Advertisement

ಮತದಾನ ಮಾಡಲು ದಿವ್ಯಾಂಗರ ಆಸಕ್ತಿ

09:34 AM Apr 17, 2019 | Lakshmi GovindaRaju |

ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ದಿವ್ಯಾಂಗರು ಮತ ಚಲಾವಣಗೆ ಹೆಚ್ಚಿನ ಉತ್ಸಾಹ ತೋರಿದ್ದಾರೆ. ಮತ ಕೇಂದ್ರಗಳಿಗೆ ದಿವ್ಯಾಂಗರನ್ನು ಕರೆತರುವ ನಿಟ್ಟಿನಲ್ಲಿ ಚುನಾವಣಾ ಆಯೋಗ ಉಚಿತ ವಾಹನ ಸೌಕರ್ಯ ಕಲ್ಪಿಸಿದೆ. ವಾಹನಕ್ಕಾಗಿ ಚುನಾವಣಾ ಆಯೋಗದಲ್ಲಿ ಸಾವಿರಾರು ವಿಶಿಷ್ಟ ಮತದಾರರು ಹೆಸರು ನೋಂದಣಿ ಮಾಡಿಕೊಂಡಿದ್ದಾರೆ.

Advertisement

ಮಂಗಳವಾರದವರೆಗೂ ಬೆಂಗಳೂರು ದಕ್ಷಿಣದಲ್ಲಿ 1,162, ಉತ್ತರದಲ್ಲಿ 943 ಮತ್ತು ಕೇಂದ್ರ ಕ್ಷೇತ್ರದಲ್ಲಿ 860 ಮಂದಿ ಹೆಸರು ನೋಂದಣಿ ಮಾಡಿದ್ದಾರೆ ಎಂದು ಬೆಂಗಳೂರು ನಗರ ಜಿಲ್ಲಾ ಚುನಾವಣಾ ನೋಡಲ್‌ ಅಧಿಕಾರಿಗಳು ಹೇಳಿದ್ದಾರೆ.

ಬೆಂಗಳೂರು ನಗರ ಜಿಲ್ಲಾಡಳಿತ ಕೂಡ ಮತದಾನ ಪ್ರಮಾಣ ಹೆಚ್ಚಳಕ್ಕೆ ಹಲವು ಕಾರ್ಯಕ್ರಮ ರೂಪಿಸಿದ್ದು, ಈ ಬಾರಿ ಗಾಲಿ ಕುರ್ಚಿಗಳ ಸಂಖ್ಯೆ ಹೆಚ್ಚಿಸಿದೆ. ಬೆಂಗಳೂರು ನಗರ ಜಿ.ಪಂ ವ್ಯಾಪ್ತಿಯಲ್ಲಿ 4,104 ದಿವ್ಯಾಂಗ ಮತದಾರರಿದ್ದಾರೆ.

ಯಶವಂತಪುರ ಕ್ಷೇತ್ರದಲ್ಲಿ 1,818, ಯಲಹಂಕ 1,051, ಬ್ಯಾಟರಾಯನಪುರ ವ್ಯಾಪ್ತಿಯಲ್ಲಿ 486 ದಿವ್ಯಾಂಗರು ಮತದಾರರಿದ್ದಾರೆ. ದಾಸರಹಳ್ಳಿ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 135 ಮಹಾದೇವಪುರ ವ್ಯಾಪ್ತಿಯಲ್ಲಿ 184, ಬೆಂಗಳೂರ ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 221 ಮತ್ತು ಅನೇಕಲ್‌ ತಾಲೂಕಿನಲ್ಲಿ 209 ದಿವ್ಯಾಂಗರು ಹಕ್ಕು ಪಡೆದಿದ್ದಾರೆ.

ಯಶವಂತಪುರದಲ್ಲಿ ಹೆಚ್ಚು: ರಾಜಧಾನಿಯ ದಕ್ಷಿಣದಿಂದ ಉತ್ತರದ ತುದಿವರೆಗೆ ಚಾಚಿಕೊಂಡಿರುವ ಯಶವಂತಪುರ ವಿಧಾನಸಭಾ ಕ್ಷೇತ್ರದಲ್ಲಿ 1,818 ದಿವ್ಯಾಂಗ ಮತದಾರರಿದ್ದು, ಈ ಪೈಕಿ 521 ಮಂದಿ ವಾಹನಕ್ಕಾಗಿ ಚುನಾವಣಾ ಆಯೋಗದಲ್ಲಿ ಹೆಸರು ನೋಂದಣಿ ಮಾಡಿಕೊಂಡಿದ್ದಾರೆ.

