Advertisement

ಕೇಂದ್ರದ ಅನುದಾನದಲ್ಲೂ ರಾಜ್ಯಕ್ಕೆ ತಾರತಮ್ಯ

11:13 PM Oct 26, 2019 | Lakshmi GovindaRaju |

ಬೆಂಗಳೂರು: ನೇರ ತೆರಿಗೆ ಮೂಲಕ ಕೇಂದ್ರಕ್ಕೆ ಆದಾಯ ನೀಡುವ ರಾಜ್ಯಗಳಲ್ಲಿ ಕರ್ನಾಟಕ ಮೂರನೇ ಸ್ಥಾನದಲ್ಲಿದೆ. ವಾರ್ಷಿಕ 4,99,310 ಕೋಟಿ ರೂ.ಆದಾಯ ಕರ್ನಾಟಕದಿಂದ ಕೇಂದ್ರಕ್ಕೆ ಲಭ್ಯವಾಗುತ್ತದೆ. ಆದರೆ, ರಾಜ್ಯಕ್ಕೆ ಕೇಂದ್ರ ಪುರಸ್ಕೃತ ಯೋಜನೆ, ಬರ ಅಥವಾ ಪ್ರವಾಹ ಸಂದರ್ಭ, ಕೇಂದ್ರ ಹಣಕಾಸು ಆಯೋಗದಿಂದ ಕರ್ನಾಟಕಕ್ಕೆ ನಿಗದಿಯಾಗುವ ಅನುದಾನದ ಪ್ರಮಾಣ ಕಡಿಮೆ.

Advertisement

ಕೇಂದ್ರ ಸರ್ಕಾರಕ್ಕೆ ಅತಿ ಹೆಚ್ಚು ನೇರ ತೆರಿಗೆ ಮೂಲಕ ಆದಾಯ ತಂದು ಕೊಡುವುದು ಮಹಾರಾಷ್ಟ್ರ, ದೆಹಲಿ ಹಾಗೂ ಕರ್ನಾಟಕ. ಮಹಾರಾಷ್ಟ್ರ-19,17,944 ಕೋಟಿ ರೂ., ದೆಹಲಿ-6, 93, 275 ಕೋಟಿ ರೂ. ಆದಾಯ ನೀಡುತ್ತದೆ. ಆದರೆ, ಕೇಂದ್ರ ಸರ್ಕಾರ ಈ ರಾಜ್ಯಗಳಿಂದ ಪಡೆಯುವ ಆದಾಯದ ಪೈಕಿ ಶೇ.33ರಷ್ಟು ಮಾತ್ರ ನೀಡುತ್ತದೆ. ರಾಜ್ಯಗಳು ಸ್ವಂತ ತೆರಿಗೆ ಬಾಬಿ¤ನಿಂದ ಶೇ.67ರಷ್ಟು ಆದಾಯ ಕ್ರೋಢೀಕರಣ ಮಾಡಿಕೊಳ್ಳುತ್ತವೆ. ಹೀಗಾಗಿ, ಆ ರಾಜ್ಯಗಳಿಗೆ ಕೇಂದ್ರ ಹಣಕಾಸು ಆಯೋಗದ ಅನುದಾನ ಹೆಚ್ಚು ಬೇಕಿಲ್ಲ ಎಂಬ ಸಮರ್ಥನೆ ನೀಡಲಾಗುತ್ತದೆ.

