Advertisement

ವಿಪತ್ತು ನಿರ್ವಹಣೆ: 69 ಕಾಳಜಿ ಕೇಂದ್ರ ತೆರೆಯಲು ಸಿದ್ಧತೆ

04:49 PM May 31, 2022 | Team Udayavani |

ಚಿಕ್ಕಮಗಳೂರು: ಮುಂಗಾರು ಮಳೆ ಸದ್ಯದಲ್ಲೇ ಪ್ರವೇಶಿಸಲಿದ್ದು, ಮಳೆಯಿಂದ ಜಿಲ್ಲೆಯಲ್ಲಿ ಸಂಭವಿಸಬಹುದಾದ ವಿಪತ್ತು ನಿರ್ವಹಣೆಗೆ ಜಿಲ್ಲಾಡಳಿತ ಸಕಲ ಸಿದ್ಧತೆಯಲ್ಲಿ ತೊಡಗಿದೆ. ಈ ನಿಟ್ಟಿನಲ್ಲಿ ಜಿಲ್ಲಾದ್ಯಂತ 69 ಕಾಳಜಿ ಕೇಂದ್ರಗಳನ್ನು ತೆರೆಯಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

Advertisement

ಕೊಪ್ಪ ತಾಲೂಕಿನಲ್ಲಿ 6, ಚಿಕ್ಕಮಗಳೂರು 6, ನರಸಿಂಹರಾಜಪುರ 17, ಶೃಂಗೇರಿ 7, ಕಡೂರು 2, ಮೂಡಿಗೆರೆ 24 ಹಾಗೂ ಕಳಸ ತಾಲೂಕಿನಲ್ಲಿ 7 ಕಾಳಜಿ ಕೇಂದ್ರಗಳನ್ನು ತೆರೆಯಲು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಇತ್ತೀಚೆಗೆ ನಡೆದ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.

ನಾಲ್ಕೈದು ವರ್ಷಗಳಿಂದ ಜಿಲ್ಲೆಯ ಮಲೆನಾಡು ತಾಲೂಕುಗಳಲ್ಲಿ ಮಳೆ ಭಾರೀ ಅನಾಹುತ ಸೃಷ್ಟಿಸಿದ್ದು, ಮಳೆಗಾಲದಲ್ಲಿ ಸಂಭವಿಸಬಹುದಾದ ಅನಾಹುತವನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ ಮುಂಚಿತವಾಗಿ ಸಿದ್ಧತೆಗಳನ್ನು ನಡೆಸಲಾಗುತ್ತಿದೆ.

ಪ್ರತೀ ಕಾಳಜಿ ಕೇಂದ್ರಕ್ಕೆ ಗ್ರಾಮ ಲೆಕ್ಕಾಧಿಕಾರಿ, ಪಂಚಾಯತ್‌ ಅಭಿವೃದ್ಧಿ ಅಧಿಕಾರಿ, ರಾಜಸ್ವ ನಿರೀಕ್ಷಕರು, ಹಾಸ್ಟೆಲ್‌ ವಾರ್ಡನ್‌ ಸೇರಿದಂತೆ ಉನ್ನತ ಅಧಿಕಾರಿಯನ್ನು ನೋಡೆಲ್‌ ಅಧಿಕಾರಿಯಾಗಿ ನೇಮಕ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಜಿಲ್ಲಾಡಳಿತ ತರಬೇತಿ ನೀಡಲಿದೆ.

ಜಿಲ್ಲೆಯಲ್ಲಿ ಭೂ ಕುಸಿತ ಸಂಭವಿಸಬಹುದಾದ ಸ್ಥಳಗಳನ್ನು ಗುರುತಿಸಿದ್ದು, ಸ್ಥಳೀಯ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಳ್ಳಲಾಗಿದೆ. ವಿಪತ್ತು ಸಂಭವಿಸಿದಲ್ಲಿ ಸಂತ್ರಸ್ತರನ್ನು ಕಾಳಜಿ ಕೇಂದ್ರಗಳಿಗೆ ಸ್ಥಳಾಂತರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಸ್ವಯಂ ಸೇವಕರಿಗೆ ಎನ್‌ಡಿಆರ್‌ಎಫ್‌ ತಂಡದಿಂದ ತರಬೇತಿ ಕೊಡಿಸಲಾಗುತ್ತಿದೆ.

