Advertisement

ಬಳಸದ ವಿದ್ಯುತ್‌ ಸಂಪರ್ಕ ಕಡಿತಗೊಳಿಸಿ

12:45 PM Mar 11, 2017 | Team Udayavani |

ಎಚ್‌.ಡಿ.ಕೋಟೆ: ಬಳಕೆಯಲ್ಲಿಲ್ಲದ ವಿದ್ಯುತ್‌ ಸಂಪರ್ಕವನ್ನು ಹಾಗೆ ಉಳಿಸಿಕೊಂಡಿರುವುದರಿಂದ ಸರ್ಕಾರಕ್ಕೆ ಕೋಟ್ಯಂತರ ರೂ. ಹಣ ವ್ಯರ್ಥವಾಗುತ್ತಿದ್ದು, ಆಯಾ ಗ್ರಾಮ ಪಂಚಾಯಿತಿಗಳು ಬಳಕೆಯಲ್ಲಿಲ್ಲದ ವಿದ್ಯುತ್‌ನ್ನು ಕಡಿತಗೊಳಿಸುವಂತೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿವಶಂಕರ್‌ ಪಿಡಿಒಗಳಿಗೆ ಸೂಚನೆ ನೀಡಿದರು.

Advertisement

ಮೈಸೂರು ಜಿಲ್ಲೆ ಬರಪೀಡಿತ ಜಿಲ್ಲೆ ಎಂದು ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಕುರಿತು ಎಚ್‌.ಡಿ.ಕೋಟೆ ಪಟ್ಟಣದ ತಾಪಂ ಸಭಾಂಗಣದಲ್ಲಿ ಆಯೋಜಿಸಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತಾಡಿದ ಅವರು, ತಾಲೂಕಿನಲ್ಲಿ ಕುಡಿಯುವ ನೀರಿಗಾಗಿ ಪರಿತಪಿಸುತ್ತಿರುವ ಗ್ರಾಮಗಳಿಗೆ ಸರ್ಕಾರ ಸಮಸ್ಯೆ ಪರಿಹಾರಕ್ಕೆ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಈ ಯೋಜನೆಗಳನ್ನು ಉಪಯೋಗ ಪಡೆದುಕೊಂಡು ಆಯಾ ಗ್ರಾಪಂ ಪಿಡಿಒಗಳು ನೀರಿನ ಸಮಸ್ಯೆ ಪರಿಹಾರಕ್ಕೆ ಕ್ರಮವಹಿಸುವಂತೆ ಸೂಚನೆ ನೀಡಿದರು.

ಬರಗಾಲದ ಹಿನ್ನೆಲೆಯಲ್ಲಿ ಅಂತರ್ಜಲದ ನೀರಿನ ಮಟ್ಟ ಕುಸಿದಿದ್ದು, ಹಿಂದೆ ಕಾರ್ಯನಿರ್ವಹಿಸುತ್ತಿದ್ದ ಬೋರ್‌ವೆಲ್‌ಗ‌ಳಲ್ಲಿ ನೀರಿಲ್ಲದೇ ಉಪಯೋಗಕ್ಕೆ ಬಾರದಂತಿವೆಯಾದರೂ ವಿದ್ಯುತ್‌ ಸಂಪರ್ಕ ಕಡಿತಗೊಳಿಸಿಲ್ಲ. ಇದರಿಂದ ವಿನಾಃ ಕಾರಣ ವಿದ್ಯುತ್‌ ಬಿಲ್‌ ಪಾವತಿಸಬೇಕಾಗಿರುವುದರಿಂದ ಕೂಡಲೆ ಅಂತಹ ಬೋರ್‌ವೆಲ್‌ಗ‌ಳ ಸಂಪರ್ಕ ಕಡಿತಗೊಳಿಸುವಂತೆ ಸೂಚನೆ ನೀಡಿದರು.