ದೇಶದ ಎಲ್ಲ ರಾಜ್ಯಗಳಿಂದ ನೇರ ತೆರಿಗೆ ಮೂಲಕ ಸಂಗ್ರಹವಾಗುವ ಮೊತ್ತದಲ್ಲಿ ಶೇ.42ರಷ್ಟನ್ನು ರಾಜ್ಯಗಳಿಗೆ ಹಂಚಿಕೆ ಮಾಡುವ ಕೇಂದ್ರ ಸರ್ಕಾರ, ಉಳಿದ ಹಣವನ್ನು ಬೇರೆ ಅಭಿವೃದ್ಧಿ ಹಾಗೂ ಇತರ ಕಾರ್ಯಗಳಿಗೆ ಬಳಕೆ ಮಾಡಿಕೊಳ್ಳಲಿದೆ. 14ನೇ ಕೇಂದ್ರ ಹಣಕಾಸು ಆಯೋಗದ ಒಟ್ಟು ಅನುದಾನದ ಮೊತ್ತ 2015-2020ಕ್ಕೆ 2,87, 436 ಕೋಟಿ ರೂ. ಆಗಿತ್ತು. ಆ ಪೈಕಿ 2,00,292.2 ಕೋಟಿ ರೂ.ಗಳನ್ನು ಪಂಚಾಯತ್‌ಗಳಿಗೆ, 87,143.8 ಕೋಟಿ ರೂ.ಗಳನ್ನು ನಗರ ಸ್ಥಳೀಯ ಸಂಸ್ಥೆಗಳಿಗೆ ಮೀಸಲಿಡಲಾಗಿತ್ತು. ಆ ಪೈಕಿ ಕರ್ನಾಟಕ ಸೇರಿ ದಕ್ಷಿಣ ರಾಜ್ಯಗಳಿಗೆ ಸಿಕ್ಕಿದ್ದು ಶೇ.33ರಷ್ಟು ಮಾತ್ರ.

ನೇರ ತೆರಿಗೆ ಮೂಲಕ ಕೇಂದ್ರಕ್ಕೆ ಕಡಿಮೆ ಆದಾಯ ಕೊಡುವ ಬಿಹಾರ, ಉತ್ತರ ಪ್ರದೇಶ, ಮಿಜೋರಾಂ ಸೇರಿ ಹನ್ನೊಂದು ರಾಜ್ಯಗಳಿಗೆ ಕೇಂದ್ರ ಹಣಕಾಸು ಆಯೋಗದಿಂದಲೂ ಹೆಚ್ಚು ಅನುದಾನ ನಿಗದಿಯಾಗುತ್ತದೆ. ಸಾಮಾಜಿಕ, ಆರ್ಥಿಕ ಸ್ಥಿತಿಗತಿ, ಜನಸಂಖ್ಯೆ, ಸಾಕ್ಷರತಾ ಪ್ರಮಾಣ, ಅಭಿವೃದ್ಧಿಯಲ್ಲಿ ಹಿಂದುಳಿದಿರುವಿಕೆ ಮಾನದಂಡಗಳಡಿ ಅನುದಾನ ನೀಡಲಾಗುವುದು ಎಂದು ಅದಕ್ಕೂ ಸಮರ್ಥನೆ ನೀಡಲಾಗುತ್ತದೆ.

ಇದೇ ಕಾರಣಕ್ಕೆ ಕರ್ನಾಟಕ, ತಮಿಳುನಾಡು, ಕೇರಳ, ಮಹಾರಾಷ್ಟ್ರ, ಪುದುಚೇರಿ ಸೇರಿ ದಕ್ಷಿಣ ರಾಜ್ಯಗಳು ಕೇಂದ್ರದ ಮೇಲೆ ಉತ್ತರ ರಾಜ್ಯಗಳಿಗೆ ನೀವು ಕೊಟ್ಟಷ್ಟು ಅನುದಾನವನ್ನು ನಮಗೆ ಯಾಕೆ ಕೊಡುವುದಿಲ್ಲ? ಕೇಂದ್ರಕ್ಕೆ ನೇರ ತೆರಿಗೆಯಿಂದ ಹೆಚ್ಚು ಆದಾಯ ಕೊಡುವ ನಮಗೆ ಅನ್ಯಾಯವಾಗುತ್ತದೆ ಎಂಬ ಧ್ವನಿ ಎತ್ತುತ್ತಲೇ ಇವೆ. ಇದೀಗ 15ನೇ ಹಣಕಾಸು ಆಯೋಗದ ಮುಂದೆಯೂ ಕರ್ನಾಟಕವು ಅನುದಾನದ ಹೆಚ್ಚಳ ಸಂಬಂಧ ಈಗಾಗಲೇ ಪ್ರಸ್ತಾವನೆ ಸಲ್ಲಿಸಿದೆ.