Advertisement

ಪ್ರತೀ ಗ್ರಾಪಂ ಟಾಸ್ಕ್ಫೋರ್ಸ್‌ಗೆ ವಿಪತ್ತು ನಿರ್ವಹಣೆ ಮತ್ತು ಮುಂಜಾಗ್ರತಾ ಕ್ರಮ ಕುರಿತು ಎಟಿಐ ವತಿಯಿಂದ ತರಬೇತಿಯನ್ನು ನೀಡಲಾಗಿದೆ. ವಿವಿಧ ಇಲಾಖೆಯಲ್ಲಿ ವಿಪತ್ತು ನಿರ್ವಹಣೆಗೆ ಸಾಮಗ್ರಿಗಳ ಮಾಹಿತಿ ಸಂಗ್ರಹಿಸಿದ್ದು, ಅಗತ್ಯ ವಸ್ತುಗಳ ಖರೀದಿಗೆ ಕ್ರಮ ವಹಿಸಲಾಗಿದೆ. ರಸ್ತೆ ಬದಿಯ ಮರಗಳು ಬೀಳುವ ಸ್ಥಿತಿಯಲ್ಲಿದ್ದರೆ ಅವುಗಳ ತೆರವಿಗೆ ಕ್ರಮ ವಹಿಸಲಾಗಿದೆ. ವಿದ್ಯುತ್‌ ಕಂಬಗಳನ್ನು ಸುಸ್ಥಿತಿಯಲ್ಲಿಡುವಂತೆ ಸೂಚಿಸಲಾಗಿದೆ.

ಭೂ ಕುಸಿತ ಉಂಟಾಗಿ ರಸ್ತೆ ಸಂಚಾರಕ್ಕೆ ಅಡ್ಡಿಯಾದಲ್ಲಿ ಮಣ್ಣು ತೆರವುಗೊಳಿಸಲು ಜೆಸಿಬಿ ಮತ್ತು ಹಿಟಾಚಿಗಳನ್ನು ಗುರುತಿಸಲಾಗಿದೆ. ವಿವಿಧ ಇಲಾಖೆಗಳು ದಿನ 24 ಗಂಟೆ ಕರ್ತವ್ಯ ನಿರ್ವಹಿಸಲು ವಿಪತ್ತು ನಿರ್ವಹಣೆ ಕಂಟ್ರೋಲ್‌ ರೂಮ್‌ ಸ್ಥಾಪಿಸಲಾಗಿದೆ. ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳನ್ನೊಳಗೊಂಡ ವಾಟ್ಸ್‌ ಆ್ಯಪ್‌ ಗ್ರೂಪ್‌ ರಚಿಸಲಾಗಿದ್ದು ಅಗತ್ಯ ಮಾಹಿತಿ ನೀಡಲಾಗುತ್ತಿದೆ.

ತುರ್ತು ಕಾರ್ಯಗಳಿಗೆ ನುರಿತ ಈಜುಗಾರರು, ಸ್ವಯಂ ಸೇವಕರನ್ನು ಗುರುತಿಸಿದ್ದು, ಅಗತ್ಯ ಮಾಹಿತಿಗಳನ್ನು ಇಲಾಖೆ ಅಧಿಕಾರಿಗಳಿಂದ ಪಡೆದುಕೊಳ್ಳಲಾಗುತ್ತಿದೆ. ವಿಪತ್ತು ನಿರ್ವಹಣೆಗೆ ಉಪಕರಣಗಳ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ. ದುರಸ್ತಿ ಕಾರ್ಯಕ್ಕೆ ಅವಶ್ಯಕವಿರುವ ಮಾನವ ಸಂಪನ್ಮೂಲಗಳ ಮಾಹಿತಿ ಪಡೆದುಕೊಳ್ಳಲಾಗುತ್ತಿದೆ.

ವಿಪತ್ತು ಸಮಯದಲ್ಲಿ ಅವಶ್ಯಕವಾಗುವ ವೈದ್ಯಕೀಯ ಉಪಕರಣ, ಔಷಧಗಳನ್ನು ದಾಸ್ತಾನು ಮಾಡಿಕೊಳ್ಳಲು ಜಿಲ್ಲಾಡಳಿತ ಕ್ರಮ ವಹಿಸಿದೆ. ಒಟ್ಟಾರೆ ಜಿಲ್ಲೆಯಲ್ಲಿ ವಿಪತ್ತು ಸಮರ್ಥವಾಗಿ ಎದುರಿಸಲು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next