Advertisement

ಅನುದಾನ ಹಂಚಿಕೆಯಲ್ಲಿ ಬೇಡ ತಾರತಮ್ಯ

05:22 PM Dec 06, 2018 | |

ಸಾಗರ: ಅಧ್ಯಕ್ಷ ಸ್ಥಾನದಲ್ಲಿ ಕುಳಿತ ಮೇಲೆ ತಾರತಮ್ಯ ಮನೋಭಾವ ಬಿಡಬೇಕು. ಕಾಮಗಾರಿ ಹಂಚುವ ಸಂದರ್ಭದಲ್ಲಿ ಒಂದು ವಾರ್ಡ್‌ಗೆ ಹೆಚ್ಚು ಮತ್ತೂಂದು ವಾರ್ಡ್‌ಗೆ ಕಡಿಮೆ ಅನುದಾನ ಬಿಡುಗಡೆ ಮಾಡಿ ಮಲತಾಯಿ ಧೋರಣೆ ತಳೆಯುವುದು ಸರಿಯಲ್ಲ ಎಂದು ಆಡಳಿತ ಪಕ್ಷದ ಸದಸ್ಯೆ ಎನ್‌. ಲಲಿತಮ್ಮ ಗಂಭೀರ ಆರೋಪ ಮಾಡಿದರು.

Advertisement

ಇಲ್ಲಿನ ನಗರಸಭೆಯಲ್ಲಿ ಬುಧವಾರ ನಡೆದ ನಗರಸಭೆ ವಿಶೇಷ ಸಾಮಾನ್ಯ ಸಭೆಯ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಅಧ್ಯಕ್ಷರು ಸಭೆಯಲ್ಲಿ ಎಲ್ಲ ವಾರ್ಡ್‌ಗೆ ಸಮಾನ ಅನುದಾನ ನೀಡುವ ಭರವಸೆ ನೀಡಿದ್ದರು. ಆದರೆ ಕ್ರಿಯಾಯೋಜನೆ ಪಟ್ಟಿ ನೋಡಿದಾಗ ಒಂದು ವಾರ್ಡ್‌ಗೆ 11 ಲಕ್ಷ ರೂ. ಕೊಟ್ಟಿದ್ದರೆ ನನ್ನ ವಾರ್ಡ್‌ಗೆ ಕೇವಲ 4 ಲಕ್ಷ ರೂ. ನೀಡಲಾಗಿದೆ. ನನ್ನದು ನಗರದ ಹೊರಭಾಗದ ಜೊತೆಗೆ ಹಿಂದುಳಿದ ವಾರ್ಡ್‌ ಆಗಿದ್ದು ಅಭಿವೃದ್ಧಿಗೆ ಹೆಚ್ಚು ಹಣ ಇಡಬೇಕಿತ್ತು. ಹಾಲಿ ತಯಾರಿಸಿರುವ ಕ್ರಿಯಾಯೋಜನೆಗೆ ನನ್ನ ಒಪ್ಪಿಗೆ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
 
ಸದಸ್ಯೆ ಸರಸ್ವತಿ ಮಾತನಾಡಿ, ಹಿಂದೆ ಲಲಿತಮ್ಮ ಅಧ್ಯಕ್ಷರಾಗಿದ್ದಾಗ ತಮ್ಮ ವಾರ್ಡ್‌ಗೆ 40 ಲಕ್ಷ ರೂ. ಅನುದಾನ ಪಡೆದಿದ್ದಾರೆ. ಆಗ ಯಾಕೆ ತಾರತಮ್ಯದ ಪ್ರಶ್ನೆ ಉದ್ಭವವಾಗಿಲ್ಲ. ಈಗ ನನ್ನ ವಾರ್ಡ್‌ಗೆ ಸ್ವಲ್ಪ ಹಣ ಜಾಸ್ತಿ ಕೊಟ್ಟಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು. ಇದರಿಂದ ಸಿಟ್ಟಿಗೆದ್ದ ಲಲಿತಮ್ಮ, ಸಭೆಯಲ್ಲಿ ಅನಗತ್ಯ ಸುಳ್ಳು ಆರೋಪ ಮಾಡುವುದು ಸರಿಯಲ್ಲ. ನಾನು ಅಧ್ಯಕ್ಷಳಾಗಿದ್ದಾಗ ನನ್ನ ವಾರ್ಡ್‌ಗೆ ಎಷ್ಟು ಅನುದಾನ ತೆಗೆದುಕೊಂಡಿದ್ದೇನೆ ಎಂಬ ದಾಖಲೆ ಬಿಡುಗಡೆ ಮಾಡಿ ಎಂದು ಒತ್ತಾಯಿಸಿದರು. 

