Advertisement

ನಿರುದ್ಯೋಗದಿಂದ ಅನಾಹುತಗಳು ಹೆಚ್ಚು

09:50 PM Dec 15, 2019 | Team Udayavani |

ಯಳಂದೂರು: ಒಂದು ದೇಶದಲ್ಲಿ ನಿರುದ್ಯೋಗ ಸಮಸ್ಯೆಗಳು ಹೆಚ್ಚಾದರೆ ಮನಸ್ಸುಗಳು ಕದಡುವುದರಿಂದ ಆ ವ್ಯಕ್ತಿಯಿಂದ ಸ್ವಸ್ಥ ಸಮಾಹಕ್ಕೆ ಅನಾಹುತಗಳು ಹೆಚ್ಚಾಗಿ ಕೇಡು ಉಂಟಾಗುತ್ತದೆ. ಹಾಗಾಗಿ ಈ ಸಮಸ್ಯೆಯನ್ನು ನೀಗಿಸುವ ಜವಾಬ್ದಾರಿ ಎಲ್ಲರ ಮೇಲೂ ಇದೆ ಎಂದು ಶಾಸಕ ಎನ್‌. ಮಹೇಶ್‌ ತಿಳಿಸಿದರು.

Advertisement

ಅವರು ಪಟ್ಟಣ ಸರ್ಕಾರಿ ಪಿಯು ಕಾಲೇಜಿನ ಆವರಣದಲ್ಲಿ ಭಾನುವಾರ ಎನ್‌. ಮಹೇಶ್‌ ಅಭಿಮಾನಿ ಬಳಗ, ಪ್ರಬುದ್ಧ ಭಾರತ ಫೌಂಡೇಶನ್‌ ಮತ್ತು ಬಹುಜನ ವಿದ್ಯಾರ್ಥಿ ಸಂಘದ ವತಿಯಿದ ಹಮ್ಮಿಕೊಂಡಿದ್ದ ಉದ್ಯೋಗ ಮೇಳ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಭಾರತದ ಸಂವಿಧಾನ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿದೆ. 2030ರ ವೇಳೆಗೆ ದೇಶದಲ್ಲಿ ಶೇ. 100 ಸಾಕ್ಷರತೆ ಪ್ರಮಾಣ ಇರಲಿದೆ.

ಕೇಂದ್ರ ಸರ್ಕಾರಗಳ ವಿದೇಶಾಂಗ ನೀತಿಗಳಿಂದ ಉದ್ಯೋಗನಷ್ಟ ಅನುಭವಿಸುವ ಸ್ಥಿತಿ ಭಾರತದಲ್ಲಿ ಬಂದಿದೆ. ಇದು ಅಪಾಯದ ಮುನ್ಸೂಚನೆಯಾಗಿದ್ದು, ಇದನ್ನು ತಪ್ಪಿಸಿ ಸ್ಥಳೀಯರಿಗೆ ಉದ್ಯೋಗ ಸೃಷ್ಟಿ ಮಾಡಬೇಕು. ದೇಶದಲ್ಲಿ 20- 40 ವಯೋಮಾನದ ಶೇ.30 ಜನರಿದ್ದಾರೆ. ಅಂದರೆ 30 ಕೋಟಿಗೂ ಅಧಿಕ ಮಂದಿ ಯುವ ಪಡೆಯನ್ನು ದೇಶ ಹೊಂದಿದೆ. ಇವರಿಗೆ ಉದ್ಯೋಗ ಒದಗಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ.

ನನ್ನ ಕ್ಷೇತ್ರದಲ್ಲಿ ನಾನು ಪ್ರತಿ ವಾರ್ಡ್‌, ಗ್ರಾಮಗಳಿಗೂ ಭೇಟಿ ನೀಡಿದ ಸಂದರ್ಭದಲ್ಲಿ ಉದ್ಯೋಗ ಸಮಸ್ಯೆ ಹೆಚ್ಚಾಗಿತ್ತು. ಈ ಉದ್ದೇಶದಿಂದ ಉದ್ಯೋಗ ಮೇಳಗಳನ್ನು ಆಯೋಜಿಸಲು ನಿರ್ಧರಿಸಿದೆ. ಇಲ್ಲೇ ಮೈಸೂರು, ನಂಜನಗೂಡು, ಚಾಮರಾಜನಗರ ವ್ಯಾಪ್ತಿಯಲ್ಲೇ ಸ್ಥಳೀಯರಿಗೆ ಉದ್ಯೋಗ ಸಿಗಬೇಕು ಎಂಬ ಉದ್ದೇಶವಿದ್ದು ಯುವಕರು ಸರ್ಕಾರಿ ಉದ್ಯೋಗಗಳಿಗೆ ಕಾಯದೆ ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡಿ ತಮ್ಮ ಕುಟುಂಬದ ವರಮಾನವನ್ನು ವೃದ್ಧಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಕಾರಾಪು ವಿರಕ್ತಮಠದ ಬಸವರಾಜ ಸ್ವಾಮೀಜಿ ಮಾತನಾಡಿ, ಉದ್ಯೋಗದಿಂದ ಕುಟುಂಬ, ಜೀವನ ಬೆಳಗುತ್ತದೆ. ದೇಶದ ಪ್ರಗತಿ ಶ್ರಮದ ಮೇಲೆ ನಿಂತಿದೆ. ಬೌದ್ಧಿಕ ಹಾಗೂ ಶಾರೀರಿಕ ಶ್ರಮ ಅನಘವಾಗಿದೆ. ಈಗ ಮಹಿಳೆಯರೂ ಪುರುಷರಿಗೆ ಸಮಾನರಾಗಿದ್ದು “ಉದ್ಯೋಗಂ ಮಾನವ ಲಕ್ಷಣಂ’ ಎಂಬ ಉಕ್ತಿ ಸೂಕ್ತವಾಗಿದೆ. ಇಂತಹ ಸಂದರ್ಭದಲ್ಲಿ ಇಂತಹ ಮೇಳಗಳ ಆಯೋಜನೆಯಿಂದ ಗ್ರಾಮೀಣ ಅಭ್ಯರ್ಥಿಗಳಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಮಾಹಿತಿ ನೀಡಿದರು.

