Advertisement

ಬೀದಿಗೆ ಬಂತು ಕೈ ನಾಯಕರ ಭಿನ್ನಮತ; ಮೂಡದ ಒಮ್ಮತ

12:59 PM Jan 12, 2018 | Team Udayavani |

ರಾಯಚೂರು: ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದು ಎಲ್ಲ ಪಕ್ಷಗಳು ಪಕ್ಷ ಸಂಘಟನೆಗೆ ಒತ್ತು ನೀಡುತ್ತಿವೆ. ಆದರೆ, ಜಿಲ್ಲಾ ಕಾಂಗ್ರೆಸ್‌ ನಾಯಕರಲ್ಲಿ ಮಾತ್ರ ಒಮ್ಮತ ಮರೆಯಾಗಿದ್ದು, ಭಿನ್ನಮತವೇ ಪ್ರಧಾನವಾಗಿದೆ.
ರಾಜಕೀಯ ಪಕ್ಷ ಎಂದ ಮೇಲೆ ಭಿನ್ನಮತ ಸಹಜವೇ. ಅದನ್ನು ವರಿಷ್ಠರು ತೆರೆಮರೆಯಲ್ಲಿ ಬಗೆಹರಿಸುತ್ತಾರೆ. ಆದರೆ, ಜಿಲ್ಲಾ ಕಾಂಗ್ರೆಸ್‌ ಮಟ್ಟಿಗೆ ಬಣ ರಾಜಕೀಯ ಎನ್ನುವುದು ವರಿಷ್ಠರಿಂದಲೂ ಇತ್ಯರ್ಥಗೊಳಿಸದ ಬಿಕ್ಕಟ್ಟಾಗಿ ಪರಿಣಮಿಸಿದೆ.

Advertisement

ಇತ್ತೀಚೆಗೆ ಕಾಂಗ್ರೆಸ್‌ ಕಾರ್ಯಾಲಯದಲ್ಲಿ ಒಂದು ಬಣದ ಮುಖಂಡರು ತಮ್ಮ ನಾಯಕರ ಭಾವಚಿತ್ರ ಇಲ್ಲ ಎಂಬ ಕಾರಣಕ್ಕೆ ವಾಚಾಮಗೋಚರವಾಗಿ ಹರಿಹಾಯ್ದಿದ್ದಲ್ಲದೇ, ಕಟ್ಟಿದ ಬ್ಯಾನರ್‌ ಹರಿದು ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದರು. ಇಂಥ ಕ್ಷುಲ್ಲಕ ಕಾರಣಕ್ಕೆ ಉಭಯ ಬಣಗಳ ನಾಯಕರ ಮಧ್ಯ ಅಸಮಾಧಾನ ಭುಗಿಲೆದ್ದು, ಪಕ್ಷದ ಗೌರವ ಬೀದಿಗೆ ಬಿದ್ದಿದೆ.
 
ಭಿನ್ನಮತ ಇಂದು ನಿನ್ನೆಯದಲ್ಲ: ಪಕ್ಷದ ಹಿರಿಯ ಮುಖಂಡ ರಾದ ಎನ್‌.ಎಸ್‌.ಬೋಸರಾಜ್‌, ಬಿ.ವಿ. ನಾಯಕ ವಿರುದ್ಧ ಮತ್ತೂಂದು ಗುಂಪಿನ ನಾಯಕರು ಹಿಂದಿನಿಂದಲೂ ಅಸಮಾಧಾನ ಹೊರಹಾಕುತ್ತಲೇ ಬಂದಿದ್ದಾರೆ. ಮಾಜಿ ಶಾಸಕ ಸೈಯದ್‌ ಯಾಸಿನ್‌ ಖುದ್ದು ಸುದ್ದಿಗೋಷ್ಠಿ ನಡೆಸಿ ಈ ನಾಯಕರ ವಿರುದ್ಧ ಅಸಮಾಧಾನ ಹೊರಹಾಕಿದ್ದಲ್ಲದೇ, ಎಲ್ಲ ಬೆಳವಣಿಗೆಗಳನ್ನು ವರಿಷ್ಠರ ಗಮನಕ್ಕೆ ತರುವುದಾಗಿ ತಿಳಿಸಿದ್ದರು. ಮಾಜಿ ಜಿಲ್ಲಾಧ್ಯಕ್ಷ ಎ.ವಸಂತಕುಮಾರ್‌ ಕೂಡ ಇದೇ ಧಾಟಿಯಲ್ಲಿ ಆರೋಪ ಮಾಡಿದ್ದರು. ಇನ್ನು ಹಲವು ವರ್ಷಗಳಿಂದ ಪಕ್ಷದಲ್ಲಿದ್ದ ರವೀಂದ್ರ ಜಲ್ದಾರ್‌ ಪಕ್ಷ ಬಿಡುವಾಗ ಆರೋಪ ಮಾಡಿಯೇ ಹೊರಬಂದಿದ್ದರು. ಆರ್‌ಡಿಎ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದ ಜಿಂದಪ್ಪ, ನಗರಸಭೆ ಮಾಜಿ ಸದಸ್ಯ ಬಾಬರ್‌ ಹೀಗೆ ಅನೇಕರು ಮತ್ತೂಂದು ಗುಂಪಿನ ವಿರುದ್ಧ ವಾಗ್ಧಾಳಿ ನಡೆಸಿದವರೇ ಆಗಿದ್ದಾರೆ.

