Advertisement
ಮಲೆನಾಡು, ಕೊಲ್ಲೂರು ಮತ್ತಿತರ ಭಾಗಗಳಲ್ಲಿ ಸೋಮವಾರ ಮಳೆ ಕಡಿಮೆ ಯಿದ್ದರೂ, ರವಿವಾರ ಸಂಜೆಯಿಂದ ಆರಂಭಗೊಂಡು ರಾತ್ರಿಯಿಡೀ ಮಳೆ ಸುರಿದ ಕಾರಣ ಸೌಪರ್ಣಿಕಾ ನದಿ ತೀರದ ನಾವುಂದ ಭಾಗದ ಸಾಲುºಡಾ, ಸಸಿಹಿತ್ಲು, ಬಾಂಗಿನ್‌ಮನೆ, ಕಂಡಿಕೇರಿ, ಚೋದ್ರಂಗಡಿ, ದೇವಾಡಿಗರ್ ಕೇರಿ, ಮೂಡಾಮನೆ, ಚಟ್ನಿಹಿತ್ಲು ಪ್ರದೇಶದಲ್ಲಿ ಭಾರೀ ನೆರೆ ಸೃಷ್ಟಿಯಾಗಿದೆ. ಇದರಿಂದ 50 ಕ್ಕೂ ಹೆಚ್ಚು ಮನೆಗಳ ಜನರು ಮನೆಯಿಂದ ಹೊರಗೆ ಬಾರದ ಪರಿಸ್ಥಿತಿ ಉಂಟಾಗಿತ್ತು. ರಸ್ತೆಯಲ್ಲಿಯೂ ಜನ ಸಂಚಾರಕ್ಕೆ ದೋಣಿಯನ್ನೇ ಆಶ್ರಯಿಸು ವಂತಾಯಿತು. ಇನ್ನು ನಾವುಂದ ಕುದ್ರುವಿನ ನಿವಾಸಿಗಳಿಗೆ ನದಿಯಲ್ಲಿಯೂ ಭಾರೀ ನೀರು ಇದ್ದುದರಿಂದ ದಿಗ್ಬಂಧನ ವಿಧಿಸಿದಂತಾಗಿದೆ.
ಸಾಲ್ಪುಡಾ, ಕಂಡಿಕೇರಿ ಮನೆ, ಸಸಿಹಿತ್ಲು ಪ್ರದೇಶ ಸೇರಿದಂತೆ ಈ ಭಾಗದ ಹತ್ತಾರು ಎಕರೆ ಪ್ರದೇಶಗಳಲ್ಲಿ ಭತ್ತದ ನಾಟಿ ಮಾಡಿರುವ ಗದ್ದೆಗಳು ಜಲಾವೃತಗೊಂಡಿವೆ. ಈಗ ಭತ್ತದ ಪೈರು ಮೊಳಕೆಯೊಡೆದು ಫಸಲು ಬರುವ ಸಮಯವಾಗಿದ್ದು, ಈ ವೇಳೆಯೇ ಹೀಗೆ ಮುಳುಗಿದರೆ ಕೊಳೆತು ಹೋಗುವ ಆತಂಕ ಇಲ್ಲಿನ ರೈತರದ್ದಾಗಿದೆ.
ನಾವುಂದದ ಹೆದ್ದಾರಿಯಿಂದ ಅರೆಹೊಳೆ ಕಡೆಗೆ ಸಂಚರಿಸುವ ರಸ್ತೆ ಸಂಪರ್ಕ ನೆರೆಯಿಂದಾಗಿ ಸಂಪೂರ್ಣ ಕಡಿತಗೊಂಡಿದೆ. ಜನ ಸಾಲುºಡಾದಿಂದ ನಾವುಂದಕ್ಕೆ ಬರಲು ದೋಣಿಯನ್ನೇ ಆಶ್ರಯಿಸುವಂತಾಗಿದೆ. ಪಂಚಾಯತ್‌ನಿಂದ ಕೊಟ್ಟಿರುವ ಒಂದು ದೋಣಿ ಮಾತ್ರವಿದ್ದು, ಬೆಳಗ್ಗೆ ಹಾಗೂ ಸಂಜೆ ವೇಳೆ ಕೆಲಸಕ್ಕೆ, ಪೇಟೆ ಕಡೆಗೆ ಹೋಗುವವರು ಹೆಚ್ಚು ಜನ ಇದ್ದು, ಇದರಿಂದ ಜನ ಸಂಚಾರಕ್ಕೆ ಕಷ್ಟವಾಗುತ್ತಿದೆ. ಇತ್ತೀಚೆಗೆ ಇಲ್ಲಿಗೆ ಭೇಟಿ ನೀಡಿದ್ದ ಶಾಸಕರು ಹಾಗೂ ಜಿಲ್ಲಾಧಿಕಾರಿಗಳು ತುರ್ತಾಗಿ ಒಂದು ದೋಣಿ ನೀಡುವ ಭರವಸೆಯಿತ್ತಿದ್ದರು.
