Advertisement

ಕನ್ನಡದಲ್ಲಿ ಬರೆದ ಚೆಕ್‌ ನಗದೀಕರಣಕ್ಕೆ ನಿರಾಕರಣೆ

06:00 AM Nov 02, 2018 | |

ಸಾಗರ: ಕನ್ನಡ ರಾಜ್ಯೋತ್ಸವ ಸಂಭ್ರಮದಲ್ಲಿರುವಾಗಲೇ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಕನ್ನಡಿಗರಿಗೆ ಶಾಕ್‌ ನೀಡಿದೆ. ಕನ್ನಡದಲ್ಲಿ ಬರೆದ ಚೆಕ್‌ಗಳನ್ನು ನಗದೀಕರಿಸಲು ನಿರಾಕರಿಸಿದೆ. ಶಿವಮೊಗ್ಗ ಜಿಲ್ಲೆ ಸಾಗರದ ವರದಾ ರಸ್ತೆಯಲ್ಲಿರುವ ಬ್ಯಾಂಕ್‌ ಶಾಖೆಯಲ್ಲಿ ಈ ವಿದ್ಯಮಾನ ನಡೆದಿದ್ದು, ಚೆಕ್‌ನಲ್ಲಿ ಹಣ ಸ್ವೀಕರಿಸುವವರ ಹೆಸರು ಹಾಗೂ ಮೊತ್ತವನ್ನು ಕನ್ನಡದಲ್ಲಿ ಬರೆದಿರುವುದನ್ನೇ ಕಾರಣ ನೀಡಿ ಒಂದು ಲಕ್ಷ ರೂ. ಮೌಲ್ಯದ ಚೆಕ್‌ ನಗದೀಕರಿಸಲು ನಿರಾಕರಿಸುತ್ತಿದೆ. 

Advertisement

ನಗರದ ಎಪಿಎಂಸಿ ಯಾರ್ಡ್‌ನಲ್ಲಿರುವ ಶ್ರೀ ಸಿದ್ಧಿವಿನಾಯಕ ಅಡಕೆ ಸ್ಟೋರ್ಸ್‌, ತನ್ನಲ್ಲಿ ವ್ಯವಹರಿಸುವ ಅಡಕೆ ಬೆಳೆಗಾರರಿಗೆ ಚೆಕ್‌ ಮೂಲಕವೇ ಹಣ ಪಾವತಿಸುತ್ತದೆ. ಅಡಕೆ ವಹಿವಾಟಿನ ಸಂಪೂರ್ಣ ವಿವರಗಳನ್ನೂ ಕನ್ನಡದಲ್ಲಿಯೇ ನಮೂದಿಸುವ ಪರಿಪಾಠ ಈ ಸಂಸ್ಥೆಯಲ್ಲಿದೆ. ಹೀಗಾಗಿ ಬೆಳೆಗಾರರಿಗೆ ನೀಡುವ ಚೆಕ್‌ನಲ್ಲಿಯೂ ಹೆಸರು ಹಾಗೂ ನಗದಿನ ವಿವರವನ್ನು ಕನ್ನಡದಲ್ಲಿಯೇ ಬರೆದು ನೀಡಲಾಗುತ್ತಿದೆ. ಸೆ.9ರಂದು ಈ ಸಂಸ್ಥೆ ಬೆಳೆಗಾರರೊಬ್ಬರಿಗೆ ಒಂದು ಲಕ್ಷ ರೂ. ಮೌಲ್ಯದ ಚೆಕ್‌ ನೀಡಿದೆ. ಈ ಚೆಕ್‌ ಸಾಗರ ತಾಲೂಕಿನ ನಿಟ್ಟೂರಿನಲ್ಲಿರುವ ಕೆನರಾ ಬ್ಯಾಂಕ್‌ ಶಾಖೆ ಮೂಲಕ ನಗದೀಕರಣಕ್ಕೆ ಸಲ್ಲಿಕೆಯಾಗಿದೆ. ಆದರೆ ಎಸ್‌ಬಿಐ ಇದನ್ನು ನಗದೀಕರಿಸಲು ನಿರಾಕರಿಸಿದೆ. ಅಡಕೆ ಸ್ಟೋರ್ಸ್‌ ಮಾಲಿಕರು ಈ ಸಂಬಂಧ ಸ್ಥಳೀಯ ಶಾಖೆಯ ಮೂಲಕ ಸಂಪರ್ಕಿಸಿದಾಗ ಇನ್ನೊಮ್ಮೆ ಅದನ್ನು ಸಲ್ಲಿಸಲು  ಸೂಚಿಸಲಾಗಿದೆ. ಸೆ.18ರಂದು ಮತ್ತೂಮ್ಮೆ ಚೆಕ್‌ ಸಲ್ಲಿಕೆಯಾದರೂ ಸೆ.21ರಂದು ಪುನ: ತಿರಸ್ಕರಿಸಲ್ಪಟ್ಟಿದೆ. ನಂತರ ಈ ಕುರಿತು ಪತ್ರ ಬರೆದಾಗ “ಕನ್ನಡದಲ್ಲಿ ಚೆಕ್‌ ಬರೆದಿರುವುದರಿಂದ ಅದನ್ನು ಮಾನ್ಯ ಮಾಡಲಾಗದು’ ಎಂದು ಅ.5ರಂದು ಎಸ್‌ಬಿಐ ಪತ್ರದ ಮೂಲಕ ಉತ್ತರಿಸಿದೆ.

