Advertisement
ಶಿಕ್ಷಣ ಹಕ್ಕು ಕಾಯ್ದೆಯ ಪ್ರಕಾರ ಶೇ.25ರ ಮೀಸಲಾತಿಯಲ್ಲಿ ಸೀಟು ಪಡೆದು ಖಾಸಗಿ ಶಾಲೆಗೆ ಸೇರಿದ ಮಕ್ಕಳಿಗೆ ಸಾರಿಗೆ ವೆಚ್ಚ ಹೊರತುಪಡಿಸಿ ಉಳಿದೆಲ್ಲವನ್ನೂ ಸರ್ಕಾರ ಉಚಿತವಾಗಿಯೇ ನೀಡಬೇಕು. ಅದರಂತೆ ರಾಜ್ಯ ಪಠ್ಯಕ್ರಮದ ಖಾಸಗಿ ಶಾಲೆಗಳಲ್ಲಿ ಆರ್‌ಟಿಇ ಸೀಟು ಪಡೆದ ಮಕ್ಕಳಿಗೆ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಪಠ್ಯಪುಸ್ತಕ ಪೂರೈಕೆ ಮಾಡಲಾಗುತ್ತದೆ. ಆದರೆ, ಸಿಬಿಎಸ್‌ಇ, ಐಸಿಎಸ್‌ಇ ಶಾಲೆಗಳಲ್ಲಿ ಸೀಟು ಪಡೆದ ಮಕ್ಕಳಿಗೆ ಸರ್ಕಾರದ ಪಠ್ಯಪುಸ್ತಕ ಸಿಗುತ್ತಿಲ್ಲ. ಇದಕ್ಕೆ ಕಾರಣ ಸಿಬಿಎಸ್‌ಇ ಹಾಗೂ ಐಸಿಎಸ್‌ಇ ಪಠ್ಯಕ್ರಮದ ಪುಸ್ತಕಗಳನ್ನು ರಾಜ್ಯ ಸರ್ಕಾರ ಮುದ್ರಿಸದಿರುವುದು. ಈ ತಾಂತ್ರಿಕ ಸಮಸ್ಯೆ ಆರ್‌ಟಿಇ ಮಕ್ಕಳು ಮತ್ತು ಪಾಲಕರ ಮೇಲೆ ನೇರ ಪರಿಣಾಮ ಬೀರುತ್ತಿದೆ.
ಶುಲ್ಕ ನೀಡಿ ಪಾವತಿಸಬೇಕಾದ ಪರಿಸ್ಥಿತಿ ಎದುರಾಗಿದೆ. ಸರ್ಕಾರದ ಈ ನಿರ್ಧಾರಕ್ಕೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಸೇರಿದಂತೆ ಆರ್‌ಟಿಇ ಕಾರ್ಯಪಡೆ, ಆರ್‌ಟಿಇ ಹೋರಾಟಗಾರರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸಮಾಜದಲ್ಲಿ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದ ಕುಟುಂಬದ ಮಕ್ಕಳಿಗೆ ಉತ್ತಮ ಶಿಕ್ಷಣ ಕಲ್ಪಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ 2009ರಲ್ಲಿ ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ ಜಾರಿಗೆ ತಂದಿದೆ. 2012ರಿಂದ ರಾಜ್ಯದಲ್ಲಿ ಇದನ್ನು ಸಮರ್ಪಕವಾಗಿ ಅನುಷ್ಠಾನ ಮಾಡಿದೆ. ಆರ್‌ಟಿಇ ಅಡಿ ಸೀಟು ಪಡೆದ ವಿದ್ಯಾರ್ಥಿಗಳ ಶುಲ್ಕ ಮರುಪಾತಿಯನ್ನು ಸರ್ಕಾರವೇ ಮಾಡುತ್ತದೆ. ಅದಕ್ಕಾಗಿಯೇ ಕೋಟ್ಯಾಂತರ ರೂ. ಮೀಸಲಿಡಲಾಗಿದೆ. ಹೀಗಾಗಿಯೇ ಆರ್‌ಟಿಇ ಅಡಿ ಖಾಸಗಿ ಶಾಲೆಗೆ ಸೇರಿದ ಎಲ್ಲವೂ ಉಚಿತವಾಗಿರುತ್ತದೆ. ಆದರೆ, ಸರ್ಕಾರ ಕೆಲವೊಂದು ಶಾಲೆಯ ಆರ್‌ಟಿಇ ಮಕ್ಕಳಿಗೆ ಪುಸ್ತಕ ನೀಡಿ, ಇನ್ನು ಕೆಲವರಿಗೆ ನೀಡದೇ ಇದ್ದರೆ ಅಂತಹ ಮಕ್ಕಳ ಶಿಕ್ಷಣ ಹಕ್ಕು ಉಲ್ಲಂಘನೆ ಮಾಡಿದಂತಾಗುತ್ತದೆ ಎಂದು ಆರ್‌ಟಿಇ ಮಕ್ಕಳ ಪಾಲಕರು ಆರೋಪಿಸಿದ್ದಾರೆ.
