Advertisement
1984ರಲ್ಲಿ ನಡೆದ ಭೂಪಾಲ ವಿಷಾನಿಲ ದುರಂತ, 1993ರ ಲಾತೂರ್ ಭೂಕಂಪ, 1999ರ ಒರಿಸ್ಸಾ ಚಂಡಮಾರುತ, 2001ರ ಗುಜರಾತ್‌ನಲ್ಲಿ ನಡೆದ ಭೂಕಂಪಗಳಲ್ಲಿ ಸಾವಿರಾರು ಸಾವು-ನೋವುಗಳು ಉಂಟಾಗಿದೆ. ಭಾರತ ಸರಕಾರವು ಅಂತಹ ವಿಪತ್ತುಗಳು ಸಂಭವಿಸಿದಾಗ ವಿಪತ್ತು ನಿರ್ವಹಣೆಗೆ ಪ್ರತ್ಯೇಕ ವ್ಯವಸ್ಥೆ, ಯೋಜನೆ, ನುರಿತ ರಕ್ಷಣಾ, ಚಿಕಿತ್ಸಾ ತಂಡಗಳು ಇರಬೇಕಾದ ಅಗತ್ಯವನ್ನು ಮನಗಂಡು, ಸಂಸತ್ತಿನಲ್ಲಿ ಡಿಸೆಂಬರ್ 2005ರಲ್ಲಿ ವಿಪತ್ತು ನಿರ್ವಹಣಾ ಮಸೂದೆ ಅಂಗೀಕಾರಗೊಂಡು ವಿಪತ್ತು ನಿರ್ವಹಣ ಕಾಯ್ದೆಯಾಗಿ 26 ಡಿಸೆಂಬರ್ 2005ರಲ್ಲಿ ಹೊರಬಂದಿದೆ.
Related Articles
Advertisement
ಅಲ್ಲದೇ ಬೇರೆ ಬೇರೆ ವಿಪತ್ತು ನಿರ್ವಹಣಾ ಯೋಜನೆ ಹಾಗೂ ಅವುಗಳನ್ನು ತಡೆಯುವ ಅಥವಾ ಅವುಗಳ ಪರಿಣಾಮವನ್ನು ತಗ್ಗಿಸಬಹುದಾದ ಕ್ರಮಗಳನ್ನು, ವಿಪತ್ತುಗಳು ಉಂಟಾದರೆ ಜನರ ರಕ್ಷಣೆ, ಅವರ ಪುನರ್ವಸತಿ ಕೇಂದ್ರಗಳನ್ನು ತೆರೆಯುವುದು ಮತ್ತು ಅಲ್ಲಿರುವ ಜನರಿಗೆ ನೀಡಬೇಕಾದ ಕನಿಷ್ಠ ಸೌಲಭ್ಯಗಳ (ಆಹಾರ, ನೀರು, ವೈದ್ಯಕೀಯ ಸೌಲಭ್ಯ, ಸ್ವತ್ಛತೆ) ಮಟ್ಟದ ಬಗ್ಗೆ ನಿರ್ಧರಿಸುತ್ತದೆ. ಯಾವುದೇ ತೆರನಾದ ವಿಪತ್ತು ಉಂಟಾಗಿ ಬೃಹತ್ ಪ್ರಮಾಣದಲ್ಲಿ ಸಾವು-ನೋವು ಉಂಟಾದಾಗ ಆಸ್ಪತ್ರೆಗಳು ಹಾಗೂ ಆಸ್ಪತ್ರೆಗೆ ಸಾಗಿಸುವ ಮೊದಲು ನೀಡಬೇಕಾದ (ಪ್ರೀ ಹಾಸ್ಪಿಟಲ್) ಆರೈಕೆ ಮತ್ತು ಟ್ರಯಾಜ್ ವ್ಯವಸ್ಥೆಗಳಿಂದ ಜೀವ ಹಾನಿ ಕಡಿಮೆ ಮಾಡಬಹುದಾದ ವಿಧಗಳ ಬಗ್ಗೆ ಮಾರ್ಗಸೂಚಿ ನೀಡಿದೆ.
