ಬೆಂಗಳೂರು: ಚುನಾವಣೆಗಳಲ್ಲಿ ವಿಕಲಚೇತನರು ಮತಗಟ್ಟೆಗೆ ಬಂದು ಮತಚಲಾಯಿಸುತ್ತಾರೆ. ಆದರೆ, ವಿದ್ಯಾವಂತರು, ಸದೃಢ ಯುವಕರೇ ಮತದಾನದಿಂದ ತಪ್ಪಿಸಿಕೊಳ್ಳುತ್ತಿದ್ದಾರೆ ಎಂದು ಬೆಂಗಳೂರು ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ. ಕೆ.ಆರ್ ವೇಣುಗೋಪಾಲ್ ಹೇಳಿದರು.
ಬ್ರೈಲ್ ಸಂಪನ್ಮೂಲ ಕೇಂದ್ರ ಮತ್ತು ಬಿಬಿಎಂಪಿ ಸಹಯೋಗದಲ್ಲಿ ಮಂಗಳವಾರ ಸೆಂಟ್ರಲ್ ಕಾಲೇಜಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಆಯೋಜಿಸಿದ್ದ “ಯುವ ವಿಕಲಚೇತನರಿಗೆ ಮತದಾನ ಜಾಗೃತಿ ಕಾರ್ಯಗಾರ’ದಲ್ಲಿ ಮಾತನಾಡಿದರು.
ವಿಕಲಚೇತನರು ತಮಗೆ ಸಮಸ್ಯೆಗಳಿದ್ದರೂ, ಮತದಾನ ಮಾಡುವುದರಿಂದ ತಪ್ಪಿಸಿಕೊಳ್ಳುವುದಿಲ್ಲ. ಇದು ಪ್ರಜ್ಞಾವಂತರಿಗೆ ಆದರ್ಶವಾಗಬೇಕು. ಚುನಾವಣೆ ಸಂದರ್ಭಗಳಲ್ಲಿ ಪ್ರವಾಸ ಹೋಗುವ ಅಭ್ಯಾಸವನ್ನು ಮತದಾರರು ಬಿಟ್ಟು, ಹೆಚ್ಚಿನ ಪ್ರಮಾಣದಲ್ಲಿ ಮತದಾನ ಮಾಡಬೇಕು ಎಂದರು.
ಮತದಾನದ ದಿನ ಯುವಕರು ಮತದಾನ ಮಾಡುವುದರ ಜತೆಗೆ ಅಂರ್ತಜಾಲದಲ್ಲಿ ಹೆಚ್ಚು ಸಕ್ರಿಯರಾಗಿದ್ದು, ನಿಮ್ಮ ಗುಂಪಿನಲ್ಲಿ ಯಾರು ಮತದಾನ ಮಾಡಿದ್ದಾರೆ, ಯಾರು ಮಾಡಿಲ್ಲ ಎನ್ನುವುದು ತಿಳಿದುಕೊಂಡು ಮತದಾನ ಮಾಡುವಂತೆ ಜಾಗೃತಿ ಮೂಡಿಸಿ, ಮತದಾನ ಪ್ರಮಾಣ ಹೆಚ್ಚಾಗುವಂತೆ ನೋಡಿಕೊಳ್ಳಿ ಎಂದು ಸಲಹೆ ನೀಡಿದರು.
ಬಿಬಿಎಂಪಿ ಪೂರ್ವ ವಿಭಾಗದ ಜಂಟಿ ಆಯುಕ್ತ ಜಿ.ಎಂ ರವೀಂದ್ರ, ವಿಕಲಚೇತನರಿಗೆ ಇದೇ ಮೊದಲ ಬಾರಿ ಸಾರಿಗೆ ವ್ಯವಸ್ಥೆಯನ್ನು ಮಾಡಲಾಗಿದೆ. ಓಲಾ ಸಂಸ್ಥೆಯೊಂದಿಗೆ ಒಡಂಬಡಿಕೆ ಮಾಡಿಕೊಂಡಿದ್ದು, ವಿಕಲಚೇತನರಿಗೆ ಮನೆಯಿಂದ ಮತಗಟ್ಟೆಗೆ ಬರಲು ಮತ್ತು ಮನೆಗೆ ಮರಳಲು ಉಚಿತ ಓಲಾಕ್ಯಾಬ್ ವ್ಯವಸ್ಥೆ ಇರಲಿದೆ.
ಎಲ್ಲ ಮತಗಟ್ಟೆಗಳಲ್ಲಿಯೂ ವೀಲ್‌ಚೇರ್ ವ್ಯವಸ್ಥೆ ಮಾಡಲಾಗಿದ್ದು, ವಿಶೇಷ ಚೇತನರು ಸಾಲಿನಲ್ಲಿ ನಿಲ್ಲದೆ ನೇರವಾಗಿ ಮತಚಲಾಯಿಸಬಹುದು ಎಂದು ಹೇಳಿದರು. ಬೆಂವಿವಿ ಕುಲಸಚಿವ ಬಿ.ಕೆ ರವಿ, ಮತದಾನದ ಮೂಲಕವೇ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ ಗಟ್ಟಿಯಾಗಿ ನಿಂತಿದೆ.
ಪ್ರತಿ ಮತವೂ ಅಮೂಲ್ಯ, ಒಂದು ಮತ ಯಾವುದೇ ಪರಿಣಾಮ ಬೀರುವುದಿಲ್ಲ ಎನ್ನುವ ಉದಾಸೀನತೆ ಬೇಡ. ಒಂದು ಮತಕ್ಕೆ ಇಡೀ ವ್ಯವಸ್ಥೆಯನ್ನೇ ಬದಲಾಯಿಸುವ ಶಕ್ತಿ ಇದೆ ಎಂದರು. ಬ್ರೈಲ್ ಸಂಪನ್ಮೂಲ ಸಂಸ್ಥೆಯ ನಿರ್ದೇಶಕಿ ಪ್ರೊ.ಜೆ.ಎಸ್ ಅರುಣ ಲತಾ, ಸ್ನೇಹದೀಪ ಟ್ರಸ್ಟ್‌ನ ಸಹ ಸಂಸ್ಥಾಪಕ ಕೆ.ಜಿ ಮೋಹನ್ ಮತ್ತಿತರರು ಉಪಸ್ಥಿತರಿದ್ದರು.