ಇದನ್ನೆಲ್ಲ ಗಂಭೀರವಾಗಿ ಪರಿಗಣಿಸದ ಎನ್‌.ಎಸ್‌.ಬೋಸರಾಜ್‌, ಬಿ.ವಿ.ನಾಯಕ ಸೇರಿ ಇತರೆ ನಾಯಕರು ಪಕ್ಷದ ಸೂಚನೆ ಮೇರೆಗೆ ನಡೆದುಕೊಳ್ಳುತ್ತೇವೆ ಎಂದಷ್ಟೇ ಹೇಳಿದ್ದರು. ಜಿಲ್ಲಾಧ್ಯಕ್ಷ ರಾಮಣ್ಣ ಇರಬಗೇರಾ ಕೂಡ ಪಕ್ಷ ವಿರೋಧಿ  ಚಟುವಟಿಕೆ ನಡೆಸುವವರ ವಿರುದ್ಧ ಕ್ರಮದ ಎಚ್ಚರಿಕೆ ನೀಡಿದದರು. ಇಷ್ಟೆಲ್ಲ ನಡೆದರೂ ಪಕ್ಷದಲ್ಲಿ ಮಾತ್ರ ಯಾವುದೇ ಬದಲಾವಣೆ ಕಾಣುತ್ತಿಲ್ಲ. ಅದೇ ಅಸಮಾಧಾನ, ಒಳಜಗಳ, ಆರೋಪ ಪ್ರತ್ಯಾರೋಪಗಳು ಸಾಂಗವಾಗಿ ಸಾಗಿವೆ. 

ರಾಜ್ಯಾಧ್ಯಕ್ಷರಿಗೆ ದೂರು?: ಪಕ್ಷದ ಹಿರಿಯ ನಾಯಕರು ಕೈಗೊಂಡಿರುವ ಪ್ರಚಾರ ಯಾತ್ರೆ ಜ.12ರಂದು ನಗರಕ್ಕೆ ಆಗಮಿಸಲಿದೆ. ಇದರಲ್ಲಿ ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ, ಕಾರ್ಯಾಧ್ಯಕ್ಷ ಎಸ್‌. ಆರ್‌.ಪಾಟೀಲ್‌, ಮಲ್ಲಿಕಾರ್ಜುನ ಖರ್ಗೆ, ಕೆ.ಎಚ್‌.ಮುನಿಯಪ್ಪ, ಎಐಸಿಸಿ ಕಾರ್ಯದರ್ಶಿಗಳು ಸೇರಿ ಅನೇಕರು ಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಅವರ ಎದುರು ಭಿನ್ನಮತೀಯರು ಅಳಲು ತೋಡಿಕೊಳ್ಳುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ. ಉಭಯ ಬಣಗಳ ಕಾದಾಟ ವರಿಷ್ಠರಿಗೆ ತಲೆನೋವಾಗಿ ಪರಿಣಮಿಸಿದರೂ ಅಚ್ಚರಿಯಿಲ್ಲ. ಜಿಲ್ಲೆಗೆ ಬಹಳ ದಿನಗಳ ನಂತರ ಆಗಮಿಸುತ್ತಿರುವ ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ ಪರಿಸ್ಥಿತಿ ತಿಳಿಗೊಳಿಸುವರೋ ಅಥವಾ ಒಂದು ಗುಂಪಿನ ಪರ ಬ್ಯಾಟಿಂಗ್‌ ಮಾಡುವರೋ ಎಂಬ ಕುತೂಹಲ ಮೂಡಿದೆ. ಆದರೆ, ವರಿಷ್ಠರು ಪಕ್ಷ ಸಂಘಟಿಸುತ್ತಿರುವ ಇಂಥ ವೇಳೆ ಜಿಲ್ಲಾ ನಾಯಕರು ಈ ರೀತಿ ಭಿನ್ನಮತ ಜಗಜ್ಜಾಹೀರು ಮಾಡುತ್ತಿರುವುದು ಮಾತ್ರ ವರಿಷ್ಠರಿಗೆ ಅಪಥ್ಯವೇ ಸರಿ.

ಕಾಂಗ್ರೆಸ್‌ ಕಾರ್ಯಾಲಯದಲ್ಲಿ ಈಚೆಗೆ ನಡೆದ ಘಟನೆ ಬಗ್ಗೆ ಈಗಾಗಲೇ ಆ ನಾಯಕರೇ ಬೇಸರ ವ್ಯಕ್ತಪಡಿಸಿದ್ದಾರೆ. ಎಲ್ಲರೂ ಒಗ್ಗೂಡಿ ಯಾತ್ರೆಯನ್ನು ಯಶಸ್ವಿಗೊಳಿಸುವ ಬಗ್ಗೆ ಚರ್ಚಿಸಲಾಗಿದೆ. ಪಕ್ಷದ ವರಿಷ್ಠರು ಕೇಳಿದರೆ ವಸ್ತುಸ್ಥಿತಿ ವಿವರಿಸಲಾಗುವುದು. ಪಕ್ಷದಲ್ಲಿ ಸಣ್ಣಪುಟ್ಟ ಭಿನ್ನಾಭಿಪ್ರಾಯ ಸಹಜ. ರಾಮಣ್ಣ ಇರಬಗೇರಾ, ಕಾಂಗ್ರೆಸ್‌ ಜಿಲ್ಲಾಧ್ಯಕ್ಷ

Advertisement

„ಸಿದ್ಧಯ್ಯಸ್ವಾಮಿ ಕುಕನೂರು

Advertisement

Udayavani is now on Telegram. Click here to join our channel and stay updated with the latest news.

Next