Advertisement

ತೆರಿಗೆ ಸೋರಿಕೆ ಬಗ್ಗೆ ಕೌನ್ಸಿಲ್‌ ಸಭೆಯಲ್ಲಿ ಚರ್ಚೆ

08:34 AM Jan 18, 2018 | Team Udayavani |

ಬೆಂಗಳೂರು: ಜಿಎಸ್‌ಟಿಯಡಿ ವಾಣಿಜ್ಯ ತೆರಿಗೆ ಆದಾಯ ಇಳಿಕೆಯಾಗುತ್ತಿದ್ದು, ಇದಕ್ಕೆ ಕಾರಣವಾದ ಅಂಶಗಳನ್ನು ಗುರುತಿಸಿ ಸಂಪನ್ಮೂಲ ಕ್ರೋಢೀಕರಣ ಕಾರ್ಯಕ್ಕೆ ಆದ್ಯತೆ ನೀಡಲಾಗುವುದು ಎಂದು ಜಿಎಸ್‌ಟಿ ನೆಟ್‌ವರ್ಕ್‌ ಸಂಬಂಧಿತ ಸಚಿವರ ತಂಡದ
ಮುಖ್ಯಸ್ಥರಾದ ಬಿಹಾರದ ಉಪ ಮುಖ್ಯಮಂತ್ರಿ ಸುಶೀಲ್‌ ಮೋದಿ ಹೇಳಿದರು.

Advertisement

ನಗರದಲ್ಲಿ ಬುಧವಾರ ಸಚಿವರ ತಂಡದ ಆರನೇ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ದೇಶಾದ್ಯಂತ ಜಿಎಸ್‌ಟಿಯಡಿ ಜುಲೈ ವಹಿವಾಟಿಗೆ ಸಂಬಂಧ ಪಟ್ಟಂತೆ 92,283 ಕೋಟಿ ರೂ. ತೆರಿಗೆ ಸಂಗ್ರಹವಾಗಿದ್ದರೆ, ನವೆಂಬರ್‌ನಲ್ಲಿ ತೆರಿಗೆ ಆದಾಯ 80,806
ಕೋಟಿ ರೂ.ಗೆ ಇಳಿಕೆಯಾಗಿದೆ. ತೆರಿಗೆ ಆದಾಯ ಇಳಿಕೆ ಬಗ್ಗೆ ಜಿಎಸ್‌ಟಿ ನೆಟ್‌ವರ್ಕ್‌ನಡಿ ವಿವರ ಪರಿಶೀಲಿಸುತ್ತಿದೆ. ಗುರುವಾರ ನಡೆಯಲಿರುವ ಜಿಎಸ್‌ಟಿ ಕೌನ್ಸಿಲ್‌ ಸಭೆಯಲ್ಲಿ ತೆರಿಗೆ ಆದಾಯ ಇಳಿಕೆ ಬಗ್ಗೆ ವಿವರವಾಗಿ ಚರ್ಚೆ ನಡೆಯಲಿದೆ ಎಂದು ತಿಳಿಸಿದರು.

ರಾಜಿ ತೆರಿಗೆ ಪದ್ಧತಿಯ ಡೀಲರ್‌ಗಳಿಂದ ನಿರೀಕ್ಷಿತ ತೆರಿಗೆ ಸಂಗ್ರಹವಾಗುತ್ತಿಲ್ಲ. ರಾಜಿ ತೆರಿಗೆ ಪದ್ಧತಿಯಡಿ 7.5 ಲಕ್ಷ ಡೀಲರ್‌ಗಳ ರಿಟರ್ನ್ಸ್ ಸಲ್ಲಿಕೆ ವಿವರದ ಪ್ರಕಾರ 310 ಕೋಟಿ ರೂ. ತೆರಿಗೆ ಸಂಗ್ರಹವಾಗಿದೆ. ಇದರಿಂದ ರಾಜಿ ತೆರಿಗೆ ಪದ್ಧತಿಯ ಡೀಲರ್‌ಗಳು
ನಿಯಮಾನುಸಾರ ತೆರಿಗೆ ಪಾವತಿಸದಿರುವ ಸಾಧ್ಯತೆಯಿದೆ. ಆ ಹಿನ್ನೆಲೆಯಲ್ಲಿ ರಾಜಿ ತೆರಿಗೆ ಪದ್ಧತಿಯಡಿಯ ಡೀಲರ್‌ಗಳ ತೆರಿಗೆ ಪಾವತಿ ವಿವರಗಳನ್ನು ಪರಿಶೀಲಿಸಲಾಗುತ್ತಿದೆ. ಈ ಸಂಬಂಧ ರಾಜ್ಯ ಸರ್ಕಾರಗಳೇ ಡೀಲರ್‌ಗಳಿಗೆ ನೋಟಿಸ್‌ ನೀಡುತ್ತಿವೆ ಎಂದು ತಿಳಿಸಿದರು.

