ಕಾರವಾರ: ಚುನಾವಣಾ ಅಕ್ರಮಗಳನ್ನು ತಡೆಯುವ ನಿಟ್ಟಿನಲ್ಲಿ ಉತ್ತರ ಕನ್ನಡ ಜಿಲ್ಲಾಡಳಿತ ನೆರೆಯ ಗೋವಾ ರಾಜ್ಯದ ಉನ್ನತ ಮಟ್ಟದ ಅಧಿಕಾರಿಗಳೊಂದಿಗೆ ಸೌಹಾರ್ದ ಸಭೆ ನಡೆಸಿತು. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಮಾದರಿ ನೀತಿ ಸಂಹಿತೆ ಕಟ್ಟುನಿಟ್ಟಿನಿಂದ ಪಾಲಿಸುವ ಸಂಬಂಧ ಕರ್ನಾಟಕದ ನೆರೆಯ ರಾಜ್ಯವಾಗಿರುವ ಗೋವಾದ ಉನ್ನತ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.
ಚುನಾವಣಾ ಅಕ್ರಮಗಳನ್ನು ತಡೆಯುವ ನಿಟ್ಟಿನಲ್ಲಿ ಈ ಸಭೆ ಅತ್ಯಂತ ಮಹತ್ವದ್ದಾಗಿದ್ದು ಚುನಾವಣಾ ಮಾದರಿ ನೀತಿ
ಸಂಹಿತೆ ಜಾರಿಯಾದಾಗಿನಿಂದ ಉತ್ತರ ಕನ್ನಡ ಅಬಕಾರಿ ಇಲಾಖೆ, ಕೋಸ್ಟ್‌ಗಾರ್ಡ್ ಸೇರಿದಂತೆ ವಿವಿಧ ಇಲಾಖೆಗಳು
ವಶಪಡಿಸಿಕೊಳ್ಳಲಾದ ಅಕ್ರಮ ಮದ್ಯ ಸರಬರಾಜು, ಕಾನೂನು ಉಲ್ಲಂಘಿಸಿ ಗೋವಾ ರಾಜ್ಯದ ಮದ್ಯವನ್ನು ಸಂಗ್ರಹದ ಮೇಲೆ ನಡೆಸಿದ ದಾಳಿ ಇತ್ಯಾದಿ ವಿಷಯಗಳನ್ನು ಚರ್ಚಿಸಲಾಯಿತು. ಅಲ್ಲದೆ, ಉತ್ತರ ಕನ್ನಡ ಗೋವಾದ ಗಡಿ ಜಿಲ್ಲೆಯಾಗಿರುವುದರಿಂದ ಗಡಿ ಜಿಲ್ಲೆಯ ಚೆಕ್‌ಪೋಸ್‌ಗಳಲ್ಲಿಯೇ ಪ್ರಮುಖವಾಗಿ ಅಕ್ರಮಗಳನ್ನು ತಡೆಯಬೇಕಿದೆ. ಇದಕ್ಕೆ ಗೋವಾ ರಾಜ್ಯದ ಸಹಕಾರ ಬೇಕೆಂದು ಜಿಲ್ಲಾಧಿಕಾರಿ ಡಾ| ಹರೀಶ್‌ಕುಮಾರ್ ತಿಳಿಸಿದರು.
ದಕ್ಷಿಣ ಗೋವಾದ ಹೆಚ್ಚುವರಿ ಡಿಸ್ಟ್ರಿಕ್ಟ್ ಕಲೆಕ್ಟರ್-1 ಅಗನೆಲ್ಲೊ ಫರ್ನಾಂಡಿಸ್ ಈಗಾಗಲೇ ಗೋವಾದಲ್ಲಿ ಕೂಡಾ ಚುನಾವಣಾ ಅಕ್ರಮಗಳನ್ನು ತಡೆಗಟ್ಟಲು ತಂಡಗಳನ್ನು ರಚಿಸಲಾಗಿದೆ ಹಾಗೂ ಈಗಾಗಲೇ ಅಕ್ರಮ ಮದ್ಯ ಮಾರಾಟ, ಸಾಗಾಟದ ಬಗ್ಗೆಯೂ ಪ್ರಕರಣಗಳನ್ನು ದಾಖಲಿಸಲಾಗಿದೆ.