Advertisement

ಉದಾಹರಣೆಗೆ, ಉತ್ತರಪ್ರದೇಶ ಸರ್ಕಾರ 36 ಸಾವಿರ ಕೋಟಿ ರೂ.ರೈತರ ಸಾಲ ಮನ್ನಾ ಮಾಡಿದ್ದರಿಂದ ಅಲ್ಲಿನ ಬಜೆಟ್‌ನಲ್ಲಿ 50 ಸಾವಿರ ಕೋಟಿ ರೂ.ಕೊರತೆ ಎದುರಾದಾಗ ಕೇಂದ್ರ ಸರ್ಕಾರ, ನೆರವಿನ ಖಾತರಿ ನೀಡಿತು. ಆದರೆ, ಕರ್ನಾಟಕಕ್ಕೆ ಆ ರೀತಿಯ ನೆರವಿನ ಭರವಸೆ ಸಿಗಲಿಲ್ಲ. ಕೇಂದ್ರದ ಅನುದಾನವು ಜಿಎಸ್‌ಟಿ ಹೊರತುಪಡಿಸಿ ರಾಜ್ಯಕ್ಕೆ 2017-18ನೇ ಸಾಲಿನಲ್ಲಿ 15,735, 62 ಕೋಟಿ ರೂ. ಬಂದಿದ್ದರೆ, 2018-19ನೇ ಸಾಲಿನಲ್ಲಿ 15,378, 64 ಕೋಟಿ ರೂ. ಬಂದಿದೆ. ಪ್ರಸಕ್ತ ವರ್ಷದಲ್ಲಿ ಶೇ.2.27ರಷ್ಟು ಕಡಿಮೆಯಾಗಿದೆ.

2019-20ನೇ ಸಾಲಿನ ಬಜೆಟ್‌ನಲ್ಲಿ ರಾಜ್ಯ ಸರ್ಕಾರ, ಕೇಂದ್ರ ತೆರಿಗೆ ಪಾಲಿನ ರೂಪದಲ್ಲಿ 39,806 ಕೋಟಿ ರೂ.ಹಾಗೂ ಕೇಂದ್ರ ಸರ್ಕಾರದ ಸಹಾಯಾನುದಾನ ರೂಪದಲ್ಲಿ 15,008 ಕೋಟಿ ರೂ.ನಿರೀಕ್ಷೆ ಮಾಡಿದೆ. ಆದರೆ, ಹಿಂದಿನ ವರ್ಷಗಳಿಗೆ ಹೋಲಿಸಿದರೆ ಕೇಂದ್ರದಿಂದ ನಿರೀಕ್ಷಿತ ಮಟ್ಟದಲ್ಲಿ ಸಹಾಯಾನುದಾನ ಬಂದಿಲ್ಲ.

ಎಸ್‌ಎಫ್ಸಿ ಶಿಫಾರಸು: ರಾಜ್ಯದ ನಾಲ್ಕನೇ ಹಣಕಾಸು ಆಯೋಗ ಸಹ ಅನುದಾನದ ವಿಚಾರದಲ್ಲಿ ಕೇಂದ್ರ ಹಣಕಾಸು ಆಯೋಗಕ್ಕೆ ಮನವಿ ಸಲ್ಲಿಸಿದೆ. ಜತೆಗೆ, ಆಯೋಗವು 2018-19 ರಿಂದ 2022 -23ರವರೆಗೆ ಐದು ವರ್ಷಗಳ ಅವಧಿಗೆ ಆರ್ಥಿಕ ನಿರ್ವಹಣೆ ಕುರಿತು ಶಿಫಾರಸು ಮಾಡಿದೆ. ರಾಜ್ಯದ ಸ್ವಂತ ತೆರಿಗೆಯಲ್ಲಿ ಸ್ಥಳೀಯ ಸಂಸ್ಥೆಗಳ ಪಾಲನ್ನು ರಾಜ್ಯದ ಸಾಲರಹಿತ ಸ್ವಂತ ರಾಜಸ್ವ ಸ್ವೀಕೃತಿಗಳ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ.