ಐಜಿಎಸ್‌ಟಿಯಡಿ 1.35 ಲಕ್ಷ ಕೋಟಿ ರೂ. ಹಣವಿದ್ದು, ಇದರ ಹಂಚಿಕೆಗೆ ಕೆಲ ತೊಡಕುಗಳಿದ್ದು, ಇತ್ಯರ್ಥವಾದರೆ ರಾಜ್ಯ ಸರ್ಕಾರಗಳ ಆದಾಯ ತುಸು ಏರಿಕೆಯಾಗುವ ಸಾಧ್ಯತೆಯಿದೆ ಎಂದು ಹೇಳಿದರು. ಸಚಿವರ ತಂಡ ಸದಸ್ಯರಾದ ಕೃಷಿ ಸಚಿವ ಕೃಷ್ಣ ಬೈರೇಗೌಡ, ಜಿಎಸ್‌ಟಿ ಜಾರಿ ಬಳಿಕ ರಾಜ್ಯ ಸರ್ಕಾರಕ್ಕೆ ಸಂಗ್ರಹವಾಗಬೇಕಾದ ತೆರಿಗೆ ಆದಾಯದಲ್ಲಿ ಇಳಿಕೆ ಪ್ರಮಾಣಕ್ಕೆ ಪರಿಹಾರ ಮೊತ್ತವನ್ನು ಕೇಂದ್ರ ಸರ್ಕಾರ ನಿಯಮಿತವಾಗಿ ಬಿಡುಗಡೆ ಮಾಡುತ್ತಿದೆ. ಅದರಂತೆ ರಾಜ್ಯ ಸರ್ಕಾರಕ್ಕೆ 1,200 ಕೋಟಿ ರೂ.ನಿಂದ 1,900 ಕೋಟಿ ರೂ. ವರೆಗೆ ಪರಿಹಾರ ಬಿಡುಗಡೆಯಾಗುತ್ತಿದೆ ಎಂದರು.  

ಇ-ವೇ ಬಿಲ್‌ ಕಡ್ಡಾಯ
ಏ.1ರಿಂದ ಜಾರಿಗೊಳಿಸಲು ಉದ್ದೇಶಿಸಲಾಗಿದ್ದ “ಇ-ವೇ’ ಬಿಲ್‌ ವ್ಯವಸ್ಥೆಯನ್ನು ಫೆ.1ರಿಂದ ಜಾರಿಗೊಳಿಸಲಾಗುತ್ತಿದೆ ಎಂದು ಜಿಎಸ್‌ಟಿಎನ್‌ ಸಚಿವರ ತಂಡದ ಮುಖ್ಯಸ್ಥ ಸುಶೀಲ್‌ ಮೋದಿ ತಿಳಿಸಿದರು. ದೇಶಾದ್ಯಂತ ಫೆ.1ರಿಂದ ಅಂತಾ ರಾಜ್ಯ ಸರಕು ಸಾಗಣೆಗೆ “ಇ- ವೇ’ ಬಿಲ್‌ ಕಡ್ಡಾಯ ವಾಗಲಿದೆ. ಜ.15ರಿಂದ ಪ್ರಾಯೋಗಿಕ ಜಾರಿಗೆ ಚಾಲನೆ ನೀಡ ಲಾಗಿದೆ. ಕರ್ನಾಟಕದಲ್ಲಿ ಸೆಪ್ಟೆಂಬರ್‌ನಿಂದಲೇ “ಇ-ವೇ’ ಬಿಲ್‌ ವ್ಯವಸ್ಥೆ ಜಾರಿಯಲ್ಲಿದ್ದು, ಇದೇ ಮಾದರಿಯನ್ನು ದೇಶಾದ್ಯಂತ ವಿಸ್ತರಿಸಲಾಗುವುದು ಎಂದು ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next