ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ “ಟಿಕೆಟ್ ಕ್ರಾಂತಿ” ಮಾಡುವ ನಿರೀಕ್ಷೆ ಹುಟ್ಟು ಹಾಕಿದ್ದ ಬಿಜೆಪಿ ವರಿಷ್ಠರು ಅಳೆದು ತೂಗಿ ಬಿಡುಗಡೆ ಮಾಡಿದ ಪಟ್ಟಿಗೆ ಅನುಸರಿಸಿದ ಮಾನದಂಡ ಈಗ ಸಾರ್ವಜನಿಕ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಕರಾವಳಿಯ ಎರಡು ಜಿಲ್ಲೆ ಹೊರತುಪಡಿಸಿ ಉಳಿದ ಜಿಲ್ಲೆಗಳಲ್ಲಿ ನಡೆಸಿದ ಪ್ರಯೋಗಗಳು ಈ ಬಾರಿ “ಲೊಳಲೊಟ್ಟೆ” ಎಂಬ ಟೀಕೆಗೆ ಪಾತ್ರವಾಗುತ್ತಿದೆ.
ಟಿಕೆಟ್ ಹಂಚಿಕೆ ಪ್ರಕ್ರಿಯೆ ಆರಂಭವಾಗುವುದಕ್ಕೆ ಮುನ್ನವೇ ಬಣ್ಣ ಬಣ್ಣದ “ಮಾದರಿ”ಗಳನ್ನು ಹರಿಬಿಟ್ಟ ಬಿಜೆಪಿ ನಾಯಕರು ಕೊನೆಗೂ ಬೆಟ್ಟ ಅಗೆದು ಇಲಿ ಹುಡುಕಿದ ಸರ್ಕಸ್ ನಡೆಸಿದಂತಾಗಿದೆ. ಭ್ರಷ್ಟಾಚಾರ, ವಂಶವಾದ, ಜಾತಿ, ಸಿಡಿ ವ್ಯವಹಾರ, ಸಾಮಾನ್ಯ ಕಾರ್ಯಕರ್ತರಿಗೆ ಆದ್ಯತೆ ಎಂಬಿತ್ಯಾದಿ ಮಾನದಂಡಗಳು “ಸೆಲೆಕ್ಟಿವ್” ಪ್ರಯೋಗಕ್ಕೆ ಸೀಮಿತವಾಗಿವೆ.
ಎಲ್ಲೆಲ್ಲಿ ಕುಟುಂಬ ರಾಜಕಾರಣ?: ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪ್ರಮುಖರು ಪ್ರಯೋಗಿಸಿದ “ಡಿಎನ್‌ಎ ಪಾಲಿಟಿಕ್ಸ್ ” ಬಿಜೆಪಿ ಆಂತರಿಕ ವಲಯದಲ್ಲಿ ಭಾರಿ ಚರ್ಚೆಯನ್ನೇನೋ ಹುಟ್ಟಿ ಹಾಕಿತ್ತು. ಆದರೆ ಆ ವಾದ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆ ಎದುರಾದಾಗಲೇ ಬಿದ್ದು ಹೋಯ್ತು. ಈ ಬಾರಿ ಪ್ರಕಟಗೊಂಡ ಪಟ್ಟಿಯಲ್ಲಂತೂ ಕುಟುಂಬ ರಾಜಕಾರಣ ಬಿಜೆಪಿ ಪಾಲಿಗೆ ಒಂದು ವಸ್ತುವೇ ಅಲ್ಲ ಎಂಬ ಅನುಮಾನವನ್ನು ಸೃಷ್ಟಿಸುವಂತಿದೆ. ರಮೇಶ್ ಕತ್ತಿ, ನಿಖೀಲ್ ಕತ್ತಿ, ಬಿ.ವೈ.ವಿಜಯೇಂದ್ರ, ರತ್ನ ವಿಶ್ವನಾಥ ಮಾಮನಿ, ಗುತ್ತೇದಾರ್ ಕುಟುಂಬ, ರವಿ ಸುಬ್ರಹ್ಮಣ್ಯ ಸೇರಿದಂತೆ 20ಕ್ಕೂ ಹೆಚ್ಚು ಕುಟುಂಬ ಮೂಲಗಳನ್ನು ಈ ಪಟ್ಟಿಯಲ್ಲಿ ಹುಡುಕಬಹುದಾಗಿದೆ.
“ಸಿಡಿ”ಯಲ್ಲೂ ತಾರತಮ್ಯ: ಇದುವರೆಗೆ ಟಿಕೆಟ್ ಕಳೆದುಕೊಂಡ ಹಾಗೂ ಟಿಕೆಟ್ ಕೈ ತಪ್ಪುವ ಭೀತಿ ಎದುರಿಸುತ್ತಿರುವ ಹೆಚ್ಚಿನ ಹಾಲಿ ಶಾಸಕರು “ಸಿಡಿ”ಗೆ ಬಲಿಯಾಗಿದ್ದಾರೆ ಎಂಬುದು ಬಿಜೆಪಿಯ ಆಂತರಿಕ ಮೂಲಗಳ ವ್ಯಾಖ್ಯಾನ. ಐದಾರು ಮಂದಿ ಇಂಥ ಲೈಂಗಿಕ ಹಗರಣದ ಆರೋಪಕ್ಕೆ ಗುರಿಯಾದವರು ಎಂದು ಹೇಳಲಾಗುತ್ತಿದೆ. ಈ ಶಾಸಕರ ರಾಸಲೀಲೆ ಪ್ರಕರಣಗಳು ದೊಡ್ಡಮಟ್ಟದಲ್ಲಿ ಸದ್ದು ಮಾಡಿಲ್ಲ. ಆದರೆ ಇಂಥದ್ದೇ ಆರೋಪಕ್ಕೆ ಸಂಬಂಧಪಟ್ಟಂತೆ ನ್ಯಾಯಾಲಯಗಳಿಂದ ತಡೆಯಾಜ್ಞೆ ತಂದವರಿಗೆ ಟಿಕೆಟ್ ನೀಡಲಾಗಿದೆ.