ತಾಲೂಕಿನಲ್ಲಿ ಯಾವುದೇ ಅನುಮತಿ ಪಡೆಯದೇ ಪಿಡಿಒಗಳು ಬೋರ್‌ ಕೊರೆಸಲು ಮುಂದಾಗದೆ ನೀರಿನ ಸಮಸ್ಯೆ ಇರುವ ವಸ್ತುಸ್ಥಿತಿ ಹಾಗೂ ಹೊಸದಾಗಿ ಕೊರೆಸುವ ಬೋರ್‌ವೆಲ್‌ಗ‌ಳ ಸಮಗ್ರ ದಾಖಲಾತಿ ತಾಲೂಕು ಕೇಂದ್ರ ಸ್ಥಾನದ ಕಂಟ್ರೋಲ್‌ ರೂಂನಲ್ಲಿ ದಾಖಲಿಸಬೇಕು.

ಕಂಟ್ರೋಲ್‌ ರೂಂನಲ್ಲಿ ದೂರು ದಾಖಲಾಗದೆ ಯಾವುದೇ ಬೋರ್‌ ಕೊರೆಸುವುದು ಟ್ಯಾಂಕರ್‌ಗಳಲ್ಲಿ ನೀರು ಸರಬರಾಜು ಮಾಡಬೇಕು. ಒಟ್ಟಾರೆ ಇನ್ನು 2 ತಿಂಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಲಿದ್ದು, ಯಾವುದೇ ಗ್ರಾಮದಲ್ಲಿ ಜನ ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ತಲೆದೊರದಂತೆ ಎಚ್ಚರವಹಿಸುವಂತೆ ಕಟ್ಟು ನಿಟ್ಟಿನ ಸೂಚನೆ ನೀಡಿದರು.

Advertisement

ಬೋರ್‌ವೆಲ್‌ ಸೀಜ್‌ ಮಾಡಿ: ತಾಲೂಕಿನ ಕ್ಯಾಮತನಹಳ್ಳಿ ಗ್ರಾಪಂ ವ್ಯಾಪ್ತಿಯ ಗ್ರಾಮವೊಂದರಲ್ಲಿದ್ದ ಬೋರ್‌ವೆಲ್‌ ನೀರು ಬತ್ತಿ ಹೋಗಿದ್ದು, ಜನರ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಹೊಸದಾಗಿ ಬೋರ್‌ ಕೊರೆಸಲು ಗ್ರಾಮದ ರೈತರೊಬ್ಬರು ತಡೆಯೊಡ್ಡುತ್ತಿರುವುದಾಗಿ ಪಿಡಿಒ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿಇಒ, ಕುಡಿಯುವ ನೀರಿಗೆ ತಡೆಯೊಡ್ಡುವ ರೈತರ ಬೋರ್‌ವೆಲ್‌ ಸೀಜ್‌ ಮಾಡಿ ಅದೇ ಬೋರ್‌ವೆಲ್‌ನಿಂದ ಕುಡಿಯುವ ನೀರಿನ ಸಂಪರ್ಕ ನೀಡುವಂತೆ ಸ್ಥಳದಲ್ಲಿಯೇ ಇದ್ದ ತಹಶೀಲ್ದಾರ್‌ಗೆ ಸೂಚನೆ ನೀಡಿದರು.

ಉಪವಿಭಾಗಾಧಿಕಾರಿ ಡಾ.ಸೌಜನ್ಯಾ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಜಿಪಂ ಉಪಕಾರ್ಯದರ್ಶಿ ಕುಮಾರಸ್ವಾಮಿ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಸೋಮಸುಂದರ್‌, ಗ್ರಾಮೀಣ ಕುಡಿಯುವ ನೀರು ವ್ಯವಸ್ಥಾಪಕ ಮಂಜುನಾಥ್‌, ತಹಶೀಲ್ದಾರ್‌ ಎಂ.ನಂಜುಂಡಯ್ಯ, ತಾಪಂ ಇಒ ಶ್ರೀಕಂಠರಾಜೇ ಅರಸ್‌ ಸೇರಿದಂತೆ ತಾಲೂಕು ಅಧಿಕಾರಿಗಳು ಪಿಡಿಒಗಳು ಸಭೆಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next