Advertisement

ಬೇಜವಾಬ್ದಾರಿ ತೋರಿದರೆ ಶಿಸ್ತು ಕ್ರಮ

03:46 PM Jun 02, 2018 | |

ಕಕ್ಕೇರಾ: ಅಭಿವೃದ್ಧಿಯಲ್ಲಿ ಬೇಜವಾಬ್ದಾರಿ ತೋರಿದರೆ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಶಾಸಕ ನರಸಿಂಹ ನಾಯಕ (ರಾಜುಗೌಡ) ಅಧಿಕಾರಿಗಳಿಗೆ ಎಚ್ಚರಿಸಿದರು.

Advertisement

ಪಟ್ಟಣದ ಪುರಸಭೆ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ ತುರ್ತು ಸಭೆಯನ್ನುದ್ದೇಶಿಸಿ ಅವರು ಮಾತನಾಡಿ, ಕೇವಲ ವೇತನಕ್ಕೆ ಸಿಮೀತವಾಗದೆ ಜನಪರ ಸಮಸ್ಯೆಗಳಿಗೆ ಸ್ಪಂದಿಸಿ ಅಭಿವೃದ್ಧಿಪರ ಕಾರ್ಯನಿರ್ವಹಿಸಬೇಕು ಎಂದು ಸೂಚಿಸಿದರು.

ಕುಡಿಯುವ ನೀರಿನ ಸಮಸ್ಯೆ ಸೇರಿದಂತೆ ಮೂಲಭೂತ ಸೌಕರ್ಯಗಳ ಒದಗಿಸುವ ನಿಟ್ಟಿನಲ್ಲಿ ಕರ್ತವ್ಯ ನಿಭಾಯಿಸಬೇಕು. ಬಯಲು ಶೌಚಾಲಯ ಮುಕ್ತವಾಗಿಸಲು ಪ್ರತಿಯೊಂದು ಕುಟುಂಬಕ್ಕೆ ಕಡ್ಡಾಯವಾಗಿ ಶೌಚಾಲಯ ನಿರ್ಮಿಸಬೇಕಿದ್ದು, ನಿರೀಕ್ಷಿತ ಗುರಿ ತಲುಪಲು ಪ್ರತಿ ಫಲಾನುಭವಿಗ ವರದಿ ತಯಾರಿಸಿ ಕೊಟ್ಟರೆ (ಎನ್‌ಜಿಒ) ಮೂಲಕ ಶೌಚಾಲಯ ನಿರ್ಮಿಸಲಾಗುವುದು ಎಂದು ಅಧಿಕಾರಿಗಳಿಗೆ ತಿಳಿಸಿದರು.

ವೈಯಕ್ತಿಕ ಶೌಚಾಲಯ ನಿರ್ಮಾಣದ ನಂತರ ಸಮುದಾಯ ಶೌಚಾಲಯ ನಿರ್ಮಿಸಲಾಗುವುದು, ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿಸಲು ಈಗಾಗಲೇ ಸ್ಥಳಾವಕಾಶಕ್ಕಾಗಿ ಪ್ರಯತ್ನ ನಡೆಸಲಾಗುತ್ತಿದ್ದು, ಮುಂದಿನ ದಿನಮಾನಗಳಲ್ಲಿ ಈ ಬೇಡಿಕೆ ಈಡೇರಿಸುವುದಾಗಿ ಭರವಸೆ ನೀಡಿದರು. 

ರೈತರ ಹಿತದೃಷ್ಟಿಯಿಂದ ಈ ಭಾಗದ ಉಪ ಕಾಲುವೆಗಳ ದುರಸ್ತಿ ಹಾಗೂ ಪುನರುಶ್ಚೇತನ ಕಾಮಗಾರಿ ಹಾಗೂ ಬಾಕಿ ಉಳಿದ ಕಾಲುವೆ ಕಾಮಗಾರಿಗಳ ಕುರಿತು ಸಮಗ್ರ ಮಾಹಿತಿ ನೀಡುವುದರೊಂದಿಗೆ ಅವುಗಳ ವರದಿ ನೀಡಬೇಕು ಎಂದು ಕೆಬಿಜೆಎನ್ನೆಲ್‌ ಎಂಜನಿಯರ್‌ ಶೀಲಾರ್‌ ಅವರಿಗೆ ಸೂಚಿಸಿದರು.

Advertisement

ಪುರಸಭೆ ವ್ಯಾಪ್ತಿಯ ವಾರ್ಡ್‌ ಅಥವಾ ಪ್ರಮುಖ ದೊಡ್ಡಿಗಳಿಗೆ ಇಲ್ಲಿಯವರೆಗೆ ವಿದ್ಯುತ್‌ ಸಂಪರ್ಕವೇ ಹೊಂದಿಲ್ಲ. ವಿದ್ಯುತ್‌ ಸಂಪರ್ಕದಲ್ಲಿ ವಿಳಂಬ ನೀತಿ ಅನುಸರಿಸದೆ ಕೂಡಲೇ ವಿದ್ಯುತ್‌ ಸಂಪರ್ಕ ಕಲ್ಪಿಸಿ ಜನರಿಗೆ ಅನುಕೂಲ ಮಾಡಿಕೊಡಬೇಕು ಎಂದು ಜೆಸ್ಕಾಂ ಅಧಿಕಾರಿಗಳಿಗೆ ತಿಳಿಸಿದರು. 

