ಬೀಳಗಿ: ಪಟ್ಟಣದ ಮಿನಿ ವಿಧಾನಸೌಧ ಎದುರು ಕುಂದುಕೊರತೆ ಸಭೆಗಾಗಿ ಅಂಗವಿಕಲರು ಕಾದುಕುಳಿತ ಪ್ರಸಂಗ ಶನಿವಾರ ನಡೆದಿದೆ.
ಅಂಗವಿಕಲರ ಗ್ರಾಮಾಭಿವೃದ್ಧಿ ಸಂಘದ ತಾಲೂಕು ಅಧ್ಯಕ್ಷ ಉಮೇಶ ಚನ್ನಿ ಮಾತನಾಡಿ, ಅಂಗವಿಕಲರ ಕುಂದುಕೊರತೆ ಸಭೆ ಸಂಬಂಧ ವಿವಿಧ ಗ್ರಾಮಗಳಿಂದ ಅಂಗವಿಕಲರು ಮಿನಿ ವಿಧಾನಸೌಧಕ್ಕೆ ಆಗಮಿಸಿದ್ದರು. ಇಂದು ಸಭೆಯಿಲ್ಲ ಎಂದು ತಿಳಿಸಿದ್ದಾರೆ.
ಜುಲೈನಲ್ಲಿ ಕುಂದುಕೊರತೆ ಸಭೆಯನ್ನು ಮೂರು ಬಾರಿ ಮುಂದೂಡುವ ಮೂಲಕ ಅಧಿಕಾರಿಗಳು ನಮ್ಮನ್ನು ನಿರ್ಲಕ್ಷಿಸುತ್ತಿದ್ದಾರೆ. ನಮ್ಮ ಸ್ಥಿತಿ ಕೇಳ್ಳೋರು ಯಾರು ಎಂದು ಅಳಲು ತೋಡಿಕೊಂಡಿದ್ದಾರೆ. ಸಭೆಗಾಗಿ ದಿನವಿಡಿ ಅಂಗವಿಕಲಕರು ಮಿನಿ ವಿಧಾನಸೌಧ ಎದುರು ಕುಳಿತುಕೊಳ್ಳುವಂತಾಗಿದೆ.. ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆಯಿಂದಾಗಿ ಅಂಗವಿಕಲರು ತೊಂದರೆ ಪಡುವಂತಾಗಿದೆ. ನಿಗದಿಪಡಿಸಿದ ಸಮಯಕ್ಕೆ ಸಭೆ ನಡೆಸದೆ ಅಂಗವಿಕಲರನ್ನು ಸತಾಯಿಸುತ್ತಾರೆ. ಅಧಿಕಾರಿಗಳ ನಿಷ್ಕಾಳಜಿಯಿಂದಾಗಿ ಹಲವಾರು ಸರಕಾರಿ ಸೌಲಭ್ಯಗಳಿಂದ ವಂಚಿತರಾಗುವಂತಾಗಿದೆ. ತಾಲೂಕಿನಲ್ಲಿ 3 ಸಾವಿರಕ್ಕೂ ಹೆಚ್ಚು ಅಂಗವಿಕಲರಿದ್ದಾರೆ. ಅಂಗವಿಕಲರ ಕುರಿತು ವಿಶೇಷ ಕಾಳಜಿ ವಹಿಸಬೇಕಾಗಿರುವ ಸಿಡಿಪಿಒ ಸ್ಪಂದಿಸುವುದಿಲ್ಲ ಎಂದು ಆರೋಪಿಸಿದರು.
ಮೊದಲು ನಡೆದ ಕುಂದುಕೊರತೆ ಸಭೆಯಲ್ಲಿನ ಹಲವಾರು ಚರ್ಚಿತ ವಿಷಯಗಳು ಕಾರ್ಯರೂಪಕ್ಕೆ ಬಂದಿಲ್ಲ. ಇದು ಕುಂದುಕೊರತೆ ಸಭೆಯೋ, ಕಾಟಾಚಾರದ ಸಭೆಯೋ ಎನ್ನುವಂತಾಗಿದೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಅಧಿಕಾರಿಗಳು ನಿಗದಿತ ಸಮಯದಲ್ಲಿ ಸಭೆ ನಡೆಸಬೇಕು. ಸಭೆಯಲ್ಲಿ ಚರ್ಚಿಸಿದ ವಿಷಯಗಳನ್ನು ಕಾರ್ಯರೂಪಕ್ಕೆ ತರುವಲ್ಲಿ ವಿಶೇಷ ಕಾಳಜಿ ವಹಿಸಬೇಕು. ಎಲ್ಲ ಅಧಿಕಾರಿಗಳು ಕಡ್ಡಾಯ ಹಾಜರಾಗಬೇಕು. ಈ ಕುರಿತು ಮೇಲಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಕುಂದುಕೊರತೆ ಅನುಷ್ಠಾನ ಸಮಿತಿ ಸದಸ್ಯ ರವಿ ನಾಗನಗೌಡರ, ಶಾಮಲಾ ಜಾಲಿಕಟ್ಟಿ, ಸುವರ್ಣಾ ಚಲವಾದಿ, ಲಕ್ಷ್ಮೀಬಾಯಿ ತಳವಾರ, ಗೀತಾ ಜಾನಮಟ್ಟಿ, ವಿಠuಲ ಪೂಜಾರಿ, ಹುಸೇನ ಚೌಧರಿ, ಶೇಖರ ಕಾಖಂಡಕಿ ಇದ್ದರು.