Advertisement

ಪ್ಲಾಸ್ಟಿಕ್‌ ಬಳಕೆಯ ದುಷ್ಪರಿಣಾಮಗಳು

10:22 AM Feb 24, 2020 | mahesh |

ಪ್ಲಾಸ್ಟಿಕ್‌ ಇಂದು ಮನುಷ್ಯನ ಜೀವನದ ಅವಿಭಾಜ್ಯ ಅಂಗವಾಗಿದೆ ಎಂದರೆ ತಪ್ಪಾಗಲಾರದು. ಕಡಿಮೆ ವೆಚ್ಚದಲ್ಲಿ ತಯಾರಿಕೆ ಹಾಗೂ ಕೈಗೆಟಕುವ ದರದಲ್ಲಿ ಈ ಪ್ಲಾಸ್ಟಿಕ್‌ ಉತ್ಪನ್ನಗಳು ದೊರೆಯುವುದರಿಂದ ಮಾನವನು ಈ ವಸ್ತುವಿಗೆ ಅವಲಂಬಿತನಾಗಿದ್ದಾನೆ. ಪ್ಲಾಸ್ಟಿಕ್‌ನಿಂದ ಉಂಟಾಗುವ ಮಾಲಿನ್ಯದಲ್ಲಿ ಏಷ್ಯಾ ಅಗ್ರಸ್ಥಾನದಲ್ಲಿದೆ. ಅಭಿವೃದ್ಧಿ ಹೊಂದುತ್ತಿರುವ ನಮ್ಮ ದೇಶಕ್ಕೆ ಈ ಪ್ಲಾಸ್ಟಿಕ್‌ ತ್ಯಾಜ್ಯ ಬಹುದೊಡ್ಡ ಸವಾಲಾಗಿ ಪರಿಣಮಿಸಿದೆ. ಇಂದು ಪ್ಲಾಸ್ಟಿಕ್‌ ತ್ಯಾಜ್ಯ ಪರಿಸರ, ಮನುಷ್ಯ, ಪ್ರಾಣಿಗಳು, ಸಸ್ಯಗಳ ಮೇಲೆ ದುಷ್ಪರಿಣಾಮವನ್ನು ಬೀರಿದೆ. ಪ್ಲಾಸ್ಟಿಕ್‌ನಿಂದ ತಯಾರಿಸಿದ ಅನೇಕ ಉತ್ಪನ್ನಗಳು ಮಾನವನ ಆರೋಗ್ಯ ಮತ್ತು ಪರಿಸರಕ್ಕೆ ಅಪಾಯವನ್ನುಂಟು ಮಾಡುತ್ತಿವೆ. ಪ್ಲಾಸ್ಟಿಕ್‌ಗಳಲ್ಲಿ ಬಿಸೆನಾಲ್‌ ಎ (ಬಿಪಿಎ), ಥಾಲೇಟ್‌ಗಳು, ಆಂಟಿಮಿನಿಟ್ರಾಕ್ಸೆ„ಡ್‌, ಪಾಲಿ-ಫ್ಲೋರಿನೇಟೆಡ್‌, ಸೀಸದಂತಹ ಅನೇಕ ರಾಸಾಯನಿಕ ಮತ್ತು ಅಪಾಯಕಾರಿ ಪದಾರ್ಥಗಳು ಇವೆ. ಅವು ಮಾನವನ ಆರೋಗ್ಯ, ಪ್ರಾಣಿಗಳ ಆರೋಗ್ಯ ಮತ್ತು ಪರಿಸರಕ್ಕೆ ಅಪಾಯ ಉಂಟು ಮಾಡುವ ಅಂಶಗಳಾಗಿವೆ.

