ನವದೆಹಲಿ: ಶಾಲಾ ಮಕ್ಕಳಲ್ಲಿ ದೇಶ ಪ್ರೇಮ, ದೇಶಭಕ್ತಿ, ಕಠಿಣ ಶಿಸ್ತು ಮತ್ತು ದೈಹಿಕ ಕ್ಷಮತೆ ಹೆಚ್ಚಿಸುವ ಸಲುವಾಗಿ ದೇಶದ ಎಲ್ಲಾ ಶಾಲೆಗಳಲ್ಲಿಯೂ ಸೈನಿಕ ಶಾಲೆಗಳ ಮಾದರಿ ಅನುಸರಿಸುವಂತೆ ಮಾನವ ಸಂಪನ್ಮೂಲ ಸಚಿವಾಲಯಕ್ಕೆ ಪ್ರಧಾನಿ ಕಾರ್ಯಾಲಯ ಸಲಹೆ ನೀಡಿದೆ.
ಮಂಗಳವಾರ ಪ್ರಧಾನಿ ಕಾರ್ಯಾಲಯದಲ್ಲಿ ನಡೆದ ಪ್ರಗತಿ ಪರಿಶೀಲನೆ ಸಭೆಯಲ್ಲಿ ಪಾಲ್ಗೊಂಡಿದ್ದ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆಯ ಅಧಿಕಾರಿಯೊಬ್ಬರು ಈ ಕುರಿತಂತೆ ಮಾಹಿತಿ ನೀಡಿದ್ದಾರೆ. ಈಗಾಗಲೇ ಸಚಿವ ಪ್ರಕಾಶ್ ಜಾವಡೇಕರ್ ಅವರು ಸೈನಿಕ ಶಾಲೆಗಳ ಮಾದರಿ ಕುರಿತಂತೆ ಅಧ್ಯಯನ ನಡೆಸುತ್ತಿದ್ದು, ಆರಂಭದಲ್ಲಿ ಜವಾಹರ್ ನವೋದಯ ವಿದ್ಯಾಲಯ, ಕೇಂದ್ರೀಯ ವಿದ್ಯಾಲಯ ಮತ್ತು ದೇಶಾದ್ಯಂತ 20 ಸಾವಿರ ಶಾಲೆಗಳನ್ನು ಒಳಗೊಂಡ ಕೇಂದ್ರ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್‌ಇ) ಅಧಿಕಾರಿಗಳ ಜತೆಗೆ ಚರ್ಚೆ ನಡೆಸಿದೆ ಎಂದು ಹೇಳಲಾಗಿದೆ.
ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಮಾಹಿತಿಯಂತೆ, ನವೋದಯ, ಕೇಂದ್ರೀಯ ವಿದ್ಯಾಲಯಗಳು ವಸತಿಯನ್ನೊಳಗೊಂಡ ಶಾಲೆಗಳಾಗಿದ್ದು, ಇಲ್ಲಿ ಸೈನಿಕ ಶಾಲೆಯ ಮಾದರಿ ಅನುಸರಿಸುವುದು ಸುಲಭ. ಅಲ್ಲದೆ ಈ ಶಾಲೆಗಳನ್ನು ನಡೆಸುತ್ತಿರುವುದು ಕೇಂದ್ರ ಸರ್ಕಾರವೇ ಆಗಿದೆ. ಇಲ್ಲಿಗೆ ಗ್ರಾಮೀಣ ಭಾಗದ ಪ್ರತಿಭಾವಂತ ಮಕ್ಕಳು ಪ್ರವೇಶ ಪರೀಕ್ಷೆ ಬರೆದು ಬರುತ್ತಾರೆ. ಇವರಿಗೆ ಉತ್ತಮವಾದ ಶಿಕ್ಷಣ ಕೊಡಬಹುದು ಎನ್ನುವುದು ಸರ್ಕಾರ ಲೆಕ್ಕಾಚಾರವಾಗಿದೆ.
ಸೈನಿಕ ಶಾಲೆಗಳನ್ನು 1961ರಲ್ಲಿ ಆಗಿನ ರಕ್ಷಣಾ ಸಚಿವ ವಿ.ಕೆ. ಕೃಷ್ಣ ಮೆನನ್ ಅವರು ಆರಂಭಿಸಿದರು. ಈ ಶಾಲೆಯ ಮುಖ್ಯ ಉದ್ದೇಶವೇ ಯುವಜನತೆಯನ್ನು ಸೇನೆಯತ್ತ ಆಕರ್ಷಿಸುವುದಾಗಿತ್ತು. ಇವು ವಸತಿ ಶಾಲೆಗಳಾಗಿದ್ದು, ಇಲ್ಲಿ ಪಠ್ಯದ ಜತೆಗೆ ಎನ್‌ಸಿಸಿ, ಕಠಿಣ ಸೈನಿಕ ತರಬೇತಿ, ಶಿಸ್ತುಬದ್ಧ ಜೀವನದ ಬಗ್ಗೆ ಹೇಳಿಕೊಡುವ ಮೂಲಕ ದೇಶಭಕ್ತಿಯ ಅಗತ್ಯತೆಯ ಬಗ್ಗೆ ಹೇಳಿಕೊಡಲಾಗುತ್ತಿದೆ. ಸದ್ಯ ದೇಶಾದ್ಯಂತ 25 ಸೈನಿಕ ಶಾಲೆಗಳಿದ್ದು, ಇವುಗಳನ್ನು ರಕ್ಷಣಾ ಇಲಾಖೆಯ ಅಡಿಯಲ್ಲಿ ಬರುವ ಟ್ರಸ್ಟ್ ಮೂಲಕ ನಡೆಸಲಾಗುತ್ತಿದೆ.
ಈ ಶಾಲೆಯ ಗುಣಮಟ್ಟದ ಶಿಕ್ಷಣದ ಬಗ್ಗೆ ಆಕರ್ಷಿತವಾಗಿದ್ದ ಪ್ರಧಾನಿ ಕಾರ್ಯಾಲಯ, ಕಳೆದ ವರ್ಷದ ಅಕ್ಟೋಬರ್‌ನಲ್ಲಿ ನಡೆದ ಸಿಬಿಎಸ್‌ಇಯ 64ನೇ ಸಭೆಯಲ್ಲೇ ಪ್ರಸ್ತಾಪಿಸಿತ್ತು. ಏಕೆಂದರೆ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಶಿಕ್ಷಣ ವಿಚಾರದಲ್ಲಿ ನೀತಿ ನಿಯಮ ರೂಪಿಸುತ್ತಿರುವುದು ಸಿಬಿಎಸ್‌ಇ ಆಗಿದೆ. ಆಗ, ಮಾನವ ಸಂಪನ್ಮೂಲ ಇಲಾಖೆಯ ಸಹಾಯಕ ಸಚಿವ ಡಾ. ಮಹೇಂದ್ರ ನಾಥ್ ಪಾಂಡೆ ಅವರು ಮಕ್ಕಳಿಗೆ ಮಿಲಿಟರಿ ಶಿಕ್ಷಣ ನೀಡುವ ಕುರಿತಂತೆ ಪ್ರಸ್ತಾಪಿಸಿದ್ದರು. ಈ ಶಿಕ್ಷಣವು ಮಕ್ಕಳಲ್ಲಿ ದೇಶಭಕ್ತಿ ಮೂಡಿಸುತ್ತದೆ ಎಂದು ಹೇಳಿದ್ದರು.