Advertisement
ಕಾಸರಗೋಡಿನಿಂದ ಭಟ್ಕಳದವರೆಗೆ ಕರಾವಳಿ ಪ್ರಾಂತ್ಯದಲ್ಲಿ ಕಂಬಳ ಕ್ರೀಡೆ ಚಾಲ್ತಿಯಲ್ಲಿತ್ತು. ಈಗ ಕಾನೂನು ಅಡ್ಡ ಬಂದಿದೆ. ನಾಲ್ಕೈದು ದಶಕಗಳ ಹಿಂದೆ ಕರ್ನಾಟಕದ ಕರಾವಳಿ ಮಾತ್ರವೇ ಏನು ಇಡೀ ದೇಶವೇ ಕೃಷಿ ಸಂಸ್ಕೃತಿಯಲ್ಲಿ ಹಾಸು ಹೊಕ್ಕಾಗಿತ್ತು. ಕೃಷಿ ಕ್ಷೇತ್ರ ನಲುಗಿದರೂ ಸಂಸ್ಕೃತಿ ಬೇರಿನೊಂದಿಗೆ ನಡೆದುಬಂದ ಕಂಬಳಕ್ಕೆ ಗದಾಪ್ರಹಾರ ನೀಡಿ ಅದಕ್ಕೂ ಎಳ್ಳುನೀರು ಬಿಡುವ ಸಂಚು ಕಾಣುತ್ತಿದೆ.
ಕಂಬಳದಲ್ಲಿ ಜನಪದ ಸಂಸ್ಕೃತಿ, ದೈವಾರಾಧನೆಯ ಸಂಸ್ಕೃತಿಯೊಂದಿಗೆ ಮೇಳೈಸಿಕೊಂಡ ಸಾಂಪ್ರದಾಯಿಕ ಕಂಬಳ ಒಂದು ಬಗೆಯಾದರೆ, ವೈಭವದಿಂದ ಸ್ಪರ್ಧಾತ್ಮಕವಾಗಿ ನಡೆಯುವ ಜೋಡುಕರೆ ಕಂಬಳ ಇನ್ನೊಂದು ಬಗೆ. ಸಂಖ್ಯೆಯಲ್ಲಿ ಜೋಡುಕರೆ ಕಂಬಳ ಕಡಿಮೆಯಾದರೂ ಕೋಣಗಳ ಆಕರ್ಷಣೆ ಮಹತ್ವ ಪಡೆದಿರುತ್ತದೆ. ಸಾಂಪ್ರದಾಯಿಕ ಕಂಬಳದ ಸಂಖ್ಯೆಯೂ ಹೆಚ್ಚು, ಪಾಲ್ಗೊಳ್ಳುವ ಕೋಣಗಳೂ ಹೆಚ್ಚು. ಆದರೆ ಕೋಣಗಳ ಓಟ ಇಲ್ಲಿ ಹರಕೆ ದೃಷ್ಟಿಯಲ್ಲಿ. ಅಂದರೆ ಸ್ಪರ್ಧಾತ್ಮಕ ದೃಷ್ಟಿ ಇರುವುದಿಲ್ಲ.
Related Articles
Advertisement
ಕಂಬಳದ ಕೋಣಗಳ ಮಾನದಂಡದಲ್ಲಿ ಹಿಂದಿಗೂ ಇಂದಿಗೂ ತುಸು ವ್ಯತ್ಯಾಸವಾಗಿದೆ. ಹಿಂದೆ ಕೋಣಗಳ ಮೈಕಟ್ಟು, ಹೊಳಪುಗಳಿಗೆ (ಬಿಳುಪು) ಮಾನ್ಯತೆ ನೀಡಲಾಗುತ್ತಿದ್ದರೆ ಈಗ ಓಟದ ಮಾನ್ಯತೆ ಸಿಗುತ್ತಿದೆ. ಹಿಂದೆ ಕೊಟ್ಟಿಗೆಯಲ್ಲಿ ಕಟ್ಟಿ ಬಿಳಿಬಿಳಿಯಾಗಿ ಕಾಣುವಂತೆ ಸಾಕುತ್ತಿದ್ದರೆ ಈಗ ಚರ್ಮದ ಬಣ್ಣ ಕಪ್ಪಾಗುವಂತೆ ಹೊರಗೆ ಕಟ್ಟುತ್ತಾರೆ. ಇವುಗಳನ್ನು ನಿಭಾಯಿಸುವುದೂ ಕಷ್ಟ. ಕಂಬಳದಲ್ಲಿ ಓಡಬೇಕಾದರೆ ಅದಕ್ಕೆ ಸಾಕಷ್ಟು ಶಕ್ತಿ ಬೇಕು. ಅದೇ ಶಕ್ತಿ ನೇತ್ಯಾತ್ಮಕವಾಗಿಯೂ ಪರಿಣಮಿಸುವುದರಿಂದ ಅದರ ಪರಿಚಾರಕ ಜಾಗರೂಕನಾಗಿರಬೇಕು. ಒಂದು ವೇಳೆ ಗರ್ವದ ಕೋಣಗಳಿದ್ದರೆ ಕೆಲವು ಯಜಮಾನರು ರಿಸ್ಕ್ ತೆಗೆದುಕೊಳ್ಳಬಯಸುವುದಿಲ್ಲ, ಕೆಲವು ಯಜಮಾನರು ಗರ್ವವಿದ್ದರೆ ಅದರ ಓಟವೂ ಹೆಚ್ಚಿಗೆ ಇರುತ್ತದೆ ಎಂಬ ಭಾವನೆಯಲ್ಲಿ ಇಂಥದ್ದೇ ಕೋಣಗಳನ್ನು ಖರೀದಿಸುತ್ತಾರೆ.
