Advertisement
ಮುಖ್ಯವಾಗಿ ನೀರಿನ ತೀವ್ರ ಅಭಾವ ಸೃಷ್ಟಿಯಾದರೂ ಟ್ಯಾಂಕರ್ ನೀರು ಪೂರೈಕೆ ವ್ಯವಸ್ಥೆ ಕಲ್ಪಿಸುವಲ್ಲಿ ವಿಳಂಬ. ಗ್ರಾಮಗಳಿಗೆ ಅಗತ್ಯ ಪ್ರಮಾಣದಲ್ಲಿ ಟ್ಯಾಂಕರ್ ನೀರು ಹರಿಸದಿರುವುದು. ಟ್ಯಾಂಕರ್ ಸೇವೆ ಕಲ್ಪಿಸಲು ವಿಳಂಬವಾಗುತ್ತಿರುವ ಬಗ್ಗೆ ಹಲವು ಸಚಿವರು ಪ್ರಸ್ತಾಪಿಸಿದರು. ವಿಸ್ತೃತ ಚರ್ಚೆ ಬಳಿಕ ರಾಜ್ಯದ ಯಾವುದೇ ಪ್ರದೇಶದಲ್ಲೂ ಕುಡಿಯುವ ನೀರಿನ ಅಭಾವ ತಲೆದೋರದಂತೆ ಹಾಗೂ ಅಗತ್ಯ ಪ್ರಮಾಣದಲ್ಲಿ ನೀರು ಪೂರೈಕೆಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನ ನೀಡಲು ಸಂಪುಟ ಸಭೆಯಲ್ಲಿ ನಿರ್ಧರಿಸಲಾಯಿತು. ಮುಖ್ಯವಾಗಿ ನಾಲ್ಕು ಅಂಶಗಳ ಕುರಿತು ನಿರ್ದೇಶನ ನೀಡಲು ತೀರ್ಮಾನಿಸಲಾಯಿತು.
ಕುಡಿಯುವ ನೀರಿಗೆ ತೀವ್ರ ಅಭಾವ ತಲೆದೋರಿರುವ ಕಡೆ ನಿರೀಕ್ಷಿತ ಮಟ್ಟದಲ್ಲಿ ತುರ್ತಾಗಿ ನೀರಿನ ವ್ಯವಸ್ಥೆ ಕಲ್ಪಿಸುವ ಕೆಲಸ ನಡೆಯುತ್ತಿಲ್ಲ ಎಂದು ಸಚಿವರು ದೂರಿದರು. ಹಾಗಾಗಿ, ಸಮಸ್ಯೆ ಕಾಣಿಸಿಕೊಂಡ ಎರಡು ದಿನದಲ್ಲಿ ಟ್ಯಾಂಕರ್ ನೀರು ಪೂರೈಕೆ ವ್ಯವಸ್ಥೆ ಕಲ್ಪಿಸಲು ಕ್ರಮ ಕೈಗೊಳ್ಳಬೇಕು ಎಂಬುದಾಗಿ ತಾಲೂಕು ಮಟ್ಟದ ಅಧಿಕಾರಿಗಳಿಗೆ ಮತ್ತೂಮ್ಮೆ ಸೂಚನೆ ನೀಡಲು ನಿರ್ಧಾರ.
– ಕೆಲ ಗ್ರಾಮಗಳಿಗೆ ನೀರು ಪೂರೈಕೆ ವ್ಯವಸ್ಥೆಯಿದ್ದರೂ ಅಗತ್ಯವಿರುವಷ್ಟು ಟ್ಯಾಕರ್ ನೀರು ಪೂರೈಸುತ್ತಿಲ್ಲವೆಂದು ಕೆಲ ಸಚಿವರು ಪ್ರಸ್ತಾಪಿಸಿದರು. ಅಗತ್ಯಬಿದ್ದರೆ ಮಾನದಂಡಗಳನ್ನು ಸಡಿಲಿಸಿ ಜನರಿಗೆ ಅಗತ್ಯವಿರುವಷ್ಟು ಪ್ರಮಾಣದಲ್ಲಿ ನೀರು ಪೂರೈಸಲು ಹೆಚ್ಚುವರಿ ಟ್ಯಾಂಕರ್ ಬಳಕೆಗೆ ಅವಕಾಶ ನೀಡುವ ಸಂಬಂಧ ಮತ್ತೂಮ್ಮೆ ಸೂಕ್ತ ಸೂಚನೆ ನೀಡಲು ತೀರ್ಮಾನ.
– ಟ್ಯಾಂಕರ್ ನೀರು ಪೂರೈಕೆಗೆ ಜಿಲ್ಲಾಧಿಕಾರಿಗಳಿಂದ ಮಂಜೂರಾತಿ ಪಡೆದು ಜಾರಿಗೊಳಿಸುವ ಪ್ರಕ್ರಿಯೆಯಲ್ಲಿ ವಿಳಂಬವಾಗುತ್ತಿರುವ ಬಗ್ಗೆಯೂ ಚರ್ಚೆ ನಡೆಯಿತು. ಹಾಗಾಗಿ, ಜಿಲ್ಲಾಧಿಕಾರಿ ಹಂತದಿಂದ ತಹಶೀಲ್ದಾರ್ ಹಂತದಲ್ಲೇ ಟ್ಯಾಂಕರ್ ನೀರು ಹಂಚಿಕೆಗೆ ತೀರ್ಮಾನ ಕೈಗೊಳ್ಳಲು ಅನುಮತಿ ನೀಡಿ ಸೂಚನೆ ನೀಡಲು ತೀರ್ಮಾನವಾಗಿದೆ.
– ಗ್ರಾಮಗಳಿಗೆ ನೀರು ಪೂರೈಸುತ್ತಿರುವ ಟ್ಯಾಂಕರ್‌ಗಳಿಗೆ ಹಣ ಪಾವತಿ ವಿಳಂಬವಾಗುತ್ತಿರುವ ಬಗ್ಗೆಯೂ ಸಚಿವರು ಗಮನ ಸೆಳೆದರು. ತಕ್ಷಣವೇ ಈ ಬಗ್ಗೆ ಅಧಿಕಾರಿಗಳು ಗಮನ ಹರಿಸಿ ತ್ವರಿತವಾಗಿ ಹಣ ಪಾವತಿಗೆ ಸೂಚಿಸಲು ಸಂಪುಟ ಸಭೆಯಲ್ಲಿ ನಿರ್ಧರಿಸಲಾಯಿತು.