“ನಮ್ಮ ಗ್ರಾಹಕರ ಹಿತರಕ್ಷಣೆಯನ್ನು ಗಮನದಲ್ಲಿಟ್ಟುಕೊಂಡು ಒಂದು ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತದ ಚೆಕ್‌ಗೆ ನಮ್ಮ ಸೆಂಟ್ರಲೈಸ್ಡ್ ಕ್ಲಿಯರಿಂಗ್‌ ಪ್ರೊಸೆಸಿಂಗ್‌ ಸೆಂಟರ್‌ (ಸಿಸಿಪಿಸಿ)ನಿಂದ ಕರೆ ಮಾಡಲಾಗುತ್ತದೆ. ಈ ಚೆಕ್‌ ಸಂಬಂಧವೂ ನಾವು ಕರೆ ಮಾಡಿದಾಗ ಮಾಹಿತಿ ನೀಡಲು ಗ್ರಾಹಕರು ನಿರಾಕರಿಸಿದರು. ಚೆಕ್‌ ಕನ್ನಡದಲ್ಲಿರುವುದನ್ನು ಅರ್ಥ ಮಾಡಿಕೊಳ್ಳಲಾಗದ ಹಿನ್ನೆಲೆಯಲ್ಲಿ ನಗದೀಕರಣ ಮಾಡಲಾಗಿಲ್ಲ ಎಂದು ಸಿಸಿಪಿಸಿ ತಿಳಿಸಿದೆ’ ಎಂದು ಎಸ್‌ಬಿಐ ವರದಾ ಶಾಖೆಯ ಮ್ಯಾನೇಜರ್‌ ಪತ್ರದಲ್ಲಿ ಉಲ್ಲೇಖೀಸಿದ್ದಾರೆ.