Advertisement

ಪ್ಲಾಸ್ಟಿಕ್‌ ಹುಟ್ಟು ಹಾಕುವ ಅಪಾಯಗಳು ಒಂದೆರಡಲ್ಲ. ಅದು ನಾನಾ ವಿಧವಾದ ಅಡ್ಡಿ ಆತಂಕಗಳನ್ನೂ ದುಷ್ಪರಿಣಾಮಗಳನ್ನೂ ಉಂಟುಮಾಡುತ್ತದೆ. ಪ್ಲಾಸ್ಟಿಕ್‌ ತಯಾರಿಕಾ ಹಂತದಲ್ಲಿಯೇ ದೊಡ್ಡ ಮಟ್ಟದ ಮಾಲಿನ್ಯವನ್ನು ಉಂಟುಮಾಡುತ್ತದೆ. ಇದು ನೇರವಾಗಿ ಮನುಷ್ಯ ಮತ್ತು ಪ್ರಾಣಿಗಳ ಆರೋಗ್ಯದ ಮೇಲೆ ದುಷ್ಟರಿಣಾಮ ಬೀರುತ್ತದೆ. ಅಮೆರಿಕದ ಪರಿಸರ ಸಂರಕ್ಷಣಾ ಸಂಸ್ಥೆ 1986ರಲ್ಲಿ ತೀರಾ ಅಪಾಯಕಾರಿ ತ್ಯಾಜ್ಯವನ್ನು ಉತ್ಪಾದಿಸುವ ಇಪ್ಪತ್ತು ರಾಸಾಯನಿಕಗಳ ಪಟ್ಟಿಯೊಂದನ್ನು ತಯಾರಿಸಿತ್ತು. ಅದರಲ್ಲಿ ಮೊದಲ ಐದು ರಾಸಾಯನಿಕಗಳು ಪ್ಲಾಸ್ಟಿಕ್‌ ಕಾರ್ಖಾನೆಗಳಲ್ಲಿ ಸಾಮಾನ್ಯವಾಗಿ ಉಪಯೋಗಿಸುವಂಥವುಗಳಾಗಿವೆ.

ಪ್ಲಾಸ್ಟಿಕ್‌ನ ದುಷ್ಪರಿಣಾಮಗಳು
ಮನುಷ್ಯರ ಮೇಲೆ ಪ್ಲಾಸ್ಟಿಕ್‌ ತಯಾರಿಕೆಯಲ್ಲಿ ಬಳಸುವ ಅನೇಕ ರಾಸಾಯನಿಕಗಳು ಮಕ್ಕಳ ಎಲುಬುಗಳನ್ನು ವಿರೂಪಗೊಳಿಸಬಲ್ಲ ವಿಷಕಾರಿ ವಸ್ತುಗಳಾಗಿವೆ. ಇವು ವಿವಿಧ ಬಗೆಯ ಕ್ಯಾನ್ಸರ್‌ ರೋಗಕ್ಕೆ ಕಾರಣವಾಗಬಹುದು. ನರಮಂಡಲಕ್ಕೆ ಧಕ್ಕೆಯುಂಟುಮಾಡಿ ಮೆದುಳು ಮತ್ತು ಕಣ್ಣುಗಳಿಗೆ ಹಾನಿ ಮಾಡುತ್ತವೆ. ಅದಲ್ಲದೆ ಚರ್ಮಕ್ಕೆ ತೊಂದರೆ, ಪ್ಲಾಸ್ಟಿಕ್‌ ಅಂಶ ದೇಹಕ್ಕೆ ಸೇರಿಕೊಂಡಲ್ಲಿ ಮಕ್ಕಳ ಬೆಳವಣಿಗೆಗೆ ತೊಂದರೆ, ಉಸಿರಾಟದ ತೊಂದರೆ, ತಲೆನೋವು, ಆಯಾಸ, ಹಾರ್ಮೋನುಗಳ ಬದಲಾವಣೆಗಳು, ವೀರ್ಯಾಣುಗಳ ಸಂಖ್ಯೆ ಕ್ಷೀಣಗೊಳ್ಳುವಿಕೆ, ಬಂಜೆತನ ಮುಂತಾದ ತೊಂದರೆಗಳನ್ನು ಉಂಟುಮಾಡ ಬಲ್ಲದು.

