Advertisement

ಪಚ್ಚನಾಡಿ ತ್ಯಾಜ್ಯ ದುರಂತ: ಮನಪಾ ಸ್ಥಿರಾಸ್ತಿ ಅಡವಿಟ್ಟು ಪರಿಹಾರ; ಹೈಕೋರ್ಟ್‌ ನಿರ್ದೇಶನ

11:27 PM Oct 14, 2020 | mahesh |

ಬೆಂಗಳೂರು: ಮಂಗಳೂರು ಮನಪಾ ವ್ಯಾಪ್ತಿಯ ಪಚ್ಚನಾಡಿ, ಕುಡುಪು ಮತ್ತು ಮಂದಾರ ಪ್ರದೇಶದಲ್ಲಿ ಘನತ್ಯಾಜ್ಯ ಡಂಪಿಂಗ್‌ ಯಾರ್ಡ್‌ನಿಂದ ತ್ಯಾಜ್ಯ ಜರಿದು ಉಂಟಾಗಿರುವ ಅನಾಹುತದಲ್ಲಿ ಸಂತ್ರಸ್ತ ಕುಟುಂಬಗಳಿಗೆ ಪರಿಹಾರ ನೀಡುವುದಕ್ಕಾಗಿ ಅಗತ್ಯ ಮೊತ್ತ ಕ್ರೋಡೀಕರಿಸಲು ಪಾಲಿಕೆಯ ಸ್ಥಿರಾಸ್ತಿಯನ್ನು ಅಡವು ಇರಿಸಲು ಮತ್ತು ಬ್ಯಾಂಕಿನಿಂದ ಸಾಲ ಪಡೆದುಕೊಳ್ಳಲು ಪಾಲಿಕೆಗೆ ಅನುಮತಿ ನೀಡುವಂತೆ ರಾಜ್ಯ ಸರಕಾರಕ್ಕೆ ಹೈಕೋರ್ಟ್‌ ನಿರ್ದೇಶನ ನೀಡಿದೆ.

Advertisement

ಕರ್ನಾಟಕ ಕಾನೂನು ಸೇವಾ ಪ್ರಾಧಿಕಾರ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ನ್ಯಾಯಾಲಯದ ವಿಭಾಗೀಯ ನ್ಯಾಯಪೀಠದ ಮುಂದೆ ಬುಧವಾರ ವಿಚಾರಣೆಗೆ ಬಂದಿತ್ತು. ಸಂತ್ರಸ್ತ ಕುಟುಂಬಗಳಿಗೆ ಪರಿಹಾರ ನೀಡಲು ಹಣದ ಕೊರತೆ ಇದೆ. ಅಲ್ಲದೆ 14 ಕೋ.ರೂ.ಗಳನ್ನು ಸರ ಕಾರ ಇನ್ನೂ ಬಿಡುಗಡೆ ಮಾಡಿಲ್ಲ ಎಂಬ ವಿಚಾರವನ್ನು ಪಾಲಿಕೆ ಪರ ವಕೀಲರು ನ್ಯಾಯಪೀಠದ ಗಮನಕ್ಕೆ ತಂದರು. ಇದಕ್ಕೆ ಪ್ರತಿಯಾಗಿ, ಪಾಲಿಕೆಯ ಕಟ್ಟಡ ಅಥವಾ ಸ್ಥಿರಾಸ್ತಿ ಮಾರಾಟ ಮಾಡಿ ಪರಿಹಾರ ಕೊಡಿ ಎಂದು ನ್ಯಾಯಪೀಠವು ಆರಂಭದಲ್ಲಿ ಮೌಖೀಕವಾಗಿ ಹೇಳಿತು.

