ಉಡುಪಿ: ಜಿಲ್ಲೆಯ ಬೀಜಾಡಿ, ಕಾಪು, ಮಲ್ಪೆ, ಬೈಂದೂರು ಹಾಗೂ ಉತ್ತರ ಕನ್ನಡ ಜಿಲ್ಲೆಯ ಮುರುಡೇಶ್ವರ ಕಡಲ ತೀರದಲ್ಲಿ ಅಂತರ್ಜಲವು ದೊಡ್ಡ ಪ್ರಮಾಣದಲ್ಲಿ ಒರತೆಯ ರೂಪದಲ್ಲಿ ಅರಬಿ ಸಮುದ್ರದೆಡೆಗೆ ಹೊರಸೂಸುವುದನ್ನು ಪತ್ತೆ ಮಾಡಲಾಗಿದೆ.
ಮಣಿಪಾಲ ಎಂಐಟಿಯ ಸಿವಿಲ್ ಎಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕರಾದ ಡಾ| ಕೆ. ಬಾಲಕೃಷ್ಣ, ಡಾ| ಎಚ್.ಎನ್. ಉದಯ ಶಂಕರ್ ಹಾಗೂ ಸಂಶೋಧನ ವಿದ್ಯಾರ್ಥಿ ಲಿನೊ ಯೋವನ್ ನೇತೃತ್ವದ ಸಂಶೋಧನ ತಂಡವು ಈ ಬಗ್ಗೆ ಅನ್ವೇಷಣ ಕಾರ್ಯದಲ್ಲಿ ತೊಡಗಿದ್ದು, ಅವರ ಸಂಶೋಧನೆಯು ನೆದರ್ಲ್ಯಾಂಡ್ ಮೂಲದ ಎಲ್ಸೆವಿಯರ್ ಪ್ರಕಟಿತ ವೈಜ್ಞಾನಿಕ ನಿಯತಕಾಲಿಕ “ಜರ್ನಲ್ ಆಫ್ ಹೈಡ್ರಾಲಜಿ’ಯ ಮೇ 2023ರ ಸಂಚಿಕೆಯಲ್ಲಿ ಪ್ರಕಟವಾಗುತ್ತಿದೆ.
ಉಡುಪಿ ಜಿಲ್ಲೆಯಲ್ಲಿ ನೀರಿನ ಸಂಪನ್ಮೂಲಗಳು ಕ್ಷೀಣಿಸುತ್ತಿರುವ ಹಿನ್ನೆಲೆಯಲ್ಲಿ ಈ ಸಂಶೋಧನೆ ಪ್ರಾಮುಖ್ಯ ಪಡೆದಿದೆ. ಸಮುದ್ರ ತೀರದಲ್ಲಿ ಕಾಣಸಿಗುವ ಈ ಒರತೆಯು ತಾಜಾ ಅಂತರ್ಜಲದ ಸಂಭಾವ್ಯ ಮೂಲವಾಗಿದ್ದು, ಹೆಚ್ಚಿನ ಪ್ರಮಾಣದಲ್ಲಿ ಸಮುದ್ರದ ಪಾಲಾಗುತ್ತಿದೆ. ಈ ಸಿಹಿ ನೀರಿನ ಒಂದು ಭಾಗವನ್ನು ಸುಸ್ಥಿರವಾಗಿ ನಿಯಂತ್ರಿತ ರೀತಿಯಲ್ಲಿ ಕುಡಿಯುವ ನೀರಾಗಿ ಬಳಸಲು ಸಾಧ್ಯವಾದಲ್ಲಿ, ನೀರಿನ ಕೊರತೆಯನ್ನು ಕೊಂಚ ಮಟ್ಟಿಗೆ ನೀಗಿಸಬಹುದು. ಇನ್ನೊಂದು ಕೋನದಲ್ಲಿ ಈ ವಿದ್ಯಮಾನವನ್ನು ಗಮನಿಸುವುದಾದರೆ, ಈ ಅಂತ ರ್ಜಲವು ಹೆಚ್ಚಿನ ಪ್ರಮಾಣದಲ್ಲಿ ಪೋಷಕಾಂಶಗಳನ್ನು ಅರಬಿ ಸಮುದ್ರಕ್ಕೆ ಪ್ರವಹಿಸುತ್ತದೆ. ಈ ಪೋಷಕಾಂಶಗಳು ಕೃಷಿಗೆ ಬಳಸುವ ರಸಗೊಬ್ಬರಗಳಿಂದ ಅಂತರ್ಜಲವನ್ನು ಸೇರುತ್ತದೆ. ಹೀಗೆ ಸಾಗರಕ್ಕೆ ಪ್ರವಹಿಸುವ ಪೋಷಕಾಂಶಗಳು ಸಮುದ್ರವನ್ನು ಫಲವತ್ತಾಗಿಸಿ, ಪಾಚಿ ಪ್ರಸರಣ ವೃದ್ಧಿ ಹಾಗೂ ಕಡಿಮೆ ಮೀನು ಇಳುವರಿಗೆ ಕಾರಣವಾಗಬಹುದು. ದೊಡ್ಡ ಪ್ರಮಾಣದಲ್ಲಿ ಅಂತರ್ಜಲ ಸಮುದ್ರಕ್ಕೆ ಪ್ರವಹಿಸುತ್ತಲಿದ್ದು, ಅದನ್ನು ಸುಸ್ಥಿರ ಪ್ರಮಾಣದಲ್ಲಿ ಬಳಕೆಗೆ ಲಭ್ಯವಾಗುವಂತೆ ಮಾಡುವ ಬಗ್ಗೆ ಹೆಚ್ಚಿನ ಸಂಶೋಧನೆಗಳು ನಡೆಯ ಬೇಕು ಎಂಬುದು ಸಂಶೋಧಕರ ಅಭಿಪ್ರಾಯ.