Advertisement

ಜತೆಗೆ ಯಲಹಂಕ 49, ಬ್ಯಾಟರಾಯನಪುರ 32, ದಾಸರಹಳ್ಳಿ 46 ಮತ್ತು ಮಹಾದೇವಪುರ ಕ್ಷೇತ್ರದಲ್ಲಿ 24, ಆನೇಕಲ್‌ ತಾಲೂಕು ವ್ಯಾಪ್ತಿಯಲ್ಲಿ 87 ಮಂದಿ ವಾಹನಕ್ಕಾಗಿ ಆಯೋಗದಲ್ಲಿ ಹೆಸರು ನೋಂದಾಯಿಸಿಕೊಂಡಿದ್ದಾರೆ ಎಂದು ನಗರ ಜಿಲ್ಲಾ ಚುನಾವಣಾ ನೋಡೆಲ್‌ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಹೆಚ್ಚಿನ ಸಂಖ್ಯೆಯಲ್ಲಿ ಗಾಲಿ ಕುರ್ಚಿ: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲಾಡಳಿತ ಸುಮಾರು 800 ಗಾಲಿ ಕುರ್ಚಿಗಳನ್ನು ಬಳಕೆ ಮಾಡಿ ಕೊಂಡಿತ್ತು. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸುಮಾರು 1,292 ಗಾಲಿ ಕುರ್ಚಿಯ ವ್ಯವಸ್ಥೆ ಮಾಡಿದೆ. ಇದರಲ್ಲಿ ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯಲ್ಲಿ 621 ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲಾ ವ್ಯಾಪ್ತಿಯಲ್ಲಿ 671 ಗಾಲಿ ಕುರ್ಚಿಗಳನ್ನು ಬಳಕೆ ಮಾಡಿಕೊಳ್ಳಲು ಮುಂದಾಗಿದೆ.

ದಿವ್ಯಾಂಗರಿಗೆ ದೂರವಾಣಿ ಕರೆ: ಚುನಾವಣಾ ಆಯೋಗ ಮತ್ತು ಜಿಲ್ಲಾಡಳಿತ ಒಡಗೂಡಿ ಮಂಗಳವಾರದ ವರೆಗೂ 2500 ಕ್ಕೂ ಅಧಿಕ ದಿವ್ಯಾಂಗರನ್ನು ದೂರವಾಣಿ ಮೂಲಕ ಸಂಪರ್ಕಿಸಿದ್ದು, ಹಲವರು ವಾಹನ ಬಳಕೆಗೆ ಆಸಕ್ತಿ ತೋರಿದ್ದಾರೆ. ಇನ್ನೂ ಕೆಲವರು ಮತದಾನ ಮಾಡುತ್ತೇವೆ ಆದರೆ ವಾಹನ ಸೌಲಭ್ಯ ಬೇಡ ಎಂದು ವಿನಂತಿಸಿಕೊಂಡಿದ್ದಾರೆ. ಹೀಗಾಗಿ, ಹೆಚ್ಚಿನ ಸಂಖ್ಯೆಯಲ್ಲಿ ದಿವ್ಯಾಂಗರು ಮತದಾನ ಮಾಡುವ ನಿರೀಕ್ಷೆ ಇದೆ ಎಂದು ನೋಡೆಲ್‌ ಅಧಿಕಾರಿಗಳು ತಿಳಿಸಿದ್ದಾರೆ.

ವಾಹನ ವ್ಯವಸ್ಥೆ ನೋಂದಣಿ ಕಾರ್ಯ ಮಂಗಳವಾರ ಕೊನೆಗೊಂಡಿದೆ. ಆದರೂ ಒಂದು ವೇಳೆ ದಿವ್ಯಾಂಗರು ಮತಗಟ್ಟೆಗೆ ತೆರಳಲು ವಾಹನ ಬೇಕಾದರೆ ಸ್ಥಳೀಯ ಮತಗಟ್ಟೆ ಅಧಿಕಾರಿಗಳನ್ನು ಸಂಪರ್ಕಿಸಬಹುದು.
-ಎನ್‌.ಮಂಜುನಾಥ ಪ್ರಸಾದ್‌, ಜಿಲ್ಲಾ ಚುನಾವಣಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next