ಅದರಂತೆ ಆಯೋಗವು ರಾಜ್ಯದ ಸ್ವಂತ ತೆರಿಗೆಯಲ್ಲಿ ಸ್ಥಳೀಯ ಸಂಸ್ಥೆಗಳ ಪಾಲನ್ನು ಶೇ.42 ರಿಂದ ಶೇ.45ಕ್ಕೆ ಹೆಚ್ಚಿಸಲು ಶಿಫಾರಸು ಮಾಡಿದೆ. ಐದು ವರ್ಷದ ಅವಧಿಗೆ ಪಂಚಾಯತ್‌ ರಾಜ್‌ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಒಟ್ಟು ರಾಜಸ್ವ ಪಾಲು ಶೇ.48 ರಷ್ಟಾಗಿರುತ್ತದೆ. ಆ ಮೂಲಕ ಕೇಂದ್ರದ ಅನುದಾನದ ಜತೆಗೆ ರಾಜ್ಯದ ವತಿಯಿಂದ ಅಭಿವೃದ್ಧಿಗೆ ಹೆಚ್ಚು ಮೊತ್ತ ಮೀಸಲಿಟ್ಟಂತಾಗುತ್ತದೆ ಎಂದು ತಿಳಿಸಿದೆ.

ಕೇಂದ್ರದಿಂದ ಕರ್ನಾಟಕಕ್ಕೆ ತೆರಿಗೆ ಪಾಲಿನ ಬಾಬ್ತು, ಸಹಾಯಾನುದಾನ, ಕೇಂದ್ರ ಪುರಸ್ಕೃತ ಯೋಜನೆಗಳಡಿ ನೆರವು ವಿಚಾರಗಳಲ್ಲಿ ಮೊದಲಿನಿಂದಲೂ ಅನ್ಯಾಯವಾಗುತ್ತಲೇ ಇದೆ. ನಮ್ಮ ರಾಜ್ಯದ ಸಂಸದರು ಈ ವಿಚಾರದಲ್ಲಿ ಇಚ್ಛಾಶಕ್ತಿ ತೋರದಿರುವುದು ನಮಗೆ ಹಿನ್ನಡೆಯಾಗಲು ಕಾರಣ. ಪಕ್ಷಾತೀತವಾಗಿ ರಾಜ್ಯ ಸರ್ಕಾರದ ಪರವಾಗಿ ನಮ್ಮ ಬೇಡಿಕೆಗಳನ್ನು ಕೇಂದ್ರ ಸರ್ಕಾರ, ಕೇಂದ್ರ ಹಣಕಾಸು ಆಯೋಗದ ಮುಂದೆ ಪ್ರಬಲವಾಗಿ ಮಂಡಿಸುವಲ್ಲಿ ನಮ್ಮ ರಾಜ್ಯದ ಪ್ರತಿನಿಧಿಗಳು ವಿಫ‌ಲರಾಗುತ್ತಿದ್ದಾರೆ.
-ಆರ್‌.ಜಿ.ಮುರುಳೀಧರ್‌, ಆರ್ಥಿಕ ತಜ್ಞ

* ಎಸ್‌. ಲಕ್ಷ್ಮಿನಾರಾಯಣ

Advertisement

Udayavani is now on Telegram. Click here to join our channel and stay updated with the latest news.

Next