Related Articles
Advertisement
ಎಲ್‌ಕೆಜಿ ಮಕ್ಕಳಿಗೂ ಪುಸ್ತಕ ಇಲ್ಲ ರಾಜ್ಯ ಪಠ್ಯಕ್ರಮದ ಖಾಸಗಿ ಶಾಲೆಗಳಲ್ಲಿ ಆರ್‌ಟಿಇ ಅಡಿ ಎಲ್‌ಕೆಜಿಗೆ ಸೇರುವ ಮಕ್ಕಳಿಗೂ ಪುಸ್ತಕವನ್ನು ಸರ್ಕಾರದಿಂದ ನೀಡುತ್ತಿಲ್ಲ. ರಾಜ್ಯ ಸರ್ಕಾರ ಒಂದನೇ ತರಗತಿ ಮತ್ತು ಮೇಲ್ಪಟ್ಟ ವಿದ್ಯಾರ್ಥಿಗಳಿಗೆ ಮಾತ್ರ ಪುಸ್ತಕ ಮುದ್ರಿಸುತ್ತದೆ. ಆರ್‌ಟಿಇ ಅಡಿ ಸೀಟು ಪಡೆದು ಎಲ್‌ಕೆಜಿ ಮತ್ತು ಯುಕೆಜಿಯಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳಿಗೆ ಪಾಲಕರೇ ಸ್ವಂತ ಖರ್ಚಿನಲ್ಲಿ ಪುಸ್ತಕ ಖರೀದಿಸಿಕೊಡಬೇಕು.
ಆರ್‌ಟಿಇ ಮಕ್ಕಳಿಗೆ ಸರ್ಕಾರದಿಂದ ಪಠ್ಯಪುಸ್ತಕ ನೀಡಬೇಕಂಬ ನಿಯಮ ಇಲ್ಲ. ರಾಜ್ಯ ಪಠ್ಯಕ್ರಮದ ಮಕ್ಕಳಿಗೆ ಪಠ್ಯಪುಸ್ತಕ ನೀಡುವ ತೀರ್ಮಾನ ತೆಗೆದುಕೊಂಡಿದ್ದೇವೆ. ಸಿಬಿಎಸ್‌ಇ, ಐಸಿಎಸ್‌ಇ ಮಕ್ಕಳಿಗೆ ಪಾಲಕರೇ ಪುಸ್ತಕ ಖರೀದಿಸಬೇಕು. ಡಾ.ಪಿ.ಸಿ.ಜಾಫರ್, ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ ರಾಜ್ಯದಲ್ಲಿ ಸುಮಾರು ಒಂದು ಸಾವಿರಕ್ಕೂ ಅಧಿಕ ಸಿಬಿಎಸ್‌ಇ ಹಾಗೂ 400ಕ್ಕೂ ಅಧಿಕ ಐಸಿಎಸ್‌ಇ ಸೇರಿದಂತೆ 17 ಸಾವಿರಕ್ಕೂ ಅಧಿಕ ಖಾಸಗಿ ಶಾಲೆಗಳಿವೆ. ಇಲ್ಲಿ ಆರ್‌ಟಿಇ ಅಡಿ ದಾಖಲಾದ ಮಕ್ಕಳಿಗೆ ಸರ್ಕಾರದಿಂದ ಸಮವಸ್ತ್ರ ನೀಡುತ್ತಿಲ್ಲ. ಪಠ್ಯಪುಸ್ತಕವನ್ನು ಸಮರ್ಪಕವಾಗಿ ವಿತರಿಸುತ್ತಿಲ್ಲ. ಶುಲ್ಕ ಮರುಪಾವತಿಯೂ ಸರಿಯಾಗಿ ಆಗುತ್ತಿಲ್ಲ.
ಡಿ. ಶಶಿಕುಮಾರ್, ಖಾಸಗಿ ಪ್ರಾಥಮಿಕ ಹಾಗೂ ಪ್ರೌಢ ಶಾಲಾಡಳಿತ ಮಂಡಳಿಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ರಾಜು ಖಾರ್ವಿ ಕೊಡೇರಿ