ಪ್ಲಾಸ್ಟಿಕ್‌ ವಸ್ತುಗಳು ಸಾಮಾನ್ಯವಾಗಿ ಯಾವುದೇ ಒಂದು ವಸ್ತುವಿನೊಂದಿಗೂ ವರ್ತಿಸುವುದಿಲ್ಲ. ಆದರೆ ಪ್ಲಾಸ್ಟಿಕ್‌ನಲ್ಲಿರುವ ಕೆಲವೊಂದು ವಿಷಕಾರಿ ರಾಸಾಯನಿಕಗಳು ದೀರ್ಘ‌ಕಾಲದ ಸಂಪರ್ಕದಲ್ಲಿ ಆಹಾರ ಪದಾರ್ಥಗಳೊಂದಿಗೆ ವರ್ತಿಸುವ ಸಾಮರ್ಥ್ಯವನ್ನು ಹೊಂದಿವೆ. ತೇವಾಂಶವಿರುವ ಆಹಾರ ಪದಾರ್ಥಗಳು ದೀರ್ಘ‌ಕಾಲ ಪ್ಲಾಸ್ಟಿಕ್‌ನೊಂದಿಗೆ ಇದ್ದಾಗ ಅಲ್ಲಿ ರಾಸಾಯನಿಕ ಪ್ರಕ್ರಿಯೆ ಉಂಟಾಗಿ ಅವು ವಿಷವಾಗಿ ಪರಿವರ್ತನೆಗೊಳ್ಳುತ್ತವೆ. ಆ ಪದಾರ್ಥಗಳನ್ನು ನಾವು ಸೇವಿಸುವುದರಿಂದ ಅನೇಕ ರೋಗಗಳಿಗೆ ತುತ್ತಾಗಲು ಅವಕಾಶ ಕಲ್ಪಿಸಿದಂತಾಗುತ್ತದೆ.

ಪರಿಸರ ಹಾನಿ
ಜನರು ಪ್ಲಾಸ್ಟಿಕ್‌ ಚೀಲಗಳಲ್ಲಿ ಹಸಿ ತ್ಯಾಜ್ಯವನ್ನು ತುಂಬಿ ಅವೈಜ್ಞಾನಿಕವಾಗಿ ಎಲ್ಲೆಂದರಲ್ಲಿ ಎಸೆಯುತ್ತಾರೆ. ಇದರಿಂದಾಗಿ ಆ ಹಸಿ ತ್ಯಾಜ್ಯ ನೆಲದ ಸಂಪರ್ಕವನ್ನು ಪಡೆಯದೇ ಅಲ್ಲಿ ಕೊಳೆತು ನಾರುತ್ತದೆ. ಮಣ್ಣಿನಲ್ಲಿ ಸೇರಿ ಹೋಗುವ ಅವಕಾಶ ಅದಕ್ಕೆ ಇರುವುದೇ ಇಲ್ಲ. ಇದರಿಂದ ಮಣ್ಣಿನ ಫ‌ಲವತ್ತತೆ ಕಡಿಮೆಯಾಗುವುದಲ್ಲದೆ ಮಣ್ಣಿನಲ್ಲಿರುವ ಎರೆಹುಳಗಳ ಜೀವಕ್ಕೆ ಮಾರಕವಾಗಿವೆ. ಪ್ಲಾಸ್ಟಿಕನ್ನು ಪರಿಸರದಲ್ಲಿ ಎಲ್ಲೆಂದರಲ್ಲಿ ಎಸೆದಾಗ ಅದು ಮಣ್ಣಿನಲ್ಲಿ ಸಸಿಗಳ ಬೇರು ಇಳಿಯದಂತೆ ತಡೆಯುತ್ತದೆ. ಇದರಿಂದಾಗಿ ಪ್ಲಾಸ್ಟಿಕ್‌ ಇರುವಲ್ಲಿ ಒಂದು ಹುಲ್ಲು ಕಡ್ಡಿ ಕೂಡ ಹುಟ್ಟುವುದಿಲ್ಲ. ಎಲ್ಲೆಂದರಲ್ಲಿ ಪ್ಲಾಸ್ಟಿಕ್‌ ಅನ್ನು ಎಸೆಯುವ ಪರಿಣಾಮವಾಗಿ ನೀರು ಮಣ್ಣಿನಲ್ಲಿ ಇಂಗದಂತೆ ಪ್ಲಾಸ್ಟಿಕ್‌ ತಡೆಯುತ್ತದೆ. ಇದರಿಂದ ಅಂತರ್ಜಲದ ಮಟ್ಟ ಕುಸಿಯಲು ಪ್ಲಾಸ್ಟಿಕ್‌ ಕಾರಣವಾಗುತ್ತದೆ. ಪ್ಲಾಸ್ಟಿಕ್‌ ತ್ಯಾಜ್ಯಗಳನ್ನು ಹರಿಯುವ ಚರಂಡಿ, ನದಿಗಳಲ್ಲಿ ಬಿಸಾಡುವುದರಿಂದ ಜಲ ಮಾಲಿನ್ಯ ಉಂಟಾಗುವುದಲ್ಲದೆ ನೀರಿನ ಹರಿವಿಗೆ ತೊಂದರೆ ಉಂಟಾಗುತ್ತದೆ. ಉಪಯೋಗಿಸಿ ಬಿಸಾಡುವ ಪ್ಲಾಸ್ಟಿಕ್‌ ತಟ್ಟೆ -ಲೋಟಗಳಲ್ಲಿ ನೀರು ನಿಲ್ಲುತ್ತದೆ. ಅದರಲ್ಲಿ ಸೊಳ್ಳೆಗಳು ಸಂತಾನೋತ್ಪತ್ತಿ ಮಾಡುತ್ತವೆ. ಆದ್ದರಿಂದ ಇವು ಮಲೇರಿಯಾ, ಫೈಲೇರಿಯಾ (ಆನೆಕಾಲು ರೋಗ), ಡೆಂಗ್ಯೂ, ಚಿಕುನ್‌ ಗುನ್ಯಾದಂಥ ಸಾಂಕ್ರಾಮಿಕ ರೋಗಗಳ ಆಶ್ರಯತಾಣವಾಗುತ್ತವೆ.