ಸ್ಲಂ ನಿವಾಸಿಗರಿಗೆ ಪ್ರತೇಕವಾಗಿ ಆಶ್ರಯ ಮನೆಗಳು ಕಲ್ಪಿಸಲಾಗುತ್ತಿದ್ದು, ಬಹುತೇಕವಾಗಿ ಈ ಭಾಗದಲ್ಲಿ ಕಡು ಬಡವರು ಗುಡಿಸಲುಗಳಲ್ಲಿಯೇ ಹೆಚ್ಚಾಗಿರುವುದರಿಂದ ಅಂತಹ ವಾರ್ಡ್‌ ಅಥವಾ ದೊಡ್ಡಿಗಳನ್ನು ಸ್ಲಂ ನಿವಾಸಿಗಳೆಂದು ಗುರುತಿಸಿ ಸಮಗ್ರ ವರದಿ ತಕ್ಷಣವೇ ನೀಡಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ಆದಪ್ಪ ಸುರಪುರಕರ್‌ ಅವರಿಗೆ ಸೂಚಿಸಿದರು.

ರಸ್ತೆ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು. ಗ್ರಾಮೀಣ ಪ್ರದೇಶ ರಸ್ತೆ ತೀರಾ ಹದಗೆಟ್ಟಿದ್ದು, ಅಭಿವೃದ್ಧಿಯಾಗಬೇಕಾಗಿರುವ ರಸ್ತೆಗಳ ಮಾಹಿತಿಯೊಂದಿಗೆ ಪ್ರಸ್ತಾವನೆಯ ವರದಿ ಸಲ್ಲಿಸುವಂತೆ ಲೋಕೊಪಯೋಗಿ ಅಧಿಕಾರಿಗಳಿಗೆ ಹೇಳಿದರು.

ಕೃಷ್ಣಾನದಿ ತೀರದ ನೀಲಕಂಠರಾಯನ ಗಡ್ಡಿ ಸೇತುವೆ ಈಗಾಗಲೇ ನಿರ್ಮಾಣದ ಹಂತದಲ್ಲಿದೆ. ಇದು ತೀರಾ ಚಿಕ್ಕದಾಗಿದ್ದು, ವಾಹನಗಳು ಸಂಚರಿಸುವ ರೀತಿಯಲ್ಲಿ ಸೇತುವೆಯನ್ನು ಅಗಲೀಕರಣಕ್ಕೆ ಈಗಾಗಲೇ ನಿರ್ಧರಿಸಲಾಗಿದೆ. ಈ ಭಾಗದ ಸಾಮಾನ್ಯ ಜನರಿಗೆ ಆಶ್ರಯ ವಸತಿಗಳನ್ನು ಹೆಚ್ಚು ಕಲ್ಪಿಸಲು ಪ್ರಯತ್ನಿಸಲಾಗುತ್ತಿದೆ ಎಂದು ತಿಳಿಸಿದರು. ಮುಂದೆ ನಡೆಯುವ ಯಾವುದೇ ಸಭೆಗಳು ಸದಸ್ಯರಿಗೆ ಮುಂಚಿತವಾಗಿ ಮಾಹಿತಿ ನೀಡಬೇಕು. ಕಾಮಗಾರಿಗಳ ಬಗ್ಗೆ ಸಮಗ್ರ ಚರ್ಚೆ ಆಗುವುದರೊಂದಿಗೆ ಅರ್ಥಪೂರ್ಣವಾಗಿ ಸಭೆ ನಡೆಸಬೇಕು ಎಂದು ಪುರಸಭೆ ಅಧಿಕಾರಿಗಳಿಗೆ ಸೂಚಿಸಿದರು.

ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ದಶರಥ ಆರೇಶಂಕರ ಅಧ್ಯಕ್ಷತೆ ವಹಿಸಿದ್ದರು. ಪುರಸಭೆ ಉಪಾಧ್ಯಕ್ಷೆ ಮಲ್ಲಮ್ಮ ಪವಡೆಪ್ಪ ಮ್ಯಾಗೇರಿ, ಪುರಸಭೆ ಸದಸ್ಯರಾದ ಭೀಮನಗೌಡ ಹಳ್ಳಿ, ರಾಜು ಹವಾಲ್ದಾರ, ನಿಂಗಾನಾಯ್ಕ ರಾಠೊಡ, ಪರಶುರಾಮ ಪೂಜಾರಿ, ಬಸಯ್ಯಸ್ವಾಮಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next