ಈ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿ ಮಾತನಾಡಿದ ಅಧ್ಯಕ್ಷೆ ವೀಣಾ ಪರಮೇಶ್ವರ್‌, ಸಣ್ಣಪುಟ್ಟ ವ್ಯತ್ಯಾಸವಾದರೆ ಅದನ್ನು ಸರಿಪಡಿಸಲಾಗುತ್ತದೆ. ಅಂದ ಮಾತ್ರಕ್ಕೆ ತಾರತಮ್ಯ ಮಾಡಿದ್ದೇವೆ ಎಂದು ಹೇಳುವುದು ಬೇಡ. ಹಿಂದೆ ನೀವು ಅಧ್ಯಕ್ಷರಾಗಿದ್ದಾಗಲೂ ವ್ಯತ್ಯಾಸವಾಗಿತ್ತು ಎನ್ನುವುದನ್ನು ಮರೆಯಬೇಡಿ. ನೀವು ನಿಮ್ಮ ಅವಧಿಯಲ್ಲಿ ಹೆಚ್ಚಿನ ಅನುದಾನ ಪಡೆದಿರುವುದು ದಾಖಲೆಯಿಂದ ಗೊತ್ತಾಗುತ್ತದೆ ಎಂದು ತಿರುಗೇಟು ನೀಡಿದರು.

ಸದಸ್ಯೆ ಉಷಾ ಗುತ್ತಿಗೆದಾರರಿಗೆ ಬಿಲ್‌ ಪಾವತಿಯಾಗುತ್ತಿಲ್ಲ ಎಂದಿದ್ದಕ್ಕೆ ಪ್ರತಿಕ್ರಿಯೆ ನೀಡಿದ ಪೌರಾಯುಕ್ತ ಎಸ್‌. ರಾಜು, ಗುತ್ತಿಗೆದಾರರಿಗೆ ಬಿಲ್‌ ನೀಡಲು ವಿಳಂಬ ಮಾಡಬೇಕು ಎನ್ನುವ ಉದ್ದೇಶವಿಲ್ಲ. ಸಂಬಂಧಪಟ್ಟ ಇಂಜಿನಿಯರ್‌ಗಳು ಕಾಮಗಾರಿ ಮಾಹಿತಿಯನ್ನು ನೀಡಿಲ್ಲ. ಇಂಜಿನಿಯರ್‌ ಮಾಹಿತಿ ನೀಡಿದ ತಕ್ಷಣ ಅಧ್ಯಕ್ಷರ ಜೊತೆ ಸ್ಥಳ ಪರಿಶೀಲನೆ ನಡೆಸಿ ಬಿಲ್‌ ಪಾವತಿ ಮಾಡಲಾಗುತ್ತದೆ ಎಂದು ಸ್ಪಷ್ಟನೆ ನೀಡಿದರು.

ಹೊಸ ಕಾಮಗಾರಿ ನಿರ್ವಹಿಸುವ ಮೊದಲು ಹಳೆ ಕಾಮಗಾರಿ ಮುಗಿಸುವ ಬಗ್ಗೆ ಗಮನ ಹರಿಸಿ. ಈಗಾಗಲೇ ಶಾಸಕರು ನಗರೋತ್ಥಾನ ಕಾಮಗಾರಿ ನಿರ್ವಹಿಸದಂತೆ ಸೂಚನೆ ನೀಡಿದ್ದಾರೆ. ಹಣ ಇದ್ದರೂ ಕಾಮಗಾರಿ ಮಾಡದ ಸ್ಥಿತಿಯನ್ನು ಶಾಸಕರು ತಂದಿರಿಸಿದ್ದಾರೆ ಎಂದು ನಾಮ ನಿರ್ದೇಶಿತ ಸದಸ್ಯ ತಾರಾಮೂರ್ತಿ ದೂರಿದರು. 

Advertisement

ಇದಕ್ಕೆ ಪ್ರತಿಕ್ರಿಯೆ ನೀಡಿದ ಬಿಜೆಪಿ ಸದಸ್ಯ ಆರ್‌. ಶ್ರೀನಿವಾಸ್‌, ಶಾಸಕರ ಮೇಲೆ ಅನಗತ್ಯ ಆರೋಪ ಹೊರಿಸುವುದು ಸರಿಯಲ್ಲ. ಒಳಚರಂಡಿ ಕಾಮಗಾರಿ ಮುಗಿದ ಕಡೆ ರಸ್ತೆ ಮಾಡುವಾಗ ಮನೆ ಸಂಪರ್ಕ ನೀಡಿ ಡಾಂಬರೀಕರಣ ಮಾಡಿ ಎಂದು ಶಾಸಕರು ಸೂಚನೆ ನೀಡಿದ್ದಾರೆ ಎಂದರು.

ಕಾಮಗಾರಿ ತ್ವರಿತಗತಿಯಲ್ಲಿ ಮುಗಿಸುವಂತೆ ಸದಸ್ಯರಾದ ನಾದೀರಾ ಪರ್ವಿನ್‌, ಐ.ಎನ್‌. ಸುರೇಶಬಾಬು, ಡಿಶ್‌ ಗುರು, ಸಬಾನಾ ಬಾನು, ಗಣಾಧಿಶ್‌, ಅರವಿಂದ ರಾಯ್ಕರ್‌, ನಾಗರತ್ನ ಸಿ., ಸೈಯದ್‌ ಇಕ್ಬಾಲ್‌ ಸಾಬ್‌ ಇನ್ನಿತರರು ಮಾತನಾಡಿದರು. ಸಭೆಯಲ್ಲಿ ಉಪಾಧ್ಯಕ್ಷೆ ಗ್ರೇಸಿ ಡಯಾಸ್‌ ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next