ಒಂದೆಡೆ ಪಾಲಿಕೆ ತನ್ನ ಬಳಿ ಹಣ ಇಲ್ಲ ಎಂದು ಹೇಳುತ್ತಿದೆ. ಮತ್ತೂಂದೆಡೆ ಸರಕಾರಕ್ಕೆ 14 ಕೋ.ರೂ. ಹಣ ಬಿಡುಗಡೆ ಮಾಡುವ ಇಚ್ಛೆ ಇರುವಂತೆ ಕಾಣುತ್ತಿಲ್ಲ. ಆದರೆ ಸಂತ್ರಸ್ತ ಕುಟುಂಬಗಳಿಗೆ ಪರಿಹಾರ ನೀಡಲೇಬೇಕು. ಹೀಗಾಗಿ ತನ್ನ ಸ್ಥಿರಾಸ್ತಿಯನ್ನು ಅಡಮಾನ ಇರಿಸಿ ಬ್ಯಾಂಕಿನಿಂದ ಸಾಲ ಪಡೆಯಲು ಪಾಲಿಕೆಗೆ ಒಂದು ವಾರದಲ್ಲಿ ನೀಡುವಂತೆ ನ್ಯಾಯಪೀಠವು ಸರಕಾರಕ್ಕೆ ನಿರ್ದೇಶನ ನೀಡಿತು. ಅಲ್ಲದೆ ಪರಿಹಾರ ಮೊತ್ತದ 22 ಕೋ.ರೂ.ಗಳ ಪೈಕಿ ಬರೀ 8 ಕೋ.ರೂ.ಗಳನ್ನಷ್ಟೇ ಬಿಡುಗಡೆ ಮಾಡಿದ್ದೇಕೆ, ಬಾಕಿ ಹಣ ಏಕೆ ಬಿಡುಗಡೆ ಮಾಡಿಲ್ಲ ಎಂಬ ಬಗ್ಗೆ ಸ್ಪಷ್ಟನೆ ನೀಡುವಂತೆಯೂ ಸರಕಾರಕ್ಕೆ ಸೂಚಿಸಿತು.

ವಿಚಾರಣೆಗೆ ಹಾಜರಾಗಲು ತಾಕೀತು
ಸಂತ್ರಸ್ತ 35 ಮಂದಿಗೆ ಕೇವಲ ಬೆಳೆ ನಷ್ಟ ಪರಿಹಾರ ಮಾತ್ರ ನೀಡಲಾಗಿದೆ. ಮನೆ ಹಾನಿಗೆ ಪರಿಹಾರ ನೀಡಿಲ್ಲ. ಅಲ್ಲದೆ ಘನತ್ಯಾಜ್ಯ ನಿರ್ವಹಣೆ ನಿಯಮ ಗಳು-2016ರ ಅನುಷ್ಠಾನದಲ್ಲಿ ನಿರ್ಲಕ್ಷ್ಯ ವಹಿಸಲಾಗಿದೆ. ಈ ಬಗ್ಗೆ ಪಾಲಿಕೆ ಆಯುಕ್ತರು ಪ್ರಮಾಣಪತ್ರ ಸಲ್ಲಿಸಬೇಕು ಮತ್ತು ಮುಂದಿನ ವಿಚಾರಣೆ ವೇಳೆ ವೀಡಿಯೋ ಕಾನ್ಫರೆನ್ಸ್‌ ಮೂಲಕ ಹಾಜರಾಗಬೇಕು ಎಂದು ತಾಕೀತು ಮಾಡಿತು. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳದಿರುವ ಬಗ್ಗೆ ಕಾರಣಗಳನ್ನು ನೀಡಿ ಒಂದು ವಾರದಲ್ಲಿ ಪ್ರಮಾಣಪತ್ರ ಸಲ್ಲಿಸುವಂತೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಕಾರ್ಯದರ್ಶಿಗೆ ಸೂಚಿಸಿದ ಹೈಕೋರ್ಟ್‌ ವಿಚಾರಣೆ ಮುಂದೂಡಿತು.

Advertisement

Udayavani is now on Telegram. Click here to join our channel and stay updated with the latest news.

Next