ವಿಶೇಷವಾಗಿ ಕರ್ನಾಟಕದ ಗಡಿ ಭಾಗದಲ್ಲಿ ತನಿಖಾ ತಂಡಗಳನ್ನು ಬಿಗಿಗೊಳಿಸಲಾಗಿದ್ದು ಕರ್ನಾಟಕದ ಪೊಲೀಸರು, ಅಬಕಾರಿ ಅಧಿಕಾರಿಗಳಿಗೆ ಸಂಪೂರ್ಣ ಸಹಕಾರ ನೀಡಲಾಗಿದೆ ಎಂದರು. ಅಲ್ಲದೆ ಎರಡೂ ರಾಜ್ಯಗಳ ಈ ರೀತಿಯ ಮಾಹಿತಿ ವಿನಿಮಯ ಅತ್ಯಂತ ಅಗತ್ಯವಿತ್ತು. ಕರ್ನಾಟಕದಿಂದ ಇಂತಹ ಸಹಕಾರವನ್ನು ಗೋವಾ ಕೂಡಾ ಬಯಸಿತ್ತು ಎಂದೂ ಅವರು ಹೇಳಿದರು. ಈವರೆಗೆ ಜಿಲ್ಲೆಯಲ್ಲಿ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಸಂಬಂಧ ಕೈಗೊಳ್ಳಲಾದ ಕ್ರಮಗಳ ಬಗ್ಗೆ ವಿವರ ನೀಡಿದ ಜಿಪಂ ಸಿಇಒ ಎಂ.ರೋಷನ್ ಅವರು ಚುನಾವಣಾ ನಂತರವೂ ಇಂತಹ ಸೌಹಾರ್ದ ಸಭೆಗಳ ಅವಶ್ಯಕತೆ ಇದ್ದು ತಿಂಗಳಿಗೊಮ್ಮೆ ಸಭೆ ನಡೆಸುವ ಅಗತ್ಯವಿದ್ದು ಈ ಬಗ್ಗೆ ಸರ್ಕಾರದ ಗಮನಕ್ಕೆ ತರುವುದು ಸೂಕ್ತ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು. ಜಿಲ್ಲಾ ಪೊಲೀಸ್ ಅಧಿಕ್ಷಕ ವಿನಾಯಕ ಪಾಟೀಲ್, ಗೋವಾದಿಂದ ಅಕ್ರಮವಾಗಿ ಮಾದಕ ದ್ರವ್ಯಗಳನ್ನು ಸರಬರಾಜು ಆಗುತ್ತಿರುವ ಬಗ್ಗೆಯೂ ಮಾಹಿತಿಯಿದ್ದು ಗೋವಾ ರಾಜ್ಯದಲ್ಲಿ ಇದಕ್ಕೆ ಕಡಿವಾಣ ಹಾಕುವ ಅಗತ್ಯವಿದೆ ಎಂದರು. ಎರಡೂ ರಾಜ್ಯಗಳು ಕೈಗೊಂಡ ಚುನಾವಣಾ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳ ಮಾಹಿತಿ ವಿನಿಮಯ ಮಾಡಿಕೊಳ್ಳಲಾಯಿತು.
ಉತ್ತರ ಕನ್ನಡ ಅಬಕಾರಿ ಉಪಾಯುಕ್ತ ಎಲ್. ಮಂಜುನಾಥ್, ದಕ್ಷಿಣ ಗೋವಾ ಅಬಕಾರಿ ಅಧೀಕ್ಷಕ ಪಯಿಡೆದ್ ಫಾರ್ನಾಂಡಿಸ್, ದಕ್ಷಿಣ ಗೋವಾದ ಸಾರಿಗೆ ಉಪ ನಿರ್ದೇಶಕ ಪ್ರಕಾಶ್ ಅಝಾವಿಡೊ, ಕಾಣಕೋಣ ತಹಶೀಲ್ದಾರ್ ಜಾನ್ ಫರ್ನಾಂಡಿಸ್ ಇತರರು ಇದ್ದರು ಗಡಿ ಜಿಲ್ಲೆ ಚೆಕ್‌ಪೋಸ್ಟ್‌ಗಳಲ್ಲಿಯೇ ಅಕ್ರಮಗಳನ್ನು ತಡೆಯಲು ಗೋವಾ ಅಧಿಕಾರಿಗಳ ಸಹಕಾರ ಅಗತ್ಯ ಡಾ| ಹರೀಶಕುಮಾರ್, ಡಿಸಿ, ಉ.ಕ.