ಪ್ರಾಮುಖ್ಯ ಗುರುತಿಸಿದ ಭೂ ವಿಜ್ಞಾನ ಸಚಿವಾಲಯ
ನದಿಗಳು ನೀರನ್ನು ಸಮುದ್ರಕ್ಕೆ ಪ್ರವಹಿಸುವುದು ಸಾಮಾನ್ಯ. ಇದೇ ಮಾದರಿಯಲ್ಲಿ ಅಂತರ್ಜಲವು ನದಿ ಗಳು ಪ್ರವಹಿಸಿದ ಶೇ. 10ರಷ್ಟು ಸಿಹಿ ನೀರನ್ನು ಸಮುದ್ರದೆಡೆಗೆ ಪ್ರವ ಹಿಸುವುದನ್ನು ಇತರೆಡೆ ನಡೆದ ಸಂಶೋಧನೆಗಳಿಂದ ಕಂಡುಕೊಳ್ಳಲಾಗಿದೆ.
ಆದರೆ ಭಾರತದ ಸುಮಾರು 7,500 ಕಿ.ಮೀ. ಉದ್ದದ ಕರಾವಳಿ ಯಾದ್ಯಂತ ಇಂತಹ ಯಾವುದೇ ಸಂಶೋಧನೆಗಳು ವರದಿಯಾಗಿಲ್ಲ. ಇದರ ಪ್ರಾಮುಖ್ಯವನ್ನು ಗುರುತಿಸಿ, ಕೇಂದ್ರ ಸರಕಾರದ ಭೂವಿಜ್ಞಾನ ಸಚಿವಾಲಯವು ತಿರುವನಂತಪುರದ ರಾಷ್ಟ್ರೀಯ ಭೂವಿಜ್ಞಾನ ಅಧ್ಯಯನ ಕೇಂದ್ರ (ಎನ್‌ಸಿಇಎಸ್‌ಎಸ್)ಕ್ಕೆ ಈ ಜವಾಬ್ದಾರಿಯನ್ನು ವಹಿಸಿದೆ. ಮಣಿಪಾಲ ಎಂಐಟಿಯು ಈ ಸಂಸ್ಥೆಯ ಪ್ರಮುಖ ಪಾಲುದಾರನಾಗಿದ್ದು, ಉಡುಪಿ – ಉತ್ತರ ಕನ್ನಡ ಕರಾವಳಿಯಲ್ಲಿ ನಿಕ್ಷೇಪಗಳ ಪತ್ತೆ ಕಾರ್ಯವನ್ನು ನಡೆಸ ಲಾಗು ತ್ತಿದೆ ಎನ್ನುತ್ತಾರೆ ಡಾ| ಕೆ. ಬಾಲಕೃಷ್ಣ, ಡಾ| ಎಚ್.ಎನ್. ಉದಯಶಂಕರ್.
40 ಸಾವಿರ ವರ್ಷ ಹಳೆಯ ನಿಕ್ಷೇಪ
ಕರಾವಳಿ ಮತ್ತು ಒಳನಾಡಿನಲ್ಲಿ ಸುರಿಯುವ ಭಾರೀ ಮಳೆ ಹಾಗೂ ಈ ಪ್ರದೇಶದ ಭೂ ಮೇಲ್ಮೆ„ಯಲ್ಲಿ ಹರಡಿರುವ ಸುಮಾರು 40 ಸಾವಿರ ವರ್ಷಗಳಷ್ಟು ಹಳೆಯ ಜಲಭರಿತ ಮಡ್ಡಿಯ ನಿಕ್ಷೇಪಗಳು ಇಲ್ಲಿ ಗಮನಾರ್ಹ ಪ್ರಮಾಣದ ಅಂತರ್ಜಲವು ಸಮುದ್ರಕ್ಕೆ ಪ್ರವಹಿಸುವುದಕ್ಕೆ ಸಂಭಾವ್ಯ ಕಾರಣ ಎನ್ನುತ್ತಾರೆ ಸಂಶೋಧನ ವರದಿಯ ಲೇಖಕ ಲಿನೊ ಯೋವನ್. ಈ ವಿಶೇಷ ಮಡ್ಡಿಯು ಗಣನೀಯ ಪ್ರಮಾಣದ ಮಳೆ ನೀರನ್ನು ತನ್ನೊಡನೆ ಇಂಗಿಸಿ, ಸಮುದ್ರದೆಡೆಗೆ ಪ್ರವಹಿಸುವ ಸಾಮರ್ಥ್ಯ ಹೊಂದಿದೆ. ಈ ಪ್ರಮಾಣದ ಅಂತರ್ಜಲ ಹೊರಸೂಸುವಿಕೆಯು ಈ ಪ್ರದೇಶಗಳನ್ನು ಸಂಭಾವ್ಯ ಉಪ್ಪು ನೀರು ಒಳನುಗ್ಗುವಿಕೆಯಿಂದ ರಕ್ಷಿಸುತ್ತದೆ ಎಂದಿದ್ದಾರೆ.