Advertisement

ಬಿಜೆಪಿ ಕಾರ್ಯಕ್ರಮದಿಂದ ಕಾಂಗ್ರೆಸ್‌ಗೆ ಹತಾಶೆ: ಅಶೋಕ್‌

12:34 AM Jan 19, 2023 | Team Udayavani |

ಕಲಬುರಗಿ: ಇಷ್ಟು ದೊಡ್ಡ ಕಾರ್ಯಕ್ರಮ ನೋಡಿ ಕಾಂಗ್ರೆಸ್‌ನವರಲ್ಲಿ ಹತಾಶೆ ಉಂಟಾಗಿ ತಳಮಳ ಶುರುವಾಗಿದೆ. ಸ್ವಾಮಿ ಅವು ಕೇವಲ ಹಕ್ಕುಪತ್ರಗಳಲ್ಲ. ಸ್ವಂತ ಮನೆ ಎನ್ನುವ ಭದ್ರತೆ ನೀಡುವಂತಹ ಪಕ್ಕಾ ದಾಖಲೆ ನೀಡಲಾಗುತ್ತಿದೆ. ನಿಮ್ಮ ಆರೋಪದಲ್ಲಿ ಹುರುಳಿಲ್ಲ ಎಂದು ಕಂದಾಯ ಸಚಿವ ಆರ್‌. ಅಶೋಕ ಸ್ಪಷ್ಟಪಡಿಸಿದರು.

Advertisement

ಅಫಜಲಪುರ ತಾಲೂಕಿನ ದೇವಲಗಾಣಗಾಪುರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಕಾಂಗ್ರೆಸ್‌ 75 ವರ್ಷಗಳಿಂದ ದೇಶದಲ್ಲಿ ಅಧಿಕಾರ ಮಾಡಿದ್ದರೂ ಅಲೆಮಾರಿಗಳಿಗೆ ಮತ್ತು ತಾಂಡಾ ನಿವಾಸಿಗಳಿಗೆ ಅವರದೇ ಯಜಮಾನಿಕೆ ಇರುವ ಮನೆಗಳಿಗೆ, ಊರುಗಳಿಗೆ ಹೆಸರು ಕೊಡಲಿಕ್ಕಾಗಿಲ್ಲ. ಮನೆಯ ದಾಖಲೆಗಳಿರಲಿಲ್ಲ. ಅವುಗಳನ್ನು ನಾವು ಮಾಡಿ ಅವರಿಗೆ ನೆಮ್ಮದಿ ಕೊಡುತ್ತಿದ್ದೇವೆ. ಇದಕ್ಕೆ ನಿಮ್ಮ ಅಡ್ಡಿ ಯಾಕೆ ಎಂದು ಮಾಜಿ ಸಚಿವ ಪ್ರಿಯಾಂಕ್‌ ಖರ್ಗೆ ಆರೋಪಕ್ಕೆ ತಿರುಗೇಟು ನೀಡಿದರು.

ಅವರು ತೆರಿಗೆ ಕಟ್ಟುತ್ತಿರುವುದು ನಿಜ, ಅವು ಅವರದ್ದೇ ಮನೆಗಳೂ ನಿಜ. ಆದರೆ, ದಾಖಲೆಗಳಿದ್ದವಾ? ನಿಮ್ಮ ಕಾಲದಲ್ಲಿ ಅದನ್ನು ಮಾಡಲು ಆಗಿದೆಯಾ? ಹಾಗಿದ್ದರೆ ನಾವು ಮಾಡಲು ಹೊರಟಿರುವ ಕಾರ್ಯಕ್ಕೆ ನಿಮ್ಮದ್ಯಾಕೆ ಅಡ್ಡಿ. ಸುಖಾ ಸುಮ್ಮನೆ ಎಲ್ಲದರಲ್ಲೂ ವಿವಾದ ಉಂಟು ಮಾಡಿ ಜನರ ಮನಸ್ಸು ಒಡೆಯುವ ಕೆಲಸ ಮಾಡಬೇಡಿ. ಸ್ವಾಮಿ ನಾವು ಹಕ್ಕು ಕಸಿದುಕೊಳ್ಳುತ್ತಿಲ್ಲ. ಬದಲಾಗಿ ಹಕ್ಕುಗಳನ್ನು, ದಾಖಲೆಗಳನ್ನು ಎಲ್ಲದಕ್ಕಿಂತ ಹೆಚ್ಚಾಗಿ ಮನೆಯ ಮಾಲಿಕರಿಗೆ ನೆಮ್ಮದಿಯನ್ನು ನೀಡುತ್ತಿದ್ದೇವೆ ಎಂದರು.