ಕಂಬಳ ಕ್ಷೇತ್ರದ ಸಾಧನೆಗಾಗಿಯೇ ರಾಜ್ಯ ಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪಡೆದಿರುವ ಬಾರಕೂರು ಶಾಂತಾರಾಮ ಶೆಟ್ಟಿಯವರು ತಂದೆಯವರ ಕಾಲದಿಂದಲೂ ಕಂಬಳದ ಕೋಣಗಳನ್ನು ಸಾಕುತ್ತಿದ್ದಾರೆ. ಯಡ್ತಾಡಿಯಲ್ಲಿ ಈ ಕೋಣಗಳನ್ನು ದಿನವೂ ಉಪಚರಿಸುವವರು ಕುಷ್ಟ ನಾಯ್ಕರು. ದಿನವೂ ಎರಡು ಕೋಣಗಳಿಗೆ ತಲಾ ಮೂರು ಕೆ.ಜಿ. ಹುರುಳಿ ಬೇಯಿಸಿ ಕೊಡುತ್ತಾರೆ. ಇದರ ಜೊತೆ ದಿನವೂ ಒಂದು ತೆಂಗಿನ ಕಾಯಿಯನ್ನು ತುರಿದು ಹಾಕುತ್ತಾರೆ. ಕೆಲವರು ಕೊಬ್ಬರಿಯನ್ನು ಕೊಡುವುದಿದೆ. ಹಿಂದಿನ ದಿನ ಬೇಯಿಸಿ ಒಣಗಿಸಿ ಹುಡಿ ಮಾಡಿ ಸಂಜೆ ಅರ್ಧಾಂಶ ಕೊಟ್ಟು ಹುಲ್ಲು ಹಾಕುತ್ತಾರೆ. ಹುರುಳಿ ಜೊತೆ ಸ್ವಲ್ಪ ರಾಗಿ ಅಥವಾ ಅಕ್ಕಿಯ ಪೌಷ್ಟಿಕಾಂಶವಾದ ತೌಡನ್ನು ಬೆರೆಸುತ್ತಾರೆ. ಅನಂತರ ನೀರು ಕೊಡುತ್ತಾರೆ. ಬೆಳಗ್ಗೆ ಮತ್ತೆ ಅರ್ಧಾಂಶ ಹುರುಳಿಯನ್ನು ಕೊಟ್ಟು ಹುಲ್ಲು ಹಾಕುತ್ತಾರೆ. ಒಂದು ಕೆ.ಜಿ. ಕೊಚ್ಚಿಗೆ ಅಕ್ಕಿ ಗಂಜಿಯನ್ನು ಹಿಂದಿನ ದಿನ ರಾತ್ರಿ ತಯಾರಿಸಿ ಮರುದಿನ ಹುರುಳಿ ಜೊತೆ ಕೊಡುತ್ತಾರೆ. ಹೊರಗೆ ಕಟ್ಟಿ ಕೆಲ ಹೊತ್ತಿನ ಬಳಿಕ ನೀರಿನ ತೊಟ್ಟಿಯಲ್ಲಿ ಬಿಡುತ್ತಾರೆ. ಆಗ ನೀರಿನಲ್ಲಿ ಅವು ಸ್ವತ್ಛಂದವಾಗಿ ಕಾಲ ಕಳೆಯುತ್ತವೆ. ಅಲ್ಲಿ ಸ್ನಾನ ಮಾಡಿಸಿದ ಬಳಿಕ ಕೊಟ್ಟಿಗೆಯಲ್ಲಿ ಕಟ್ಟಿ ನಿತ್ಯವೂ ತೆಂಗಿನೆಣ್ಣೆಯ ಮಸಾಜ್ ಮಾಡುತ್ತಾರೆ. ವಾರಕ್ಕೊಂದಾವರ್ತಿ 100 