ರಾಯಚೂರು: ಜಿಲ್ಲೆಯಲ್ಲಿನ ಕೆರೆಗಳನ್ನು ಒತ್ತುವರಿ ಮಾಡಿಕೊಂಡಿರುವವರ ವಿರುದ್ಧ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ ಸೂಚಿಸಿದರು.
ನಗರದ ಜಿಪಂ ಸಭಾಂಗಣದಲ್ಲಿ ಸೋಮವಾರ ನಡೆದ ಆರನೇ ಸಣ್ಣ ನೀರಾವರಿ ಗಣತಿ ಮತ್ತು ನೀರಿನಾಸರೆಗಳ ಗಣತಿ ಕುರಿತ ಸಭೆಯಲ್ಲಿ ಅವರು ಮಾತನಾಡಿದರು. ಜಿಲ್ಲೆಯ ಎಲ್ಲ ಕೆರೆಗಳ ಮಾಹಿತಿ ಪಡೆದು ಎಷ್ಟು ಒತ್ತುವರಿ ಮಾಡಲಾಗಿದೆ ಎಂಬುದನ್ನು ಗುರುತಿಸಬೇಕು. ಒತ್ತುವರಿ ತೆರವಿಗೆ ಬೇಕಾದ ಕ್ರಮ ಕೈಗೊಂಡು ಹದ್ದುಬಸ್ತು ಮಾಡಬೇಕು. ನಗರಾಭಿವೃದ್ಧಿ ಪ್ರಾಧಿಕಾರ, ನಗರಾಭಿವೃದ್ಧಿ ಕೋಶ, ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಜಿಲ್ಲೆಯಲ್ಲಿರುವ ಕೆರೆಗಳನ್ನು ಗುರುತಿಸಿ ಸಮೀಕ್ಷೆ ಮಾಡಿ ವರದಿ ನೀಡಬೇಕು ಎಂದು ಸೂಚನೆ ನೀಡಿದರು.
ಕೆರೆಗಳು ಒತ್ತುವರಿಯಾಗದಂತೆ ತಡೆಗಟ್ಟಲು ಅವುಗಳ ಸುತ್ತಲೂ ಬೇಲಿ ಹಾಕಬೇಕು. ಗಿಡಗಳನ್ನು ಬೆಳೆಸಬೇಕು. ಜಿಲ್ಲೆಯಲ್ಲಿ 300 ಅಧಿಕ ಕೆರೆಗಳ ಪೈಕಿ ಈವರೆಗೆ ಅಭಿವೃದ್ಧಿಪಡಿಸಿದ ಕೆರೆಗಳ ಮಾಹಿತಿಯನ್ನು ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳಿಂದ ಪಡೆದರು. ಈ ವೇಳೆ ಸಮರ್ಪಕ ಉತ್ತರ ನೀಡದ ಕಾರ್ಯನಿರ್ವಾಹಕ ಅಭಿಯಂತರ ವಿನೋದಕುಮಾರ ಗುಪ್ತಾ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಸಭೆಗೆ ಹಾಜರಾಗುವಾಗ ಇಲಾಖೆ ಬಗ್ಗೆ ಸಂಪೂರ್ಣ ಮಾಹಿತಿ ಇರಬೇಕು ಎಂಬ ತಿಳಿವಳಿಕೆ ಬೇಡವೆ. ಹಾರಿಕೆ ಉತ್ತರ ನೀಡಿದರೆ ಕಠಿಣ ಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಸಣ್ಣ ನೀರಾವರಿ, ಜಿಪಂ, ತಾಪಂ, ಗ್ರಾಮೀಣಾಭಿವೃದ್ಧಿ ಇಂಜಿನಿಯರಿಂಗ್ ವಿಭಾಗದ ವ್ಯಾಪ್ತಿಯಲ್ಲಿ ಬರುವ ಕೆರೆಗಳನ್ನು ಗುರುತಿಸಿ ಅಭಿವೃದ್ಧಿ ಪಡಿಸಬೇಕು. ಕಟ್ಲಟ್ಮೂರು, ಮರ್ಚೆಡ್ ಗ್ರಾಮಗಳಲ್ಲಿ ಬಿಜೆಎಸ್ ಸಹಯೋಗದಲ್ಲಿ ಕೆರೆಗಳ ಹೊಳು ತೆಗೆದು ಅಭಿವೃದ್ಧಿ ಪಡಿಸಲಾಗಿದೆ. ಅಂತರ್ಜಲ ವೃದ್ಧಿಸಲು ಕೆರೆಗಳನ್ನು ಸಂರಕ್ಷಿಸುವುದು ಅವಶ್ಯಕ. ನಗರದ ಮಾವಿನಕೆರೆ, ಮನ್ಸಲಾಪುರ, ಮರ್ಚೆಡ್ ಕೆರೆಗಳಲ್ಲಿ ಚರಂಡಿ ನೀರು ಸಂಗ್ರಹವಾಗದಂತೆ ನಿಗಾವಹಿಸುವಂತೆ ಸೂಚಿಸಿದರು. ಜಿಪಂ ಸಿಇಒ ಲಕ್ಷ್ಮೀಕಾಂತ ರೆಡ್ಡಿ, ಎಡಿಸಿ ದುರುಗೇಶ, ಸಣ್ಣ ನೀರಾವರಿ ಇಲಾಖೆ ತಾಂತ್ರಿಕ ಸಹಾಯಕ ಮಾರುತಿ ಇದ್ದರು.