Advertisement

ಕಳಸದ ಬಸದಿಯಲ್ಲಿ ಜೈನ ಶಾಸನ ಪತ್ತೆ

10:29 PM Sep 11, 2019 | Sriram |

ಶಿರ್ವ: ಚಿಕ್ಕಮಗಳೂರು ಜಿಲ್ಲೆ ಕಳಸದ ಚಂದ್ರನಾಥ ತೀರ್ಥಂಕರರ ಬಸದಿಯಲ್ಲಿನ ಒಂದು ಚಿಕ್ಕ ಚಂದ್ರನಾಥ ತೀರ್ಥಂಕರರ ಪ್ರತಿಮೆಯ ಹಿಂಭಾಗದಲ್ಲಿ ಜೈನ ಶಾಸನವೊಂದು ಪತ್ತೆಯಾಗಿದೆ. ಈ ಪುಟ್ಟ ಶಾಸನದಲ್ಲಿ ಪ್ರತಿ ಸಾಲನ್ನು ಒಂದು ಸೊನ್ನೆಯಿಂದ ಆರಂಭಿಸಲಾಗಿದೆ.

Advertisement

ಕನ್ನಡ ಲಿಪಿ ಮತ್ತು ಭಾಷೆಯ 10 ಸಾಲಿನ ಶಾಸನದಲ್ಲಿ ಕಿವಿಯಲಿ ಕೇಳಿ, ಕಂಣಲಿ ನೋಡಿದ ಪಾಪಕೆ ಪ್ರಾಯಶ್ಚಿತ್ತವಾಗಿ ಪ್ರತಿ ಚಂದ್ರನಾಥನ ಅಂದರೆ, ಮೂಲ ಚಂದ್ರನಾಥ ವಿಗ್ರಹದ ಪ್ರತಿರೂಪದ ಚಿಕ್ಕ ಪ್ರತಿಮೆಯನ್ನು ಮಾಡಿಸಲಾಯಿತು ಎಂದು ಶಾಸನದಲ್ಲಿ ಹೇಳಲಾಗಿದೆ ಎಂದು ಶಿರ್ವದ ಮುಲ್ಕಿ ಸುಂದರ್‌ ರಾಮ್‌ ಶೆಟ್ಟಿ ಕಾಲೇಜಿನ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ವಿಭಾಗದ ಮುಖ್ಯಸ್ಥ ಪೊ| ಟಿ.ಮುರುಗೇಶಿ ತಿಳಿಸಿದ್ದಾರೆ.

ಶಾಸನದ ಆರಂಭದಲ್ಲಿಯೇ, ಅಂಗೀರಸ ಸಂವತ್ಸರ, ಆಷಾಢ ಶುದ್ಧ ದಶಮಿ ಮೂರು ಎಂದು ಕಾಲವನ್ನು ಉಲ್ಲೇಖೀಸಲಾಗಿದೆ. ಇದು ಕ್ರಿ.ಶ. 1512 ಜು.2 ಶುಕ್ರವಾರಕ್ಕೆ ಸರಿಹೊಂದುತ್ತದೆ. ಶಾಸನದಲ್ಲಿ ಕಳಸದ ದೇವಚಂದ್ರ ಜೈನ ಮುನಿಗಳನ್ನು ಹೆಸರಿಸಲಾಗಿದೆ. ಇದೇ ಬಸದಿಯ ಪ್ರಧಾನ ಅಧಿದೇವತೆಯಾದ ಚಂದ್ರನಾಥ ವಿಗ್ರಹದ ಎರಡೂ ಪಾರ್ಶ್ವಗಳಲ್ಲಿ ಬರೆದ ಶಾಸನದಲ್ಲಿ ಮೂಲಸಂಘ, ಪನಸೋಗೆ ಬಳಿ,ದೇಶೀಯ ಗಣ, ಪುಸ್ತಕ ಗಚ್ಚ, ಕುಂದ ಕುಂದಾನ್ವಯ ಲಲಿತಕೀರ್ತಿ ದೇವರ ಶಿಷ್ಯರಾಗಿದ್ದ ದೇವಚಂದ್ರ ದೇವರು ಈ ವಿಗ್ರಹವನ್ನು ಪ್ರತಿಷ್ಠಾಪಿಸಿದ ವಿಷಯವನ್ನು ಹೇಳ ಲಾಗಿದೆ.ಪ್ರಮುಖ ಜೈನ ತೀರ್ಥಕ್ಷೇತ್ರಗಳಲ್ಲಿ ಕಳಸವನ್ನೂ ಹೆಸರಿಸಲಾಗಿದೆ.

ಈ ಶಾಸನವನ್ನು ಪತ್ತೆ ಹಚ್ಚುವಲ್ಲಿ ಹಂಪೆ ಕನ್ನಡ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿನಿ ಕಳಸದ ಸುಪ್ರೀತಾ ಕೆ. ಎನ್‌. ಹಾಗೂ ಕಳಸದ ಚಂದ್ರನಾಥ ಬಸದಿಯ ಅರ್ಚಕ ಅಜಿತ್‌ ಸಹಕರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next