ಗ್ರಾಂ. ಎಳ್ಳೆಣ್ಣೆ ಕುಡಿಸುತ್ತಾರೆ. ಮಳೆಗಾಲದಲ್ಲಿ ಹಸಿ ಹುಲ್ಲು ಹಾಕುತ್ತಾರೆ. ಮಳೆಗಾಲದಲ್ಲಿ ತೆಂಗಿನೆಣ್ಣೆ ಜೊತೆ ಕಹಿಗುಣದ ಕಹಿಬೇವಿನ ಎಣ್ಣೆ ಮಿಶ್ರಣ ಮಾಡಿ ಹಚ್ಚುತ್ತಾರೆ. ಇದು ಸೊಳ್ಳೆ ಬಾರದಂತೆ ಸಹಕಾರಿ. ಬೇಸಗೆಯಲ್ಲಿ ಕುಂಬಳ ಕಾಯಿಯನ್ನು ತಿನ್ನಲು ಕೊಡುತ್ತಾರೆ.
ಈಜುಕೊಳದ ಭಾಗ್ಯ!ಮಣಿಪಾಲದ ಟ್ಯಾಪ್ಮಿ ಸಂಸ್ಥೆ ಬಳಿ ನಂದಳಿಕೆ ಶ್ರೀಕಾಂತ ಭಟ್ಟರು ಮೂರು ಜೊತೆ ಕೋಣಗಳನ್ನು ಆರು ವರ್ಷಗಳಿಂದ ಸಾಕುತ್ತಿದ್ದಾರೆ. ಇವರ ಕೋಣಗಳು ಮೂರು ವರ್ಷಗಳಿಂದ ಚಾಂಪಿಯನ್ ಆಗಿವೆ. ಈ ಕೋಣಗಳಿಗೆ ಈಜುಕೊಳದ ಭಾಗ್ಯವೂ ಇದೆ. ಕೊಳಚೂರು ಕೊಂಜಟ್ಟು ಸುಕುಮಾರ ಶೆಟ್ಟಿ, ಮೂಡಬಿದಿರೆ ಕರಿಂಜೆ ವಿಶ್ವನಾಥ ಶೆಟ್ಟಿ, ಎರ್ಮಾಳು ರೋಹಿತ್ ಹೆಗ್ಡೆ, ಇರ್ವತ್ತೂರು ಭಾಸ್ಕರ ಸುಬ್ಬಯ್ಯ ಕೋಟ್ಯಾನ್, ಕಾರ್ಕಳದ ಜೀವನದಾಸ್ ಅಡ್ಯಂತಾಯ ಮೊದಲಾದವರು ಕಂಬಳದ ಕೋಣಗಳನ್ನು ಸಾಕುವವರಲ್ಲಿ ಮುಂಚೂಣಿಯಲ್ಲಿದ್ದಾರೆ. ಇವರ ಮನೆಗಳಿಗೆ ಭೇಟಿ ನೀಡಿ ಕೋಣಗಳನ್ನು ಸಾಕುವುದನ್ನು ನೋಡಿದರೆ ಕಂಬಳ ಕ್ರೀಡೆಯನ್ನು ಹಿಂಸೆ ಅನ್ನಲು ಬಾಯಿ ಬಾರದು. ಕಂಬಳದ ಕೋಣಗಳನ್ನು ಕೃಷಿ ಕಾರ್ಯಕ್ಕೂ ಬಳಸುವುದಿದೆ. ಇವುಗಳ ಗೊಬ್ಬರ ಕೃಷಿಗೆ ಬಳಕೆಯಾಗುತ್ತದೆ. ಕಂಬಳವಾಗುವ ಮುನ್ನ ಮತ್ತು ಅನಂತರ ಗದ್ದೆಗಳಲ್ಲಿ ಓಡಿಸಿ ಸಜ್ಜುಗೊಳಿಸುತ್ತಾರೆ. ಕೋಣಗಳ ಶಕ್ತಿ ವೃದ್ಧಿಸಲು ಇದು ಪೂರ್ವೋತ್ತರ ತಯಾರಿ ಅನ್ನಬಹುದು. ಕಂಬಳ ಕ್ರೀಡೆಗಾದರೂ ಕೋಣಗಳನ್ನು ಸಾಕುವ ಪರಿಪಾಠವಿದೆ. ಒಂದು ವೇಳೆ ಕೃಷಿ ಕಾಯಕ ನೇಪಥ್ಯಕ್ಕೆ ಸರಿದಂತೆ ಕಂಬಳವೂ ನೇಪಥ್ಯಕ್ಕೆ ಸರಿದರೆ ಕೋಣಗಳಿಗೆ ಇನ್ನು ಬೇಡಿಕೆ ಬರುವುದು ಕಸಾಯಿಕಾನೆಗಳಿಂದ ಮಾತ್ರ ಅನ್ನೋ ಅನುಮಾನ ಏನು ಸುಳ್ಳಲ್ಲ. ಕಾಸರಗೋಡು ಜಿಲ್ಲೆಯಲ್ಲಿ, ಭಟ್ಕಳ ತಾಲೂಕಿನಲ್ಲಿ ಬೆರಳೆಣಿಕೆಯ ಕೆಲವು ಹರಕೆಯ, ಮನೋರಂಜನೆಯ ಕಂಬಳಗಳು ನಡೆಯುತ್ತವೆ. ಉಡುಪಿ ಜಿಲ್ಲೆಯಲ್ಲಿ ಸಾಂಪ್ರದಾಯಿಕ ಕಂಬಳಗಳು ಹೆಚ್ಚು. ದ.ಕ. ಜಿಲ್ಲೆಯಲ್ಲಿ ದೊಡ್ಡ ಮಟ್ಟದ ಜೋಡುಕರೆ ಕಂಬಳಗಳು ಹೆಚ್ಚು. ಕರಾವಳಿಯಲ್ಲಿ ಒಟ್ಟು 24 ಜೋಡುಕರೆ ಕಂಬಳಗಳು, ಕೃಷಿ, ಕಂಬಳಕ್ಕಾಗಿ ಸಾಕುವ ಸುಮಾರು 600 ಕೋಣಗಳು ಕರಾವಳಿಯಲ್ಲಿವೆ ಎನ್ನುತ್ತಾರೆ ಚಾಂಪಿಯನ್ ಕೋಣಗಳ ಮಾಲಕ ನಂದಳಿಕೆ ಶ್ರೀಕಾಂತ ಭಟ್. ಕೆಸರಿನ ಸ್ನಾನ- ಮಡ್ ಬಾತ್ ಥಿಯರಿ
ಕೋಣಗಳನ್ನು ಈಜುಕೊಳದಲ್ಲಿ ಈಜಾಡಿಸುತ್ತಾರೆ. ಕೋಣಗಳಿಗೆ ನಿತ್ಯ ಸ್ನಾನ ಮಾಡಿಸುವುದಕ್ಕಿಂತ ಕೆಸರಿನಲ್ಲಿ ಹೊರಳಾಡಲು ಬಿಟ್ಟರೆ ಅತ್ಯುತ್ತಮ. ಇದರಿಂದ ಅವುಗಳ ರೋಮಗಳ ರಂಧ್ರ ತೆರೆದುಕೊಳ್ಳುತ್ತದೆ. ಹೊರಳಾಡಿದರೆ ಕೈಕಾಲು ಸಡಿಲು ಆಗುತ್ತದೆಯಂತೆ. ಆಯುರ್ವೇದ ವೈದ್ಯರು ಮಡ್ ಬಾತ್ ಮಾಡಿಸುವ ಚಿಕಿತ್ಸಾಕ್ರಮಕ್ಕೂ ಕೋಣಗಳನ್ನು ಕೆಸರಿನಲ್ಲಿ ಹೊರಡಾಡಿಸಲು ಬಿಡುವುದೂ ಒಂದರ್ಥದಲ್ಲಿ ಸಮ. ಈಜು ಉತ್ತಮ ವ್ಯಾಯಾಮವೆನ್ನುವುದನ್ನು ಎಲ್ಲರೂ ಒಪ್ಪುತ್ತಾರೆ. ಫ್ಯಾನ್- ಎ.ಸಿ.
