ಬೆಂಗಳೂರು: ಕನ್ನಡ ಪುಸ್ತಕ ಪ್ರಾಧಿಕಾರ ವತಿಯಿಂದ ಫೆ.8 ರಿಂದ 12ರ ವರೆಗೆ ನಗರದಲ್ಲಿ ಕನ್ನಡ ಪುಸ್ತಕಗಳ ರಿಯಾಯ್ತಿ ಮಾರಾಟ ಮೇಳವನ್ನು ಆಯೋಜಿಸಲಾಗಿದ್ದು, ಶೇ.10ರ ರಿಯಾಯ್ತಿ ದರದಲ್ಲಿ ಮಾರಾಟ ನಡೆಯಲಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷೆ ಡಾ.ವಸುಂಧರಾ ಭೂಪತಿ, ಫೆ.8 ರಂದು ಬೆಳಗ್ಗೆ 10 ಗಂಟೆಗೆ ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿ ನಡೆಯಲಿರುವ ಕಾರ್ಯಕ್ರಮವನ್ನು ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಚಂದ್ರಶೇಖರ ಕಂಬಾರ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಕೆ.ಎಂ.ಜಾನಕಿ ಸೇರಿದಂತೆ ಮತ್ತಿತರರು ಉಪಸ್ಥಿತರಿರುವರು ಎಂದು ತಿಳಿಸಿದರು.
ಸಾಹಿತಿಗಳೊಂದಿಗೆ ಸೆಲ್ಪಿ: ಹಲವು ವರ್ಷಗಳ ನಂತರ ಪುಸ್ತಕ ಮಾರಾಟ ಮೇಳ ನಡೆಯುತ್ತಿದ್ದು, ಓದುಗರನ್ನು ಸೆಳೆಯುವ ಹಿನ್ನೆಲೆಯಲ್ಲಿ ಸಾಹಿತಿಗಳೊಂದಿಗೆ ಸೆಲ್ಪಿ ಮತ್ತು ಪುಸ್ತಕಕ್ಕೆ ಸಹಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಫೆ.8 ರಂದು ಸಂಜೆ 5 ಗಂಟೆಗೆ ಸಾಹಿತಿಗಳಾದ ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ, ಡಾ.ಸಿದ್ದಲಿಂಗಯ್ಯ, ಪ್ರೊ.ಚಿದಾನಂದ ಮೂರ್ತಿ ಭಾಗಹಿಸಲಿದ್ದಾರೆ. ಮೇಳ ಮುಗಿಯುವ ವರೆಗೂ ಹಲವು ಸಾಹಿತಿಗಳು ಭಾಗವಹಿಸಲಿದ್ದಾರೆ ಎಂದರು.
ಸಾಂಸ್ಕೃತಿಕ ಕಾರ್ಯಕ್ರಮ: ಮೇಳದ ಹಿನ್ನೆಲೆಯಲ್ಲಿ ವಿವಿಧ ಅಕಾಡೆಮಿಗಳು ಪ್ರತಿ ದಿನ ಸಂಜೆ ಹಲವು ಕಾರ್ಯಕ್ರಮಗಳನ್ನು ಆಯೋಜಿಸಿವೆ. ಫೆ.8 ರಂದು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯು, ಪದ್ಮಜ ಜಯರಾಮ್ ಮತ್ತು ತಂಡದವರಿಂದ ಭರತ ನಾಟ್ಯವನ್ನು ಹಮ್ಮಿಕೊಂಡಿದೆ. ಫೆ.9 ರಂದು ಕರ್ನಾಟಕ ನಾಟಕ ಅಕಾಡೆಮಿ ರಂಗಗೀತೆಗಳ ಗಾಯನ ಸ್ಪರ್ಧೆಯನ್ನು ಮತ್ತು ಫೆ.10 ರಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಗಾನ ಸೌರಭ ಯಕ್ಷಗಾನ ಶಾಲೆ ವತಿಯಿಂದ “ಸುಧನ್ವ ಕಾಳಗ’ ಯಕ್ಷಗಾನವನ್ನು ಆಯೋಜಿಸಿದೆ ಎಂದು ತಿಳಿಸಿದರು.
ಶಾಲಾ ಮಕ್ಕಳಿಗೆ ಉಚಿತ ಪುಸ್ತಕ: ಪುಸ್ತಕ ಪ್ರಾಧಿಕಾರ 60 ಮಳಿಗೆಗಳಿಗೆ ಅವಕಾಶ ನೀಡಿದ್ದು, ಮೇಳಕ್ಕೆ ಭೇಟಿ ನೀಡುವ ಶಾಲಾಮಕ್ಕಳಿಗೆ ಒಂದೊಂದು ಪುಸ್ತಕ ಉಚಿತ ದೊರೆಯಲಿದೆ. ಶಾಲಾ ಮಕ್ಕಳು ತಮ್ಮ ಶಾಲೆಯ ಸ್ವ ವಿವರವುಳ್ಳ ಭಾವಚಿತ್ರ ತೋರಿಸಿ ಪುಸ್ತಕವನ್ನು ಪಡೆದುಕೊಳ್ಳಬಹುದಾಗಿದೆ. ಸುಮಾರು 58 ಮಂದಿ ಪ್ರಕಾಶಕರು ಇದರಲ್ಲಿ ಭಾಗವಹಿಸಲಿದ್ದು, ಮಳಿಗೆಯಲ್ಲಿ ಎಲ್ಲಾ ಅಕಾಡೆಮಿಯ ಪುಸ್ತಕಗಳು ಮಾರಾಟಕ್ಕೆ ದೊರೆಯಲಿವೆ. ಮಾರಾಟ ಮೇಳದ ಬಗ್ಗೆ ಫೇಸ್‌ಬುಕ್‌ನಲ್ಲಿ ಶೇರ್ ಮಾಡಿದವರಿಗೂ ರಿಯಾಯ್ತಿ ದರದಲ್ಲಿ ಪುಸ್ತಕ ದೊರೆಯಲಿದೆ.