ಚೆನ್ನೈ ಸಿಸಿಪಿಸಿಯಿಂದ ಎಂದು ಎರಡು ಕರೆಗಳು ಅಧಿಕೃತ ಸರ್ಕಾರಿ ರಜಾ ದಿನಗಳಲ್ಲಿ ಬಂದಿವೆ. ಆದರೆ, ಕರೆ ಮಾಡಿದವರು ಬ್ಯಾಂಕ್‌ ಖಾತೆಗೆ ಸಂಬಂ ಧಿಸಿದ ಯಾವುದೇ ಮಾಹಿತಿ ಕೇಳಿ ಕರೆ ಮಾಡುತ್ತಿಲ್ಲ ಎಂದಿದ್ದರಿಂದ ವಂಚಕರು ಈ ಕರೆ ಮಾಡಿರಬಹುದು ಎಂಬ ಅನುಮಾನ ಮೂಡಿತ್ತು. ಈ ಹಿಂದೆ ನಾವು ಹತ್ತು ಲಕ್ಷ ರೂ.ಗೆ ಕೂಡ ನೂರಾರು ಚೆಕ್‌ ನೀಡಿದ್ದಿದೆ. ಆದರೆ ಅವುಗಳ ದೃಢೀಕರಣಕ್ಕಾಗಿ ಕರೆ ಬಂದಿರಲಿಲ್ಲ. ಹೀಗಾಗಿ ಒಂದು ಲಕ್ಷ ರೂ. ಚೆಕ್‌ ಸಂಬಂಧ ಬಂದ ಕರೆಯ ಬಗ್ಗೆ ನಂಬಿಕೆ ಬಂದಿಲ್ಲ. ಹೀಗಾಗಿ ಮಾಹಿತಿ ಕೊಟ್ಟಿಲ್ಲ ಎನ್ನುತ್ತಾರೆ ಅಡಕೆ ಸ್ಟೋರ್ಸ್‌ ಪಾಲುದಾರ ಮಾಧವ ಚಿಪ್ಪಳಿ.

ಇದು ಮೊದಲೇನಲ್ಲ!
ಸಿದ್ಧಿವಿನಾಯಕ ಅಡಕೆ ಸ್ಟೋರ್ಸ್‌ಗೆ ಇದು ಹೊಸ ಅನುಭವವೇನೂ ಅಲ್ಲ. ಸಂಸ್ಥೆ ಈ ವರ್ಷದ ಫೆಬ್ರವರಿಯಲ್ಲಿ ನೀಡಿದ ಎರಡು ಚೆಕ್‌ಗಳು ಕೂಡ ಕೆನರಾ ಬ್ಯಾಂಕ್‌ನ ಕಾರ್ಗಲ್‌ ಶಾಖೆಯಲ್ಲಿ ನಗದೀಕರಣಕ್ಕೆ ಸಲ್ಲಿಸಲ್ಪಟ್ಟು ಕನ್ನಡ ಭಾಷೆಯ ಹೊರತಾದ ಯಾವುದೇ
ನಿರ್ದಿಷ್ಟ ಕಾರಣವಿಲ್ಲದೆ ನಗದಿಗೆ ನಿರಾಕರಿಸಲ್ಪಟ್ಟಿತ್ತು. ಆ ಸಮಯದಲ್ಲಿ ನಡೆಸಿದ ಸಂವಹನದ ನಂತರ ಮತ್ತೆ ಸಲ್ಲಿಸಲ್ಪಟ್ಟ ಚೆಕ್‌ ನಗದಾಗಿತ್ತು ಮತ್ತು ಚೆಕ್‌ ತಿರಸ್ಕರಿಸಲ್ಪಟ್ಟ ಕಾರಣಕ್ಕೆ ಹಾಕಿದ ದಂಡ ಶುಲ್ಕವನ್ನು ಮರಳಿಸಲಾಗಿತ್ತು. ಅಷ್ಟೇ ಅಲ್ಲ, ಈ ರೀತಿ ಸಂಸ್ಥೆಯ ಗೌರವಕ್ಕೆ ಧಕ್ಕೆ ಉಂಟಾದ ಹಿನ್ನೆಲೆಯಲ್ಲಿ ಕೇಳಿದ ಮೂರು ರೂ.ಗಳ ಸಾಂಕೇತಿಕ ಪರಿಹಾರವನ್ನೂ ಬ್ಯಾಂಕ್‌ ಕೊಟ್ಟಿತ್ತು.