ಜಾನುವಾರುಗಳಿಗೆ ಫ್ಯಾನ್ ಹಾಕುವುದು ಇದೆ. ಇದರ ಮುಖ್ಯ ಉದ್ದೇಶ ಸೊಳ್ಳೆ ಬಾರದಂತೆ ತಡೆಯುವುದು. ಮನುಷ್ಯರು ಬಳಸುವುದೂ ಸೊಳ್ಳೆ ಬಾರದ ಕಾರಣಕ್ಕಾಗಿಯೇ. ಹವಾನಿಯಂತ್ರಣ ವ್ಯವಸ್ಥೆಯನ್ನು ಕಂಬಳದ ಕೋಣಗಳ ಕೊಟ್ಟಿಗೆಗೆ ಬಳಸುತ್ತಿದ್ದಾರೆ. ಆದರೆ ಹವಾನಿಯಂತ್ರಣ ಆರೋಗ್ಯಕ್ಕೆ ಉತ್ತಮವಲ್ಲ ಎಂಬ ಮನುಷ್ಯರಿಗೆ ಅನ್ವಯವಾಗುವ ನೀತಿ ಪ್ರಾಣಿಗಳಿಗೂ ಅನ್ವಯವಾಗುತ್ತಿಲ್ಲ. ಡಾರ್ವಿನ್ ವಿಕಾಸವಾದ- ಕೋಣಗಳ ವಿಕಾಸವಾದ! ಮಂಗನ ತಳಿಯಿಂದಲೇ ಮಾನವ ವಿಕಾಸ ಹೊಂದಿದ ಎಂಬ ಡಾರ್ವಿನ್ ವಿಕಾಸವಾದ ಎಲ್ಲರಿಗೂ ಗೊತ್ತಿದೆ. ಇದನ್ನು ನಿರಾಕರಿಸುವ ವಾದವೂ ಗೊತ್ತಿದೆ. ಕೆಲವು ಕಂಬಳದ ಕೋಣಗಳು ಪಕ್ಕದ ಕೋಣಗಳು ಓಡುವುದನ್ನು ನೋಡಿ ಅದನ್ನು ಹಿಂದಿಕ್ಕುತ್ತವೆ. ಕಂಬಳ ನೋಡುವಾಗ ಜನರು ಮುಗಿ ಬಿದ್ದು ಗದ್ದೆಗೆ ಬೀಳುವುದಿದೆ. ಎಂಥದ್ದೇ ಸಂದರ್ಭದಲ್ಲಿಯೂ ಓಟದ ಗಡಿಬಿಡಿಯಲ್ಲಿಯೂ ಒಂದೇ ಒಂದು ಕೋಣ ಬಿದ್ದವರ ಮೇಲೆ ಕಾಲು ಹಾಕಿದ್ದಿಲ್ಲ. ಸಾವು ನೋವು ಸಂಭವಿಸಿದ್ದು ಇಲ್ಲ. ಇದೊಂದು ವಿಶಿಷ್ಟ ಬೌದ್ಧಿಕ ಕ್ರಿಯೆ. ಮನುಷ್ಯರೂ ಓಟದ ಸ್ಪರ್ಧೆಯಲ್ಲಿ ಪಕ್ಕದವನನ್ನು ನೋಡಿ ಆತನ ವೇಗಕ್ಕೆ ಸರಿಯಾಗಿ ಓಡಿ ಆತನನ್ನು ಹಿಂದಿಕ್ಕುವ ಪ್ರಯತ್ನ ನಡೆಸುತ್ತಾರೆ. ಹಾಗಿದ್ದರೆ ಡಾರ್ವಿನ್ ವಿಕಾಸವನ್ನು ಇದಕ್ಕೂ ಅನ್ವಯಿಸಬಹುದೆ? ಖರ್ಚೆಷ್ಟು?
ಒಂದು ಜೊತೆ ಕೋಣ ಸಾಕಲು ತಿಂಗಳಿಗೆ ಕನಿಷ್ಠ 15,000 ರೂ.ನಿಂದ 20,000 ರೂ. ಖರ್ಚು ತಗಲುತ್ತದೆ. ಕೋಣಗಳ ಸಾಕಣೆ ಖರ್ಚಿಗಿಂತ ಕಂಬಳಕ್ಕೆ ಕರೆದೊಯ್ಯುವಾಗ ಆಗುವ ಖರ್ಚೇ ಹೆಚ್ಚು. ಒಂದು ಕಂಬಳಕ್ಕೆ ಕನಿಷ್ಠ 20,000 ರೂ. ತಗಲುತ್ತದೆ. ಕೋಣಗಳ ಜೊತೆ 10-12 ಜನರು ಹೋಗಬೇಕು. ಅವರಿಗೆ ಕನಿಷ್ಠವೆಂದರೂ ಒಬ್ಬರಿಗೆ 1,000 ರೂ. ಕೊಡಬೇಕಾಗುತ್ತದೆ. ಮಟಪಾಡಿ ಕುಮಾರಸ್ವಾಮಿ