Advertisement

ಪ್ಲಾಸ್ಟಿಕ್‌ ನೂರು ವರ್ಷ ಕಳೆದರೂ ಮಣ್ಣಿನಲ್ಲಿ ಸೇರಿ ಹೋಗುವುದಿಲ್ಲ. ಇದನ್ನು ಉರಿಸಿದಾಗ ಅದು ಮುದ್ದೆಯಾಗುತ್ತದೆಯೇ ವಿನಾ ನಾಶವಾಗುವುದಿಲ್ಲ. ಇದನ್ನು ಉರಿಸಿದಾಗ ದೊಡ್ಡ ಪ್ರಮಾಣದಲ್ಲಿ ಪೋಸ್ಟೀನ್‌, ಕಾರ್ಬನ್‌ ಮೋನಾಕ್ಸೆ„ಡ್‌, ಕ್ಲೋರಿನ್‌, ಸಲ#ರ್‌ ಡೈ ಆಕ್ಸೆ„ಡ್‌, ಡಯಾಕ್ಸಿನ್‌ ಮುಂತಾದ ವಿಷಾನಿಲಗಳು ವಾತಾವರಣ ಸೇರುತ್ತವೆ. ಇದು ವಾಯುಮಾಲಿನ್ಯಕ್ಕೆ ಕಾರಣವಾಗುತ್ತದೆ. ಈ ವಿಷಾನಿಲ ಗಾಳಿಯೊಂದಿಗೆ ಸೇರಿ ಮನುಷ್ಯನ ದೇಹವನ್ನು ಪ್ರವೇಶಿಸುವುದರಿಂದ ಶ್ವಾಸಕೋಶದ ತೊಂದರೆಗಳು, ಉಸಿರಾಟದ ತೊಂದರೆಗಳು ಹೆಚ್ಚು ಕಂಡುಬರುತ್ತವೆ.