Advertisement

ಕನ್ನಡದಲ್ಲಿ ವ್ಯವಹರಿಸುವುದರಿಂದ ಯಾವುದೇ ಕಾರಣಕ್ಕೂ ಹಿಂದೆ ಸರಿಯುವುದಿಲ್ಲ. ನಮ್ಮ ಹಲವು ಇಂಗ್ಲಿಷ್‌ ತಿಳಿವಳಿಕೆ ಇಲ್ಲದ ಬೆಳೆಗಾರರಿಗೂ ನಮ್ಮ ಕ್ರಮ ಅನುಕೂಲ ವಾಗಿದೆ. ಮುಂದಿನ ದಿನಗಳಲ್ಲಿಯೂ ನಮ್ಮ ಚೆಕ್‌ಗಳು ಕನ್ನಡದಲ್ಲಿಯೇ ಇರಲಿವೆ.
● ಸಿ.ಜಿ. ಗುರುಮೂರ್ತಿ ಸಿದ್ಧಿವಿನಾಯಕ ಅಡಕೆ ಸ್ಟೋರ್ಸ್‌ ಸಂಸ್ಥೆ ಪಾಲುದಾರ

2011-12ರ ಆರ್‌ಬಿಐ ಸುತ್ತೋಲೆ ಪ್ರಕಾರ ಗ್ರಾಹಕ ಚೆಕ್‌ಗಳನ್ನು ಹಿಂದಿ, ಇಂಗ್ಲಿಷ್‌ ಅಥವಾ ಪ್ರಾದೇಶಿಕ ಭಾಷೆಯಲ್ಲಿ ಬರೆಯ ಬಹುದು ಎಂದು ಸ್ಪಷ್ಟಪಡಿಸಲಾಗಿದೆ. ಒಂದೊಮ್ಮೆ ಕನ್ನಡ ತಿಳಿಯದಿದ್ದರೆ ಚೆನ್ನೈ ಸಿಸಿಪಿಸಿ ಯವರು ಆ ಚೆಕ್‌ನ್ನು ಬೆಂಗಳೂರಿನ ಸಿಸಿಪಿಸಿಗೆ ವರ್ಗಾಯಿಸಬಹುದಿತ್ತು. ಈ ರೀತಿಯ ಭಾಷಾ ಗೊಂದಲವಾದಾಗ ಗ್ರಾಹಕರ ಸೇವೆಯಲ್ಲಿ ನ್ಯೂನತೆ ಎಸಗುವುದು ಸಮ್ಮತವಲ್ಲ.
● ಕೆ.ಎನ್‌.ವಿ. ಗಿರಿ, ಸಾಗರದ ಬಳಕೆದಾರರ ವೇದಿಕೆ ಕಾರ್ಯದರ್ಶಿ

ಚೆಕ್‌ ನೀಡಿರುವ ಕುರಿತು ದೃಢೀಕರಿಸಿಕೊಳ್ಳಲು ಮಾಡುವ ಕರೆಗಳಿಗೆ ಗ್ರಾಹಕರು ಪ್ರತಿಕ್ರಿಯಿಸಬೇಕು. ಡೆಬಿಟ್‌, ಕ್ರೆಡಿಟ್‌ ಕಾರ್ಡ್‌, ಒಟಿಪಿ ಅಥವಾ ಸಿವಿವಿ ನಂಬರ್‌ ಕುರಿತಾಗಲ್ಲದೆ ಚೆಕ್‌ ನಂ., ಚೆಕ್‌ ಫಲಾನುಭವಿ ಹೆಸರು ಕೇಳಿದಾಗ ಹೇಳಿದ್ದರೆ ಸಮಸ್ಯೆಯಾಗುತ್ತಿರಲಿಲ್ಲ. ಸಿಸಿಪಿಸಿಯ ಗೊಂದಲದ ಬಗ್ಗೆ ನಮಗೂ ಅರಿವಾಗಿದ್ದು ಈ ಸಂಬಂಧ ಹಿರಿಯ ಅಧಿ ಕಾರಿಗಳಿಗೆ ವರದಿ ಸಲ್ಲಿಸಲಾಗಿದೆ.
● ವಿಶ್ವನಾಥ ಕುಲಕರ್ಣಿ, ಬ್ಯಾಂಕ್‌ ವ್ಯವಸ್ಥಾಪಕರು, ಎಸ್‌ಬಿಐ ವರದಾ ರಸ್ತೆ ಶಾಖೆ, ಸಾಗರ.

ಮಾ.ವೆಂ.ಸ.ಪ್ರಸಾದ್‌

Advertisement

Udayavani is now on Telegram. Click here to join our channel and stay updated with the latest news.

Next