ಕನ್ನಡದಲ್ಲಿ ಈಗಾಗಲೇ ರಿಯಲ್ ಲೈಫ್ ಸ್ಟೋರಿ ಕುರಿತ ಚಿತ್ರಗಳು ಸಾಕಷ್ಟು ಬಂದಿವೆ. ಆ ಸಾಲಿಗೆ ಈಗ “ಅರಬ್ಬೀ’ ಸೇರಿದೆ. ಈ ಚಿತ್ರದ ವಿಶೇಷವೆಂದರೆ, ಚಿಕ್ಕ ವಯಸ್ಸಲ್ಲೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡು ಈಜು ಸ್ಫರ್ಧೆಯಲ್ಲಿ ಬೆಳ್ಳಿ ಹಾಗೂ ಕಂಚು ಪದಕ ಪಡೆದು ಹಲವು ಪ್ರಶಸ್ತಿ, ಪುರಸ್ಕಾರಕ್ಕೆ ಪಾತ್ರವಾಗಿರುವ ಅಪ್ಪಟ ಕನ್ನಡಿಗ ಕೆ.ಎಸ್.ವಿಶ್ವಾಸ್ ಅವರ ಕುರಿತ ಸಿನಿಮಾ ಎಂಬುದು ವಿಶೇಷ. ಕೆ.ಎಸ್.ವಿಶ್ವಾಸ್ ತಮ್ಮ ಎರಡೂ ಕೈಗಳನ್ನು ಕಳೆದುಕೊಂಡರೂ ಅವರ ಸಾಧನೆ ಮಾತ್ರ ದೊಡ್ಡದು.
“ಅರಬ್ಬೀ’ ಚಿತ್ರದ ವಿಶ್ವಾಸ್ ಅವರ ರಿಯಲ್ ಸ್ಟೋರಿ ಒಳಗೊಂಡಿದ್ದು, ಆ ಚಿತ್ರದಲ್ಲಿ ಅವರೇ ನಾಯಕರಾಗುತ್ತಿರುವುದು ವಿಶೇಷ. ಎರಡೂ ಕೈಗಳಿಲ್ಲದಿದ್ದರೂ ವಿಶ್ವಾಸ್, ಈಜು, ಕರಾಟೆ, ಡ್ಯಾನ್ಸ್ ಎಲ್ಲವನ್ನೂ ಕರಗತ ಮಾಡಿಕೊಂಡಿದ್ದಾರೆ. ಹಲವು ರಿಯಾಲಿಟಿ ಷೋಗಳಲ್ಲಿ ಡ್ಯಾನ್ಸ್ ಕಾರ್ಯಕ್ರಮ ಕೊಟ್ಟು ಸೈ ಎನಿಸಿಕೊಂಡಿದ್ದಾರೆ. ಕುಂಗ್‌ಫೂ ಮಾರ್ಷಲ್ ಆರ್ಟ್ಸ್ನಲ್ಲಿ ರೆಡ್ ಬೆಲ್ಟ್ ಪಡೆದಿದ್ದಾರೆ. ಸಾಗರದಾಚೆಗೂ ಹೋಗಿ ದೇಶದ ಪರ ಆಡಿ ಈಜುಸ್ಫರ್ಧೆಯಲ್ಲಿ ಎರಡು ಬೆಳ್ಳಿ ಪದಕ ಪಡೆದು ಕೀರ್ತಿ ತಂದಿದ್ದಾರೆ.
ಈಗ ವಿಶ್ವಾಸ್ ಅವರನ್ನು ಹೀರೋ ಮಾಡಿ ಸಿನಿಮಾ ಮಾಡುತ್ತಿರುವುದು ರಾಜ್‌ಕುಮಾರ್. ರಾಜ್‍ಕುಮಾರ್‌ಗೆ ಇದು ಮೊದಲ ನಿರ್ದೇಶನದ ಚಿತ್ರ. ಒಂದು ದಶಕದಿಂದಲೂ ಚಿತ್ರರಂಗದಲ್ಲಿದ್ದು ಅನುಭವ ಪಡೆದಿದ್ದಾರೆ. ಈ ಹಿಂದೆಯೇ ಇವರು ವಿಶ್ವಾಸ್‌ಗೆ “ಚಾಂಪಿಯನ್’ ಎಂಬ ಹೆಸರಿನ ಚಿತ್ರ ಮಾಡುವುದಾಗಿ ಹೇಳಿದ್ದರು. ಆದರೆ, ಅದು ಸೆಟ್ಟೇರಲಿಲ್ಲ. ಈಗ ಇಬ್ಬರ ಕಾಂಬಿನೇಷನ್‌ನಲ್ಲಿ “ಅರಬ್ಬೀ’ ಚಿತ್ರ ಮೂಡಿಬರುತ್ತಿದೆ. ಈ ಚಿತ್ರವನ್ನು ಚೇತನ್ ಸಿ.ಎಸ್. ನಿರ್ಮಾಣ ಮಾಡುತ್ತಿದ್ದಾರೆ.
ಚಿತ್ರಕ್ಕೆ “ಜೋಡಿಹಕ್ಕಿ’ ಧಾರಾವಾಹಿ ಖ್ಯಾತಿಯ ಚೈತ್ರಾ ರಾವ್ ನಾಯಕಿಯಾಗಿದ್ದಾರೆ. “ಮಾಯಬಜಾರ್’ ಬಳಿಕ ಒಪ್ಪಿದ ಚಿತ್ರವಿದು. ಚಿತ್ರಕ್ಕೆ ಆನಂದ್ ಛಾಯಾಗ್ರಹಣವಿದೆ. ಆಯುಷ್ ಮಂಜು ಸಂಗೀತವಿದೆ. “ಅರಬ್ಬೀ’ ಶೀರ್ಷಿಕೆ ಸಂಬಂಧಿಸಿದಂತೆ, ಕಥೆ ಸಮುದ್ರ ದಂಡೆಯಲ್ಲೇ ಸಾಗುವುದರಿಂದ ಉಡುಪಿ ಸುತ್ತಮುತ್ತ ಹಾಗು ಬೆಂಗಳೂರಿನಲ್ಲಿ ಚಿತ್ರೀಕರಣ ನಡೆಯಲಿದೆ. ನವೆಂಬರ್ ಅಂತ್ಯಕ್ಕೆ “ಅರಬ್ಬೀ’ ಚಿತ್ರಕ್ಕೆ ಚಾಲನೆ ಸಿಗಲಿದೆ ಎಂಬುದು ನಿರ್ದೇಶಕರ ಮಾತು.