ಪ್ರಾಣಿ, ಪಕ್ಷಿ, ಜಲಚರಗಳ ಮೇಲೆ ಹಾನಿ
ಮನೆಯಲ್ಲಿ ಉಳಿದ ಆಹಾರ ವಸ್ತುಗಳನ್ನು ಪ್ಲಾಸ್ಟಿಕ್‌ ಚೀಲಗಳಲ್ಲಿ ತುಂಬಿ ಎಲ್ಲೆಂದರಲ್ಲಿ ಎಸೆಯುವ ಪರಿಣಾಮ ಆ ಚೀಲಗಳಲ್ಲಿರುವ ಆಹಾರ ವಸ್ತುಗಳನ್ನು ತಿನ್ನಲು ಬಯಸುವ ಪ್ರಾಣಿ ಪಕ್ಷಿಗಳು ಆಹಾರವನ್ನು ಪ್ಲಾಸ್ಟಿಕ್‌ನೊಂದಿಗೆ ನುಂಗಿ ತಮ್ಮ ಪ್ರಾಣವನ್ನು ಕಳೆದುಕೊಳ್ಳುತ್ತವೆ. ನಮ್ಮ ದೇಶದಲ್ಲಿ ವರ್ಷಕ್ಕೆ ಸುಮಾರು ಇಪ್ಪತ್ತು ಸಾವಿರ ಜಾನುವಾರುಗಳು ಪ್ಲಾಸ್ಟಿಕ್‌ ನುಂಗಿ ಪ್ರಾಣವನ್ನು ಕಳೆದುಕೊಳುತ್ತವೆ. ದನ-ಕರುಗಳು ಪ್ಲಾಸ್ಟಿಕನ್ನು ನುಂಗಿದಾಗ ಅವುಗಳ ಹೊಟ್ಟೆಯಲ್ಲಿ ಅದರಲ್ಲಿರುವ ರಾಸಾಯನಿಕಗಳು ಸೇರಿ ಹಾಲಿನೊಂದಿಗೆ ಬೆರೆತು ಮನುಷ್ಯನ ದೇಹವನ್ನು ಸೇರುತ್ತಿವೆ ಎಂಬುದು ಸಂಶೋಧನೆಯಿಂದ ದೃಢಪಟ್ಟಿದೆ. ಪ್ಲಾಸ್ಟಿಕ್‌ ತ್ಯಾಜ್ಯಗಳನ್ನು ಸಮುದ್ರದಲ್ಲಿ ಎಸೆಯುವ ಪರಿಣಾಮ ಅವು ಅಲ್ಲಿರುವ ಜಲಚರಗಳ ದೇಹದೊಳಕ್ಕೆ ಸೇರಿ ಜಲಚರಗಳ ಜೀವಕ್ಕೆ ಹಾನಿಯುಂಟು ಮಾಡುತ್ತದೆ.

ಒಟ್ಟಾರೆಯಾಗಿ ಪ್ಲಾಸ್ಟಿಕ್‌ನ ಅತಿಯಾದ ಬಳಕೆಯಿಂದಾಗಿ ಮಾನವನ ದೇಹಕ್ಕೆ, ಪರಿಸರಕ್ಕೆ, ಪ್ರಾಣಿಗಳ ಜೀವಕ್ಕೆ ಅಪಾರ ಹಾನಿಯುಂಟು ಮಾಡುವಲ್ಲಿ, ನಾವು ನಮಗೆ ತಿಳಿದೋ ತಿಳಿಯದೆಯೋ ಪ್ರಮುಖ ಪಾತ್ರ ವಹಿಸುತ್ತಿದ್ದೇವೆ. ಇನ್ನಾದರೂ ಎಚ್ಚೆತ್ತುಕೊಂಡು ಪ್ಲಾಸ್ಟಿಕ್‌ ಬಳಕೆಯನ್ನು ಕಡಿಮೆಗೊಳಿಸಿ, ಮರುಬಳಕೆ ಮಾಡಿ ಹಾಗೂ ಅದಕ್ಕೆ ಪರ್ಯಾಯವಾಗಿ ದೊರೆಯುವ ವಸ್ತುಗಳನ್ನು ಬಳಸಿ ಮಾನವನ ಆರೋಗ್ಯ, ಪ್ರಾಣಿಗಳ ಆರೋಗ್ಯ ಹಾಗೂ ಪರಿಸರವನ್ನು ಉಳಿಸುವ ಮಹತ್ತರವಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ.

ಡಾ| ಚೈತ್ರಾ ಆರ್‌. ರಾವ್‌
ಅಸೋಸಿಯೇಟ್‌ ಪ್ರೊಫೆಸರ್‌,
ಕಮ್ಯುನಿಟಿ ಮೆಡಿಸಿನ್‌ ವಿಭಾಗ ಮತ್ತು ಕೋ-ಆರ್ಡಿನೇಟರ್‌, ಸೆಂಟರ್‌ ಫಾರ್‌ ಟ್ರಾವೆಲ್‌ ಮೆಡಿಸಿನ್‌, ಕೆಎಂಸಿ, ಮಣಿಪಾಲ

ರಾಘವೇಂದ್ರ ಭಟ್‌ ಎಂ.
ಆರೋಗ್ಯ ಸಹಾಯಕರು,
ಸಮುದಾಯ ವೈದ್ಯಕೀಯ ವಿಭಾಗ,
ಕೆಎಂಸಿ, ಮಣಿಪಾಲ

Advertisement

Udayavani is now on Telegram. Click here to join our channel and stay updated with the latest news.

Next