ವಯೋಮಿತಿ: ನಿರ್ದಿಷ್ಟ ವಯೋಮಿತಿ ದಾಟಿದವರಿಗೆ ಟಿಕೆಟ್ ಇಲ್ಲ ಎಂಬ ಅಘೋಷಿತ ನಿಯಮವನ್ನು ಯಡಿಯೂರಪ್ಪ, ಈಶ್ವರಪ್ಪ ಮೇಲೆ ವಿಧಿಸಲಾಗಿದೆ. ಜಗದೀಶ್ ಶೆಟ್ಟರ್ ಕೂಡಾ ಅದೇ ಹಿರಿತನದ ಮಾನದಂಡದಲ್ಲಿ ಸಂತ್ರಸ್ತರಾಗಿದ್ದಾರೆ. ಆದರೆ ಅದೇ ನಿಯಮ ಗೋವಿಂದ ಕಾರಜೋಳ, ತಿಪ್ಪಾರೆಡ್ಡಿ, ವಿ.ಸೋಮಣ್ಣ ಸೇರಿದಂತೆ ಇನ್ನೂ ಕೆಲವರಿಗೆ ಅನ್ವಯವಾಗಿಲ್ಲ.
ರೌಡಿ ಶೀಟರ್‌ಗಳೂ ಇದ್ದಾರೆ: ಫೈಟರ್ ರವಿ, ಸೈಲೆಂಟ್ ಸುನೀಲ್ ಸೇರಿದಂತೆ ಕೆಲ ರೌಡಿ ಶೀಟರ್‌ಗಳಿಗೆ ಬಿಜೆಪಿ ಟಿಕೆಟ್ ನೀಡಲಿದೆ ಎಂಬ ವಿಚಾರ ಕೆಲ ತಿಂಗಳ ಹಿಂದೆ ಬಿಜೆಪಿಯಲ್ಲಿ ಭಾರಿ ಸದ್ದು ಮಾಡಿತ್ತು. ಇವರಿಬ್ಬರಿಗೆ ಟಿಕೆಟ್ ಕೈ ತಪ್ಪಿದರೂ, ಇನ್ನಿಬ್ಬರು ರೌಡಿ ಶೀಟರ್‌ಗಳಿಗೆ ಅವಕಾಶ ನೀಡಿರುವ ವಿಚಾರದಲ್ಲಿ ಬಿಜೆಪಿ ವರಿಷ್ಠರು ಮಗುಮ್ಮಾಗಿರುವುದು ಸುಳ್ಳಲ್ಲ.
ಹೊಸ ಮುಖ ಎಂಬ ಹಳೆ ವರಸೆ
ಮಹಿಳೆಯರು, ಪರಿಶಿಷ್ಟರು, ವೃತ್ತಿಪರರು ಸೇರಿದಂತೆ ಈ ವರ್ಷ 60ಕ್ಕೂ ಹೆಚ್ಚು ಹೊಸ ಮುಖಗಳಿಗೆ ಅವಕಾಶ ನೀಡಲಾಗಿದೆ ಎಂದು ಬಿಜೆಪಿ ನಾಯಕರು ಈಗಾಗಲೇ ಬೆನ್ನುತಟ್ಟಿಕೊಂಡಿದ್ದಾರೆ. ಆದರೆ ತನಗೆ ಅಸ್ತಿತ್ವವೇ ಇಲ್ಲದ ಹಳೆ ಮೈಸೂರು ಹಾಗೂ ಆಡಳಿತ ವಿರೋಧಿ ಅಲೆ ಪ್ರಬಲವಾಗಿರುವ ಕಲ್ಯಾಣ ಕರ್ನಾಟಕ ಭಾಗದಲ್ಲಿ ಈ ಪ್ರಯೋಗ ಮಾಡಿದೆ. ಇದೊಂದು ರೀತಿ ಕತ್ತಲೆಯಲ್ಲಿ ಕತ್ತಿ ವರಸೆ ಮಾಡಿದಂತೆ.
ಅಭ್ಯರ್ಥಿ ಆಯ್ಕೆಗೆ ಗೆಲುವೇ ಮಾನದಂಡ ಎಂಬುದು ಬಿಜೆಪಿಯ ನಿಲುವು. ಆದರೆ ಪಕ್ಕಾ ಗೆಲುವು ಸಾಧಿಸಬಹು ದಾಗಿದ್ದ ಕ್ಷೇತ್ರದ ಶಾಸಕರಿಗೆ ಟಿಕೆಟ್ ನಿರಾಕರಿಸಲಾಗಿದೆ. ಸೋಲಿನ ಭೀತಿ, ಕಾರ್ಯಕರ್ತರ ವಿರೋಧ ಎದುರಿಸುತ್ತಿ ರುವವರಿಗೆ ಮತ್ತೆ ಟಿಕೆಟ್ ದಯಪಾಲಿಸಲಾಗಿದೆ. ಹೀಗಾಗಿ ಬಿಜೆಪಿಯ ಅಚ್ಚರಿ ಆಯ್ಕೆ ಎಂಬ ಶಬ್ದವೇ ಈಗ ಪಕ್ಷದೊಳಗೆ ನಗೆಪಾಟಲಿಗೆ ಗುರಿಯಾಗಿದೆ.
~ರಾಘವೇಂದ್ರ ಭಟ್