ಮಾಚನಾಳದ ಜನರಿಗೆ ಸೂರು
ಕಂದಾಯ ಸಚಿವರು ತಾವು ಗ್ರಾಮ ವಾಸ್ತವ್ಯ ಮಾಡಿರುವ ಕಲಬುರಗಿ ದಕ್ಷಿಣ ವಿಧಾನಸಭೆಯ ಮಾಚನಾಳ ತಾಂಡಾದಲ್ಲಿ ಈಗಾಗಲೇ ಮನೆಗಳಿಗಾಗಿ ಯಾರು ಅರ್ಜಿ ಸಲ್ಲಿಸಿದ್ದಾರೋ ಅವರದ್ದು ವಿಶೇಷ ಪ್ರಕರಣವೆಂದು ಪರಿಗಣಿಸಿ ಶೀಘ್ರವೇ ಎಲ್ಲರಿಗೂ ಮನೆ ಕಟ್ಟಿಸಿಕೊಡುವ ನಿಟ್ಟಿನಲ್ಲಿ ನಾನಾ ವಸತಿ ಯೋಜನೆಗಳಲ್ಲಿ ಪರಿಗಣಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ಅದೂ ಅಲ್ಲದೆ, ಗ್ರಾಮ ವಾಸ್ತವ್ಯದ ವೇಳೆಯಲ್ಲಿ ಘೋಷಣೆ ಮಾಡಿದ್ದ 1 ಕೋಟಿ ರೂ. ವಿಶೇಷ ಅನುದಾನವನ್ನು ಗುರುವಾರ ಬಿಡುಗಡೆಯೂ ಮಾಡಿದರು.

ಶಾಸಕ ಹಾಗೂ ಕೆಕೆಆರ್‌ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ್‌ ರೇವೂರ್‌, ಕುಡಚಿ ಶಾಸಕ ಪಿ.ರಾಜೀವ್‌ ಸಹಿತ ಅನೇಕ ಮುಖಂಡರು ಇದ್ದರು.

Advertisement

ಮುಖ್ಯಗುರುಗಳಿಗೆ ಅಭಿನಂದನೆ
ಕಂದಾಯ ಸಚಿವ ಆರ್‌. ಅಶೋಕ್‌ ಅವರು ಮಾಚನಾಳ ತಾಂಡಾದ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಗ್ರಾಮ ವಾಸ್ತವ್ಯ ಮಾಡಿದ್ದರು. ಅದಕ್ಕಾಗಿ ಇಡೀ ಶಾಲೆಯನ್ನು ಸ್ವತ್ಛಗೊಳಿಸಿ, ಅತ್ಯಂತ ಉತ್ತಮವಾದ ವ್ಯವಸ್ಥೆ ಕಲ್ಪಿಸಲಾಗಿತ್ತು. ವಾಸ್ತವ್ಯವನ್ನು ಮುಗಿಸಿ ಬುಧವಾರ ಹೋಗುವಾಗ ಶಾಲೆಯ ಮೂಲಭೂತ ಸೌಲಭ್ಯಗಳನ್ನು ಸಚಿವರು ವೀಕ್ಷಿಸಿದರು. ಈ ವೇಳೆಯಲ್ಲಿ ಡಿಡಿಪಿಐ ಸಕ್ರೆಪ್ಪ ಬಿರಾದಾರ್‌, ಬಿಇಒ ಶಂಕ್ರಮ್ಮ ಢವಳಗಿ, ಸಾಕ್ಷರತಾ ಇಲಾಖೆಯ ಅಧಿಕಾರಿಗಳಿಗೆ ಮತ್ತು ಶಾಲೆಯ ಮುಖ್ಯೋಪಾಧ್ಯಾಯ ಸಂತೋಷ ಗಂಗು ಅವರಿಗೆ ಅಭಿನಂದನೆ ಸಲ್ಲಿಸಿದರು. ಈ ವೇಳೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಅಧಿಕಾರಿಗಳು ಇದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next