Advertisement

ಅಂಗವಿಕಲರು ಆತ್ಮಸ್ಥೈರ್ಯ ಬೆಳೆಸಿಕೊಳ್ಳಿ 

10:40 AM Dec 06, 2017 | Team Udayavani |

ಲಾಲ್‌ಬಾಗ್‌: ಅಂಗವಿಕಲರು ಆತ್ಮಸ್ಥೈರ್ಯ ಬೆಳೆಸಿಕೊಂಡಾಗ ಜೀವನದಲ್ಲಿ ಯಶಸ್ಸು ಖಂಡಿತ ಎಂದು ಮೇಯರ್‌ ಕವಿತಾ ಸನಿಲ್‌ ಹೇಳಿದರು. ಮಹಾನಗರಪಾಲಿಕೆಯ ನಗರ ಬಡತನ ನಿರ್ಮೂಲನ ಕೋಶದಲ್ಲಿ ಜರಗಿದ ಅಂಗವಿಕಲರ ದಿನಾಚರಣೆ ಮತ್ತು ವಿವಿಧ ಸರಕಾರಿ ಸವಲತ್ತುಗಳ ವಿತರಣ ಕಾರ್ಯಕ್ರಮವನ್ನು ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು.

Advertisement

ಅಂಗವೈಕಲ್ಯ ಶಾಪಬಲ್ಲ. ಅದನ್ನು ಮೆಟ್ಟಿ ನಿಂತು ಶಿಕ್ಷಣ ಪಡೆದು ಐಎಎಸ್‌ ರ್‍ಯಾಂಕ್‌ ಪಡೆದವರಂಥ ಸಾಧಕರು ಸೇರಿ ಸಾಕಷ್ಟು ಉನ್ನತ ಹುದ್ದೆಗಳಿಗೆ ಏರಿದವರು ನಮ್ಮ ಸಮಾಜದಲ್ಲಿದ್ದಾರೆ. ಅವರನ್ನು ಆದರ್ಶವಾಗಿಟ್ಟುಕೊಂಡು ಸಾಧನೆಯ ಪಥದಲ್ಲಿ ಮುಂದುವರಿಯುವುದು ಅಗತ್ಯ ಎಂದು ತಿಳಿಸಿದರು.

ವಿವಿಧ ಸವಲತ್ತು
ಮಹಾನಗರ ಪಾಲಿಕೆಯಿಂದ 2017-18ನೇ ಸಾಲಿನಲ್ಲಿ ಅಂಗವಿಕಲರಿಗೆ 73.27ಲಕ್ಷ ರೂ. ಅನುದಾನ ಕಾದಿರಿಸಲಾಗಿದ್ದು, ಇವುಗಳಲ್ಲಿ ಈ ಬಾರಿ ಕೃತಕ ಕಾಲು ಮತ್ತು ಶ್ರವಣ ಸಾಧನಕ್ಕೆ 1,45,650 ರೂ., ವೈದ್ಯಕೀಯ ವೆಚ್ಚ ಪಾವತಿಗೆ 1,10,142 ರೂ., ಕ್ರೀಡಾ ಪ್ರೋತ್ಸಾಹ ಧನ 2,80,000 ರೂ. ಸಹಿತ ಒಟ್ಟು 36 ಮಂದಿಗೆ 5,35,792 ರೂ. ಅನುದಾನ ನೀಡಲಾಗಿದೆ. ಮಹಾನಗರಪಾಲಿಕೆ ಮುಂದಿನ ದಿನಗಳಲ್ಲಿ ಮತ್ತಷ್ಟು ಸಹಕಾರ ನೀಡಲಿದೆ ಎಂದು ಹೇಳಿದರು. 

ನಗರದ ಉಪಮೇಯರ್‌ ಕೆ. ರಜನೀಶ್‌ ಮಾತನಾಡಿ, ಮಾನವ ಜನ್ಮ ಶ್ರೇಷ್ಠವಾದುದು. ಅಂಗವಿಕಲರು ಯಾವುದೇ ಕಾರಣಕ್ಕೂ ಧೃತಿಗೆಡಬೇಕಿಲ್ಲ. ಸರಕಾರ ಹಾಗೂ ಸಮಾಜ ನಿಮ್ಮ ಜತೆಯಿದೆ. ಮನೆಯಲ್ಲಿ ಪೋಷಕರು ಅಂಗವಿಕಲ ಮಕ್ಕಳಿಗೆ ಸಮಾಜದಲ್ಲಿ ಮತ್ತಷ್ಟು ಸಾಧನೆಗೆ ಪ್ರೋತ್ಸಾಹ ನೀಡಬೇಕಾಗಿದೆ ಎಂದು ಹೇಳಿದರು.

 ಮನಪಾ ಕಮಿಷನರ್‌ ಮಹಮ್ಮದ್‌ ನಝೀರ್‌, ಆರೋಗ್ಯ ಸ್ಥಾಯೀ ಸಮಿತಿ ಸದಸ್ಯೆ ನಾಗವೇಣಿ ಮತ್ತಿತರರು ಉಪಸ್ಥಿತರಿದ್ದರು. ಮಾಲಿನಿ ರೊಡ್ರಿಗಸ್‌ ಸ್ವಾಗತಿಸಿ, ಪ್ರಮೀಳಾ ನಿರೂಪಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next