಮಾಯನಾಡಿದ ಅವರು, ಯಾರ ಕಾಲದಲ್ಲಿ ನೀರಾವರಿ ಯೋಜನೆಗಳಿಗೆ ಅನುಮೋದನೆ ಸಿಕ್ಕಿದೆ, ಕೆರೆಗೆ ನೀರು ತುಂಬುವ ಯೋಜನೆ ಯಾರ ಕಾಲದಲ್ಲಾಗಿದೆ, ಯಾರು ಎಷ್ಟೆಷ್ಟು ಅನುದಾನ ಬಿಡುಗಡೆ ಮಾಡಿಸಿದ್ದಾರೆ ಎಂದು ಬಹಿರಂಗ ಚರ್ಚೆಯಾಗಲಿ ಎಂದು ಆಗ್ರಹಿಸಿದರು.
ಜಿಲ್ಲೆಯ ಸಮಗ್ರ ನೀರಾವರಿಗೆ ಎತ್ತು- ಚಕ್ಕಡಿ ಹೋರಾಟ ಮಾಡಿದ್ದು ನಾನು. ಪಾದಯಾತ್ರೆ ಮಾಡಿದ್ದು ನಾನು, ಕಾಂಗ್ರೆಸ್ ನ ಯಾರ್ಯಾರು ನೀರಾವರಿಗೆ ಎಷ್ಟೆಷ್ಡು ಹೋರಾಟ ಮಾಡಿದ್ದಾರೆ ಎಂದು ಬಹಿರಂಗ ಚರ್ಚೆಯಾಗಲಿ ಎಂದರು.
ವಿಜಯಪುರ, ಬಾಗಲಕೋಟೆ ಜಿಲ್ಲೆಗಳ ಕೆರೆಗೆ ನೀರು ತುಂಬುವ ಯೋಜನೆ, ಮುಳವಾಡ ಯೋಜನೆ ಅನುಷ್ಠಾನಕ್ಕೆ ಬಂದದ್ದು ಕೆ.ಎಸ್.ಈಶ್ವರಪ್ಪ ಜಲಸಂಪನ್ಮೂಲ ಸಚಿವರಾಗಿದ್ದಾಗ. ಜಿಲ್ಲೆಯಲ್ಲಿ ಆಗ ಎಸ್.ಕೆ.ಬೆಳ್ಳುಳ್ಳಿ, ಅಪ್ಪು ಪಟ್ಟಣಶೆಟ್ಟಿ ಸಚಿವರಾಗಿದ್ದರು ಎಂದು ವಿವರಿಸಿದರು.
ಜಿಲ್ಲೆಯವರೊಬ್ಬರು ಜಲಸಂಪನ್ಮೂಲ ಸಚಿವರಾಗಿದ್ದಾಗ ನಮ್ಮ ನೀರಾವರಿ ಯೋಜನೆಗೆ ಸಿಕ್ಕದ್ದೇನು ಎಂದು ಹೇಳಲು ಮುಂದಾದಾಗ ಪತ್ರಿಕಾಗೋಷ್ಠಿ ಯಲ್ಲೇ ನನ್ನ ಮೇಲೆ ಹಲ್ಲೆ ನಡೆದಿದ್ದನ್ನು ಇಲ್ಲಿನ ಪತ್ರಕರ್ತರೇ ನೋಡಿದ್ದೀರಿ ಎಂದು ಪರೋಕ್ಷವಾಗಿ ಎಂ.ಬಿ.ಪಾಟೀಲ ವಿರುದ್ಧ ವಾಗ್ದಾಳಿ ನಡೆಸಿದರು.
ರಾಜ್ಯದಲ್ಲಿ ಜಲಸಂಪನ್ಮೂಲ ಸಚಿವರಾಗಿ ಎಂ.ಬಿ.ಪಾಟೀಲ ಒಬ್ಬರೇ ಕೆಲಸ ಮಾಡಿಲ್ಲ, ಎಚ್.ಕೆ.ಪಾಟೀಲ, ಕೆ.ಎಸ್. ಈಶ್ವರಪ್ಪ, ಬಸವರಾಜ ಬೊಮ್ಮಾಯಿ, ಡಿ.ಕೆ.ಶಿವಕುಮಾರ ಅವರೆಲ್ಲಾ ಜಲಸಂಪನ್ಮೂಲ ಸಚಿವರಾಗಿ ಕೆಲಸ ಮಾಡಿದ್ದಾರೆ. ಈಗ ಈ ಖಾತೆ ನಿರ್ವಸುತ್ತಿರುವ ರಮೇಶ ಜಾರಕಿಹೊಳಿ ಅವರು ಹಿಂದೆ ನೀರಾವರಿ ಸಚಿವರಾಗಿದ್ದ ಎಲ್ಲರ ಸಲಹೆ ಪಡೆಯುತ್ತಿದ್ದಾರೆ ಎಂದರು.