Advertisement

ಕುಂಡಕೊಳಕೆ ಇಗರ್ಜಿಯಲ್ಲಿ ಕಿಡಿಗೇಡಿಗಳ‌ ದಾಂಧಲೆ: ಶೀಘ್ರ ಕ್ರಮ

08:13 PM Aug 21, 2019 | mahesh |

ಕಾಸರಗೋಡು: ಡಿ.ಜಿ.ಪಿ. ಲೋಕ್‌ನಾಥ್‌ ಬೆಹ್ರಾ ಕಾಸರಗೋಡು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ದೂರು ಅದಾಲತ್‌ ನಡೆಸಿದರು. ಒಟ್ಟು 81 ದೂರುಗಳನ್ನು ನೋಂದಣಿ ಮಾಡಲಾಗಿತ್ತು. 64 ದೂರುಗಳನ್ನು ಪರಿಶೀಲಿಸ ಲಾಗಿತ್ತು. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜೇಮ್ಸ್‌ ಜೋಸೆಫ್, ಸಹಾಯಕ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಿ. ಶಿಲ್ಪಾ, ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಪಿ.ಬಿ. ಪ್ರಷೋಬ್‌, ಡಿ.ವೈ.ಎಸ್‌.ಪಿ. ಗಳಾದ ಪಿ.ಕೆ. ಸುಧಾಕರನ್‌, ಪಿ. ಬಾಲಕೃಷ್ಣನ್‌ ನಾಯರ್‌, ಎಂ. ಸುನಿಲ್‌ ಕುಮಾರ್‌, ಎಂ. ಅಸೀನಾರ್‌, ಜೈಸನ್‌ ಅಬ್ರಾಹಂ, ಎಂ. ಪ್ರದೀಪ್‌ ಕುಮಾರ್‌, ಇನ್‌ಸ್ಪೆಕ್ಟರ್‌ಗಳು, ಸಬ್‌ ಇನ್‌ಸ್ಪೆಕ್ಟರ್‌ಗಳು ಅದಾಲತ್‌ನಲ್ಲಿ ಉಪಸ್ಥಿತರಿದ್ದರು.

Advertisement

ಇಗರ್ಜಿ ಪ್ರಕರಣ
ಮಂಜೇಶ್ವರದ ಕುಂಡಕೊಳಕೆಯಲ್ಲಿ ಇಗರ್ಜಿ ಯೊಂದಕ್ಕೆ ಕಿಡಿಗೇಡಿಗಳು ನಡೆಸಿದ ದಾಂಧಲೆ ಪ್ರಕರಣದಲ್ಲಿ ಕಠಿನ ಕಾನೂನು ಕ್ರಮ ಕೈಗೊಳ್ಳು ವುದಾಗಿ ಡಿ.ಜಿ.ಪಿ. ಭರವಸೆ ನೀಡಿದರು. ಈ ಸಂಬಂಧ ಇಗರ್ಜಿಯ ಧರ್ಮಗುರು ರೆ|ಫಾ| ವಿನ್ಸಂಟ್‌ ಅವರ ನೇತೃತ್ವದ ತಂಡ ದೂರು ಸಲ್ಲಿಸಿದ್ದು, ಇದನ್ನು ಪರಿಶೀಲಿಸಿದ ವೇಳೆ ಡಿ.ಜಿ.ಪಿ. ಈ ಆಶ್ವಾಸನೆ ನೀಡಿದರು.

ನಿಧಿ ಮಂಜೂರಾಗುತ್ತಿಲ್ಲ: ದೂರು
ವಿದ್ಯಾರ್ಥಿ ಪೊಲೀಸ್‌ ಕೆಡೆಟ್‌ ಯೋಜನೆ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುತ್ತಿರುವ ಅನುದಾನಿತ ಶಾಲೆಗಳಿಗೆ ಈ ಸಂಬಂಧ ನಿಧಿ ಮಂಜೂರು ಮಾಡುತ್ತಿಲ್ಲ ಎಂಬ ಆರೋಪದಲ್ಲಿ ಪೆರಡಾಲ ನವಜೀವನ ಪ್ರೌಢಶಾಲೆಯ ಪದಾಧಿಕಾರಿಗಳು ದೂರು ಸಲ್ಲಿಸಿದರು.

ಠಾಣೆಗೆ ನೂತನ ಕಟ್ಟಡಕ್ಕೆ ಮನವಿ
ಬದಿಯಡ್ಕ ಪೊಲೀಸ್‌ ಠಾಣೆ 45 ವರ್ಷಗಳಷ್ಟು ಹಳತಾಗಿದ್ದು, ಇದನ್ನು ಕೆಡವಿ ನೂತನ ಜನಮೈತ್ರಿ, ವಿದ್ಯಾರ್ಥಿ ಪೊಲೀಸ್‌, ಜನಜಾಗೃತಿ ಇತ್ಯಾದಿ ಸೌಲಭ್ಯಗಳ ಸಹಿತದ ನೂತನ ಕಟ್ಟಡ ನಿರ್ಮಾಣ ನಡೆಸುವಂತೆ ನೀರ್ಚಾಲು ನಿವಾಸಿ, ಸಾರ್ವಜನಿಕ ಕಾರ್ಯಕರ್ತ ಎಂ.ಎಚ್‌. ಜನಾರ್ದನ ಮನವಿ ಸಲ್ಲಿಸಿದರು. ಈ ಸಂಬಂಧ ಕ್ರಮಕೈಗೊಳ್ಳುವಂತೆ ಎ.ಎಸ್‌.ಪಿ.ಗೆ ಡಿ.ಜಿ.ಪಿ. ಹೊಣೆ ನೀಡಿದರು.