Related Articles
ಈ ಬಾರಿಯ ಮುಂಗಾರಿನಲ್ಲಿ ಇದು ನಾವುಂದ ಸಾಲುºಡಾದಲ್ಲಿ ಕಾಣುತ್ತಿರುವ 4ನೇ ನೆರೆಯಾಗಿದೆ. ಒಮ್ಮೆಗೆ ನೆರೆ ಬಂದರೆ 5ರಿಂದ 10 ದಿನಗಳವರೆಗೆ ಗದ್ದೆ ಪೂರ್ತಿ ನೀರು ನಿಂತಿರುತ್ತದೆ. ಆಗಾಗ ನೆರೆಯಿಂದಾಗಿ ಗದ್ದೆಗಳು ಮುಳುಗಡೆಯಾಗುತ್ತಿರುವುದರಿಂದ ಈ ಬಾರಿ ಉತ್ತಮ ಫಸಲು ಕಷ್ಟ. ಈ ಬಾರಿ ಭತ್ತದ ಸಸಿ ಒಳ್ಳೆಯದಾಗಿ ಬೆಳೆದಿತ್ತು. ಆದರೆ ಫಸಲು ಬರುವ ಸಮಯವೇ ಹೀಗೆ ಮುಳುಗಿದ್ದರಿಂದ ಸಂಪೂರ್ಣ ನಾಶವಾದಂತೆ ಎನ್ನುತ್ತಾರೆ ಕಂಡಿಕೇರಿ ಮನೆಯ ನಾರಾಯಣ ಪೂಜಾರಿ.
Advertisement
ನದಿ ಕೊರೆತ: ಅಪಾಯದಲ್ಲಿ ಮನೆಗಳುನಾವುಂದ ಗ್ರಾಮದ ಸಾಲ್ಪುಡಾ ಸಮೀಪದ ಹೊಳೆಬದಿ ಕಂಡಿಕೇರಿ, ಚಟ್ನಿಹಿತ್ಲು ಮನೆಯ ಸೌಪರ್ಣಿಕಾ ನದಿ ಪಾತ್ರದ 4-5 ಮನೆಗಳು ನದಿ ಕೊರೆತದಿಂದಾಗಿ ಅಪಾಯದಲ್ಲಿವೆ. ಇಲ್ಲಿ ಕಳೆದ ಬಾರಿ 150 ಮೀ. ನದಿ ದಂಡೆ ನಿರ್ಮಾಣ ಮಾಡಲಾಗಿದೆ. ಆದರೆ ಅದನ್ನು ಇನ್ನು ಸ್ವಲ್ಪ ದೂರದವರೆಗೆ ವಿಸ್ತರಿಸಿದ್ದರೆ ಈ ಮನೆಗಳಿಗೆ ಆತಂಕ ಇರುತ್ತಿರಲಿಲ್ಲ. ಈ ಬಗ್ಗೆ ಮನವಿ ಕೊಟ್ಟಿದ್ದೇವೆ. ನಮ್ಮದು ನದಿ ತಡದಲ್ಲೇ ಮನೆಯಿದ್ದು, ಮಳೆ ನೀರು ಏರುತ್ತಿರುವಾಗ ಮನೆಯಲ್ಲಿರಲು ತುಂಬಾ ಭಯವಾಗುತ್ತದೆ. ನದಿ ದಂಡೆ ನಿರ್ಮಿಸಿದರೆ ಅನುಕೂಲವಾಗುತ್ತಿತ್ತು ಎನ್ನುತ್ತಾರೆ ಚಟ್ನಿಹಿತ್ಲು ನಿವಾಸಿ ಸಾಕು.