ಪ್ರಾಧಿಕಾರವು ಈವರೆಗೆ ಬೇರೆ ಬೇರೆ ತರಹದ ವಿಪತ್ತುಗಳ ನಿರ್ವಹಣೆಗೆ 30ಕ್ಕೂ ಅಧಿಕ ಮಾರ್ಗಸೂಚಿಗಳನ್ನು ನೀಡಿದೆ. ಅದೇ ತರಹ ಪ್ರತೀ ರಾಜ್ಯದಲ್ಲಿ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಹಾಗೂ ಪ್ರತೀ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಇರುತ್ತದೆ. ಹಾಗಾಗಿ ಪ್ರತೀ ರಾಜ್ಯದಲ್ಲಿ, ಪ್ರತೀ ಜಿಲ್ಲೆಗಳಲ್ಲಿ ವಿಪತ್ತು ನಿರ್ವಹಣಾ ಯೋಜನೆ ಬೇರೆ ಬೇರೆ ತರಹದ ವಿಪತ್ತಿಗೊಳಗಾಗಬಹುದಾದ ಪ್ರದೇಶದ ನಕ್ಷೆ ರೂಪುಗೊಂಡು ದಾಖಲೆ ರೂಪದಲ್ಲಿರಿಸಿ ಆಗಿಂದಾಗ್ಗೆ ಸ್ಥಿತಿಗಳನ್ನು ಅನುಸರಿಸಿ ವಿಪತ್ತಿನ ಸಂದರ್ಭಗಳಲ್ಲಿ ಮಾನವ ಮತ್ತು ಹಣಕಾಸಿನ ಸಂಪನ್ಮೂಲಗಳನ್ನು ಒದಗಿಸುವುದು. ಹಾಗೆಯೇ ಪ್ರತೀ ಸಂಸ್ಥೆಗಳು ಸಹ ವಿಪತ್ತು ನಿರ್ವಹಣಾ ಯೋಜನೆಯನ್ನು ತಯಾರಿಸಿ ದಾಖಲೆ ರೂಪದಲ್ಲಿ ಇಟ್ಟಿರಬೇಕು ಅಲ್ಲದೇ ಆಗಿಂದಾಗ್ಗೆ ಅದನ್ನು ಪರೀಷ್ಕರಣೆ ಅದಕ್ಕೆ ಬೇಕಾದ ಹಣಕಾಸು, ತರಬೇತಿ, ಮಾನವ ಸಂಪನ್ಮೂಲಗಳನ್ನು ಒದಗಿಸುತ್ತಿರಬೇಕು.
ರಾಷ್ಟ್ರೀಯ ಕಾರ್ಯಕಾರಿ ಸಮಿತಿ : ಇದೊಂದು ಉನ್ನತ ಮಟ್ಟದ ಅಧಿಕಾರಿಗಳ ಸಮಿತಿಯಾಗಿದ್ದು ಕೇಂದ್ರದ ಕ್ಯಾಬಿನೆಟ್ ಕಾರ್ಯದರ್ಶಿ ಸಭಾಧ್ಯಕ್ಷ, ರಕ್ಷಣಾ ಪ್ರಮುಖರು, ಗೃಹ, ಅಣುಶಕ್ತಿ, ಆರೋಗ್ಯ, ಪರಿಸರ, ಜಲಸಂಪನ್ಮೂಲ, ಗ್ರಾಮೀಣಾಭಿವೃದ್ಧಿ ಇಲಾಖೆಗಳ ಕಾರ್ಯದರ್ಶಿಗಳು ಸದಸ್ಯರಾಗಿರುತ್ತಾರೆ. ಈ ಸಮಿತಿಯು ರಾಷ್ಟ್ರೀಯ ವಿಪತ್ತು ನಿರ್ವಹಣಾ ಯೋಜನೆಯನ್ನು ಪಾಲಿಸಲು ರಾಷ್ಟ್ರೀಯ ಪ್ರಾಧಿಕಾರಕ್ಕೆ ಸಲಹೆ ಮಾಡುವುದಲ್ಲದೇ ರಾಜ್ಯಗಳಲ್ಲಿ ಸಹ ಯೋಜನೆ ತಯಾರಿ ಹಾಗೂ ಅನುಷ್ಠಾನಕ್ಕೆ ಸಹಾಯ ಮಾಡುತ್ತದೆ. ವಿಪತ್ತು ಸಂಭವಿಸಿದಾಗ ಪರಿಹಾರ ಕಾರ್ಯಕ್ರಮಗಳ ಅನುಷ್ಠಾನಗಳನ್ನು ಉಸ್ತುವಾರಿ ನೋಡಿಕೊಳ್ಳುವುದು. ಇದೇ ತೆರನಾಗಿ ಪ್ರತೀ ರಾಜ್ಯಗಳಲ್ಲಿ ಸಹ ರಾಜ್ಯದ ಮಖ್ಯ ಕಾರ್ಯದರ್ಶಿಗಳ ನೇತೃತ್ವದಲ್ಲಿ ರಾಜ್ಯ ಕಾರ್ಯಕಾರಿ ಸಮಿತಿಗಳಿವೆ. ಪ್ರಧಾನ ಮಂತ್ರಿಗಳ ಹತ್ತು ವಿಪತ್ತುಗಳ ಆಪತ್ತುಗಳನ್ನು ತಡೆಯಲು ಇರುವ ಹತ್ತು ಅಂಶಗಳ ಕಾರ್ಯಸೂಚಿ ಹಾಗೂ ವಿಶ್ವ ಸಂಸ್ಥೆಯ ಸೆಂದಾಯಿ (SENDAI) ಚೌಕಟ್ಟಿನ ಅಡಿಯಲ್ಲಿ ಈ ಸಮಿತಿಗಳು ಕಾರ್ಯಸೂಚಿಯನ್ನು ತಯಾರಿಸುತ್ತವೆ.
ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಂಸ್ಥೆ : ಕಾಯ್ದೆಯು ಈ ಸಂಸ್ಥೆಗೆ ವಿಪತ್ತು ನಿರ್ವಹಣಾ ಯೋಜನೆ, ತರಭೇತಿ, ಸಂಶೋಧನೆ, ರಾಷ್ಟ್ರೀಯ ಮಟ್ಟದಲ್ಲಿ ವಿಪತ್ತುಗಳ ನಿರ್ವಹಣೆ ವಿಷಯಗಳನ್ನು ಸಂಗ್ರಹಣೆ ಮಾಡುವ ಜವಾಬ್ದಾರಿ ಹೊಂದಿದೆ. ದಿಲ್ಲಿಯಲ್ಲಿರುವ ಈ ಸಂಸ್ಥೆಯು ದೇಶ ಹಾಗೂ ರಾಜ್ಯಗಳಲ್ಲಿ ವಿಪತ್ತುಗಳ ಅಪಾಯವನ್ನು ಕಡಿಮೆ ಮಾಡಲು/ತಗ್ಗಿಸಲು ಬೇಕಾದ ಕ್ರಮಗಳ ಬಗ್ಗೆ ಸಲಹೆ ನೀಡುವುದಲ್ಲದೇ ದೇಶಾದ್ಯಂತ ವಿಪತ್ತು ನಿರ್ವಹಣೆಗೆ ಅಗತ್ಯವಿರುವ ಮಾನವ ಸಂಪನ್ಮೂಲಗಳ ತರಬೇತಿ ಕಾರ್ಯಕ್ರಮವನ್ನು ನಡೆಸುತ್ತದೆ.
ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯಾ ಪಡೆ : ದೇಶದಲ್ಲಿ ವಿಪತ್ತು ನಿರ್ವಹಣಾ ಕಾಯ್ದೆ ಬರುವವರೆಗೆ ಸಾಮಾನ್ಯವಾಗಿ ಯಾವುದೇ ವಿಪತ್ತುಗಳು ಸಂಭವಿಸಿದಾಗ ಸ್ಥಳೀಯ ಪೋಲೀಸರು, ಅರೆ ಸೈನಿಕ, ಸೈನ್ಯದ ಪಡೆಗಳು ವಿಪತ್ತು ನಿರ್ವಹಣೆಯಲ್ಲಿ ತೊಡಗುತ್ತಿದ್ದವು. ಆದರೆ ಈ ಪಡೆಗಳು ಅಂತಹ ವಿಪತ್ತು ನಿರ್ವಹಣೆಗಳಲ್ಲಿ ವಿಶೇಷ ತರಬೇತಿ ಪಡೆದವುಗಳಲ್ಲ. ಆದ್ದರಿಂದ ಕಾಯ್ದೆಯ ಅಡಿಯಲ್ಲಿ ಬೇರೆ ಬೇರೆ ತರಹದ ವಿಪತ್ತು ನಿರ್ವಹಣೆಗಾಗಿಯೇ ವಿಶೇಷವಾಗಿ ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯಾ ಪಡೆಯನ್ನು ಸ್ಥಾಪಿಸಲಾಗಿದೆ. ಈ ಪಡೆಯು ಆಯ್ದ ಅರೆ ಸೈನಿಕ ಪಡೆಯ ಯೋಧರಿಂದ ಕೂಡಿದ್ದು ವಿಶೇಷ ತರಬೇತಿ ಮುಖ್ಯವಾಗಿ ಭೂಕಂಪ, ರಾಸಾಯನಿಕ ಅಪಘಾತಗಳು/ ವಿಪತ್ತು, ಜೈವಿಕ ಯುದ್ಧ/ವಿಪತ್ತು, ರೇಡಿಯಲಾಜಿಕಲ್, ನ್ಯೂಕ್ಲಿಯರ್ ಯುದ್ಧ/ವಿಪತ್ತುಗಳನ್ನು ಎದುರಿಸುವಲ್ಲಿ/ ತಡೆಯುವಲ್ಲಿ ವಿಶೇಷ ಪರಿಣಿತಿ ಹೊಂದಿರುವ ಪಡೆ ಆಗಿದೆ. ಸದ್ಯ ನಮ್ಮ ದೇಶದಲ್ಲಿ ಅಂತಹ ತರಬೇತಿ ಪಡೆದ 12 ಬೆಟಾಲಿಯನ್‌ಗಳು ಇದ್ದು ಅವುಗಳು ತರಬೇತಿ ಹೊಂದಿರುವ ಎಂಜಿನಿಯರ್, ಟೆಕ್ನಿಷಿಯನ್ಸ್, ವೈದ್ಯರು, ಅರೆ ವೈದ್ಯಕೀಯ, ಶ್ವಾನ ದಳಗಳನ್ನು, ಜೀವ ರಕ್ಷಕಾ ವಿಶೇಷ ಪರಿಕರಗಳನ್ನು ಹೊಂದಿರುವ ಸುಸಜ್ಜಿತ ಪಡೆಯಾಗಿದೆ. ಕನಾಟಕಕ್ಕೆ ಅತೀ ಸಮೀಪವಾಗಿರುವ ಇಂತಹಎನ್.ಡಿ.ಆರ್.ಎಫ್. ಬೆಟಾಲಿಯನ್ ಪುಣೆಯಲ್ಲಿದೆ. ಪ್ರತೀ ರಾಜ್ಯದಲ್ಲಿಯೂ ರಾಜ್ಯ ವಿಪತ್ತು ಪ್ರತಿಕ್ರಿಯಾ ಪಡೆ ರಚಿಸಬೇಕಾಗಿದ್ದು, ದೇಶದ ಹಲವು ರಾಜ್ಯಗಳಲ್ಲಿ ಇನ್ನೂ ಅಂತಹ ಪಡೆಗಳ ರಚನೆ, ತರಬೇತಿ, ತಯಾರಿ ನಡೆದಿಲ್ಲ.
ಕೋವಿಡ್ ಸಂದರ್ಭ ಬಳಕೆ : ಕೋವಿಡ್‌ನ ಈ ಸಂದರ್ಭದಲ್ಲಿ ದೇಶಾದ್ಯಂತ ಲಾಕ್‌ಡೌನ್‌ನ್ನು ಈ ವಿಪತ್ತು ನಿರ್ವಹಣಾ ಕಾಯ್ದೆಯ ಅಡಿಯಲ್ಲಿ ಹೇರಲಾಗಿದೆ. ಅಲ್ಲದೇ ಈ ಸಾಂಕ್ರಾಮಿಕ ರೋಗ ಎದುರಿಸಲು ಕೆಲವು ರಾಜ್ಯಗಳು 1897ರ ಸಾಂಕ್ರಾಮಿಕ ರೋಗ ಕಾಯ್ದೆಯನ್ನು, ಭಾರತೀಯ ದಂಡ ಸಂಹಿತೆಯ 269ನೇ ವಿಧಿ (ರೋಗ ತಡೆಯುವಲ್ಲಿ ನಿರ್ಲಕ್ಷ್ಯ), 270 (ರೋಗ ಹರಡುವಂತಹ ಮಾರಕ ಕ್ರಿಯೆ), 271(ಕ್ವಾರಂಟೈನ್ ನಿಯಮ ಉಲ್ಲಂಘನೆ)ಮತ್ತು ಕೆಲವು ರಾಜ್ಯಗಳು ಆ ರಾಜ್ಯಗಳಲ್ಲಿರುವ ಇನ್ನೂ ಕೆಲವು ಕಾಯ್ದೆಗಳನ್ನು, ಅಧ್ಯಾದೇಶಗಳನ್ನು ಮಾಡಿ ಬಳಸಿಕೊಂಡಿವೆ.
ಡಾ| ಅಶ್ವಿನ್ ಕುಮಾರ ಗೋಪಾಡಿ
ಕಮ್ಯುನಿಟಿ ಮೆಡಿಸಿನ್, ಕೆ.ಎಂ.ಸಿ., ಮಣಿಪಾಲ
ಡಾ| ಜಯರಾಜ್ ಬಾಲಕೃಷ್ಣನ್
ಮುಖ್ಯಸ್ಥರು, ಎಮರ್ಜೆನ್ಸಿ ಮೆಡಿಸಿನ್,
ಕೆ.ಎಂ.ಸಿ., ಮಣಿಪಾಲ