ವಿಜಯಪುರ: ತಮ್ಮ ತಂದೆಯನ್ನು ವಿಜಯಪುರದ ಸಿಂದಗಿ ಪೊಲೀಸರು ಹತ್ಯೆ ಮಾಡಿದ್ದಾರೆಂದು ಆರೋಪಿಸಿ ವೈರಲ್ ವಿಡಿಯೋಗೆ ಸಂಬಂಧಿಸಿದಂತೆ ಬೆಂಗಳೂರಿನ ಪೇದೆ ಬಸವರಾಜ ಪಾಟೀಲ ವಿರುದ್ಧ ಶಿಸ್ತು ಕ್ರಮಕ್ಕೆ ಶಿಫಾರಸ್ಸು ಮಾಡಲಾಗಿದೆ.
ಶನಿವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಎಸ್ಪಿ, ಅನುಪಮ್ ಅಗರವಾಲ, ಬೆಂಗಳೂರಿನ ಪೇದೆ ಬಸವರಾಜ ಅವರ ತಂದೆ ಹನುಮಂತ ಪಾಟೀಲ ಹಾಗೂ ಅವರ ಸಹೋದರ ಮಧ್ಯೆ ಆಸ್ತಿ ವಿವಾದ ಇದೆ. ಪ್ರಕರಣ ನ್ಯಾಯಾಲಯದಲ್ಲಿದೆ. ಇದರ ಹೊರತಾಗಿ ಗ್ರಾಮಸ್ತರು ಕುಟುಂಬದ ಮಧ್ಯೆ ರಾಜಿ ಸಂಧಾನ ಮಾಡಿಸಲು ಮುಂದಾದರೂ ಪೇದೆ ಬಸವರಾಜ ಕುಟುಂಬ ಒಪ್ಪಿಲ್ಲ. ಇದರಿಂದಾಗಿ ಎರಡೂ ಕುಟುಂಬಗಳ ಮಧ್ಯೆ ದೂರು ಪ್ರತಿದೂರು ದಾಖಲಾಗಿವೆ ಎಂದು ಎಸ್ಪಿ ಅಗರವಾಲ ವಿವರಿಸಿದ್ದಾರೆ.
ಪೇದೆ ಬಸವರಾಜ ತಮ್ಮ ಕಛೇರಿಗೆ ನೀಡಿದ ಅರ್ಜಿಯನ್ನು ವಿಚಾರಣೆ ಮಾಡಲು ಎರಡೂ ಕಡೆಯವರನ್ನು ಕರೆಸಲು ಮುಂದಾದರೂ ಪೇದೆ ಕುಟುಂಬ ವಿಚಾರಣೆಗೆ ಹಾಜರಾಗಿಲ್ಲ. ಇದಲ್ಲದೇ ಸಿಂದಗಿ ಪೊಲೀಸರೇ ತಮ್ಮ ತಂದೆ ಹತ್ಯೆಗೆ ಕಾರಣ ಎಂದು ಆರೋಪಿಸಿರುವ ಪೇದೆ ಬಸವರಾಜ, ತಮ್ಮ ತಂದೆಯ ಸಾವಿನ ಸಹಜ, ಅಸಹಜ ಸಾವು ಯಾವುದಕ್ಕೂ ಪೊಲೀಸ್ ದೂರು ನೀಡಿಲ್ಲ. ಅಲ್ಲದೇ ನ್ಯಾಯಾಲಯದ ವಾರಂಟ್ ನೀಡಲು ಪೇದೆ ಬಸವರಾಜ ಅವರ ಕುಟುಂಬ ವಾಸ ಇರುವ ಮನೆಗೆ ಹೋದ ಪೇದೆ ಮೇಲೂ ಹಲ್ಲೆ ಮಾಡಿದೆ. ಇಷ್ಟಿದ್ದರೂ ಪೇದೆ ಬಸವರಾಜ ಪೊಲೀಸ್ ಇಲಾಖೆಯಲ್ಲಿ ಇದ್ದುಕೊಂಡು ಇಲಾಖೆಯ ನಿಯಮ ಮೀರಿ, ಶಿಸ್ತು ಉಲ್ಲಂಘಿಸಿ, ಇಲಾಖೆಯ ಮೆಲಾಧಿಕಾರಿಗಳ ವಿರುದ್ಧ ವಿಡಿಯೋ ಮಾಡಿ, ಸಾರ್ವಜನಿಕವಾಗಿ ವಿಡಿಯೋ ವೈರಲ್ ಮಾಡುವ ಹವ್ಯಾಸ ರೂಢಿಸಿಕೊಂಡಿದ್ದಾನೆ ಎಂದು ವಿವರಿಸಿದರು.
ಇದನ್ನೂ ಓದಿ:ಪೊಲೀಸ್ ದೌರ್ಜನ್ಯದಿಂದ ತಂದೆ ಸಾವು; ಇಲಾಖೆಯಲ್ಲಿ ಇದ್ದರೂ ಕುಟುಂಬಕ್ಕೆ ರಕ್ಷಣೆ ಸಿಗುತ್ತಿಲ್ಲ
ಪೇದೆ ಬಸವರಾಜ ಎರಡು ದಿನದ ಹಿಂದೆ ಸಿಂದಗಿ ಪೊಲೀಸ್ ವಿರುದ್ಧ ಆರೋಪ ಮಾಡಿದ್ದಲ್ಲದೇ, ಐಜಿಪಿ ಹಾಗೂ ತಮ್ಮೊಂದಿಗೆ ಮೊಬೈಲನಲ್ಲಿ ಅಸ್ತವ್ಯಸ್ತವಾಗಿ ವರ್ತಿಸಿದ್ದಾರೆ. ಹೀಗಾಗಿ ಪೇದೆ ವಿರುದ್ಧ ಸ್ಥಾನಿಕ ವಿಚಾರಣೆ ನಡೆಸಿ ಶಿಸ್ತು ಕ್ರಮಕ್ಕೆ ಶಿಫಾರಸು ಮಾಡಿ ಪೊಲೀಸ್ ಮಹಾನಿರ್ದೇಶಕರಿಗೆ ವರದಿ ಸಲ್ಲಿಸಲಾಗಿದೆ ಎಂದು ವಿವರಿಸಿದರು.