Advertisement

Uv Fusion: ನಿತ್ಯ ಜೀವನದಲ್ಲಿ ಶಿಸ್ತು, ಸಂಯಮದ ಅಗತ್ಯ

04:07 PM Oct 02, 2023 | Team Udayavani |

ಜೀವನವೆನ್ನುವ ಯಾನವನ್ನು ಯಶಸ್ವಿಯಾಗಿ ಮುನ್ನಡೆಸಬೇಕಾದರೆ ಶಿಸ್ತು, ಸಂಯಮ ಅತೀ ಅಗತ್ಯ. ಬದುಕೆನ್ನುವುದು ಒಂದು ಸುಂದರ ಹೂದೋಟವಿದ್ದಂತೆ. ಹೂದೋಟದಲ್ಲಿರುವ ಕಳೆಗಳನ್ನು ಕಿತ್ತು ಹೇಗೆ ಸ್ವತ್ಛಗೊಳಿಸುತ್ತೇವೆಯೋ ಅದೇ ರೀತಿ ನಮ್ಮ ಬದುಕಲ್ಲಿ ಬರುವ ತೊಂದರೆ ತಾಪತ್ರಯಗಳನ್ನು ಬುದ್ದಿವಂತಿಕೆಯಿಂದ ನಿವಾರಿಸಿಕೊಂಡು ಮುನ್ನಡೆಯಬೇಕು.

Advertisement

ದಾರಿಯಲ್ಲಿ ಸಿಗುವ ಕಲ್ಲುಮುಳ್ಳುಗಳನ್ನು ಹೇಗೆ ಬದಿಗೆ ಸರಿಸಿ ಅಥವಾ ದಾಟಿ ಮುಂದೆ ಸಾಗುತ್ತೇವೆಯೋ ಅದೇ ರೀತಿ ಜೀವನದಲ್ಲಿ ಎದುರಾಗುವ ಕಷ್ಟ ನೋವುಗಳೆಂಬ ಕಲ್ಲುಮುಳ್ಳುಗಳನ್ನು ದಾಟಿ ಸಾಗಬೇಕು. ಕಷ್ಟ ಬಂದಾಗ ಕುಗ್ಗದೆ ಸುಖ ಬಂತೆಂದು ಹಿಗ್ಗದೇ ಎರಡನ್ನು ತಾಳ್ಮೆಯಿಂದ ಸರಿಸಮಾನವಾಗಿ ತೂಗಿಸಿಕೊಂಡು ಹೋಗುವ ಕಲೆಯನ್ನು ಕರಗತ ಮಾಡಿಕೊಂಡಾಗ ನಮ್ಮ ಜೀವನ ಸಸೂತ್ರವಾಗಿ  ಸಾಗುತ್ತದೆ.

ತಾಳಿದವನು ಬಾಳಿಯಾನು ಎನ್ನುವ ತಿಳಿದವರ  ನುಡಿಮುತ್ತುಗಳು ನಿಜವಾಗಿಯೂ ಸತ್ಯ. ಜೀವನದಲ್ಲಿ ಶಿಸ್ತು, ತಾಳ್ಮೆ ಅಥವಾ ಸಂಯಮ ಎನ್ನುವ ಶಕ್ತಿ ನಮ್ಮ ಜತೆಗಿದ್ದರೆ ಜಗತ್ತನ್ನೇ ಗೆಲ್ಲಬಹುದೆನ್ನುವುದು. ಹಿರಿಯರ ಅನುಭವದ ಮಾತುಗಳು. ಜೀವನವೆನ್ನುವ ಮೂರಕ್ಷರದ ಪದದಲ್ಲಿ ಎಷ್ಟೋ ಕಷ್ಟಸುಖ, ನೋವುನಲಿವು, ಸುಖದುಃಖ ಅಡಗಿದೆ. ಬದುಕಿನಲ್ಲಿ ಎಲ್ಲರೂ ಒಂದೇ ರೀತಿಯ ಬದುಕನ್ನು ನಡೆಸಲು ಸಾಧ್ಯವಿರುವುದಿಲ್ಲ. ಬದುಕನ್ನು ಬಂದಂತೆ ಸ್ವೀಕರಿಸಿ ಶಿಸ್ತು, ಸಂಯಮದಿಂದ ಮುನ್ನುಗ್ಗಿದಾಗ ನಿಜವಾಗಿಯೂ ಗೆಲುವು ನಮ್ಮದೇ.

ಬಂದದ್ದೆಲ್ಲಾ ಬರಲಿ ಭಗವಂತನ ದಯೆವೊಂದಿರಲಿ ಎನ್ನುವಂತೆ ಎಲ್ಲವನ್ನು ಎದುರಿಸಿ ಸೆಟೆದು ನಿಲ್ಲುವುದಕ್ಕೆ ಸಂಯಮ ಅತೀ ಅಗತ್ಯ.ನಮ್ಮ ಬಾಳಿನಲ್ಲಿ ಶಿಸ್ತನ್ನು ಅಳವಡಿಸಿಕೊಂಡು ಸಂಯಮದಿಂದಿದ್ದರೆ ಬಾಳು ಸುಂದರ ಪಯಣ. ಚಿಕ್ಕಪುಟ್ಟ ಸಮಸ್ಯೆಗಳು ಎದುರಾದಾಗ ದೊಡ್ಡದು ಮಾಡದೇ ತಾಳ್ಮೆಯಿಂದ ಅವಲೋಕಿಸಿದರೆ ಅದಕ್ಕೊಂದು ಪರಿಹಾರ ಖಂಡಿತಾವಾಗಿಯೂ ದೊರೆಯುತ್ತದೆ.

ಇಲ್ಲವಾದರೆ ಚಿಕ್ಕ ಸಮಸ್ಯೆಗಳು ದೊಡ್ಡದಾಗಿ ಪರಿಣಮಿಸುವ ಸಾಧ್ಯತೆಯೇ ಹೆಚ್ಚು. ಹಿರಿಯರಲ್ಲಿರುವ ತಾಳ್ಮೆ, ಶಿಸ್ತು ಇವತ್ತಿನ ಯುವಜನಾಂಗದಲ್ಲಿ ಮರೆಯಾಗುತ್ತಿದೆ. ವೇಗದ ಜೀವನದಲ್ಲಿ ಎಲ್ಲವೂ ತ್ವರಿತವಾಗಿಯೇ ಆಗಬೇಕೆನ್ನುವ ಹಂಬಲ ಅತಿಯಾಗುತ್ತಿದೆ. ಅವಸರವೇ ಅಪಘಾತಕ್ಕೆ ಕಾರಣವೆನ್ನುವಂತೆ ಶಿಸ್ತುಬದ್ಧವಿಲ್ಲದ ಜೀವನವು ಅದೇ ದಿಕ್ಕಿನತ್ತ ಸಾಗುತ್ತದೆ.

Advertisement

ಶಿಸ್ತು, ತಾಳ್ಮೆ, ಸಂಯಮಗಳನ್ನಿಟ್ಟುಕೊಂಡು ಜೀವಿಸಿದರೆ ಮನುಷ್ಯ ಸದಾ ನೆಮ್ಮದಿ, ಸುಖ, ಸಂತೋಷದಿಂದಿರಬಹುದು ಎನ್ನುವುದು ನನ್ನ ಅನಿಸಿಕೆ.  ತಾಳ್ಮೆ, ಸಂಯಮ, ಶಿಸ್ತು ಗಳನ್ನು ನಾವು ಅಳವಡಿಸಿಕೊಂಡು ಇವುಗಳ ಬಗ್ಗೆ ಮಕ್ಕಳಿಗೆ  ತಿಳಿಹೇಳಿ ಒಳ್ಳೆಯ ಮಾರ್ಗದಲ್ಲಿ ನಡೆಯುವಂತೆ ದಾರಿದೀಪವಾಗೋಣ.

-ಸರಿತಾ ಅಂಬರೀಷ್‌ ಭಂಡಾರಿ

ಕುತ್ಪಾಡಿ

Advertisement

Udayavani is now on Telegram. Click here to join our channel and stay updated with the latest news.

Next