ಮಸೀದಿಗೆ ಬೆಂಕಿಯಿಕ್ಕಿದ ಪ್ರಕರಣ
ನೀಲೇಶ್ವರ ಪೊಲೀಸ್‌ ಠಾಣೆ ವ್ಯಾಪ್ತಿಯ ಏರಿಕುಳಂ ಮಸೀದಿಗೆ ಜ.23ರಂದು ಬೆಂಕಿಯಿಕ್ಕಿದ ಪ್ರಕರಣದಲ್ಲಿ ಆರೋಪಿಗಳನ್ನು ಇನ್ನೂ ಪತ್ತೆ ಮಾಡದಿರುವ ಪ್ರಕರಣದಲ್ಲಿ ಕಾಂಞಂಗಾಡ್‌ ಸಂಯುಕ್ತ ಜಮಾ ಅತ್‌ ಜನರಲ್‌ ಸೆಕ್ರೆಟರಿ ಬಶೀರ್‌ ವೆಳ್ಳಿಕೋತ್‌ ಅವರ ನೇತೃತ್ವದ ತಂಡ ದೂರು ಸಲ್ಲಿಸಿದೆ. ಜಿಲ್ಲಾ ಅಪರಾಧ ಪತ್ತೆದಳದ ಡಿ.ವೈ.ಎಸ್‌.ಪಿ. ಪರಿಶೀಲನೆ ನಡೆಸುವಂತೆ ಡಿ.ಜಿ.ಪಿ. ಆದೇಶಿಸಿದರು.

Advertisement

ಪೈವಳಿಕೆ ಅಟ್ಟೆಗೋಳಿಯಲ್ಲಿ ಪಂಚಾಯತ್‌ ರಸ್ತೆಯನ್ನು ಖಾಸಗಿ ವ್ಯಕ್ತಿಯೊಬ್ಬರು ಅತಿಕ್ರಮಣ ನಡೆಸಿದ ಪ್ರಕರಣದಲ್ಲಿ ಸಂಬಂಧಪಟ್ಟವರು ಕ್ರಮಕೈಗೊಂಡಿಲ್ಲ ಎಂಬ ಆರೋಪದಲ್ಲಿ ಸ್ಥಳೀಯ ನಿವಾಸಿ ಸುಲೈಖಾ ಮತ್ತು ಪುತ್ರ ಪಿ.ಜಿ. ಮುಸ್ತಫಾ ದೂರು ಸಲ್ಲಿಸಿದರು. ವಿವಾದಿತ ಪ್ರದೇಶದಲ್ಲಿ ನಿರ್ಮಿಸಲಾದ ಬೇಲಿ ತೆರವುಗೊಳಿಸುವ ಕ್ರಮ ಕೈಗೊಳ್ಳುವಂತೆ ಡಿ.ಜಿ.ಪಿ. ಅವರು ಜಿಲ್ಲಾಧಿಕಾರಿಗೆ ಆದೇಶ ನೀಡಿದರು.

ಸೂರ್ಲಿನಲ್ಲಿ ಪೊಲೀಸ್‌ ಭದ್ರತೆ ಬೇಕು
ರಿಯಾಜ್‌ ಮೌಲವಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಕಾಸರಗೋಡಿನ ಸೂರ್ಲು ವಲಯದಲ್ಲಿ ತಲೆದೋರಿರುವ ಸೂಕ್ಷ್ಮ ವಾತಾವರಣದ ಹಿನ್ನೆಲೆಯಲ್ಲಿ ಪೊಲೀಸರು ಸಕ್ರಿಯವಾಗಿ ರಂಗಕ್ಕಿಳಿಯಬೇಕು. ಇಲ್ಲವಾದಲ್ಲಿ ನಿಜವಾದ ಆರೋಪಿಗಳು ತಲೆಮರೆಸಿ ಕೊಳ್ಳುವ ಭೀತಿಯಿದೆ ಎಂದು ಚೂರಿ ಓಲ್ಡ್‌ ಜುಮಾ ಮಸ್ಜಿದ್‌ ಸಮಿತಿ ಪದಾಧಿಕಾರಿಗಳು ದೂರು ಸಲ್ಲಿಸಿದರು. ಈ ಸಂಬಂಧ ಸೂಕ್ತ ಕ್ರಮಕೈಗೊಳ್ಳುವಂತೆ ಎ.ಎಸ್‌.ಪಿ. ಮತ್ತು ಸಿ.ಐ.ಅವರಿಗೆ ಡಿ.ಜಿ.ಪಿ. ಹೊಣೆ ವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next