Advertisement

344 ಮಂದಿ ಆಯ್ಕೆ: ಉದ್ಯೋಗ ಮೇಳದಲ್ಲಿ ಐಸಿಐಸಿಐ, ಮುತ್ತೂಟ್‌ ಫಿನ್‌ಕಾರ್ಪ್‌, ಎಚ್‌ಡಿಎಫ್ಸಿ, ಸಾಯಿ ಎಂಟರ್‌ ಪ್ರçಸಸ್‌, ಕರ್ನಾಟಕ ಪ್ರಮೋಷನ್‌, ಏರ್‌ಟೆಲ್‌ ಸೇರಿದಂತೆ 30 ಕ್ಕೂ ಹೆಚ್ಚು ಕಂಪನಿಗಳು ಆಗಮಿಸಿದ್ದವು. ಒಟ್ಟು 536 ಉದ್ಯೋಗಾಕಾಂಕ್ಷಿಗಳು ಆಗಮಿಸಿದ್ದರು. ಇದರಲ್ಲಿ 344 ಮಂದಿ ಆಯ್ಕೆಯಾದರು. 192 ಮಂದಿ 2 ನೇ ಹಂತದ ಸಂದರ್ಶನಕ್ಕೆ ಆಯ್ಕೆಯಾದರು.

ಇಸ್ಲಾಂ ಧರ್ಮಗುರು ಅಬ್ರಾರ್‌ ಅಹ್ಮದ್‌, ಕ್ರೈಸ್ತ ಧರ್ಮಗುರು ಜಾಡಿ ಡಿ. ಅಲ್ಮೆಡಾ, ಯುವ ಮುಖಂಡ ಪಿ. ಮಾದೇಶ್‌ ಉಪ್ಪಾರ್‌ ಮಾತನಾಡಿದರು. ಇಒ ರಾಜು, ಬಿಇಒವಿ. ತಿರುಮಲಾಚಾರಿ ಮುಖ್ಯಾಧಿಕಾರಿ ನಾಗರತ್ನ ಪ್ರಾಂಶುಪಾಲ ಶಶಿಧರ್‌, ಪ್ರಭುದ್ಧ ಭಾರತ ಫೌಂಡೇಶನ್‌ನ ಪೂರ್ಣಿಮ ಉಮೇಶ್‌ ರಾಮಣ್ಣ, ಸಿದ್ದರಾಜು, ಕೇಶವಮೂರ್ತಿ, ಚೆನ್ನರಾಜುದಾನವ, ಚಿರಂಜೀವಿ, ರಂಗರಾಜು, ಸುರೇಶ್‌, ಮಹಾದೇವಸ್ವಾಮಿ ಇತರರು ಇದ್ದರು.

ಚಾಮುಲ್‌ನಲ್ಲಿ ಭ್ರಷ್ಟಾಚಾರ: ಕುದೇರು ಗ್ರಾಮದಲ್ಲಿರುವ ಚಾಮರಾಜನಗರ ಹಾಲು ಒಕ್ಕೂಟದಲ್ಲಿ ಈಚೆಗೆ ನಡೆದಿರುವ ಆಯ್ಕೆ ಪ್ರಕ್ರಿಯೆಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ. 72 ಮಂದಿಯನ್ನು ಕೆಲಸಕ್ಕೆ ನೇಮಿಸಿಕೊಳ್ಳಲಾಗಿದ್ದು ಇದರಲ್ಲಿ ಅಧ್ಯಕ್ಷರ ಕುಟುಂಬದ 4 ಜನರ ಸದಸ್ಯರೂ ಇದ್ದಾರೆ. ಎಲ್ಲಾ ಹುದ್ದೆಗಳಲ್ಲೂ ಲಂಚಾವತಾರ ನಡೆದಿದೆ. ಎಲ್ಲಾ ನಿರ್ದೇಶಕರೂ ಇದರಲ್ಲಿ ಭಾಗಿಯಾಗಿದ್ದಾರೆ. ಇದು ಅರ್ಹರಿಗೆ ಸಿಕ್ಕಿಲ್ಲ. ಈ ಬಗ್ಗೆ ಸರ್ಕಾರ ಇದನ್ನು ಮನವರಿಕೆ ಮಾಡಿಕೊಡಲಾಗುವುದು ಎಂದು ಆರೋಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next